ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup ಟೂರ್ನಿಯಲ್ಲಿ ಶ್ರೇಯಸ್‌ ಅಯ್ಯರ್‌ಗೆ ಅವಕಾಶ ನೀಡಲು ಪ್ರಮುಖ 3 ಕಾರಣಗಳು!

ಭಾರತ ತಂಡ ಮುಂಬರುವ 2025ರ ಏಷ್ಯಾ ಕಪ್‌ ಟೂರ್ನಿಗೆ ಸಜ್ಜಾಗುತ್ತಿದೆ. ಇದರ ನಡುವೆ ತಂಡದ ಆಯ್ಕೆಯ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. 18 ತಿಂಗಳಿಂದ ಟಿ20ಐ ಕ್ರಿಕೆಟ್‌ನಿಂದ ದೂರ ಉಳಿದಿರುವ ಶ್ರೇಯಸ್‌ ಅಯ್ಯರ್‌ಗೆ ಈ ಬಾರಿ ತಂಡದಲ್ಲಿ ಸ್ಥಾನ ನೀಡಲು ಪ್ರಮುಖ 3 ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.

ಶ್ರೇಯಸ್‌ ಅಯ್ಯರ್‌ಗೆ ಸ್ಥಾನ ನೀಡಲು ಪ್ರಮುಖ 3  ಕಾರಣಗಳು!

‌ಏಷ್ಯಾ ಕಪ್‌ ತಂಡಕ್ಕೆ ಶ್ರೇಯಸ್‌ ಅಯ್ಯರ್‌ ಆಯ್ಕೆಯಾಗಬೇಕೆನ್ನಲು ಪ್ರಮುಖ ಮೂರು ಕಾರಣಗಳು.

Profile Ramesh Kote Aug 15, 2025 6:51 PM

ನವದೆಹಲಿ: ಬಹುನಿರೀಕ್ಷಿತ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಗೆ ಭಾರತ ತಂಡ ಸಜ್ಜಾಗುತ್ತಿದೆ. ಸೆಪ್ಟೆಂಬರ್‌ 9 ರಂದು ಆರಂಭವಾಗುವ ಈ ಮಹತ್ವದ ಟೂರ್ನಿಯಲ್ಲಿ ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ ಬಲಿಷ್ಠ ತಂಡಗಳು ಕಾದಾಟ ನಡೆಸಲಿವೆ. ಭಾರತ ತಂಡ (India) ತನ್ನ ಮೊದಲನೇ ಪಂದ್ಯದಲಿ ಯುಎಇ ವಿರುದ್ಧ ಕಾದಾಟ ನಡೆಸಲಿದೆ. ನಂತರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ತನ್ನ ಎರಡನೇ ಪಂದ್ಯವನ್ನು ಆಡಲಿದೆ. ಮುಂದಿನ ವರ್ಷ ಟಿ20 ವಿಶ್ವಕಪ್‌ (T20 World Cup) ಟೂರ್ನಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಆಯ್ಕೆ ಸಮಿತಿಯು ಬಲಿಷ್ಠ ಭಾರತ ತಂಡವನ್ನು ಕಟ್ಟಲು ಎದುರು ನೋಡುತ್ತಿದೆ. ಹಾಗಾಗಿ ಯಾರೆಲ್ಲಾ ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆಂಬ ಬಗ್ಗೆ ತೀವ್ರ ಕುತೂಹಲವಿದೆ.

ಇದರ ನಡುವೆ ಮಧ್ಯಮ ಕ್ರಮಾಂಕಕ್ಕೆ ಶ್ರೇಯಸ್‌ ಅಯ್ಯರ್‌ ಅವರನ್ನು ಭಾರತ ಏಷ್ಯಾ ಕಪ್‌ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆ ಕಡಿಮೆ ಎನ್ನುವ ಚರ್ಚೆಗಳು ಹರಿದಾಡುತ್ತಿವೆ. ಒಂದು ವೇಳೆ ಆಯ್ಕೆ ಸಮಿತಿ ಶ್ರೇಯಸ್‌ ಅಯ್ಯರ್‌ ಅವರನ್ನು ಆಯ್ಕೆ ಮಾಡದಿದ್ದರೆ ಅದು ತಂಡಕ್ಕೆ ಆಘಾತಕಾರಿ ಬೆಳವಣಿಗೆ ಎನ್ನಬಹುದು. ಇದಕ್ಕೆ ಮೂರು ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.

ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತವನ್ನು ಮುನ್ನಡೆಸಬಲ್ಲ ಮೂವರು ಆಟಗಾರರು!

