ವಿರಾಟ್ ಕೊಹ್ಲಿ ಆಡಿದ್ದರೆ, ಕೊಲಂಬೊ ಟೆಸ್ಟ್ ಫಲಿತಾಂಶ ವಿಭಿನ್ನವಾಗಿರುತ್ತಿತ್ತೆಂದ ಮೊಹಮ್ಮದ್ ಕೈಫ್!
IND vs SL: ವಿರಾಟ್ ಕೊಹ್ಲಿ ಆಡಿದ್ದರೆ ಭಾರತ ಹಾಗೂ ಶ್ರೀಲಂಕಾ ನಡುವಣ ಕೊಲಂಬೊ ಟೆಸ್ಟ್ ಪಂದ್ಯದ ಫಲಿತಾಂಶ ವಿಭಿನ್ನವಾಗಿರುತ್ತಿತ್ತು ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹೇಳಿದ್ದಾರೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದಲ್ಲಿ ತೀವ್ರತೆಯ ಕೊರತೆ ಎದ್ದು ಕಾಣುತ್ತಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಅನುಪಸ್ಥಿತಿಯ ಬಗ್ಗೆ ಮಾತನಾಡಿದ ಮೊಹಮ್ಮದ್ ಕೈಫ್. -
ನವದೆಹಲಿ: ವಿರಾಟ್ ಕೊಹ್ಲಿ ಅವರು ಕೊಲಂಬೊ ಟೆಸ್ಟ್ ಪಂದ್ಯದಲ್ಲಿ (IND vs SL) ಆಡಿದ್ದರೆ, ಭಾರತ ಹಾಗೂ ಶ್ರೀಲಂಕಾ ನಡುವಣ ಎರಡನೇ ಟೆಸ್ಟ್ ಪಂದ್ಯದ ಫಲಿತಾಂಶ ವಿಭಿನ್ನವಾಗಿರುತ್ತಿತ್ತು ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ (Mohammad Kaif) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐದನೇ ದಿನ ಆರಂಭಕ್ಕೂ ಮುನ್ನ ಶ್ರೀಲಂಕಾ ತಂಡ ಆರು ವಿಕೆಟ್ಗಳನ್ನು ಕಳೆದುಕೊಂಡು ಕೇವಲ 16 ರನ್ ಮುನ್ನಡೆಯನ್ನು ಪಡೆದಿತ್ತು. ಆದರೆ, ಸೋನಲ್ ದಿನುಷಾ ಅವರು ಅಜೇಯ ಶತಕದ ಮೂಲಕ ಶ್ರೀಲಂಕಾ ತಂಡ, 9 ವಿಕೆಟ್ಗಳ ನಷ್ಟಕ್ಕೆ 429 ರನ್ಗಳನ್ನು ಕಲೆ ಹಾಕಿತ್ತು ಹಾಗೂ 216 ರನ್ಗಳ ಮುನ್ನಡೆಯನ್ನು ಪಡೆದಿತ್ತು. ತಮ್ಮ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು. ಅಂತಿಮವಾಗಿ ಎರಡನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು.
ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಮೊಹಮ್ಮದ್ ಕೈಫ್, "ಟೆಸ್ಟ್ ಕ್ರಿಕೆಟ್ ಆಡುವುದು ಪ್ರತಿಯೊಬ್ಬರ ಗ್ಲಾಸಿನ ಟೀ, ಅಲ್ಲವೇ ಅಲ್ಲ ಬಾಸ್. ಇದು ದೀರ್ಘಾವಧಿ ನಡೆಯುವ ಪಂದ್ಯ ಹಾಗೂ ನೀವು ಬೌಲ್ ಮಾಡುವುದನ್ನು ಮುಂದುವರಿಸಬೇಕಾಗುತ್ತದೆ. ವಿರಾಟ್ ಕೊಹ್ಲಿ ಅವರಂಥ ಆಟಗಾರ ಇಲ್ಲಿ ಆಡಿದ್ದರೆ, ಈ ಪಂದ್ಯದ ಫಲಿತಾಂಶ ಸಂಪೂರ್ಣ ವಿಭಿನ್ನವಾಗಿರುತ್ತಿತ್ತು. ಏಕೆಂದರೆ ಕೊಹ್ಲಿ ಪಂದ್ಯದುದ್ದಕ್ಕೂ ಕೂಗುತ್ತಲೇ ಇರುತ್ತಾರೆ ಹಾಗೂ ತಮ್ಮ ಉತ್ಸಾಹದ ಮೂಲಕ ತಂಡವನ್ನು ಸದಾ ಎಚ್ಚರದಿಂದ ಇಡುತ್ತಿದ್ದರು. ಸುಮ್ಮನೇ ಬೌಲ್ ಮಾಡುತ್ತಿದ್ದರೆ ಸಂಗತಿಗಳು ನಮ್ಮ ಪರ ನಡೆಯುತ್ತದೆ ಎಂವ ಭಾವನೆಯಲ್ಲಿ ನಮ್ಮವರು ಬೌಲ್ ಮಾಡುತ್ತಿದ್ದರು ಎಂಬ ಭಾವನೆ ನನಗೆ ಆಗಾಗ ಅನಿಸುತ್ತಿತ್ತು," ಎಂದು ಹೇಳಿದ್ದಾರೆ.
