Vishwavani Editorial: ಬದಲಾವಣೆಯ ಗಾಳಿ
ನೀಟ್ ಅಕ್ರಮದ ಕುರಿತ ಕೂಗು ಆರಂಭವಾದಾಗಲೇ ಸರಕಾರ ಮೌನ ಮುರಿದು ಕ್ರಮ ಕೈಗೊಂಡಿದ್ದರೆ ಅದರ ಘನತೆ ಇಷ್ಟರ ಮಟ್ಟಿಗೆ ಮುಕ್ಕಾಗುತ್ತಿರಲಿಲ್ಲ. ನೀಟ್‌ನಂಥ ಉನ್ನತ ಶಿಕ್ಷಣ ಪರೀಕ್ಷೆಗಳಲ್ಲಿ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟಲು ಕಠಿಣಾತಿ ಕಠಿಣ ಕ್ರಮಗಳು, ಆರೋಪಿಗಳಿಗೆ ಶೀಘ್ರಗತಿಯಲ್ಲಿ ತನಿಖೆ ಮುಗಿಸಿ ಜೈಲುವಾಸ ಆಗುವ ಅಗತ್ಯವಿದೆ. ಇದನ್ನು ಕರ್ನಾಟಕದ ಕೆಪಿಎಸ್‌ಸಿಗೂ ವಿಸ್ತರಿಸಬೇಕು. ನಿನ್ನೆ ಕೂಡ ಇಲ್ಲಿ ಭಾರಿ ಅಕ್ರಮವೊಂದು ಬಯಲಾಗಿದೆ.
-
ನೀಟ್ ಅಕ್ರಮದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿನಿಧಿಗಳೊಂದಿಗೆ ಕೇಂದ್ರ ಸರಕಾರ 2ನೇ ಸುತ್ತಿನ ಮಾತುಕತೆ ನಡೆಸಿದೆ. ಸಭೆಯಲ್ಲಿ ಸರಕಾರದ ಪರವಾಗಿ ಇಬ್ಬರು ಸಚಿವರು ಭಾಗವಹಿಸಿದ್ದು, ನೀಟ್ ಅಕ್ರಮದ ಹಿನ್ನೆಲೆಯಲ್ಲಿ ಪ್ರಾಣ ಕಳೆದು ಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಮತ್ತು ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪ್ರಕರಣಗಳನ್ನು ಕೈಬಿಡುವ ಬೇಡಿಕೆಗಳ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಆದರೆ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯ ತಮ್ಮ ಬೇಡಿಕೆಯ ಬಗ್ಗೆ ಸಿಜೆಪಿ ಹಠ ಹಿಡಿದಿದ್ದು, ಇದಕ್ಕೆ ಸರಕಾರ ಒಪ್ಪಿಲ್ಲ, ಸಮಯ ಕೇಳಿದೆ.
ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎರಡು ಬಾರಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ನೀಟ್ ಅಕ್ರಮ ಎಸಗಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಿ ಶೀಘ್ರ ಗತಿಯ ವಿಚಾರಣೆ ನಡೆಸಲಾಗುತ್ತದೆ. ಈಗ ನಡೆಯುತ್ತಿರುವ ಅಧಿವೇಶನ ದಲ್ಲಿ ಚರ್ಚೆ ನಡೆಸಿ ಮಸೂದೆ ಮಂಡಿಸಿ ಅಂಗೀಕರಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: NEET Paper leak: ನೀಟ್ ಅಕ್ರಮ ಹಿನ್ನೆಲೆ NTAಗೆ ಮೇಜರ್ ಸರ್ಜರಿ; 47 ಅಧಿಕಾರಿಗಳ ವಜಾ
ಕೊನೆಗೂ ತಮ್ಮ ಮೌನ ಮುರಿದು ಪ್ರಧಾನಿ ಮಾತನಾಡಿರುವುದು ಸ್ವಾಗತಾರ್ಹ. ಸೋನಂ ವಾಂಗ್ಚುಕ್ ಅವರು ತಮ್ಮ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದಾರೆ. ಆದರೆ ಸಿಜೆಪಿ ಹಿಡಿದ ಹಠವನ್ನು ಕೈಬಿಡದೆ ಪ್ರತಿಭಟನೆ ಮುಂದುವರಿಸಿದೆ. ಸಿಜೆಪಿ ಪ್ರತಿಭಟನೆಯ ಶಕ್ತಿ ಕುಂದಿಲ್ಲ ಹಾಗೂ ಈ ಪ್ರತಿಭಟನೆ ಉನ್ನತ ಶಿಕ್ಷಣ ಹಂತದಲ್ಲಿ ಸುಧಾರಣೆ, ಬದಲಾವಣೆಗೆ ಕಾರಣವಾಗುತ್ತಿದೆ ಎಂಬುದನ್ನು ಗಮನಿಸಬೇಕು.
ನೀಟ್ ಅಕ್ರಮದ ಕುರಿತ ಕೂಗು ಆರಂಭವಾದಾಗಲೇ ಸರಕಾರ ಮೌನ ಮುರಿದು ಕ್ರಮ ಕೈಗೊಂಡಿ ದ್ದರೆ ಅದರ ಘನತೆ ಇಷ್ಟರ ಮಟ್ಟಿಗೆ ಮುಕ್ಕಾಗುತ್ತಿರಲಿಲ್ಲ. ನೀಟ್‌ನಂಥ ಉನ್ನತ ಶಿಕ್ಷಣ ಪರೀಕ್ಷೆ ಗಳಲ್ಲಿ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟಲು ಕಠಿಣಾತಿ ಕಠಿಣ ಕ್ರಮಗಳು, ಆರೋಪಿಗಳಿಗೆ ಶೀಘ್ರಗತಿಯಲ್ಲಿ ತನಿಖೆ ಮುಗಿಸಿ ಜೈಲುವಾಸ ಆಗುವ ಅಗತ್ಯವಿದೆ. ಇದನ್ನು ಕರ್ನಾಟಕದ ಕೆಪಿಎಸ್‌ಸಿಗೂ ವಿಸ್ತರಿಸಬೇಕು. ನಿನ್ನೆ ಕೂಡ ಇಲ್ಲಿ ಭಾರಿ ಅಕ್ರಮವೊಂದು ಬಯಲಾಗಿದೆ.
ಇದರ ಅಧ್ಯಕ್ಷರೇ ಭ್ರಷ್ಟತನ, ಸ್ವಜನಪಕ್ಷಪಾತ ಎಸಗಿ ಅಮಾನತಾಗಿದ್ದಾರೆ. ಕೆಪಿಎಸ್‌ಸಿಯ ಪರೀಕ್ಷೆ ಗಳಲ್ಲಿ ನಡೆದ ಭ್ರಷ್ಟಾಚಾರ, ಸೋರಿಕೆ, ಕರ್ಮಕಾಂಡಗಳಿಗೆ ಹೋಲಿಸಿದರೆ ನೀಟ್ ವಿಷಯ ಏನೇನೂ ಅಲ್ಲ. ಇಲ್ಲಿ ಅಕ್ರಮ ಎಸಗಿದ ಪಾತಕಿಗಳನ್ನು ಜನನಾಯಕರು ಜೈಲಿಗೇ ಹೋಗಿ ಭೇಟಿಯಾಗುತ್ತಾರೆ ಎಂದರೆ, ಇವರ ಪ್ರಭಾವ ಇನ್ನೆಷ್ಟಿರಬೇಡ. ಇಲ್ಲೂ ಕೂಡ ಸುಧಾರಣೆಯ ಗಾಳಿ ಬೀಸಬೇಕಿದೆ.