ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಕೆಡವೋದು ಸುಲಭ, ಕಟ್ಟೋದು ಕಷ್ಟ

ಅಂತಾರಾಷ್ಟ್ರೀಯ ಭೂರಾಜಕೀಯದ ಹಿತಾಸಕ್ತಿಯ ನೆರವೇರಿಕೆಗೆಂದು ಯುದ್ಧದಲ್ಲಿ ತೊಡಗಿದ ನಾಯಕರು ಮಾತ್ರ ಸುರಕ್ಷಿತರಾಗೇ ಇರುತ್ತಾರೆ; ಆದರೆ ‘ಮೂರಾಬಟ್ಟೆ’ ಯಾಗುವುದು ಜನಸಾಮಾನ್ಯರ ಬದುಕು. ಇಂಥ ಶ್ರೀಸಾಮಾನ್ಯರು ಬಾರಿಸಬೇಕಾದ ‘ನ್ಯಾಯದ ಗಂಟೆ’ ಎಲ್ಲಿದೆ? ಅದಕ್ಕೆ ಕಟ್ಟಿರುವ ಹಗ್ಗ ಅವರಿಗೆ ಎಟುಕುತ್ತಿಲ್ಲವಲ್ಲವೇಕೆ...?!

Vishwavani Editorial: ಕೆಡವೋದು ಸುಲಭ, ಕಟ್ಟೋದು ಕಷ್ಟ

-

Ashok Nayak
Ashok Nayak Mar 25, 2026 10:45 AM

ದೀರ್ಘಾವಧಿವರೆಗೆ ಶ್ರಮಪಟ್ಟು ಕಟ್ಟಿಕೊಂಡ ವ್ಯವಸ್ಥೆ/ಬದುಕು ಅಥವಾ ಹಗಲೂರಾತ್ರಿ ನಿದ್ರೆಗೆಟ್ಟು ಮಾಡಿದ ಅಧ್ಯಯನ/ಸಂಶೋಧನೆಯ ಫಲಶ್ರುತಿಯು ಕಿಡಿಗೇಡಿಗಳ ಕೆಟ್ಟ ದೃಷ್ಟಿಗೆ ಸಿಲುಕಿ ನಾಶವಾದರೆ, ಅದು ನೀಡುವ ನೋವಿನ ತೀವ್ರತೆಯನ್ನು ವ್ಯಾಖ್ಯಾನಿಸಲು ‘ಕುಂಬಾರನಿಗೆ ಒಂದು ವರುಷ, ದೊಣ್ಣೆಗೆ ಒಂದು ನಿಮಿಷ’ ಎಂಬ ಜಾಣನುಡಿಯನ್ನು ಜನರು ಬಳಸುವುದುಂಟು.

ಕಾರಣ, ಕಟ್ಟುವಿಕೆಗೆ ಅಥವಾ ಅಧ್ಯಯನಕ್ಕೆ ವಿನಿಯೋಗಿಸಿದ ಸಮಯ ಹಾಗೂ ಪರಿಶ್ರಮ ಎಷ್ಟು ಅಗಾಧವಾಗಿರುತ್ತದೆ ಎಂಬುದು, ಅದರ ಫಲಶ್ರುತಿಯನ್ನು ಧ್ವಂಸಗೊಳಿಸುವ ಕಿಡಿಗೇಡಿಗಳಿಗೆ ಗೊತ್ತಿರುವುದಿಲ್ಲ, ಅಥವಾ ಗೊತ್ತಿದ್ದರೂ ‘ಎದುರಾಳಿ ಹಾಳಾಗಿ ಹೋಗಲಿ’ ಎಂಬ ಕುತ್ಸಿತ ಚಿಂತನೆಯಿಂದಾಗಿಯೇ ಇಂಥ ‘ಕಟ್ಟೋಣ’ವನ್ನು ಆಹುತಿ ತೆಗೆದು ಕೊಳ್ಳುತ್ತದೆ ಕಣ್ಣಿಗೆ ಅಮರಿಕೊಂಡಿರುವ ದ್ವೇಷದ ಜ್ವಾಲೆ. ಮಧ್ಯಪ್ರಾಚ್ಯ ಯುದ್ಧದ ದೃಶ್ಯಗಳನ್ನು ಅನಿವಾರ್ಯವಾಗಿ ವೀಕ್ಷಿಸಬೇಕಾಗಿ ಬಂದಿದೆ.