ಸೋನಲ್ ಗಟ್ಟಿಯಾಗಿ ನಿಲ್ಲಲು ಕೊಹ್ಲಿ ಬಿಡುತ್ತಿರಲಿಲ್ಲ: ಕೈಫ್
ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಆಡಿದ್ದರೆ, ಭಾರತ ತಂಡದ ಶಕ್ತಿ ಕಡಿಮೆಯಾಗಿತ್ತಿರಲಿಲ್ಲ. ಅಲ್ಲದೆ ವಿರಾಟ್ ಕೊಹ್ಲಿ ತಂಡವನ್ನು ಉತ್ಸಾಹದಿಂದ ಇರುವಂತೆ ನೋಡಿಕೊಳ್ಳುತ್ತಿದ್ದರು. ಕೊಹ್ಲಿ, ಎದುರಾಳಿ ಬಾಟರ್ ಸೋನಲ್ ಬಳಿ ತೆರಳಿ ಅವರು ಕ್ರೀಸ್ನಲ್ಲಿ ದೀರ್ಘಾವಧಿ ನೆಲೆ ಕಂಡುಕೊಳ್ಳಲು ಬಿಡುತ್ತಿರಲಿಲ್ಲ ಎಂದು ಕೈಫ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ನಮಗಾಗಿ ನಾವು ಕೆಲವೇ ಸಂಗತಿಗಳನ್ನು ರೂಪಿಸಿಕೊಂಡಿದ್ದೆವು. ನಮ್ಮ ಶಕ್ತಿಯ ಹಂತ ಅತ್ಯಂತೆ ಕಡಿಮೆ ಇತ್ತು. ಈ ಕಾರಣದಿಂದಲೇ ನಾನು ಹೇಳುತ್ತಿದ್ದೇನೆ, ಕೊಹ್ಲಿ ಈ ಪಂದ್ಯವನ್ನು ಆಡಿದ್ದರೆ ಭಾರತ ಹಾಗೂ ಶ್ರೀಲಂಕಾ ನಡುವಣ ಪಂದ್ಯದ ಫಲಿತಾಂಶ ಸಂಪೂರ್ಣ ವಿಭಿನ್ನವಾಗಿರುತ್ತಿತ್ತು. ಇದಕ್ಕೆ ಕಾರಣ ಏನೆಂದರೆ, ಅವರು ಕಮ್ ಆನ್ ಸರ್ಫರಾಝ್, ಕಮ್ ಆನ್ ಜೈಸ್ವಾಲ್ ಎಂದು ನಿರಂತರವಾಗಿ ಕೂಗುತ್ತಲೇ ಇರುತ್ತಿದ್ದರು. ಅಲ್ಲದೆ ಸೋನಲ್ ಬಳಿ ತೆರಳಿ ಅವರನ್ನು ಕೆಣಕಿ ಔಟ್ ಆಗುವಂತೆ ಮಾಡುತ್ತಿದ್ದರು," ಎಂದು ಮೊಹಮ್ಮದ್ ಕೈಫ್ ತಿಳಿಸಿದ್ದಾರೆ.
IND vs SL ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಮಾಡಿಲ್ಲ: ಆರ್ ಅಶ್ವಿನ್ ಬೇಸರ!
ವಿರಾಟ್ ಕೊಹ್ಲಿ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿದ್ದ ಸಂದರ್ಭದಲ್ಲಿ ಅಂದರೆ ಮೇ ತಿಂಗಳಲ್ಲಿ ಅವರು ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಇದೀಗ ಅವರು 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು 50 ಓವರ್ಗಳ ಸ್ವರೂಪದಲ್ಲಿ ಸಕ್ರಿಯರಾಗಿದ್ದಾರೆ.