ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Astro Tips: ಗುರುವಾರ ಶ್ರೀಹರಿಯನ್ನು ಆರಾಧಿಸಿದರೆ ದೂರವಾಗುತ್ತವೆ ಕಷ್ಟಗಳು, ಹೆಚ್ಚುತ್ತದೆ ಧನಲಾಭ

ಗುರುವಾರವನ್ನು ಭಗವಾನ್ ವಿಷ್ಣುವಿಗೆ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಭಕ್ತಿಯಿಂದ ಶ್ರೀಹರಿಯನ್ನು ಪೂಜಿಸಿ ‘ಓಂ ನಮೋ ಭಗವತೇ ವಾಸುದೇವಾಯ’ ಮೊದಲಾದ ಮಂತ್ರಗಳನ್ನು ಜಪಿಸಿದರೆ ಕಷ್ಟಗಳು ದೂರವಾಗಿ ಪುಣ್ಯಫಲ ದೊರೆಯುತ್ತದೆ ಎನ್ನುವ ನಂಬಿಕೆಯಿದೆ. ಹಳದಿ ಬಟ್ಟೆ ಧರಿಸಿ, ಹಳದಿ ಹೂವು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ ವಿಷ್ಣುವಿನ ಆರಾಧನೆ ಮಾಡಿದರೆ ಲಕ್ಷ್ಮೀ ದೇವಿಯ ಕೃಪೆಯೂ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಐದು ಅರಿಶಿನ ಗಂಟುಗಳನ್ನು ಲಕ್ಷ್ಮೀ ದೇವಿಗೆ ಅರ್ಪಿಸುವುದರಿಂದ ಧನಸಂಪತ್ತು ಹೆಚ್ಚುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ.

ಗುರುವಾರ ಈ ಮಂತ್ರ ಜಪಿಸಿದರೆ ವಿಷ್ಣುವಿನ ಅನುಗ್ರಹ ಖಚಿತ

ವಿಷ್ಣು ಹಾಗೂ ಲಕ್ಷ್ಮೀ ದೇವಿ -

Profile
Sushmitha Jain May 21, 2026 9:58 AM

ಬೆಂಗಳೂರು, ಮೇ 21: ಹಿಂದೂ ಧರ್ಮದಲ್ಲಿ ಭಗವಾನ್ ವಿಷ್ಣುವಿನ ಆರಾಧನೆಗೆ ವಿಶೇಷ ಸ್ಥಾನಮಾನವಿದೆ. ವಿಶೇಷವಾಗಿ ಗುರುವಾರವನ್ನು ಶ್ರೀಹರಿಗೆ ಸಮರ್ಪಿತ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಭಕ್ತಿಭಾವದಿಂದ ವಿಷ್ಣುವನ್ನು ಪೂಜಿಸಿ ಸ್ಮರಿಸಿದರೆ, ಅವರು ಶೀಘ್ರದಲ್ಲೇ ಪ್ರಸನ್ನರಾಗಿ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ ಎಂಬ ನಂಬಿಕೆ ಇದೆ. ಪುರಾಣಗಳಲ್ಲಿಯೂ ಶ್ರೀಹರಿಯ ಕೃಪೆಯಿಂದ ಭಕ್ತರ ಸಂಕಷ್ಟಗಳು ನಿವಾರಣೆಯಾದ ಅನೇಕ ಪ್ರಸಂಗಗಳು ಉಲ್ಲೇಖಗೊಂಡಿವೆ.

ಧಾರ್ಮಿಕ ನಂಬಿಕೆಯ ಪ್ರಕಾರ, ಭಗವಾನ್ ವಿಷ್ಣುವಿನ ಆರಾಧನೆ ಮಾಡಿದರೆ ವ್ಯಕ್ತಿಗೆ ಪಾಪಗಳಿಂದ ಮುಕ್ತಿ ದೊರೆಯುತ್ತದೆ ಹಾಗೂ ಪುಣ್ಯ ಫಲಗಳು ಲಭಿಸುತ್ತವೆ. ಗುರುವಾರದಂದು ನಿಯಮಾನುಸಾರ ಪೂಜೆ ಸಲ್ಲಿಸುವುದರಿಂದ ವಿಷ್ಣುವಿನ ಆಶೀರ್ವಾದದ ಜೊತೆಗೆ ಲಕ್ಷ್ಮೀ ದೇವಿಯ ಕೃಪೆಯೂ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ದಿನದ ಪೂಜೆಗೆ ವಿಶೇಷ ಮಹತ್ವ ನೀಡಲಾಗುತ್ತದೆ.