1.ಕಳೆದ ಎರಡು ವರ್ಷಗಳಿಂದ ಟಿ20ಐ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ

ಶ್ರೇಯಸ್‌ ಅಯ್ಯರ್‌ 2017ರಲ್ಲಿ ಭಾರತದ ಪರ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ ಅವರು ಒಟ್ಟು 51 ಪಂದ್ಯಗಳನ್ನಾಡಿದ್ದು, 30.66ರ ಸರಾಸರಿಯಲ್ಲಿ 1,104 ರನ್ ಗಳಿಸಿದ್ದಾರೆ ಮತ್ತು ಎಂಟು ಅರ್ಧಶತಕಗಳು ಸೇರಿದಂತೆ 136.12 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇಂತಹ ಅಂಕಿ ಅಂಶಗಳನ್ನು ಹೊಂದಿರುವ ಶ್ರೇಯಸ್‌ ಅಯ್ಯರ್‌, 18 ತಿಂಗಳಿಂದ ಒಂದೇ ಒಂದು ಟಿ20ಐ ಪಂದ್ಯವನ್ನು ಆಡಿಲ್ಲ. ಇದರ ಹೊರತಾಗಿಯೂ ಅವರು ದೇಶಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆದ ಐಪಿಎಲ್‌ ಟೂರ್ನಿಯಲ್ಲಿ ಪಂಜಾಬ್‌ ತಂಡದ ನಾಯಕನಾಗಿ ತಂಡವನ್ನು ಫೈನಲ್‌ಗೆ ತಂದಿದ್ದರು. ಇನ್ನು ಮುಂಬೈ ತಂಡದ ನಾಯಕನಾಗಿ 2024-25ನೇ ಸಾಲಿನ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯನ್ನು ಗೆದ್ದಿದ್ದರು. ಈ ಹಿಂದೆ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡವನ್ನು ಕೂಡ ಯಶಸ್ವಿಯಾಗಿ ಮುನ್ನಡೆಸುವುದರ ಜೊತೆಗೆ ಅವರ ಬ್ಯಾಟ್‌ನಿಂದ ರನ್‌ಗಳ ಹೊಳೆ ಹರಿಸಿದ್ದರು. ‌

Asia Cup 2025: ಏಷ್ಯಾ ಕಪ್‌ ಆರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ ಆತಂಕ

2.ನಾಯಕತ್ವದ ಸಾಮರ್ಥ್ಯ ಹೊಂದಿರುವ ಶ್ರೇಯಸ್‌ ಅಯ್ಯರ್‌

ಸೂರ್ಯಕುಮಾರ್ ಯಾದವ್ 2026ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವ ನಿರೀಕ್ಷೆಯಿದೆ. ಅವರು ಈ ಸೆಪ್ಟೆಂಬರ್‌ನಲ್ಲಿ 35ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಇದಾದ ಬಳಿಕ ಮುಂದಿನ ಟಿ20 ವಿಶ್ವಕಪ್ 2028ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಆತಿಥ್ಯದಲ್ಲಿ ನಡೆಯಲಿದೆ. ಆ ಹೊತ್ತಿಗೆ ಸೂರ್ಯಕುಮಾರ್‌ಗೆ ಕನಿಷ್ಠ 37 ವರ್ಷ ವಯಸ್ಸಾಗಲಿದೆ. ಈ ಹಿನ್ನೆಲೆಯಲ್ಲಿ ಸೂರ್ಯಕುಮಾರ್‌ ನಾಯಕನಾಗಿ ತಮ್ಮ ಫಿಟ್‌ನೆಸ್‌ ಕಳೆದುಕೊಳ್ಳಬಹುದು. ಇಂಥಾ ಸನ್ನಿವೇಶದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವಕ್ಕೆ ಸೂಕ್ತ ಅಭ್ಯರ್ಥಿಯಾಗಬಹುದು. ಅವರು ತಮ್ಮ ನಾಯಕತ್ವದಲ್ಲಿ ಮುಂಬೈಗೆ 2024-25ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಟ್ಟಿದ್ದರು ಮತ್ತು 2020ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಅನ್ನು ಫೈನಲ್‌ಗೆ ತಲುಪಿಸಿದ್ದರು.

ನಂತರ ಅವರು 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡ ಚಾಂಪಿಯನ್ಸ್‌ ಆಗಿ ಹೊರಹೊಮ್ಮುವಲ್ಲಿ ಬಹುಮುಖ್ಯ ಪಾತ್ರ ವಹಿಸಿದರು. ಬಳಿಕ 2025ರಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವನ್ನು ಫೈನಲ್‌ಗೆ ಮುನ್ನಡೆಸಿದರು. ಒಟ್ಟಾರೆಯಾಗಿ, ಶ್ರೇಯಸ್ ಅಯ್ಯರ್ ಮೂರು ಫ್ರಾಂಚೈಸಿಗಳಲ್ಲಿ 87 ಐಪಿಎಲ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ, 50 ಗೆಲುವು, 35 ಸೋಲು ಮತ್ತು ಎರಡು ಪಂದ್ಯಗಳು ರದ್ದಾಗಿವೆ. ಇದರ ಆಧಾರದ ಮೇಲೆ ಭಾರತ ಟಿ20ಐ ತಂಡಕ್ಕೆ ಶ್ರೇಯಸ್‌ ಅಯ್ಯರ್‌ ನಾಯಕನಾಗುವ ಸಾಧ್ಯತೆ ಇದೆ.

