Vishwavani Editorial: ಯಾಕಿಂಥ ಹಠಮಾರಿ ಧೋರಣೆ?
ಇಂಥ ನಿರ್ಲಕ್ಷ್ಯಕ್ಕೆ ಅಥವಾ ಹಠಮಾರಿ ಧೋರಣೆಗೆ ಇನ್ನಾದರೂ ತಡೆ ಬೀಳಬೇಕಿದೆ. ಕರ್ನಾಟಕದ ಸಂಸದರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಇದಕ್ಕೊಂದು ಪರಿಹಾರ ಮಾರ್ಗವನ್ನು ಕಂಡುಹಿಡಿಯಲು ಟೊಂಕ ಕಟ್ಟಬೇಕು. ಇಲ್ಲವಾದಲ್ಲಿ ಕನ್ನಡದ ಸ್ಪರ್ಧಾರ್ಥಿಗಳ ಅಳಲು, ಅರಣ್ಯ ರೋದನವಾಗಿಯೇ ಉಳಿದು ಬಿಡುತ್ತದೆ...
ರೈಲ್ವೆ ಇಲಾಖೆಯ ಒಳ ಪದೋನ್ನತಿ ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಮಾತ್ರ ನಡೆಸುತ್ತಿರುವುದಕ್ಕೆ ಅಸಮಾಧಾನ ಹೊಮ್ಮಿದೆ. ಕನ್ನಡದ ಸ್ಪರ್ಧಾರ್ಥಿಗಳಿಗೆ ಈ ನಡೆಯಿಂದ ಅನ್ಯಾಯವಾಗುವುದರಿಂದ ಈ ಅಸಮಾಧಾನದಲ್ಲಿ ಅರ್ಥವಿದೆ. ಅದು ಶಾಲಾ ಕಾಲೇಜುಗಳ ಶೈಕ್ಷಣಿಕ ಪರೀಕ್ಷೆಯೇ ಇರಲಿ ಅಥವಾ ಉದ್ಯೋಗ/ಪದೋನ್ನತಿ ಸಂಬಂಧದ ಸ್ಪರ್ಧಾತ್ಮಕ ಪರೀಕ್ಷೆಗಳೇ ಇರಲಿ, ಪ್ರಶ್ನೆಗಳು ಮಾತೃಭಾಷೆಯಲ್ಲಿ ಲಭ್ಯವಿದ್ದರೆ ಮಾತ್ರವೇ ಸ್ಪರ್ಧಾರ್ಥಿಗಳು ಅದನ್ನು ಸಮರ್ಥವಾಗಿ ಗ್ರಹಿಸಿ ಉತ್ತರಿಸಲು ಸಾಧ್ಯ; ಆದರೆ ತಮ್ಮದಲ್ಲದ ಭಾಷೆಗಳಲ್ಲಿ ಪ್ರಶ್ನೆಯನ್ನು ನೀಡಿದ್ದರೆ, ಅವರು ಮೊದಲಿಗೆ ಆ ಪರಭಾಷೆಯನ್ನು ಅರ್ಥ ಮಾಡಿ ಕೊಂಡು, ತರುವಾಯದಲ್ಲಿ ಅದರಲ್ಲಿ ವ್ಯಕ್ತವಾಗಿರುವ ಸೂಚನೆಯನ್ನು ಗ್ರಹಿಸಿ ವಿಷಯ ಪ್ರವೇಶ ವನ್ನು ಮಾಡಬೇಕಾಗಿ ಬರುತ್ತದೆ.
ಇದನ್ನೂ ಓದಿ: Railway Exam: ರೈಲ್ವೆ ಪರೀಕ್ಷೆ ರದ್ದು; ಕನ್ನಡದಲ್ಲೇ ಎಕ್ಸಾಂ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಆಗ್ರಹ
ಇಂಥ ಸಂದರ್ಭದಲ್ಲಿ ವಿಷಯ ಗೊತ್ತಿದ್ದರೂ ಪರಿಪೂರ್ಣವಾಗಿ ಉತ್ತರಿಸುವುದು ಅವರಿಗೆ ಸಾಧ್ಯ ವಾಗದಿರಬಹುದು. ಅಭಿಪ್ರಾಯಗಳನ್ನು, ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಆಡುಭಾಷೆಗಿಂತ ಮಿಗಿಲಾದ ಮಾಧ್ಯಮವಿಲ್ಲ ಎಂಬುದು ಎಲ್ಲರೂ ಒಪ್ಪುವ ವಾದ.
ಹೀಗಿರುವಾಗ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯಾ ಪ್ರದೇಶದ ಭಾಷೆಗಳಲ್ಲೇ ಪ್ರಶ್ನೆ ಪತ್ರಿಕೆಗಳನ್ನು ಯಾಕೆ ಸಿದ್ಧಪಡಿಸಬಾರದು ಎಂಬುದು ಇಲ್ಲಿ ಹೊಮ್ಮುವ ಪ್ರಶ್ನೆ. ಆದರೆ ಇಂಥದೊಂದು ಆಗ್ರಹ ಸಾಕಷ್ಟು ವರ್ಷಗಳಿಂದ ಹೊಮ್ಮುತ್ತಿದ್ದರೂ, ಯಾರೂ ಅದಕ್ಕೆ ಸೊಪ್ಪು ಹಾಕುತ್ತಿಲ್ಲ.
ಇಂಥ ನಿರ್ಲಕ್ಷ್ಯಕ್ಕೆ ಅಥವಾ ಹಠಮಾರಿ ಧೋರಣೆಗೆ ಇನ್ನಾದರೂ ತಡೆ ಬೀಳಬೇಕಿದೆ. ಕರ್ನಾಟಕದ ಸಂಸದರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಇದಕ್ಕೊಂದು ಪರಿಹಾರ ಮಾರ್ಗವನ್ನು ಕಂಡುಹಿಡಿಯಲು ಟೊಂಕ ಕಟ್ಟಬೇಕು. ಇಲ್ಲವಾದಲ್ಲಿ ಕನ್ನಡದ ಸ್ಪರ್ಧಾರ್ಥಿಗಳ ಅಳಲು, ಅರಣ್ಯರೋದನವಾಗಿಯೇ ಉಳಿದು ಬಿಡುತ್ತದೆ...