ಹಾಗಾದರೆ ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ (Astro Tips) ಗುರುವಾರ ವಿಷ್ಣು ದೇವರನ್ನು ಹೇಗೆ ಆರಾಧಿಸಬೇಕು ಎಂದು ನೋಡೋಣ.

ಗುರುವಾರದ ಪೂಜೆ ವಿಧಾನ

ಗುರುವಾರ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಶುದ್ಧ ಮನಸ್ಸಿನಿಂದ ಹಳದಿ ಬಣ್ಣದ ವಸ್ತ್ರ ಧರಿಸಬೇಕು. ಬಳಿಕ ಸೂರ್ಯನಿಗೆ ಅರಿಶಿನ ಬೆರೆಸಿದ ನೀರನ್ನು ಅರ್ಪಿಸಿ ಶ್ರೀಹರಿಯನ್ನು ಸ್ಮರಿಸಬೇಕು. ನಂತರ ಭಗವಾನ್‌ ವಿಷ್ಣುವಿಗೆ ಅಭಿಷೇಕ ಮಾಡಿ ಹಳದಿ ಹೂವುಗಳು ಹಾಗೂ ಸಿಹಿತಿಂಡಿಗಳನ್ನು ಸಮರ್ಪಿಸಬೇಕು. ಅರಿಶಿನದ ತಿಲಕವನ್ನು ವಿಷ್ಣುವಿಗೆ ಅರ್ಪಿಸಿ ಅದನ್ನು ಸ್ವತಃ ತಮ್ಮ ಹಣೆಯ ಮೇಲೂ ಧರಿಸಬೇಕು.

ಪೂಜೆಯ ಸಂದರ್ಭದಲ್ಲಿ ತುಳಸಿ ಅಥವಾ ಶ್ರೀಗಂಧದ ಮಾಲೆಯನ್ನು ಹಿಡಿದು ವಿಷ್ಣುವಿನ ಮಂತ್ರಗಳನ್ನು ಜಪಿಸುವುದು ಶುಭಕರವೆಂದು ನಂಬಲಾಗುತ್ತದೆ.

ಈ ಮಂತ್ರಗಳನ್ನು ಜಪಿಸಿ

ಭಕ್ತರು ‘ಓಂ ನಮೋ ಭಗವತೇ ವಾಸುದೇವಾಯ’, ‘ಓಂ ನಮೋ ನಾರಾಯಣಾಯ’ ಅಥವಾ ‘ಶ್ರೀಮನ್‌ ನಾರಾಯಣ ನಾರಾಯಣ ಹರಿ ಹರಿ’ ಎಂಬ ಸರಳ ಮಂತ್ರಗಳನ್ನು ಭಕ್ತಿಯಿಂದ ಜಪಿಸಬಹುದು. ಜೊತೆಗೆ ವಿಷ್ಣು ಸಹಸ್ರನಾಮ, ನಾರಾಯಣ ಕವಚ ಹಾಗೂ ಗಜೇಂದ್ರ ಮೋಕ್ಷ ಪಠಣವೂ ವಿಶೇಷ ಫಲ ನೀಡುತ್ತದೆ ಎನ್ನಲಾಗುತ್ತದೆ. ಸ್ವತಃ ಪಠಿಸಲು ಸಾಧ್ಯವಾಗದವರು ಇದನ್ನು ಆಲಿಸುವುದೂ ಶುಭಕರವೆಂದು ಪರಿಗಣಿಸಲಾಗಿದೆ.

ಲಕ್ಷ್ಮೀ ದೇವಿಯ ಆರಾಧನೆಗೂ ಮಹತ್ವ

ಗುರುವಾರ ವಿಷ್ಣುವಿನೊಂದಿಗೆ ಲಕ್ಷ್ಮೀ ದೇವಿಯನ್ನು ಪೂಜಿಸುವುದರಿಂದ ಆರ್ಥಿಕ ಸಂಕಷ್ಟಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಐದು ಅರಿಶಿನ ಗಂಟುಗಳನ್ನು ಲಕ್ಷ್ಮೀ ದೇವಿಗೆ ಅರ್ಪಿಸಿ, ಬಳಿಕ ಅದನ್ನು ಪ್ರತ್ಯೇಕ ಬಟ್ಟೆಯಲ್ಲಿ ಕಟ್ಟಿಟ್ಟುಕೊಳ್ಳುವುದರಿಂದ ಧನಸಂಪತ್ತು ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.

ಭಕ್ತಿಯಿಂದ ಶ್ರೀಹರಿ ಮತ್ತು ಮಹಾಲಕ್ಷ್ಮಿಯನ್ನು ಆರಾಧಿಸಿದರೆ ಜೀವನದಲ್ಲಿನ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ಮನೆಯಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ.