ಮ್ಯಾಂಚೆಸ್ಟರ್ ಟೆಸ್ಟ್ ಗೆಲ್ಲಬೇಕೆಂದರೆ ಭಾರತ ತಂಡದಲ್ಲಿ ಈ ಬದಲಾವಣೆ ಅನಿವಾರ್ಯವೆಂದ ಅಜಿಂಕ್ಯ ರಹಾನೆ!
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಜುಲೈ 23 ರಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿವೆ. ಲಾರ್ಡ್ಸ್ ಟೆಸ್ಟ್ ಸೋತಿರುವ ಭಾರತ ತಂಡ ನಾಲ್ಕನೇ ಟೆಸ್ಟ್ ಪಂದ್ಯದ ನಿಮಿತ್ತ ತನ್ನ ಪ್ಲೇಯಿಂಗ್ XIನಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕೆಂದು ಭಾರತೀಯ ಕ್ರಿಕೆಟಿಗ ಅಜಿಂಕ್ಯ ರಹಾನೆ ಆಗ್ರಹಿಸಿದ್ದಾರೆ.

ಭಾರತ ತಂಡಕ್ಕೆ ಅಜಿಂಕ್ಯ ರಹಾನೆ ಸಲಹೆ ನೀಡಿದ್ದಾರೆ.

ನವದೆಹಲಿ: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದ (IND vs ENG) ನಿಮಿತ್ತ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂದು ಭಾರತೀಯ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ (Ajinkya Rahane) ಗೌತಮ್ ಗಂಭೀರ್ ಮಾರ್ಗದರ್ಶನದ ಟೀಮ್ ಮ್ಯಾನೇಜ್‌ಮೆಂಟ್‌ಗೆ ಸಲಹೆ ನೀಡಿದ್ದಾರೆ. ಭಾರತ ತಂಡದ (India) ಆರಂಭಿಕ ಮೂರು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದಿದ್ದು, ಇನ್ನುಳಿದ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಸರಣಿಯಲ್ಲಿ 1-2 ಹಿನ್ನಡೆ ಅನುಭವಿಸಿದೆ. ಟೆಸ್ಟ್ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಬೇಕೆಂದರೆ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡ ಗೆಲುವು ಪಡೆಯಬೇಕಾದ ಅಗತ್ಯವಿದೆ.
ಕಳೆದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವು ಪಡೆಯುವ ಅವಕಾಶವಿತ್ತು. ಇಂಗ್ಲೆಂಡ್ ತಂಡ ನಾಲ್ಕನೇ ಇನಿಂಗ್ಸ್‌ನಲ್ಲಿ ಭಾರತ ತಂಡಕ್ಕೆ 193 ರನ್‌ಗಳ ಗುರಿಯನ್ನು ನೀಡಿತ್ತು. ಆದರೆ, ರವೀಂದ್ರ ಜಡೇಜಾ ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಟೀಮ್ ಇಂಡಿಯಾ 170 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಇದೀಗ ಟೀಮ್ ಇಂಡಿಯಾಗೆ ಈ ಟೆಸ್ಟ್ ಸರಣಿಯನ್ನು ಗೆಲ್ಲಬೇಕೆಂದರೆ ಮುಂದಿನ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆಯಬೇಕಾಗಿದೆ. ಇದರಲ್ಲಿ ಒಂದರಲ್ಲಿ ಸೋತರೂ ಭಾರತ ತಂಡಕ್ಕೆ ಹಿನ್ನಡೆ ಅನುಭವಿಸಲಿದೆ.
IND vs ENG: ಮ್ಯಾಂಚೆಸ್ಟರ್‌ನಲ್ಲಿ ಭಾರತದ ಟೆಸ್ಟ್ ಸಾಧನೆ ಹೇಗಿದೆ?
"ಪಂದ್ಯದ 4 ಮತ್ತು 5ನೇ ದಿನಗಳಲ್ಲಿ ಬ್ಯಾಟಿಂಗ್ ನಡೆಸುವುದು ತುಂಬಾ ಕಷ್ಟವಾಗಿದೆ. ರನ್‌ಗಳನ್ನು ಗಳಿಸುವುದು ಸುಲಭವಲ್ಲ. ಹೌದು, ಇಂಗ್ಲೆಂಡ್ ತಂಡ ಬೌಲಿಂಗ್ ತುಂಬಾ ಚೆನ್ನಾಗಿತ್ತು. ಆದರೆ, ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವ ಅವಕಾಶವನ್ನು ಕಳೆದುಕೊಂಡಿತ್ತು. ಮುಂದಿನ ಪಂದ್ಯಕ್ಕೆಭಾರತ ತಂಡ ಹೆಚ್ಚುವರಿ ಬೌಲರ್ ಅನ್ನು ಆಡಿಸಬೇಕೆಂದು ನಾನು ಭಾವಿಸುತ್ತೇನೆ. ಏಕೆಂದರೆ ನೀವು ಟೆಸ್ಟ್ ಪಂದ್ಯ ಅಥವಾ ಸರಣಿಯನ್ನು ಗೆಲ್ಲಬೇಕೆಂದರೆ 20 ವಿಕೆಟ್‌ಗಳನ್ನು ಕಬಳಿಸಬೇಕೆಂದು," ಎಂದು ಅಜಿಂಕ್ಯ ರಹಾನೆ ಸಲಹೆ ನೀಡಿದ್ದಾರೆ.
ಬೆನ್ ಸ್ಟೋಕ್ಸ್‌ಗೆ ರಹಾನೆ ಮೆಚ್ಚುಗೆ
ಮೂರನೇ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಅವರನ್ನು ರನ್‌ಔಟ್ ಮಾಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರನ್ನು ಕೂಡ ಅಜಿಂಕ್ಯ ರಹಾನೆ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
"ಕ್ಷೇತ್ರರಕ್ಷಕ ನಿರಾಳವಾಗುವುದು ತುಂಬಾ ಸುಲಭ. ಭೋಜನ ವಿರಾಮಕ್ಕೂ ಮುನ್ನ ಎರಡು ಅಥವಾ ಮೂರು ಎಸೆತಗಳು ಮಾತ್ರ ಉಳಿದಿರುವುದನ್ನು ನೀವು ನೋಡಿದಾಗ, ನೀವು ಸುಲಭವಾಗಿ ನಿರಾಳರಾಗಬಹುದು. ಆದರೆ, ಚೆಂಡಿನ ಬಗೆಗಿನ ಅವರ (ಬೆನ್ ಸ್ಟೋಕ್ಸ್) ವರ್ತನೆ, ಅದರ ತೀವ್ರತೆ ಮತ್ತು ಆ ರನೌಟ್‌ನಿಂದ ಇಂಗ್ಲೆಂಡ್ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಲು ಸಾಧ್ಯವಾಯಿತು ಎಂದು ನಾನು ಭಾವಿಸಿದ್ದೇನೆ," ಎಂದು ಅವರು ತಿಳಿಸಿದ್ದಾರೆ.
IND vs ENG: ಕರುಣ್ ನಾಯರ್ ಔಟ್, ನಾಲ್ಕನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್ XIನಲ್ಲಿ 2 ಬದಲಾವಣೆ ಸಾಧ್ಯತೆ!
ಮೂರನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ 141 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ಭಾರತ ತಂಡ ದೊಡ್ಡ ಮೊತ್ತದತ್ತ ಸಾಗುತ್ತಿತ್ತು. ಆದರೆ, ಭೋಜನ ವಿರಾಮಕ್ಕೂ ಮುನ್ನ ರಿಷಭ್ ಪಂತ್ ಅವರನ್ನು ಬೆನ್ ಸ್ಟೋಕ್ಸ್ ರನ್‌ಔಟ್ ಮಾಡಿದ್ದರು. ಇದು ಪಂದ್ಯದ ಪಾಲಿಗೆ ಟರ್ನಿಂಗ್ ಪಾಯಿಂಟ್ ಆಗಿತ್ತು. ಈ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಎರಡೂ ಇನಿಂಗ್ಸ್‌ಗಳಿಂದ 74 ರನ್ ಹಾಗೂ 33 ರನ್‌ಗಳನ್ನು ಕಲೆ ಹಾಕಿದ್ದರು ಮತ್ತು ಬೌಲಿಂಗ್‌ನಲ್ಲಿ 111 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸಿದ್ದರು.