ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಯ ಬಳಿಕ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ಅನಯಾ ಬಾಂಗರ್‌!

ಭಾರತೀಯ ಮಾಜಿ ಕ್ರಿಕೆಟಿಗ ಸಂಜಯ್‌ ಬಾಂಗರ್‌ ಅವರ ಪುತ್ರಿ ಅನಯಾ ಬಾಂಗರ್‌ ಅವರು ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಶಸ್ತ್ರ ಚಿಕಿತ್ಸೆಯ ಬಳಿಕ ಅನಯಾ ಬಾಂಗರ್‌ ಅವತು ತಮ್ಮ ತಂದೆಯೊಂದಿಗಿನ ಫೋಟೋ ಮೂಲಕ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆಗೆ ಒಳಗಾದ ಅನಯಾ ಬಾಂಗರ್‌!

ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಯ ಬಳಿಕ ಅನಯಾ ಬಾಂಗರ್‌ ಭಾವನಾತ್ಮಕ ಪೋಸ್ಟ್‌. -

Profile
Ramesh Kote Mar 21, 2026 9:45 PM

ಬೆಂಗಳೂರು: ಸಮಾಜದಲ್ಲಿ ತಮ್ಮ ನಿಜವಾದ ವ್ಯಕ್ತಿತ್ವವನ್ನು ಸ್ವೀಕರಿಸುವುದು ಕೆಲವೊಮ್ಮೆ ಸವಾಲಿನ ವಿಷಯವಾಗಿರಬಹುದು. ಆದರೆ ಧೈರ್ಯ, ಕುಟುಂಬದ ಬೆಂಬಲ ಮತ್ತು ಆತ್ಮವಿಶ್ವಾಸ ಇದ್ದರೆ ಯಾವುದೇ ಅಡೆತಡೆಯನ್ನೂ ದಾಟಬಹುದು ಎಂಬುದಕ್ಕೆ ಭಾರತೀಯ ಮಾಜಿ ಕ್ರಿಕೆಟಿಗ ಹಾಗೂ ಆರ್‌ಸಿಬಿ ಮಾಜಿ ಕೋಚ್‌ ಸಂಜಯ್‌ ಬಾಂಗರ್‌ (Sanjay Bangar) ಅವರ ಪುತ್ರಿ ಅನಯಾ ಬಂಗಾರ್ (Anaya Bangar) ಜೀವಂತ ಉದಾಹರಣೆಯಾಗಿದ್ದಾರೆ. ಇತ್ತೀಚೆಗೆ ಅನಯಾ ಬಂಗಾರ್ ಥಾಯ್ಲೆಂಡ್‌ನಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಮಹತ್ವದ ಹೆಜ್ಜೆಯ ನಂತರ ಅವರು ತಮ್ಮ ಜೀವನದ ಹೊಸ ಅಧ್ಯಾಯವನ್ನು ಆತ್ಮವಿಶ್ವಾಸದಿಂದ ಆರಂಭಿಸಿದ್ದಾರೆ. ತಮ್ಮ ಪ್ರಯಾಣದ ಕುರಿತು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಶಸ್ತ್ರ ಚಿಕಿತ್ಸೆಯ ನಂತರ ತಮ್ಮ ತಂದೆಯ ಜೊತೆ ಆಸ್ಪತ್ರೆಯಲ್ಲಿ ತೆಗೆದ ಫೋಟೋವೊಂದನ್ನು ಅನಯಾ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ಕ್ಷಣವನ್ನು ಅವರು ಅತ್ಯಂತ ಅರ್ಥಪೂರ್ಣ ಮತ್ತು ಭಾವನಾತ್ಮಕ ಅನುಭವವೆಂದು ವಿವರಿಸಿದ್ದಾರೆ. ತಮ್ಮ ಜೀವನಯಾತ್ರೆಯ ಬಗ್ಗೆ ಅನಯಾ ಮನದಾಳದಿಂದ ಮಾತನಾಡುತ್ತಾ, ಈ ಪ್ರಯಾಣವು ಕೇವಲ ತಮಗಷ್ಟೇ ಅಲ್ಲ, ತಮ್ಮ ಕುಟುಂಬದ ಎಲ್ಲರಿಗೂ ಸಹ ಬಹಳ ಸವಾಲಿನದ್ದಾಗಿತ್ತು ಎಂದು ತಿಳಿಸಿದ್ದಾರೆ. ಸಮಯದೊಂದಿಗೆ ಪರಸ್ಪರ ಅರ್ಥೈಸಿಕೊಳ್ಳುವುದು ಮತ್ತು ಸ್ವೀಕರಿಸುವುದು ಸುಲಭವಾಗಿರಲಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ. ಆದರೆ, ಧೈರ್ಯ ಮತ್ತು ಸಹನೆಯ ಮೂಲಕ ತಮ್ಮ ಕುಟುಂಬವು ಈ ಎಲ್ಲವನ್ನು ಎದುರಿಸಿ ಮುಂದೆ ಬಂದಿದ್ದು, ಇಂದಿನ ಈ ಸಂತೋಷದ ಕ್ಷಣವನ್ನು ಸಾಧ್ಯವಾಗಿಸಿದೆ ಎಂದು ಅನಯಾ ಬರೆದುಕೊಂಡಿದ್ದಾರೆ.

