ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಇದು ಸೊಕ್ಕಿನ ಪರಮಾವಧಿಯಷ್ಟೇ!

ಕಾಶ್ಮೀರವು ಪಾಕಿಸ್ತಾನದ ಕೊರಳಿನ ರಕ್ತನಾಳವಿದ್ದಂತೆ’ ಎಂಬ ಬಾಲಂಗೋಚಿಯನ್ನೂ ಸೇರಿಸಿ ದ್ದಾರೆ. ಗಡಿಭಾಗದಲ್ಲಿ ತನ್ನ ಉಗ್ರರನ್ನು ತೂರಿಸಿ ಭಾರತದ ನೆಲದಲ್ಲಿ ವಿಧ್ವಂಸಕ ಕೃತ್ಯಗಳನ್ನು ಹಾಗೂ ಗಲಭೆ ಗಳನ್ನು ನಡೆಸಲು ಚಿತಾವಣೆ ನೀಡುತ್ತಿದ್ದ ಪಾಕಿಸ್ತಾನಕ್ಕೆ ಭಾರತವು ಕಾಲಾನುಕಾಲಕ್ಕೆ ತಪರಾಕಿ ನೀಡಿದ್ದುಂಟು

ಇದು ಸೊಕ್ಕಿನ ಪರಮಾವಧಿಯಷ್ಟೇ!

Profile Ashok Nayak Apr 19, 2025 6:17 AM

ಕೆಟ್ಟ ಮೇಲೂ ಬುದ್ಧಿ ಬರಲಿಲ್ಲ ಎಂಬುದೊಂದು ಮಾತು ನಮ್ಮ ಜನರ ನಡುವೆ ಚಾಲ್ತಿಯಲ್ಲಿದೆ. ಪಾಕಿಸ್ತಾನದ ಆಳುಗರ ಅಥವಾ ಮಿಲಿಟರಿ ವ್ಯವಸ್ಥೆಯ ಧಾರ್ಷ್ಟ್ಯವನ್ನು ಕಂಡಾಗಲೆಲ್ಲ ಈ ಮಾತು ನೆನಪಾಗುತ್ತದೆ. ಪ್ರಸ್ತುತ, ಪಾಕ್‌ನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್. ‘13 ಲಕ್ಷ ಯೋಧ ರಿದ್ದ ಭಾರತೀಯ ಸೇನೆಗೇ ನಮ್ಮನ್ನು ಹೆದರಿಸಲು ಸಾಧ್ಯವಾಗಲಿಲ್ಲ, ಇನ್ನು ಬಲೂಚಿಸ್ತಾನದ 1500 ಉಗ್ರರು ಏನು ಮಾಡಲು ಸಾಧ್ಯ?’ ಎಂಬ ಆಣಿಮುತ್ತನ್ನು ಉದುರಿಸಿದ್ದಾರೆ. ಬಲೂಚಿಸ್ತಾನದಲ್ಲಿ ದಂಗೆಯೆದ್ದಿರುವ ಜನರಿಗೆ ‘ಉಗ್ರರು’ ಎಂಬ ಹಣೆಪಟ್ಟಿ ಕಟ್ಟಿಬಿಟ್ಟಿರುವ ಅಸಿಮ್ ಮುನೀರ್, ಇಷ್ಟು ಸಾಲದೆಂಬಂತೆ ‘ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನದ ನಿಲುವು ಸ್ಪಷ್ಟವಾಗಿದೆ.

ಕಾಶ್ಮೀರವು ಪಾಕಿಸ್ತಾನದ ಕೊರಳಿನ ರಕ್ತನಾಳವಿದ್ದಂತೆ’ ಎಂಬ ಬಾಲಂಗೋಚಿಯನ್ನೂ ಸೇರಿಸಿ ದ್ದಾರೆ. ಗಡಿಭಾಗದಲ್ಲಿ ತನ್ನ ಉಗ್ರರನ್ನು ತೂರಿಸಿ ಭಾರತದ ನೆಲದಲ್ಲಿ ವಿಧ್ವಂಸಕ ಕೃತ್ಯಗಳನ್ನು ಹಾಗೂ ಗಲಭೆಗಳನ್ನು ನಡೆಸಲು ಚಿತಾವಣೆ ನೀಡುತ್ತಿದ್ದ ಪಾಕಿಸ್ತಾನಕ್ಕೆ ಭಾರತವು ಕಾಲಾನುಕಾಲಕ್ಕೆ ತಪರಾಕಿ ನೀಡಿದ್ದುಂಟು.

ಇದನ್ನೂ ಓದಿ: Vishwavani Editorial: ನಕಲಿ ವೈದ್ಯರ ಹಾವಳಿ ತಪ್ಪಲಿ

ಇಷ್ಟಾಗಿಯೂ ಅದಕ್ಕೆ ಇನ್ನೂ ಬುದ್ಧಿ ಬಂದಂತಿಲ್ಲ. ಕಾರ್ಗಿಲ್ ಯುದ್ಧದ ವೇಳೆ ತನಗಾದ ಗಾಯ ಗಳನ್ನು ನೆಕ್ಕಿಕೊಳ್ಳುವುದಕ್ಕೇ ಪಾಕಿಸ್ತಾನಕ್ಕೆ ಸಾಕಷ್ಟು ಸಮಯ ಹಿಡಿದಿತ್ತು. ಇನ್ನು ಪಾಕ್-ಬೆಂಬಲಿತ ಉಗ್ರರ ಮೇಲೆ ಭಾರ ತವು ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದ ಮೇಲಂತೂ ಅಂತಾರಾಷ್ಟ್ರೀಯ ಸಮುದಾಯದೆದುರು ಪಾಕಿಸ್ತಾನದ ಮರ್ಯಾದೆ ಮೂರಾಬಟ್ಟೆಯಾಗಿದ್ದು ಖರೆ. ಕೊನೆಗೆ ಅದು ಎಲ್ಲಿಯವರೆಗೆ ಹೋಯಿತೆಂದರೆ, ಪಾಕಿಸ್ತಾನವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಏನನ್ನೇ ಹೇಳಿದರೂ ಜಗದ ಜನರು ಅದನ್ನು ನಂಬದಂಥ ಮತ್ತು ಅನುಮಾನದ ಕಂಗಳಿಂದಲೇ ನೋಡುವಂಥ ಪರಿಸ್ಥಿತಿ ಸೃಷ್ಟಿಯಾಗಿ, ಪಾಕಿಸ್ತಾನ ಏಕಾಂಗಿಯಾಗುವಂತಾಯಿತು. ಜತೆಗೆ ಕಳೆದ ಕೆಲ ವರ್ಷಗಳಿಂದ ತಾಂಡವವಾಡುತ್ತಿರುವ ‘ರಾಜಕೀಯ ಅರಾಜಕತೆ’ ಹಾಗೂ ಅರ್ಥಸ್ಥಿತಿಯ ಕುಸಿತ ಗಳೂ ಪಾಕಿಸ್ತಾನವನ್ನು ಹೈರಾಣು ಮಾಡಿದವು. ಇಷ್ಟಾಗಿಯೂ ಪಾಕ್‌ನ ಸೊಕ್ಕು ಅಡಗಿಲ್ಲ. ಈ ವಾಸ್ತವವನ್ನು ಅಲ್ಲಿನ ಸೇನಾ ಮುಖ್ಯಸ್ಥರು ತೋರಿಸಿಕೊಂಡಿದ್ದಾರೆ. ಅದಕ್ಕೆ ಮದ್ದು ಅರೆಯುವುದು ಭಾರತಕ್ಕೆ ಗೊತ್ತಿದೆ!