Vishwavani Editorial: ಎರಡು ಕಲಾಪಗಳ ನಡುವೆ
ಕಲಾಪದ ಆರಂಭದಿಂದಲೂ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ನೀಟ್ ಪರೀಕ್ಷೆಗೆ ಸಂಬಂಧಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯನ್ನೇ ಏಕೈಕ ಅಸ್ತ್ರವಾಗಿ ಹಿಡಿದು, ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಗದ್ದಲ, ಸಭಾತ್ಯಾಗ ಹಾಗೂ ಪ್ರತಿಭಟನೆ ನಡೆಸಿದವು. ಸರಕಾರ ವೂ ಇದಕ್ಕೆ ಮಣಿಯದೆ ತನ್ನ ಹಠವನ್ನೇ ಸಾಧಿಸಿತು.
-
ಸಂಸತ್‌ನ ಉಭಯ ಸದನಗಳ ಮಳೆಗಾಲದ ಅಧಿವೇಶನ ಇಂದು ಮುಕ್ತಾಯಗೊಳ್ಳುತ್ತಿದೆ. ಕಳೆದ ಮೂರು ವಾರಗಳಿಂದ ನಡೆಯುತ್ತಿರುವ ಸಂಸತ್ ಕಲಾಪ, ಅರ್ಥಪೂರ್ಣ ವಿಚಾರ ಮಂಡನೆಯಾಗಲೀ, ನೂತನ ವಿದೇಯಕಗಳ ಬಗ್ಗೆ ಚರ್ಚೆಯಾಗಲೀ, ಸಕಾರಾತ್ಮಕ ಒಳನೋಟಗಳಾಗಲೀ, ಉತ್ತಮ ಸಂಸದೀಯ ನಡವಳಿಕೆಯ ನಿದರ್ಶನಗಳಾಗಲೀ ಇಲ್ಲದೇ ಬರಕಾಸ್ತುಗೊಳ್ಳುವ ಹಂತದಲ್ಲಿದೆ.
ಕಲಾಪದ ಆರಂಭದಿಂದಲೂ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ನೀಟ್ ಪರೀಕ್ಷೆಗೆ ಸಂಬಂಧಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯನ್ನೇ ಏಕೈಕ ಅಸ್ತ್ರವಾಗಿ ಹಿಡಿದು, ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಗದ್ದಲ, ಸಭಾತ್ಯಾಗ ಹಾಗೂ ಪ್ರತಿಭಟನೆ ನಡೆಸಿದವು. ಸರಕಾರವೂ ಇದಕ್ಕೆ ಮಣಿಯದೆ ತನ್ನ ಹಠವನ್ನೇ ಸಾಧಿಸಿತು.
ಇದನ್ನೂ ಓದಿ: Vishwavani Editorial: ನ್ಯಾಯಾಂಗ ವರದಿಗಾರಿಕೆಯ ಸೂಕ್ಷ್ಮ
ಈ ಗದ್ದಲದ ನಡುವೆಯೂ 11 ವಿಧೇಯಕಗಳು ಮಂಡನೆಯಾಗಿದ್ದು, 9 ವಿಧೇಯಕಗಳು ಚರ್ಚೆಯೇ ಇಲ್ಲದೆ ಪಾಸ್ ಆಗಿವೆ. ಎರಡು ವಿಧೇಯಕಗಳ ಕುರಿತು ಮಾತ್ರ ಅಲ್ಪಸ್ವಲ್ಪ ಚರ್ಚೆಯಾಗಿದೆ. ಕೇರಳದ ಹೆಸರನ್ನು ಬದಲಿಸುವ ವಿಧೇಯಕ ಹಾಗೂ ರಾಷ್ಟ್ರೀಯ ಗೀತೆಗೆ ಅವಮಾನ ತಡೆಗಟ್ಟುವ ವಿಧೇಯಕಗಳು ಮಹತ್ವದ್ದಾಗಿವೆ. ಇನ್ನೂ ಮಹತ್ವದ ಮಹಿಳಾ ಮೀಸಲು ಹಾಗೂ ವಿದೇಶಿ ದೇಣಿಗೆ ತಿದ್ದುಪಡಿ ವಿಧೇಯಕಗಳು ಮಂಡನೆಯಾಗದೆ ಉಳಿದಿವೆ.
ಈ ಕಲಾಪ ಖಂಡಿತಾ ಮಾದರಿಯದಲ್ಲ. ಇದೇ ವೇಳೆಗೆ ಕರ್ನಾಟಕದಲ್ಲಿ ವಿಧಾನ ಮಂಡಲ ಅಧಿವೇಶನ ಗುರುವಾರದಿಂದ ಆರಂಭವಾಗಲಿದೆ. ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರಿಗೆ ಇದು ಮೊದಲ ಅಽವೇಶನವಾಗಿದ್ದು, ಅದಕ್ಕೂ ಒಂದು ದಿನ ಮುನ್ನ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಸಚಿವರು ತಮ್ಮ ಖಾತೆಗಳನ್ನು ಅರ್ಥ ಮಾಡಿ ಕೊಳ್ಳಲು ಸಮಯ ಬೇಕಿದೆ. ಈ ನಡುವೆ ಕಾವೇರಿ ನೀರಿನ ಹಂಚಿಕೆ ತಗಾದೆ ಸರಕಾರವನ್ನು ಹಣ್ಣು ಮಾಡುತ್ತಿದೆ. ಪ್ರತಿಪಕ್ಷಗಳು ಬಿಡದಿ ಟೌನ್‌ಶಿಪ್, ಸಂಪುಟಕ್ಕೆ ಬಿ.ನಾಗೇಂದ್ರ ಸೇರ್ಪಡೆ ಸೇರಿದಂತೆ ಹಲವು ವಿಚಾರಗಳಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಲು ಸಮಯ ಕಾಯುತ್ತಿವೆ. ಮೇಕೆದಾಟು ಯೋಜನೆ ಇನ್ನೂ ದಡ ಹತ್ತಿಲ್ಲ.
ಮುಂಬರುವ ಬರಗಾಲದ ಕುಡಿಯುವ ನೀರಿನ, ನೀರಾವರಿಯ ತಯಾರಿ ಸರಕಾರ ನಡೆಸಿ ದಂತಿಲ್ಲ. ಇದನ್ನೆಲ್ಲ ಎತ್ತಿಕೊಂಡು ಹೋರಾಟ ನಡೆಸಬೇಕಾದ ಪ್ರತಿಪಕ್ಷ ಬೆನ್ನೆಲುಬೇ ಇಲ್ಲದಂತಿದೆ. ಬಿಜೆಪಿ- ಜೆಡಿಎಸ್ ನಡುವೆ ಹೊಂದಾಣಿಕೆ ಇಲ್ಲದೆ, ಯಾವ ವಿಚಾರದಲ್ಲೂ ಸ್ಪಷ್ಟ ದೃಢ ನಿಲುವನ್ನೇ ತಾಳದ ಪ್ರತಿಪಕ್ಷದಿಂದ ಸರಕಾರವನ್ನು ಹಿಡಿದು ಅಲ್ಲಾಡಿಸಬಲ್ಲ ಸಂಸದೀಯ ಹೋರಾಟವನ್ನು ನಿರೀಕ್ಷಿಸುವುದು ಕಷ್ಟವೇ ಆಗಬಹುದು. ಸಂಸತ್ ಕಲಾಪ ವನ್ನು ಮಾದರಿಯಾಗಿ ತೆಗೆದುಕೊಳ್ಳದೆ, ವಿಧಾನ ಮಂಡಲ ಅಧಿವೇಶನ ಅರ್ಥಪೂರ್ಣ ಚರ್ಚೆ, ನಿಷ್ಕರ್ಷೆಗೆ ಸಾಕ್ಷಿಯಾಗಲಿ.