IPL 2026: ವೆಂಕಟೇಶ್‌ ಅಯ್ಯರ್‌ ಔಟ್‌! ಆರ್‌ಸಿಬಿ ಪ್ಲೇಯಿಂಗ್‌ XI ಕಟ್ಟಿದ ಸಂಜಯ್‌ ಬಾಂಗರ್‌!

ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡ ಅನಯಾ ಬಾಂಗರ್‌

"ನನಗೂ ಹಾಗೂ ನನ್ನ ಕುಟುಂಬಕ್ಕೆ ಈ ಪಯಣ ಸುಲಭವಾಗಿರಲಿಲ್ಲ. ನನ್ನನ್ನು ಅರ್ಥಮಾಡಿಕೊಳ್ಳಲು, ಸ್ವೀಕರಿಸಲು ಮತ್ತು ನನ್ನೊಂದಿಗೆ ನಿಲ್ಲಲು ನಾನು ಸ್ವಲ್ಪ ಸಮಯವನ್ನು ತೆಗೆದುಕೊಂಡಿದ್ದೇನೆ. ಇದು ಕ್ಷಣಾರ್ಧದಲ್ಲಿ ನಡೆದಿಲ್ಲ. ನಮ್ಮ ಎಲ್ಲರಿಗೂ ಗೊಂದಲದ ಕ್ಷಣಗಳು, ಪ್ರಶ್ನೆಗಳು ಮತ್ತು ಕಲಿಕೆಯ ಹಂತಗಳು ಇದ್ದವು. ಆದರೆ ಇಂದು ಇಲ್ಲಿ ನಿಂತಿರುವಾಗ, ನನ್ನ ಮನಸ್ಸು ಸಂಪೂರ್ಣ ಕೃತಜ್ಞತೆಯಿಂದ ತುಂಬಿದೆ,” ಎಂದು ಅನಯಾ ಬಾಂಗರ್‌ ತಾವು ಹಂಚಿಕೊಂಡಿರುವ ಫೋಟೋ ಈ ರೀತಿಯ ಭಾವನಾತ್ಮಕ ಶೀರ್ಷಿಕೆಯನ್ನು ನೀಡಿದ್ದಾರೆ.