ಇದನ್ನೂ ಓದಿ: Vishwavani Editorial: ಇರುಳ ವಿರುದ್ಧ, ಬೆಳಕಿನ ಯುದ್ಧ...!

ಇಲ್ಲಿ ತಪ್ಪು ಆ ಪಾಳಯದ್ದೋ, ಈ ಪಾಳಯದ್ದೋ? ಎಂಬ ಪ್ರಶ್ನೆ ಒತ್ತಟ್ಟಿಗಿರಲಿ; ಆದರೆ ಇಲ್ಲಿ ಮಣ್ಣುಪಾಲಾಗುತ್ತಿರುವುದು ಮಾನವೀಯತೆಯ ಒರತೆ ಎಂಬುದಂತೂ ಖರೆ. ಹುಂಬ ನಾಯಕಗಣವು ತನ್ನ ಅಹಮಿಕೆಯನ್ನು ತಣಿಸಿಕೊಳ್ಳಲು ಅಮಾಯಕ ಜನರ ಅಸ್ತಿತ್ವಕ್ಕೇ ಕೊಡಲಿಪೆಟ್ಟು ನೀಡುತ್ತಿದೆ.

ಹಿಂದಿನ ದಿನವಷ್ಟೇ ಊಟಕ್ಕಿಟ್ಟು ಆಶ್ರಯ ನೀಡಿದ್ದ ಮನೆಯು, ನೋಡನೋಡುತ್ತಿದ್ದಂತೆ ಬಾಂಬ್ ದಾಳಿಗೆ ಕುಸಿದುಹೋದಾಗ, ಅದರ ನಿವಾಸಿಗಳ ಕಣ್ಣಲ್ಲಿ ಭುಗಿಲೇಳುವ ‘ಮುಂದೇನು?’ ಎಂಬ ಅನಿಶ್ಚಿತತೆಯ ಪ್ರಶ್ನೆಗೆ ಪ್ರಾಯಶಃ ಈ ಹುಂಬನಾಯಕರ ಬಳಿ ಉತ್ತರ ವಿಲ್ಲ.

ಜನರನ್ನು ಕಾಯುವವರನ್ನು ‘ನಾಯಕ’ ಎಂದು ಕರೆಯುವುದು ವಾಡಿಕೆ. ಮತ್ತೊಂದೆಡೆ, ‘ಕಾಯುವುದು ದೇವರ ಕೆಲಸ, ಕೊಲ್ಲುವುದು ರಾಕ್ಷಸರ ಕೆಲಸ’ ಎಂಬ ಜಾಣನುಡಿಯೂ ಇದೆ. ಆದರಿಲ್ಲಿ, ಕಾಯಬೇಕಾದವರೇ ಜನರ ಕುತ್ತಿಗೆಯನ್ನು ಹಿಸುಕುತ್ತಿರುವಾಗ, ಇವರನ್ನು ‘ನಾಯಕರು’ ಎನ್ನಬೇಕೋ, ‘ದಾನವರು’ ಎನ್ನಬೇಕೋ? ಎಂದು ಗೊಂದಲವಾಗುತ್ತದೆ.

ಅಂತಾರಾಷ್ಟ್ರೀಯ ಭೂರಾಜಕೀಯದ ಹಿತಾಸಕ್ತಿಯ ನೆರವೇರಿಕೆಗೆಂದು ಯುದ್ಧದಲ್ಲಿ ತೊಡಗಿದ ನಾಯಕರು ಮಾತ್ರ ಸುರಕ್ಷಿತರಾಗೇ ಇರುತ್ತಾರೆ; ಆದರೆ ‘ಮೂರಾಬಟ್ಟೆ’ ಯಾಗುವುದು ಜನಸಾಮಾನ್ಯರ ಬದುಕು. ಇಂಥ ಶ್ರೀಸಾಮಾನ್ಯರು ಬಾರಿಸಬೇಕಾದ ‘ನ್ಯಾಯದ ಗಂಟೆ’ ಎಲ್ಲಿದೆ? ಅದಕ್ಕೆ ಕಟ್ಟಿರುವ ಹಗ್ಗ ಅವರಿಗೆ ಎಟುಕುತ್ತಿಲ್ಲವಲ್ಲವೇಕೆ...?!