IND vs ENG: ಏಕೈಕ ಓವರ್‌ಗೆ 23 ರನ್ ನೀಡಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಪ್ರಸಿಧ್ ಕೃಷ್ಣ!
ಇಂಗ್ಲೆಂಡ್ ವಿರುದ್ದ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನ ಭಾರತ ತಂಡದ ವೇಗಿ ಪ್ರಸಿಧ್ ಕೃಷ್ಣ ಅನಗತ್ಯ ದಾಖಲೆಯನ್ನು ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ದ ಟೆಸ್ಟ್ ಪಂದ್ಯದ ಏಕೈಕ ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ಮೊದಲ ಭಾರತೀಯ ಬೌಲರ್ ಎಂಬ ಜಂಟಿ ದಾಖಲೆಯನ್ನು ಹೆಗಲೇರಿಸಿಕೊಂಡಿದ್ದಾರೆ.

ಒಂದೇ ಓವರ್‌ನಲ್ಲಿ 23 ರನ್ ಕೊಟ್ಟ ಪ್ರಸಿಧ್ ಕೃಷ್ಣ.

ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ(IND vs WNG) ಭಾರತ ತಂಡದ ವೇಗಿ ಹಾಗೂ ಕನ್ನಡಿಗ ಪ್ರಸಿಧ್ ಕೃಷ್ಣ (Prasidh Krishna) ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಡುವ ಮೂಲಕ ಅತ್ಯಂತ ದುಬಾರಿಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದ ಏಕೈಕ ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ಭಾರತದ ಮೊದಲ ಬೌಲರ್ ಎಂಬ ಜಂಟಿ ಅನಗತ್ಯ ದಾಖಲೆಯನ್ನು ಹೆಗಲೇರಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಸ್ಪಿನ್ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಕೂಡ ಇದೇ ರೀತಿ ಹೆಚ್ಚಿನ ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಇಲ್ಲಿನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನ ಪ್ರಸಿಧ್ ಈ ಅನಗತ್ಯ ದಾಖಲೆಯನ್ನು ಹೆಗಲೇರಿಸಿಕೊಂಡಿದ್ದಾರೆ.
ಪಂದ್ಯದ ಮೂರನೇ ದಿನವಾದ ಶುಕ್ರವಾರ ಪ್ರಥಮ ಇನಿಂಗ್ಸ್ ಅನ್ನು ಮುಂದುವರಿಸಲು ಬಂದಿದ್ದ ಇಂಗ್ಲೆಂಡ್ ತಂಡಕ್ಕೆ ಮೊಹಮ್ಮದ್ ಸಿರಾಜ್ ಸತತ ಎರಡು ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಉತ್ತಮ ಆರಂಭ ತಂದುಕೊಟ್ಟಿದ್ದರು. ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ಸತತ ಎರಡು ಎಸೆತಗಳಲ್ಲಿ ವಿಕೆಟ್ ಒಪ್ಪಿಸಿದ್ದರು. ಆ ಮೂಲಕ ಇಂಗ್ಲೆಂಡ್ ತಂಡ 84 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಆರನೇ ವಿಕೆಟ್‌ಗೆ ಜೊತೆಯಾದ ಹ್ಯಾರಿ ಬ್ರೂಕ್ ಹಾಗೂ ಜೇಮಿ ಸ್ಮಿತ್ ಶತಕದ ದೊಡ್ಡ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸಿ ಆತಿಥೇಯರ ಕಮ್‌ಬ್ಯಾಕ್‌ಗೆ ನೆರವು ನೀಡಿದ್ದರು.
IND vs ENG: ಶುಭಮನ್ ಗಿಲ್ ಬಗ್ಗೆ ದೊಡ್ಡ ಭವಿಷ್ಯ ನುಡಿದ ಮೈಕಲ್ ವಾನ್!
ಈ ವೇಳೆ ನಾಯಕ ಶುಭಮನ್ ಗಿಲ್, ಸಿರಾಜ್ ಹಾಗೂ ಆಕಾಶ್ ದೀಪ್ ಜೊತೆಗೆ ಇತರೆ ಬೌಲರ್‌ಗಳಿಂದ ಈ ಇಬ್ಬರು ಜೊತೆಯಾಟವನ್ನು ಮುರಿಯಲು ಪ್ರಯತ್ನಿಸಿದ್ದರು. ಅದರಂತೆ ಕನ್ನಡಿಗ ಪ್ರಸಿಧ್ ಕೃಷ್ಣ ಅವರನ್ನು ಕೂಡ ಪ್ರಯತ್ನಿಸಿದ್ದರು. ಇವರು 32ನೇ ಓವರ್‌ನಲ್ಲಿ ಜೇಮಿ ಸ್ಮಿತ್‌ಗೆ ಬರೋಬ್ಬರಿ 23 ರನ್ ಬಿಟ್ಟುಕೊಟ್ಟರು. ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಜೇಮಿ ಸ್ಮಿತ್, ಪ್ರಸಿಧ್ ಕೃಷ್ಣ ಅವರ ಓವರ್‌ನಲ್ಲಿ 0, 4, 6, 4 ,4 ಹಾಗೂ 4 ರನ್ ಸೇರಿ ಒಟ್ಟು 23 ರನ್‌ಗಳನ್ನು ಬಿಟ್ಟುಕೊಟ್ಟರು. ಆ ಮೂಲಕ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನ ಓವರ್‌ಗೆ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಭಾರತದ ಮೊದಲ ಬೌಲರ್ ಎಂಬ ಜಂಟಿ ದಾಖಲೆಯನ್ನು ರವೀಂದ್ರ ಜಡೇಜಾ ಜೊತೆ ಹಂಚಿಕೊಂಡಿದ್ದಾರೆ. 2024ರಲ್ಲಿ ಇಂಗ್ಲೆಂಡ್ ವಿರುದ್ಧ ರಾಜ್‌ಕೋಟ್ ಟೆಸ್ಟ್ ಪಂದ್ಯದ ಓವರ್‌ನಲ್ಲಿಯೂ ಜಡೇಜಾ ಇಷ್ಟೇ ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.
IND vs ENG 2nd Test: ಗಿಲ್ ದಾಖಲೆಯ ದ್ವಿಶತಕ; ಭಾರತದ ಹಿಡಿತದಲ್ಲಿ ದ್ವಿತೀಯ ಟೆಸ್ಟ್
ಟೆಸ್ಟ್ ಪಂದ್ಯದ ಏಕೈಕ ಓವರ್‌ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಭಾರತದ ಜಂಟಿ ನಾಲ್ಕನೇ ಸ್ಥಾನವನ್ನು ಪ್ರಸಿಧ್ ಕೃಷ್ಣ ಹಂಚಿಕೊಂಡಿದ್ದಾರೆ. ಅಂದ ಹಾಗೆ 46 ಓವರ್‌ಗಳ ಅಂತ್ಯಕ್ಕೆ ಪ್ರಸಿಧ್ ಕೃಷ್ಣ ಬೌಲ್ ಮಾಡಿದ್ದ 8 ಓವರ್‌ಗಳಲ್ಲಿ 7.60ರ ಸರಾಸರಿಯಲ್ಲಿ 61 ರನ್‌ಗಳನ್ನು ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟಿದ್ದಾರೆ. ಆದರೆ, ಮೊಹಮ್ಮದ್ ಸಿರಾಜ್ 3 ವಿಕೆಟ್ ಪಡೆಯುವ ಮೂಲಕ 4.10ರ ಎಕಾನಮಿಯಲ್ಲಿ ರನ್ ಕೊಟ್ಟು ಎದುರಾಳಿ ತಂಡವನ್ನು ನಿಯಂತ್ರಿಸಿದ್ದಾರೆ. ಅಂದ ಹಾಗೆ ಮೂರನೇ ದಿನದಾಟದ ಭೋಜನ ವಿರಾಮದ ಹೊತ್ತಿಗೆ ಇಂಗ್ಲೆಂಡ್ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 47 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 249 ರನ್‌ಗಳನ್ನು ಗಳಿಸಿದೆ ಹಾಗೂ ಇನ್ನೂ 338 ರನ್‌ಗಳ ಹಿನ್ನಡೆಯನ್ನು ಅನುಭವಿಸಿದೆ.