ಬೆಂಗಳೂರಿನ ಇಸ್ಕಾನ್‌ನಲ್ಲಿ ಸಂಭ್ರಮದಿಂದ ನೆರವೇರಿದ ಶ್ರೀ ಗೋವರ್ಧನ ಪೂಜೆ, ದೀಪೋತ್ಸವ
ಬೆಂಗಳೂರು ನಗರದ ಹರೇ ಕೃಷ್ಣ ಗಿರಿಯಲ್ಲಿರುವ ಇಸ್ಕಾನ್ ಶ್ರೀ ರಾಧಾ ಕೃಷ್ಣ ಚಂದ್ರ ದೇವಾಲಯದಲ್ಲಿ ಶ್ರೀ ಗೋವರ್ಧನ ಪೂಜೆ ಮತ್ತು ದೀಪೋತ್ಸವವನ್ನು ಅತ್ಯಂತ ಭಕ್ತಿಭಾವ ಹಾಗೂ ವೈಭವದಿಂದ ಆಚರಿಸಲಾಯಿತು. ಶ್ರೀ ಕೃಷ್ಣ ಬಲರಾಮರ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು.
-
ಬೆಂಗಳೂರು, ನ.10: ನಗರದ ಹರೇ ಕೃಷ್ಣ ಗಿರಿಯಲ್ಲಿರುವ ಇಸ್ಕಾನ್ ಶ್ರೀ ರಾಧಾ ಕೃಷ್ಣ ಚಂದ್ರ ದೇವಾಲಯದಲ್ಲಿ ಶ್ರೀ ಗೋವರ್ಧನ ಪೂಜೆ ಮತ್ತು ದೀಪೋತ್ಸವವನ್ನು ಅತ್ಯಂತ ಭಕ್ತಿಭಾವ ಹಾಗೂ ವೈಭವದಿಂದ ಆಚರಿಸಲಾಯಿತು. ಶ್ರೀಕೃಷ್ಣನು ಗೋವರ್ಧನ ಗಿರಿಯನ್ನು ಎತ್ತಿ ಗೋಕುಲವಾಸಿಗಳನ್ನು ರಕ್ಷಿಸಿದ ಲೀಲೆಯ ಸ್ಮರಣೆಯಲ್ಲಿ ನಡೆದ ಈ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.
ಭಕ್ತರು ಗೋವರ್ಧನಾಷ್ಟಕ ಗಾಯನದೊಂದಿಗೆ ಉತ್ಸವಕ್ಕೆ ಚಾಲನೆ ನೀಡಿದರು, ಗೋಶಾಲೆಯಲ್ಲಿ ಗೋಪಾಲ ಚಿತ್ರಕ್ಕೆ ಆರತಿ ಹಾಗೂ ಗೋಪೂಜೆಯು ನೆರವೇರಿತು. ಭಕ್ತರು ಗೋಸೇವೆಯಲ್ಲಿ ಪಾಲ್ಗೊಂಡರು.ಶ್ರೀ ಕೃಷ್ಣ ಬಲರಾಮರ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು. ಗೋವರ್ಧನಾಷ್ಟಕ ಗಾಯನದೊಂದಿಗೆ ಶ್ರೀ ಕೃಷ್ಣ ಬಲರಾಮ ಹಾಗೂ ಗೋವರ್ಧನ ಆರತಿ ನಡೆಯಿತು.
ದೇವಾಲಯದಲ್ಲಿ ದಾಮೋದರ ಆರತಿಯನ್ನು ಸಲ್ಲಿಸಲಾಯಿತು. ಆರತಿಯ ನಂತರ ಭಗವಂತನನ್ನು ಪಲ್ಲಕ್ಕಿಯಲ್ಲಿ ಮುಖ್ಯ ದೇವಾಲಯಕ್ಕೆ ಕರೆದೊಯ್ಯಲಾಯಿತು; ಶಯನ ಪಲ್ಲಕ್ಕಿ ಸೇವೆ ನಡೆಯಿತು. ನಂತರ ಎಲ್ಲಾ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಬೆಂಗಳೂರು ಇಸ್ಕಾನ್‌ನ ಅಧ್ಯಕ್ಷ ಶ್ರೀ ಮಧು ಪಂಡಿತ ದಾಸ ಅವರು ಆಶೀರ್ವಚನ ನೀಡಿ ಮಾತನಾಡಿ, ʼಎಲ್ಲರ ಜೀವನದಲ್ಲಿ ಬೆಳಕನ್ನು ತರುವಂತಹ ಉತ್ಸವ ದೀಪಾವಳಿ ಹಬ್ಬ, ಅಜ್ಞಾನದ ಕತ್ತಲೆಯನ್ನು ಕಳೆದು ಜ್ಞಾನದ ದೀಪ ಜ್ಯೋತಿಯನ್ನು ಹರಡಿಸುವ ಹಬ್ಬ ದೀಪಾವಳಿ ಹಬ್ಬ. ಭಗವಂತ ತಮ್ಮ ಭಕ್ತರನ್ನು ಸದಾಕಾಲ ರಕ್ಷಿಸುತ್ತಾರೆ ಅನ್ನೋದಕ್ಕೆ ಸಾಕ್ಷಿ ಗೋವರ್ಧನ ಲೀಲೆ, ಹಾಗಾಗಿ ಎಲ್ಲರೂ ದಿನನಿತ್ಯ ಶ್ರೀಕೃಷ್ಣನ ನಾಮಸಂಕೀರ್ತನೆ, ಭಗವತ್ ಪಾರಾಯಣ ಮಾಡಿದರೆ ಕಷ್ಟಕರ ಸಂದರ್ಭದಲ್ಲಿ ಶ್ರೀಕೃಷ್ಣ ಪರಮಾತ್ಮ ಕಾಪಾಡುತ್ತಾರೆ. ಎಲ್ಲರ ಜೀವನದಲ್ಲಿ ಬೆಳಕನ್ನ ಬೆಳಗಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ" ಎಂದು ತಿಳಿಸಿದರು.