ಕ್ರಿಸ್‌ಮಸ್ ಹಬ್ಬಕ್ಕೆ ಮನೆಯ ಅಲಂಕಾರ ಹೇಗೆ ಮಾಡಬೇಕೆ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
Christmas 2025: ಕ್ರಿಸ್‌ಮಸ್ ಹಬ್ಬದಲ್ಲಿ ಮನೆಯ ಅಲಂಕಾರಕ್ಕೂ ವಿಶೇಷ ಮಹತ್ವ ಇದ್ದು, ಈಗಾಗಲೇ ಮಾರುಕಟ್ಟೆಗೆ ನಾನಾ ಬಗೆಯ ಫ್ಯಾನ್ಸಿ ವಸ್ತುಗಳು, ಡೆಕೋರೇಶನ್ ಸಾಮಗ್ರಿಗಳು ಲಗ್ಗೆ ಇಟ್ಟಿವೆ. ಮಿರ ಮಿಂಚುವ ಕೃತಕ ದೀಪಗಳು, ನಕ್ಷತ್ರಕಾರದ ಗೂಡು ದೀಪಗಳು ಹೀಗೆ ವಿವಿಧ ಅಲಂಕಾರಿಕ ವಸ್ತುಗಳನ್ನು ಬಳಸಿ ಇಡೀ ಮನೆಯನ್ನು ಶೃಂಗರಿಸಬಹುದು. ವಿಶೇಷವಾಗಿ ಈ ಹಬ್ಬದಲ್ಲಿ ಗೋದಳಿ, ಮನೆಯ ಮುಖ್ಯ ದ್ವಾರವನ್ನು ಆಕರ್ಷಕವಾಗಿ ಸಿಂಗರಿಸಲಾಗುತ್ತದೆ.
ಕ್ರಿಸ್‌ಮಸ್ ಅಲಂಕಾರ (ಸಂಗ್ರಹ ಚಿತ್ರ) -
ಬೆಂಗಳೂರು, ಡಿ. 24: ಕ್ರಿಸ್‌ಮಸ್ (Christmas) ಎಂದಾಕ್ಷಣ ಬಾಲ ಏಸುವಿನ ಜನನದ ಸಂಭ್ರಮ ಕಣ್ಣ ಮುಂದೆ ಬರುತ್ತದೆ. ವರ್ಷಾಂತ್ಯದ ಈ ಹಬ್ಬ ಹೊಸ ವರ್ಷದ (New Year) ಸ್ವಾಗತಕ್ಕೂ ದಾರಿ ಮಾಡಿಕೊಡಲಿದ್ದು, ವಿಶ್ವದಾದ್ಯಂತ ಕ್ರಿಸ್‌ಮಸ್ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಪವಿತ್ರ ದಿನದಂದು ಕ್ರೈಸ್ತ ಸಮುದಾಯದವರು ತಮ್ಮ ಮನೆಗಳು ಹಾಗೂ ಚರ್ಚ್‌ಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಾರೆ. ಜತೆಗೆ ಮನೆಯನ್ನು ಚೆನ್ನಾಗಿ ಅಲಂಕರಿಸುತ್ತಾರೆ. ಕ್ರಿಸ್‌ಮಸ್ ಕ್ರೈಸ್ತರ ಅತ್ಯಂತ ಪ್ರಮುಖ ಹಬ್ಬ.
ಇನ್ನು ಕ್ರಿಸ್‌ಮಸ್ ಹಬ್ಬದಲ್ಲಿ ಮನೆಯ ಅಲಂಕಾರಕ್ಕೂ(Decoration) ವಿಶೇಷ ಮಹತ್ವ ಇದ್ದು, ಈಗಾಗಲೇ ಮಾರುಕಟ್ಟೆಗೆ ನಾನಾ ಬಗೆಯ ಫ್ಯಾನ್ಸಿ ವಸ್ತುಗಳು, ಡೆಕೋರೇಶನ್ ಸಾಮಗ್ರಿಗಳು ಲಗ್ಗೆ ಇಟ್ಟಿವೆ
ಮಿರ ಮಿಂಚುವ ಕೃತಕ ದೀಪಗಳು, ನಕ್ಷತ್ರಕಾರದ ಗೂಡು ದೀಪಗಳು ಹೀಗೆ ವಿವಿಧ ಅಲಂಕಾರಿಕ ವಸ್ತುಗಳನ್ನು ಬಳಸಿ ಇಡೀ ಮನೆಯನ್ನು ಶೃಂಗರಿಸಬಹುದಾಗಿದೆ. ವಿಶೇಷವಾಗಿ ಈ ಹಬ್ಬದಲ್ಲಿ ಗೋದಳಿ, ಮನೆಯ ಮುಖ್ಯ ದ್ವಾರವನ್ನು ಆಕರ್ಷಕವಾಗಿ ಸಿಂಗರಿಸಲಾಗುತ್ತದೆ. ನೀವು ಈ ಬಾರಿ ಹೊಸ ರೀತಿಯಲ್ಲಿ ಮನೆಯನ್ನು ಅಲಂಕರಿಸಬೇಕು ಎಂದಿದ್ದರೆ ನಾವು ಹೇಳುವ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ.
ದೀಪಗಳು ಮತ್ತು ಕ್ಯಾಂಡಲ್‌ಗಳ ಬಳಕೆ
ಹಬ್ಬದ ವಾತಾವರಣಕ್ಕೆ ಬೆಳಕು ಅತ್ಯಂತ ಮುಖ್ಯ. ಕ್ರಿಸ್‌ಮಸ್ ಸಂದರ್ಭದಲ್ಲಿ ಬಣ್ಣ ಬಣ್ಣದ ದೀಪಗಳು ಹಾಗೂ ಕ್ಯಾಂಡಲ್‌ಗಳನ್ನು ಬೆಳಗಿಸಿಡುವುದರಿಂದ ಮನೆಯ ಸೊಬಗು ಹೆಚ್ಚಾಗುತ್ತದೆ. ಡೈನಿಂಗ್ ಟೇಬಲ್, ಕಿಟಕಿ ಅಥವಾ ಕೋಣೆಯ ಮೂಲೆಯಲ್ಲಿ ಕ್ಯಾಂಡಲ್‌ಗಳನ್ನು ಇಟ್ಟರೆ ಮನೆ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ. ಡಿಮ್ ಲೈಟ್‌ಗಳು ಕ್ರಿಸ್‌ಮಸ್ ಸಂಭ್ರಮಕ್ಕೆ ವಿಶೇಷ ಮೆರುಗು ನೀಡುತ್ತವೆ.
Christmas Fashion 2025: ಕ್ರಿಸ್‌ಮಸ್ ಲುಕ್‌ಗೆ ಸ್ಟೈಲಿಸ್ಟ್ ಲಕ್ಷ್ಮಿ ಕೃಷ್ಣ ನೀಡಿದ ಸಿಂಪಲ್ ಟಿಪ್ಸ್
ಮಾಲೆಗಳು
ಕ್ರಿಸ್‌ಮಸ್ ಅಲಂಕಾರದಲ್ಲಿ ಮಾಲೆಗಳಿಗೆ ವಿಶೇಷ ಸ್ಥಾನವಿದೆ. ಮಾರುಕಟ್ಟೆಯಲ್ಲಿ ಸಿಗುವ ಜಗಮಗಿಸುವ ಮಾಲೆಗಳ ಜತೆಗೆ, ಮನೆಯಲ್ಲೇ ತಯಾರಿಸಿದ ಮಾಲೆಗಳನ್ನು ಬಳಸಬಹುದು. ಹಸಿರು ಎಲೆಗಳು, ಕೆಂಪು ಹಾಗೂ ಚಿನ್ನದ ಬಣ್ಣದ ಬೆರ್ರಿಗಳು, ಬೆಳ್ಳಿ ರಿಬ್ಬನ್‌ಗಳು ಮತ್ತು ಒಣ ಕೋನ್‌ಗಳನ್ನು ಸೇರಿಸಿ ವಿಶಿಷ್ಟ ಮಾಲೆಗಳನ್ನು ಮಾಡಬಹುದು. ಇವುಗಳನ್ನು ಗೋಡೆ, ಕಿಟಕಿ ಅಥವಾ ಟೇಬಲ್‌ಗಳ ಮೇಲೆ ಅಳವಡಿಸಬಹುದು. ಕ್ರೀಪರ್‌ಗಳನ್ನು ಗೋಡೆ ಅಥವಾ ಕಿಟಕಿಯಿಂದ ನೇತಾಡಿಸಿದರೆ ಮನೆಯ ಸೌಂದರ್ಯ ಹೆಚ್ಚುತ್ತದೆ.
ಮುಖ್ಯ ದ್ವಾರಕ್ಕೆ ವಿಶೇಷ ಅಲಂಕಾರ
ಮನೆಯ ಅಲಂಕಾರದಲ್ಲಿ ಮೊದಲ ಗಮನ ಸೆಳೆಯುವುದು ಮುಂಬಾಗಿಲು. ಹೂ ಮಾಲೆಗಳು, ಹೂವಿನ ದಂಡೆಗಳು ಅಥವಾ ಕೃತಕ ಹೂವುಗಳಿಂದ ಬಾಗಿಲನ್ನು ಸಿಂಗರಿಸಬಹುದು. ಅಲ್ಲದೆ ಕೃತಕ ಲೈಟ್‌ಗಳನ್ನು ಬಳಸಿ ಮುಂಬಾಗಿಲನ್ನು ಅಲಂಕರಿಸಿದರೆ ಮನೆ ವರ್ಣರಂಜಿತ ಬೆಳಕಿನಿಂದ ಗಮನ ಸೆಳೆಯುತ್ತದೆ.
ಸ್ಯಾಟಿನ್ ಬಟ್ಟೆ ಮತ್ತು ರಿಬ್ಬನ್‌ಗಳ ಶೃಂಗಾರ
ಮನೆಯ ಮೆಟ್ಟಿಲು ಅಥವಾ ಹಾಲ್‌ನ ಅಲಂಕಾರಕ್ಕೆ ಸ್ಯಾಟಿನ್ ಬಟ್ಟೆಗಳು ಹಾಗೂ ರಿಬ್ಬನ್‌ಗಳನ್ನು ಬಳಸಬಹುದು. ಕೆಂಪು, ಬಿಳಿ ಮತ್ತು ಗೋಲ್ಡನ್ ಬಣ್ಣಗಳ ಸ್ಯಾಟಿನ್ ಬಟ್ಟೆಗಳು ಕ್ರಿಸ್‌ಮಸ್ ಥೀಮ್‌ಗೆ ಸೂಕ್ತವಾಗಿರುತ್ತವೆ. ಮೆಟ್ಟಿಲಿನ ಬದಿಗಳಲ್ಲಿ ರಿಬ್ಬನ್‌ಗಳನ್ನು ಸುತ್ತಿದರೆ ರೊಮ್ಯಾಂಟಿಕ್ ಹಾಗೂ ಹಬ್ಬದ ಲುಕ್ ಸಿಗುತ್ತದೆ.
ಕ್ರಿಸ್‌ಮಸ್ ಟ್ರೀ ಅಲಂಕಾರ
ಕ್ರಿಸ್‌ಮಸ್ ಟ್ರೀ ಇಲ್ಲದೆ ಹಬ್ಬದ ಸಂಭ್ರಮ ಸಂಪೂರ್ಣವಾಗುವುದಿಲ್ಲ. ಟ್ರೀಯನ್ನು ನಕ್ಷತ್ರಗಳು, ಗಂಟೆಗಳು, ಬೆಳ್ಳಿ–ಚಿನ್ನದ ಆಭರಣಗಳು, ಗಾಜಿನ ಚೆಂಡುಗಳು ಹಾಗೂ ವಿಂಟೇಜ್ ಡೆಕೊರೇಷನ್‌ಗಳಿಂದ ಸಿಂಗರಿಸಿದರೆ ಅದ್ಭುತವಾಗಿ ಕಾಣುತ್ತದೆ. ಟ್ರೀಯ ಮೇಲ್ಭಾಗದಲ್ಲಿ ಹೊಳೆಯುವ ನಕ್ಷತ್ರ ಇಡುವುದನ್ನು ಮರೆಯದಿರಿ.
ಇನ್ನು ಕ್ರಿಸ್‌ಮಸ್ ಹಬ್ಬದಂದು ಮನೆಯವರೆಲ್ಲರೂ ಸೇರಿ ಹಬ್ಬದೂಟ ಸವಿದೇ ಸವಿಯುತ್ತೀರಾ. ಹಾಗಾಗಿ ಡೈನಿಂಗ್ ಟೇಬಲ್ ಅನ್ನು ವಿಶೇಷವಾಗಿ ಅಲಂಕರಿಸಬಹುದು. ಕೆಂಪು ಮತ್ತು ಚಿನ್ನದ ಕ್ರಿಸ್‌ಮಸ್ ಬಾಲ್‌ಗಳು, ಹೂವುಗಳು ಹಾಗೂ ಸುಗಂಧ ಕ್ಯಾಂಡಲ್‌ಗಳನ್ನು ಬಳಸಿ ಟೇಬಲ್ ಸಿಂಗರಿಸಿದರೆ ಹಬ್ಬದೂಟದ ರುಚಿ ಮತ್ತಷ್ಟು ದುಪ್ಪಟ್ಟಾಗುತ್ತದೆ. ಒಟ್ಟಿನಲ್ಲಿ ಸರಳ ಅಲಂಕಾರ ಸಾಮಗ್ರಿಗಳನ್ನು ಸೃಜನಾತ್ಮಕವಾಗಿ ಬಳಸಿದರೆ ನಿಮ್ಮ ಮನೆ ಕ್ರಿಸ್‌ಮಸ್ ಸಂಭ್ರಮದಲ್ಲಿ ವಿಶೇಷವಾಗಿ ಕಂಗೊಳಿಸುವುದು ಸುಳ್ಳಲ್ಲ.