ಇಂಗ್ಲೆಂಡ್ ವಿರುದ್ಧದ ಸೋಲಿನ ಬಳಿಕ ಸಲ್ಮಾನ್ ಆಘಾ ಕುಟುಂಬವನ್ನು ನಿಂದಿಸಿದ ಫ್ಯಾನ್ಸ್!
ಮಂಗಳವಾರ ನಡೆದಿದ್ದ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8ರ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ತಂಡ ಸೋತ ನಂತರ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ನಾಯಕ ಸಲ್ಮಾನ್ ಆಘಾ ಅವರ ಪತ್ನಿ ಮತ್ತು ಅವರ ಮಗನನ್ನು ಸೋಶಿಯಲ್ ಮೀಡಿಯಾದಲ್ಲಿ ನಿಂದಿಸಿದ್ದಾರೆ. ಈ ಬಗ್ಗೆ ಪಾಕ್ ನಾಯಕನ ಪತ್ನಿ ಸಬ್ಬಾ ಮಾಂಜರ್ ಆರೋಪಿಸಿದ್ದಾರೆ.
ಸಲ್ಮಾನ್ ಅಲಿ ಆಘಾ ಕುಟುಂಬವನ್ನು ನಿಂದಿಸಿದ ಫ್ಯಾನ್ಸ್. -
ನವದೆಹಲಿ: ಪ್ರಸ್ತುತ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಸೂಪರ್-8ರ ಹಂತದ ಪಂದ್ಯಗಳು ನಡೆಯುತ್ತಿದ್ದು, ಮಂಗಳವಾರ ಇಂಗ್ಲೆಂಡ್ ಮತ್ತು ಪಾಕಿಸ್ತಾನ (ENG vs PAK) ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಅವರ ಭರ್ಜರಿ ಶತಕದ ಬಲದಿಂದ ಇಂಗ್ಲೆಂಡ್ ಗೆಲುವು ಸಾಧಿಸಿತ್ತು. ಈ ಮೂಲಕ ಸೆಮಿಫೈನಲ್ಸ್‌ಗೆ ಅರ್ಹತೆ ಪಡೆದ ಮೊದಲ ತಂಡ ಎನಿಸಿಕೊಂಡಿತು. ಈ ಸೋಲಿನ ಬಳಿಕ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪಾಕ್ ತಂಡದ ನಾಯಕ ಸಲ್ಮಾನ್ ಆಘಾ (Salman Ali Agha) ಅವರ ಪತ್ನಿ ಮತ್ತು ಮಗನನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಸ್ವತಃ ಸಲ್ಮಾನ್ ಆಘಾ ಅವರ ಪತ್ನಿ ಸಬ್ಜಾ ಮಾಂಜರ್ ಆರೋಪಿಸಿದ್ದು, 'ಸೋಷಿಯಲ್ ಮೀಡಿಯಾದಲ್ಲಿ ನನಗೆ ಮತ್ತು ನನ್ನ ಮಗನಿಗೆ ನಿಂದನೆ ಮಾಡಿದ್ದಾರೆ,' ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಸೂಪರ್-8ರ ನಿರ್ಣಾಯಕ ಹಂತದ ಪಂದ್ಯದಲ್ಲಿ ಸೋತ ಕಾರಣ ಪಾಕ್ ಸೆಮಿಫೈನಲ್ ತಲುಪುವ ಸಾಧ್ಯತೆ ಕಡಿಮೆಯಾಗಿದೆ. ಇದರಿಂದ ಪಾಕ್ ಅಭಿಮಾನಿಗಳು ಸಲ್ಮಾನ್ ಆಘಾ ಅವರ ನಾಯಕತ್ವದ ಕುರಿತು ಇದೀಗ ವ್ಯಾಪಾಕ ಟೀಕೆ ಮಾಡುತ್ತಿದ್ದಾರೆ.
IND vs ZIM: ಭಾರತ ತಂಡದಲ್ಲಿ ರಿಂಕು ಸಿಂಗ್ ಸ್ಥಾನಕ್ಕೆ ಸೂಕ್ತ ಆಟಗಾರರನ್ನು ಹೆಸರಿಸಿದ ರವಿಶಾಸ್ತ್ರಿ!
ಸಬ್ಜಾ ಮಾಂಜರ್ ಪೋಸ್ಟ್‌ನಲ್ಲಿರುವುದೇನು?
ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಅಸಹ್ಯ ಕಾಮೆಂಟ್ಸ್ ಮತ್ತು ಪೋಸ್ಟ್ ಮಾಡಿರುವುದರ ಕುರಿತು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಲ್ಮಾನ್ ಆಘಾ ಪತ್ನಿ ಸಬ್ಜಾ ಮಾಂಜರ್ "ನನಗೆ ಅಥವಾ ನನ್ನ ಮುಗ್ಧ ಮಗನಿಗೆ ನಿಂದನೆ ಸಂದೇಶ ಕಳುಹಿಸುವುದರಿಂದ ಪಾಕಿಸ್ತಾನಿ ಅಭಿಮಾನಿಗಳಿಗೆ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ. ಮುಂದೆ ಇತರ ತಂಡಗಳ ಫಲಿತಾಂಶಗಳು ಹೇಗೆ ಬರುತ್ತವೆ ಎಂಬುದನ್ನು ನಾವು ಕಾಯಬೇಕು. ಎಲ್ಲಾ ನಮ್ಮ ಪರವಾಗಿ ಆಗುತ್ತದೆ ಎಂದು ನಾವು ಭಾವಿಸುತ್ತೇವೆ. ನಂತರ ನಾವು ಶ್ರೀಲಂಕಾ ವಿರುದ್ಧ ಗೆಲ್ಲಬೇಕು ಎನ್ನುತ್ತೇವೆ. ಕ್ರಿಕೆಟ್ ಒಂದು ಮೋಜಿನ ಆಟ. ಏನು ಬೇಕಾದರೂ ನಡೆಯಬಹುದು. ಯಾವಾಗಲೂ ಭರವಸೆ ಇರುತ್ತದೆ ಮತ್ತು ಒಂದು ತಂಡವಾಗಿ, ನಾವು ಯಾವಾಗಲೂ ನಂಬುತ್ತಲೇ ಇರುತ್ತೇವೆ" ಎಂದು ಬರೆದುಕೊಂಡಿದ್ದಾರೆ.
ಪಾಕಿಸ್ತಾನ ಸೆಮಿ ಫೈನಲ್ ತಲುಪಲಿದೆಯಾ?
ಇಂಗ್ಲೆಂಡ್ ವಿರುದ್ಧ ಸೋಲುವ ಮೂಲಕ ಪಾಕಿಸ್ತಾನ ಸಂಕಷ್ಟದಲ್ಲಿದೆ. ಸೂಪರ್-8ರ ಎರಡು ಪಂದ್ಯಗಳಿಂದ ಪಾಕ್ ಕೇವಲ ಒಂದು ಅಂಕವನ್ನು ಮಾತ್ರ ಹೊಂದಿದೆ. ಇನ್ನು, ಫೆಬ್ರವರಿ 28ರ ಶನಿವಾರ ಶ್ರೀಲಂಕಾದ ವಿರುದ್ಧ ಆಡಲಿರುವ ಪಂದ್ಯವನ್ನು ಪಾಕ್ ಉತ್ತಮ ರನ್ ರೇಟ್ ನೊಂದಿಗೆ ಗೆಲ್ಲಲೇಬೇಕು. ಬಳಿಕ ಗುಂಪು ಎರಡರ ಇತರ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕು. ಇತ್ತ ಇನ್ನೊಂದು ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಗೆಲ್ಲಬೇಕು. ಹೀಗಾದರೆ ಮಾತ್ರ ಪಾಕಿಸ್ತಾನ ಸೆಮಿಫೈನಲ್ ತಲುಪುವ ಸಾಧ್ಯತೆಯಿದೆ. ಇಲ್ಲವಾದಲ್ಲಿ ಟೂರ್ನಿಯಿಂದ ಹೊರಬೀಳುವುದು ಬಹುತೇಕ ಖಚಿತ.
ಗೌತಮ್ ಗಂಭೀರ್ ರಾಜಕೀಯದಿಂದ ಭಾರತ ತಂಡದ ವರ್ಚಸ್ಸಿಗೆ ಧಕ್ಕೆ: ಅಹ್ಮದ್ ಶೆಹಜಾದ್!
ಇತ್ತೀಚಿಗೆ ಕಳಪೆ ಫಾರ್ಮ್‌ನಲ್ಲಿರುವ ಪಾಕಿಸ್ತಾನ
ಇತ್ತೀಚಿನ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನ ನೀಡುತ್ತಿದೆ. ಪಾಕಿಸ್ತಾನದಲ್ಲಿ ನಡೆದ 2025ರ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಕಳೆದ ಮೂರು ಐಸಿಸಿ ಟೂರ್ನಿಗಳಲ್ಲಿ ಅವರು ಸೆಮಿಫೈನಲ್ ತಲುಪುವಲ್ಲಿ ವಿಫಲರಾಗಿದ್ದಾರೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ಯುಎಸ್ಎ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದ್ದರು.
2024ರಲ್ಲಿ ಮೊಹಮ್ಮದ್ ರಿಝ್ವಾನ್ ಅವರನ್ನು ಪಾಕಿಸ್ತಾನದ ಟಿ20ಐ ನಾಯಕನ ಸ್ಥಾನದಿಂದ ಕೆಳಗಿಳಿಸಿದ ನಂತರ ಸಲ್ಮಾನ್ ಆಘಾ ಅವರನ್ನು ನಾಯಕನನ್ನಾಗಿ ನೇಮಿಸಲಾಯಿತು. ಇದಕ್ಕೂ ಮೊದಲು, ಬಾಬರ್ ಆಝಮ್, ಶದಾಬ್ ಖಾನ್ ಮತ್ತು ಶಾಹೀನ್ ಅಫ್ರಿದಿ ಕೂಡ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ್ದರು. ಆದರೆ ಕಳಪೆ ಪ್ರದರ್ಶನಗಳಿಂದ ಕಂಗೆಟ್ಟ ಕಾರಣ ನಾಯಕತ್ವ ಬದಲಾವಣೆ ಮಾಡಲಾಯಿತು.