Rishabh Pant: ಏಷ್ಯಾ ಕಪ್‌ ಟೂರ್ನಿಗೂ ಮುನ್ನ ಭಾರತ ತಂಡಕ್ಕೆ ದೊಡ್ಡ ತಲೆ ನೋವು!

3.ಭಾರತ ತಂಡದ ಮಧ್ಯಮ ಕ್ರಮಾಂಕ ದುರ್ಬಲವಾಗಿದೆ

ಟಿ20ಐಗಳಲ್ಲಿ ಭಾರತದ ಅಗ್ರ ಕ್ರಮಾಂಕ ಬಲಿಷ್ಠವಾಗಿ ಕಾಣುತ್ತಿದೆ, ಅಭಿಷೇಕ್ ಶರ್ಮಾ ಆರಂಭಿಕ ಆಟಗಾರನಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಮತ್ತು ಪ್ರಸ್ತುತ ಈ ಸ್ವರೂಪದ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ. 1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. 2025ರ ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ ಸಂಜು ಸ್ಯಾಮ್ಸನ್ ರನ್‌ ಗಳಿಸಲು ಹೆಣಗಾಡಿದ್ದರೆ, 2024ರಲ್ಲಿ ಅವರು ಮೂರು ಟಿ20ಐ ಶತಕಗಳನ್ನು ಬಾರಿಸಿದ್ದರು. ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ತಂಡಕ್ಕೆ ಬೆನ್ನೆಲುಬಾಗಿ ಮುಂದುವರಿದಿದ್ದಾರೆ. ಆದಾಗ್ಯೂ, ಮಧ್ಯಮ ಕ್ರಮಾಂಕವು ಇನ್ನೂ ಬಲಿಷ್ಠವಾಗಿ ಕಾಣುತ್ತಿಲ್ಲ. ಸೂರ್ಯಕುಮಾರ್ ಮತ್ತು ತಿಲಕ್ ವರ್ಮಾ 3 ಮತ್ತು 4ನೇ ಕ್ರಮಾಂಕದಲ್ಲಿ ಅದಲು ಬದಲು ಆಡಿದ್ದಾರೆ. ಆದರೆ 5ನೇ ಸ್ಥಾನ ಇನ್ನೂ ಕಳವಳಕಾರಿಯಾಗಿದೆ. ಸ್ಪರ್ಧಿಗಳಲ್ಲಿ ಒಬ್ಬರಾದ ರಿಂಕು ಸಿಂಗ್ ತಮ್ಮ ಕೊನೆಯ ಐದು ಅಂತಾರಾಷ್ಟ್ರೀಯ ಇನಿಂಗ್ಸ್‌ಗಳಲ್ಲಿ 11, 9, 8, 30 ಮತ್ತು 9 ರನ್ ಗಳಿಸಿದ್ದಾರೆ ಮತ್ತು 2025 ರ ಐಪಿಎಲ್‌ನಲ್ಲಿ 11 ಇನಿಂಗ್ಸ್‌ಗಳಲ್ಲಿ ಕೇವಲ 206 ರನ್ ಗಳಿಸಿದ್ದಾರೆ.

ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಅವರ ಬ್ಯಾಟಿಂಗ್ ಕ್ರಮಾಂಕ ಕೂಡ ಬದಲಾಗುತ್ತಿದೆ. ಭಾರತವು ಮಧ್ಯಮ ಕ್ರಮಾಂಕದಲ್ಲಿ ರಿಯಾನ್ ಪರಾಗ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರನ್ನು ಸಹ ಪ್ರಯತ್ನಿಸುತ್ತಿದೆ. ಈ ಪರಿಸ್ಥಿತಿಯಲ್ಲಿ, ಕಳೆದ ಕೆಲವು ವರ್ಷಗಳಿಂದ ಶ್ರೇಯಸ್ ಅಯ್ಯರ್ ಅವರ ಸ್ಥಿರತೆಯು ಅವರನ್ನು 5ನೇ ಸ್ಥಾನದಲ್ಲಿ ಸೂಕ್ತ ಆಯ್ಕೆಯನ್ನಾಗಿ ಮಾಡುತ್ತದೆ. ಇವರ ಸೇರ್ಪಡೆಯಿಂದ ಭಾರತದ ಮಧ್ಯಮ ಕ್ರಮಾಂಕ ಬಲಿಷ್ಠವಾಗಲಿದೆ.

ಬರಹ: ಕೆ. ಎನ್‌. ರಂಗು, ಚಿತ್ರದುರ್ಗ