Vishwavani Editorial: ಬಿಪಿಎಲ್ ಮಿತಿ ಏರಿಕೆ ಸರಿ, ಆದರೆ...
ಗುತ್ತಿಗೆಯಾಧಾರಿತ ಹುದ್ದೆಯಲ್ಲಿದ್ದರೂ ಕಂಪನಿಗಳೇ ಉದ್ಯೋಗಿಗಳ ವೇತನದಲ್ಲಿ ಟಿಡಿಎಸ್ ಎಂದು ಕಡಿತ ಮಾಡಿಕೊಂಡು ಸರಕಾರಕ್ಕೆ ಸಲ್ಲಿಸುತ್ತವೆ. ವರ್ಷಕ್ಕೊಮ್ಮೆ ಇದನ್ನು ಫೈಲ್ ಮಾಡಿ ಕಡಿತಗೊಂಡ ಹಣವನ್ನು ವಾಪಸ್ ಪಡೆಯಬಹುದು. ಇಂತಹ ಹಣಕ್ಕೆಂದೇ ಬಾಯ್ಬಿಟ್ಟು ಕೊಂಡು ಐದಾರು ತಿಂಗಳಿನಿಂದ ಕಾಯುವ ಲಕ್ಷಾಂತರ ವ್ಯಕ್ತಿಗಳು ಬೆಂಗಳೂರಿನಲ್ಲಿದ್ದಾರೆ.
-
ಅನಧಿಕೃತ, ನಕಲಿ ಬಿಪಿಎಲ್ ಕಾರ್ಡ್‌ಗಳನ್ನು ಇಲ್ಲ ಮಾಡಿ, ಅರ್ಹರಿಗೆ ಮಾತ್ರ ಅವು ಗಳನ್ನು ನೀಡಬೇಕು ಎನ್ನುವ ಲೆಕ್ಕಾಚಾರದಲ್ಲಿ, ರಾಜ್ಯ ಸರಕಾರ ಲಕ್ಷಾಂತರ ಮಂದಿಯ ಕಾರ್ಡ್‌ಗಳನ್ನು ರದ್ದುಗೊಳಿಸಿದೆ. ಹಾಗೆ ಕಾರ್ಡ್ ಕಳೆದುಕೊಂಡ ಬಹುತೇಕರು ನೋವಿ ನಲ್ಲಿದ್ದಾರೆ.
ಸರಕಾರದ ಲೆಕ್ಕಾಚಾರದ ಪ್ರಕಾರ ತಾವು ಬಡವರಲ್ಲದೇ ಇರಬಹುದು. ಆದರೆ ತಾವಿನ್ನೂ ಬಡವರು ಎನ್ನುವುದು ಅವರ ನೋವಿಗೆ ಕಾರಣ. ಸರಕಾರದ ಲೆಕ್ಕಾಚಾರದ ಪ್ರಕಾರ ಐಟಿ ರಿಟರ್ನ್ ಸಲ್ಲಿಕೆ ಮಾಡುವವರೆಲ್ಲ ಶ್ರೀಮಂತರು, ಬಿಪಿಎಲ್ ರದ್ದು ಮಾಡಬಹುದೆಂದು ಹೇಳಲಾಗುತ್ತದೆ.
ವಾರ್ಷಿಕ 1.20 ಲಕ್ಷ ರು. ಆದಾಯ ಇದ್ದರೆ ಸಾಕು, ಮನೆಯಲ್ಲಿ ಕಾರು, ಫ್ರಿಜ್‌ಗಳು ಇದ್ದರೆ ಸಾಕು ಅವರು ಬಿಪಿಎಲ್ʼಗೆ ಅರ್ಹರಲ್ಲ ಎಂಬ ಮಾನದಂಡದಡಿ ಕಾರ್ಡ್‌ಗಳನ್ನು ರದ್ದು ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದುಕೊಂಡು ಐಟಿ ರಿಟರ್ನ್ ಫೈಲ್ ಮಾಡದೇ ಇರಲು ಸಾಧ್ಯವೇ ಇಲ್ಲ.
ಇದನ್ನೂ ಓದಿ: Ineligible BPL cards: ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ; ಸಿಎಂ ಸೂಚನೆ
ಗುತ್ತಿಗೆಯಾಧಾರಿತ ಹುದ್ದೆಯಲ್ಲಿದ್ದರೂ ಕಂಪನಿಗಳೇ ಉದ್ಯೋಗಿಗಳ ವೇತನದಲ್ಲಿ ಟಿಡಿಎಸ್ ಎಂದು ಕಡಿತ ಮಾಡಿಕೊಂಡು ಸರಕಾರಕ್ಕೆ ಸಲ್ಲಿಸುತ್ತವೆ. ವರ್ಷಕ್ಕೊಮ್ಮೆ ಇದನ್ನು ಫೈಲ್ ಮಾಡಿ ಕಡಿತಗೊಂಡ ಹಣವನ್ನು ವಾಪಸ್ ಪಡೆಯಬಹುದು. ಇಂತಹ ಹಣಕ್ಕೆಂದೇ ಬಾಯ್ಬಿಟ್ಟುಕೊಂಡು ಐದಾರು ತಿಂಗಳಿನಿಂದ ಕಾಯುವ ಲಕ್ಷಾಂತರ ವ್ಯಕ್ತಿಗಳು ಬೆಂಗಳೂರಿ ನಲ್ಲಿದ್ದಾರೆ.
ಇಲ್ಲಿನ ಖರ್ಚುಗಳನ್ನು ನಿಭಾಯಿಸಲು ಎಷ್ಟು ಸರಳ ಜೀವನ ಮಾಡಿದರೂ ಆಗುತ್ತಿಲ್ಲ ವೆನ್ನುವ ದುಃಖ ಮಡುಗಟ್ಟಿದೆ. ಈ ಪರಿಸ್ಥಿತಿಯನ್ನು ಗಮನಿಸದೇ ಬರೀ ಐಟಿ ರಿಟರ್ನ್ ಫೈಲ್ ಮಾಡುತ್ತಾರೆ, ವರ್ಷಕ್ಕೆ 6-7 ಲಕ್ಷ ರು. ಆದಾಯವಿದೆ ಎಂಬುದನ್ನೆಲ್ಲ ಪರಿಗಣಿಸಿ ಬಿಪಿಎಲ್ ಕಾರ್ಡ್ ಕಡಿತ ಮಾಡಿದರೆ, ಅಂತಹ ವ್ಯಕ್ತಿಗಳು ಅನುಭವಿಸುವ ಗೊಂದಲಗಳು ಒಂದೆರಡಲ್ಲ.
ಬಿಪಿಎಲ್ ಕಾರ್ಡ್ ಹೋಯಿತು ಎನ್ನುವುದಕ್ಕಿಂತ ಬೆಂಗಳೂರಿನಲ್ಲಿ 6-7 ಲಕ್ಷ ರು. ವಾರ್ಷಿಕ ಆದಾಯ ಬಡತನ ಎಂಬ ಕಟುಸತ್ಯ ಸರಕಾರಕ್ಕೆ ತಿಳಿಯದೇ ಹೋಯಿತಲ್ಲ ಎಂಬ ಭಾವವೇ ಇಲ್ಲಿ ಹೆಚ್ಚು ಬಾಧಿಸುವುದು. ಇಂತಹ ನೋವಿನಲ್ಲಿ ಜನರು ಇರುವಾಗ ರಾಜ್ಯ ಸರಕಾರ ಬಿಪಿಎಲ್ ಕಾರ್ಡ್‌ಗೆ ವಾರ್ಷಿಕ ಆದಾಯಮಿತಿಯನ್ನು 3 ಲಕ್ಷ ರು.ಗೇರಿಸುವ ಒಂದು ಚಿಂತನೆ ನಡೆಸಿರುವುದಾಗಿ ತಿಳಿಸಿರುವುದು ಬಹಳ ಒಳ್ಳೆಯ ಬೆಳವಣಿಗೆ.
ಇದಕ್ಕೆ ಎಲ್ಲ ಪಕ್ಷದ ಶಾಸಕರ ಪೂರ್ಣ ಸಮ್ಮತಿಯಿದೆ. ಆದರೆ ಬೆಂಗಳೂರಿನಂತಹ ನಗರ ಜೀವನದಲ್ಲಿ ಇದೂ ಕೂಡ ಬಹಳ ಕಡಿಮೆ ಎನ್ನುವುದನ್ನು ಸರಕಾರ ಗಮನಿಸಿದರೆ, ಲಕ್ಷಾಂತರ ಮಂದಿಯ ಕಣ್ಣೀರನ್ನು ಒರೆಸಲು ಸಾಧ್ಯವಾಗುತ್ತದೆ. ಸರಕಾರ ಈ ವಿಚಾರದಲ್ಲಿ ಬಹಳ ವಸ್ತುನಿಷ್ಠ ಅಧ್ಯಯನ ನಡೆಸುವುದು ಅಗತ್ಯ.