Vishwavani Editorial: ನೆದರ್‌ಲ್ಯಾಂಡ್ ಜೊತೆಗೆ ನಂಟಸ್ತಿಕೆ
ಕ್ಷೀರೋತ್ಪಾದನೆ- ಪಶುಸಂಗೋಪಕರ ಆದಾಯ ವೃದ್ಧಿಗೆ ಉತ್ತಮ ಡೇರಿ ತಂತ್ರಜ್ಞಾನದ ನೆರವು ದೊರೆಯಲಿದೆ. ಡಚ್ ದೇಶ ಪಶುಸಂಗೋಪನೆಯಲ್ಲಿ ಜಗತ್ತಿಗೇ ಮುಂದಿದ್ದು, ಆ ವಿಚಾರದಲ್ಲಿ ಗಳಿಸಿದ ಜ್ಞಾನವನ್ನು ನಮಗೆ ಧಾರೆ ಎರೆಯಲಿದೆ. ಕರ್ನಾಟಕ ಕೆಎಂಎಫ್ ಮೂಲಕ ಕ್ಷೀರ ಕ್ರಾಂತಿ ಮಾಡಿದ್ದು, ಇದರಿಂದ ನಮ್ಮ ಬಾಂಧವ್ಯ ಇನ್ನಷ್ಟು ಗಾಢವಾಗಲಿದೆ.
-
ಪ್ರಧಾನಿ ನರೇಂದ್ರ ಮೋದಿ ಅವರು ನೆದರ್‌ಲೆಂಡ್‌ಗೆ ನೀಡಿರುವ ಭೇಟಿ ಹಲವು ರೀತಿಯಲ್ಲಿ ಫಲಪ್ರದವಾಗಿದೆ. ನಾವು ಎಚ್ಚರಿಕೆಯಿಂದ ಬದುಕದೆ ಹೋದರೆ ಮತ್ತೊಮ್ಮೆ ಬಡತನ ನಮ್ಮನ್ನು ಅಪ್ಪಿಕೊಂಡೀತು ಎಂಬ ಎಚ್ಚರಿಕೆಯನ್ನು ಅವರು ಮತ್ತೊಮ್ಮೆ ಅಲ್ಲಿಂದ ಮೊಳಗಿಸಿದ್ದಾರೆ.
ಅದಕ್ಕಿಂತ ಹೆಚ್ಚಾಗಿ, ಅವರ ಭೇಟಿಯ ವೇಳೆ 17 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದ್ದು, ಭಾರತ ಹಾಗೂ ನೆದರ್‌ಲ್ಯಾಂಡ್ ಎರಡೂ ದೇಶಗಳಿಗೂ ಇದರಿಂದ ಅನುಕೂಲ ಆಗಲಿದೆ. ನೆದರ್‌ಲ್ಯಾಂಡ್ ಭಾರತದ ಪ್ರಮುಖ ವ್ಯಾಪಾರ ಪಾಲುದಾರನಾಗಿದೆ. 5560 ಕೋಟಿ ಡಾಲರ್‌ಗಳಷ್ಟು ವಿದೇಶಿ ನೇರ ಹೂಡಿಕೆ ನೆದರ್‌ಲೆಂಡ್‌ನಿಂದ ಭಾರತಕ್ಕೆ ಕಳೆದ ಸಾಲಿನಲ್ಲಿ ಹರಿದುಬಂದಿದೆ. ಈ ದೇಶ ಭಾರತ ದಲ್ಲಿನ 4ನೇ ಅತಿದೊಡ್ಡ ಹೂಡಿಕೆದಾರ ರಾಷ್ಟ್ರ ಎನಿಸಿಕೊಂಡಿದೆ.
ಇದೀಗ ಮಾಡಿಕೊಳ್ಳಲಾದ ಒಪ್ಪಂದಗಳಲ್ಲಿ ಒಂದು, ಬೆಂಗಳೂರು ಸಮೀಪದ ಹೆಸರುಘಟ್ಟದಲ್ಲಿನ ಪಶುಸಂಗೋಪನಾ ಶ್ರೇಷ್ಠತಾ ಕೇಂದ್ರ ‘ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಅನಿಮಲ್ ಹಸ್ಬೆಂಡರಿ’ (ಸಿಇಎಎಚ್) ನಲ್ಲಿ ನೆದರ್‌ಲೆಂಡ್ ನಿಂದ ‘ಇಂಡೊ-ಡಚ್ ಸೆಂಟರ್ ಆಫ್ ಎಕ್ಸಲೆನ್ಸ್ ಆನ್ ಟ್ರೇನಿಂಗ್ ಇನ್ ಡೇರಿ’ ಆರಂಭ.
ಇದನ್ನೂ ಓದಿ: Vishwavani Editorial: ಗಾಯದ ಮೇಲೆ ತೈಲ ಬೆಲೆ ಬರೆ
ಕ್ಷೀರೋತ್ಪಾದನೆ- ಪಶುಸಂಗೋಪಕರ ಆದಾಯ ವೃದ್ಧಿಗೆ ಉತ್ತಮ ಡೇರಿ ತಂತ್ರಜ್ಞಾನದ ನೆರವು ದೊರೆಯಲಿದೆ. ಡಚ್ ದೇಶ ಪಶುಸಂಗೋಪನೆಯಲ್ಲಿ ಜಗತ್ತಿಗೇ ಮುಂದಿದ್ದು, ಆ ವಿಚಾರದಲ್ಲಿ ಗಳಿಸಿದ ಜ್ಞಾನವನ್ನು ನಮಗೆ ಧಾರೆ ಎರೆಯಲಿದೆ. ಕರ್ನಾಟಕ ಕೆಎಂಎಫ್ ಮೂಲಕ ಕ್ಷೀರ ಕ್ರಾಂತಿ ಮಾಡಿದ್ದು, ಇದರಿಂದ ನಮ್ಮ ಬಾಂಧವ್ಯ ಇನ್ನಷ್ಟು ಗಾಢವಾಗಲಿದೆ.
ಭಾರತದ ಪಶುವೈದ್ಯರು- ಡೇರಿ ತಜ್ಞರಿಗೆ ತರಬೇತಿ- ಕೌಶಲಾಭಿವೃದ್ಧಿ, ಪಶು ಆರೋಗ್ಯ ಮತ್ತು ರೋಗ ನಿಯಂತ್ರಣ ಬಲಪಡಿಸುವಿಕೆ ಇದರಿಂದ ಆಗಲಿದೆ. ಇದಲ್ಲದೆ ಭಾರತದ ಸೆಮಿಕಂಡಕ್ಟರ್ ಉದ್ಯಮ ಕ್ಷೇತ್ರ, ಹಸಿರು ಇಂಧನ, ಶಿಕ್ಷಣ, ಆರೋಗ್ಯ ಮತ್ತು ಸಾಂಸ್ಕೃತಿಕ ವಿನಿಮಯ ಕ್ಷೇತ್ರಗಳಲ್ಲಿ ಭಾರತಕ್ಕೆ ಗಣನೀಯ ಲಾಭ ತಂದುಕೊಡುವ ಮಾತುಕತೆಗಳು ನಡೆದಿವೆ.
ಎರಡೂ ದೇಶವಾಸಿಗಳ ಪ್ರವಾಸ, ಭೇಟಿಗೆ ವೀಸಾ ವಿತರಣೆ ಸರಳವಾಗಲಿದೆ. ನೆದರ್‌ಲೆಂಡ್‌ನಲ್ಲಿ ಭಾರತದ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ವೃತ್ತಿಪರರಿಗೆ ಹೆಚ್ಚು ಅವಕಾಶಗಳು ಸಿಗಲಿವೆ. ಅಪರೂಪದ ಪ್ರಮುಖ ಖನಿಜಗಳ ಕ್ಷೇತ್ರದಲ್ಲಿ ಪರಸ್ಪರ ವಿನಿಮಯ, ಹಸಿರು ಜಲಜನಕ ರಫ್ತು ಮಾರುಕಟ್ಟೆ ವಿಸ್ತರಣೆ, ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಉತ್ತೇಜನ ಸಿಗಲಿದೆ.
ಭಾರತದ ವಿದ್ಯಾರ್ಥಿಗಳು- ಅಧ್ಯಾಪಕರಿಗೆ ಡಚ್ ವಿವಿಗಳಲ್ಲಿ ಅಧ್ಯಯನಕ್ಕೆ ಮತ್ತು ಬೋಧನೆಗೆ ಹೆಚ್ಚು ಅವಕಾಶ ದೊರೆಯಲಿದೆ. ಯುದ್ಧದಿಂದ ಆರ್ಥಿಕತೆ ಕುಸಿಯುತ್ತಿರುವ ಹೊತ್ತಿನಲ್ಲಿ ಇಂಥ ಬಾಂಧವ್ಯ ವಿಸ್ತರಣೆಗಳು ಭರವಸೆ ಮೂಡಿಸುತ್ತವೆ.