ತಮ್ಮ ತಂದೆಯ ಬೆಂಬಲವನ್ನು ಸ್ಮರಿಸಿದ ಅನಯಾ

“ನನ್ನ ಜೀವನದ ಅತ್ಯಂತ ಪ್ರಮುಖ ಕ್ಷಣಗಳಲ್ಲಿ ಒಂದಾದ ಈ ಸಮಯದಲ್ಲಿ ನನ್ನ ತಂದೆ ನನ್ನೊಂದಿಗೆ ಇರುವುದು ನನಗೆ ಎಲ್ಲವನ್ನೂ ಅರ್ಥ ಮಾಡಿಕೊಡುತ್ತದೆ. ಅವರ ಬೆಂಬಲ ಕೇವಲ ಒಂದೇ ರಾತ್ರಿ ಬಂದಿಲ್ಲ, ಆದರೆ ಅವರ ಬೆಂಬಲ ನಿಜವಾಗಿತ್ತು, ಅಚಲವಾಗಿತ್ತು ಮತ್ತು ದೃಢವಾಗಿತ್ತು. ಈ ಶಸ್ತ್ರಚಿಕಿತ್ಸೆ ನನ್ನ ಜೀವನದಲ್ಲಿ ದೊಡ್ಡ ಹೆಜ್ಜೆಯಾಗಿತ್ತು, ಆದರೆ ಅವರು ನನ್ನೊಂದಿಗೆ ಇದ್ದುದರಿಂದ ಅದು ಸಾಧ್ಯವೆಂದು ನನಗೆ ಭಾಸವಾಯಿತು. ಬೆಳವಣಿಗೆಗೆ ಸಮಯ ಬೇಕು. ಪ್ರೀತಿಗೂ ಸಮಯ ಬೇಕು. ಆದರೆ ಅದು ಬಂದಾಗ, ಅದು ಎಲ್ಲಕ್ಕೂ ಮೌಲ್ಯವಾಗುತ್ತದೆ. ನಾನು ಸದಾ ಕೃತಜ್ಞಳಾಗಿದ್ದೇನೆ,” ಎಂದು ಅವರು ತಮ್ಮ ತಂದೆಯ ಬೆಂಬಲವನ್ನು ಕೊಂಡಾಡಿದ್ದಾರೆ.

IPL 2026: ಎಂಎಸ್‌ ಧೋನಿಯನ್ನು ಕೈಬಿಟ್ಟು ಸಿಎಸ್‌ಕೆಯ ಬಲಿಷ್ಠ XI ಕಟ್ಟಿದ ಇರ್ಫಾನ್‌ ಪಠಾಣ್‌!

ಅನಯಾ ಬಾಂಗರ್‌ ಅವರ ಲಿಂಗ ಪರಿವರ್ತನೆಯ ಪಯಣ

ಕಳೆದ ಕೆಲವು ವರ್ಷಗಳಲ್ಲಿ ಅನಯಾ ಬಾಂಗರ್ ತಮ್ಮ ಲಿಂಗ ಗುರುತನ್ನು ಟ್ರಾನ್ಸ್‌ಜೆಂಡರ್ ಮಹಿಳೆಯಾಗಿ ಸ್ವೀಕರಿಸುವ ಮೂಲಕ ತಮ್ಮ ಯಾತ್ರೆಯನ್ನು ರೂಪಿಸಿಕೊಂಡಿದ್ದಾರೆ. ಹುಟ್ಟಿನಿಂದ ಪುರುಷ ಎಂದು ಗುರುತಿಸಲ್ಪಟ್ಟ ಅನಯಾ, ಮೊದಲು ಅರ್ಯನ್ ಎಂದು ಪರಿಚಿತವಾಗಿದ್ದರು. ತಮ್ಮ ತಂದೆಯ ಹಾದಿಯನ್ನು ಅನುಸರಿಸಿ ಕ್ರಿಕೆಟ್‌ ಅನ್ನು ವೃತ್ತಿ ಜೀವನವನ್ನಾಗಿ ಸ್ವೀಕರಿಸಿದ್ದರು. ಅವರು ಮುಂಬೈ ಅಂಡರ್-16, ಪಾಂಡಿಚೇರಿ ಅಂಡರ್-19 ಮತ್ತು ಮುಂಬೈ ಅಂಡರ್-23 ಟ್ರಯಲ್‌ಗಳಲ್ಲಿ ಆಡಿದ್ದರು.

2023ರಲ್ಲಿ ಅವರು ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ (HRT) ಪ್ರಾರಂಭಿಸಿದಾಗ ಅವರ ಪರಿವರ್ತನೆ ಸಾರ್ವಜನಿಕವಾಗಿ ಹೆಚ್ಚು ಗಮನ ಸೆಳೆದಿತ್ತು. ಈ ಸಮಯದಲ್ಲಿ ಅವರು ತಮ್ಮ ಪಯಣದ ಕೆಲವು ಹಂತಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದು ವೈಯಕ್ತಿಕ ಸ್ಪಷ್ಟತೆಯ ಭಾವನೆಯನ್ನು ತಂದರೂ, ವಿಶೇಷವಾಗಿ ಕ್ರಿಕೆಟ್‌ನಲ್ಲಿ ಸವಾಲುಗಳನ್ನು ತಂದೊಡ್ಡಿದೆ, ದೈಹಿಕ ಬದಲಾವಣೆಗಳು ಅದೇ ಮಟ್ಟದಲ್ಲಿ ಸ್ಪರ್ಧಿಸುವ ಅವರ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದವು.