ಸೌರವ್ ಗಂಗೂಲಿ ದಂಪತಿಗೆ ಜೀವ ಬೆದರಿಕೆ ಪತ್ರ, ಪೊಲೀಸ್ ದೂರು ದಾಖಲಿಸಿದ ದಾದಾ!
ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಅವರ ಪತ್ನಿ ಡೋನಾ ಗಂಗೂಲಿ ಅವರಿಗೆ ಪದೇ-ಪದೆ ಕೊಲೆ ಬೆದರಿಕೆ ಪತ್ರಗಳು ಬಂದಿರುವ ಹಿನ್ನೆಲೆಯಲ್ಲಿ ಕೋಲ್ಕತಾದಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ಈ ಘಟನೆ ಬಳಿಕ ಗಂಗೂಲಿ ಹಾಗೂ ಅವರ ಕುಟುಂಬದ ಭದ್ರತೆಯನ್ನು ಮರುಪರಿಶೀಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಬೆದರಿಕೆ ಪತ್ರಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸೌರವ್ ಗಂಗೂಲಿ ಅವರ ಕುಟುಂಬಕ್ಕೆ ಜೀವ ಬೆದರಿಕೆ ಪತ್ರ. -
ಕೋಲ್ಕತಾ: ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಮತ್ತು ಅವರ ಪತ್ನಿ ಡೋನಾ ಗಂಗೂಲಿ (Dona Ganguly) ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ. ಈ ಹಿನ್ನೆಲೆಯಲ್ಲಿ ಕೋಲ್ಕತಾದಲ್ಲಿ ಗಂಗೂಲಿ ಕುಟುಂಬದ ಭದ್ರತೆ ಕುರಿತು ಕಳವಳ ಹೆಚ್ಚಾಗಿದೆ. ಗಂಗೂಲಿ ಕುಟುಂಬ ಹಾಗೂ ಭಾರತದ ಮಾಜಿ ನಾಯಕನ ವೈಯಕ್ತಿಕ ಕಾರ್ಯದರ್ಶಿ ನೀಡಿದ ಪೊಲೀಸ್ ದೂರಿನ ಪ್ರಕಾರ, ಸೋಮವಾರ ಬಂಗಾಳ ಕ್ರಿಕೆಟ್ ಅಧ್ಯಕ್ಷರ ಕಚೇರಿಯಲ್ಲಿ ಇತ್ತೀಚಿನ ಬೆದರಿಕೆ ಪತ್ರವನ್ನು ತೆರೆಯಲಾಗಿದೆ. ಸಂಪೂರ್ಣವಾಗಿ ಇಂಗ್ಲಿಷ್‌ನಲ್ಲಿ ಬರೆಯಲಾಗಿದ್ದ ಪತ್ರದಲ್ಲಿ ಗಂಗೂಲಿ ಹಾಗೂ ಅವರ ಕುಟುಂಬವನ್ನು “ಹೊಡೆದುಹಾಕುವ” ಅಥವಾ “ಮುಗಿಸುವ” ಎಂಬ ಪದಗಳ ಮೂಲಕ ಬೆದರಿಕೆ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕುಟುಂಬದ ಮೂಲಗಳ ಪ್ರಕಾರ, ಕಳೆದ ಆರು ತಿಂಗಳಿಂದ ಇಂತಹ ಬೆದರಿಕೆ ಪತ್ರಗಳು ಬರುತ್ತಿವೆ. ಆರಂಭದಲ್ಲಿ ಅವುಗಳನ್ನು ಅತಿಯಾದ ಅಭಿಮಾನಿಗಳಿಂದ ಬಂದ ಪತ್ರಗಳೆಂದು ಪರಿಗಣಿಸಿ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಪದೇ-ಪದೆ ಪತ್ರಗಳು ಬರುತ್ತಿರುವುದು ಹಾಗೂ ಇತ್ತೀಚಿನ ಪತ್ರದಲ್ಲಿರುವ ಆಕ್ರಮಣಕಾರಿ ಭಾಷೆಯಿಂದಾಗಿ ಕುಟುಂಬವು ಪೊಲೀಸರನ್ನು ಸಂಪರ್ಕಿಸಿದೆ. ಈ ಸಂಬಂಧ ಠಾಕೂರ್‌ಪುಕುರ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ಲಿಖಿತ ದೂರು ದಾಖಲಿಸಲಾಗಿದೆ.
ರಾಜ್ಯ ಸರ್ಕಾರದ ಭದ್ರತಾ ಇಲಾಖೆಯನ್ನೂ ಈ ಕುರಿತು ಎಚ್ಚರಿಸಲಾಗಿದ್ದು, ತಕ್ಷಣ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಸೌರವ್ ಗಂಗೂಲಿ ಮತ್ತು ಅವರ ಕುಟುಂಬದ ಭದ್ರತೆಯನ್ನು ಪರಿಶೀಲಿಸಲಾಗುತ್ತಿದೆ.
ʻ17 ಕೆಜಿ ತೂಕ ಇಳಿಕೆʼ: ಬಿಸಿಸಿಐ ಸೆಲೆಕ್ಟರ್‌ಗಳ ನಂಬಿಕೆಯನ್ನು ಸರ್ಫರಾಝ್ ಖಾನ್ ಮರಳಿ ಪಡೆದಿದ್ದೇಗೆ?
"ಸೌರವ್ ಗಂಗೂಲಿ ಹಾಗೂ ಅವರ ಕುಟುಂಬಕ್ಕೆ ಬಂದಿರುವ ಕೆಲವು ಬೆದರಿಕೆ ಪತ್ರಗಳ ಕುರಿತು ಗಂಭೀರ ಕಳವಳದ ವಿಷಯವನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಕಳೆದ ಕೆಲವು ತಿಂಗಳುಗಳಿಂದ ಅಪರಿಚಿತ ವ್ಯಕ್ತಿಯಿಂದ ಗಂಗೂಲಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ಒಳಗೊಂಡ ಪತ್ರಗಳು ನಮಗೆ ಬರುತ್ತಿವೆ. ಆರಂಭದಲ್ಲಿ ಈ ಪತ್ರಗಳನ್ನು ನಾವು ಗಂಭೀರವಾಗಿ ಪರಿಗಣಿಸಿರಲಿಲ್ಲ. ಗಂಗೂಲಿ ಅವರನ್ನು ಇಷ್ಟಪಡದ ವ್ಯಕ್ತಿಯೊಬ್ಬರು ತಮ್ಮ ವೈಯಕ್ತಿಕ ಅಸಮಾಧಾನವನ್ನು ಪತ್ರಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಭಾವಿಸಿದ್ದೆವು" ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
"ಆದರೆ, ಇಂದು ಸೌರವ್ ಗಂಗೂಲಿ ಮತ್ತು ಡೋನಾ ಗಂಗೂಲಿ ಅವರ ಹೆಸರಿನಲ್ಲಿ ತಲಾ ಒಂದು ಪತ್ರ ಸೇರಿದಂತೆ ಎರಡು ಪತ್ರಗಳು ಬಂದಿವೆ. ಈ ಪತ್ರಗಳಲ್ಲಿ ಗಂಗೂಲಿ ವಿರುದ್ಧ ದ್ವೇಷಪೂರಿತ ಹೇಳಿಕೆಗಳನ್ನು ನೀಡುವುದರ ಜೊತೆಗೆ, ಸೌರವ್ ಗಂಗೂಲಿ, ಡೋನಾ ಗಂಗೂಲಿ ಹಾಗೂ ಅವರೊಂದಿಗೆ ಕೆಲಸ ಮಾಡುವ ಸಿಬ್ಬಂದಿಯ ಜೀವ ಮತ್ತು ಸುರಕ್ಷತೆಗೆ ಗಂಭೀರ ಬೆದರಿಕೆ ಹಾಕಲಾಗಿದೆ.
Former cricketer Sourav Ganguly’s personal secretary, Taniya Bhattacharya, has filed a complaint with Thakurpukur Police alleging threatening letters targeting Ganguly, his family and staff. The complaint states that two recent letters contained serious threats, prompting… pic.twitter.com/VtL4GW0URU
— IANS (@ians_india) August 10, 2026
ಪತ್ರಗಳಲ್ಲಿರುವ ಬೆದರಿಕೆಯ ಸ್ವರೂಪ ನಮಗೆ ತೀವ್ರ ಆತಂಕವನ್ನು ಉಂಟುಮಾಡಿದೆ. ಈ ಪ್ರಕರಣವು ದ್ವೇಷಪೂರಿತ ಹಾಗೂ ಅವಹೇಳನಕಾರಿ ಪತ್ರಗಳಿಂದ ನೇರವಾಗಿ ಜೀವ ಮತ್ತು ವೈಯಕ್ತಿಕ ಸುರಕ್ಷತೆಗೆ ಬೆದರಿಕೆಯ ಹಂತಕ್ಕೆ ತಲುಪಿರುವುದರಿಂದ, ತಕ್ಷಣವೇ ಪೊಲೀಸರ ಹಸ್ತಕ್ಷೇಪ ಹಾಗೂ ತನಿಖೆ ಅಗತ್ಯವಿದೆ ಎಂದು ನಾವು ಭಾವಿಸುತ್ತೇವೆ,” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಭಾರತ ತಂಡದಿಂದ ಹೊರಗುಳಿದಿರುವ ಮೊಹಮ್ಮದ್ ಶಮಿಗೆ ಜಹೀರ್ ಖಾನ್ ಬಲವಾದ ಸಂದೇಶ!
“ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ದಯವಿಟ್ಟು ಅಗತ್ಯ ಕ್ರಮ ಕೈಗೊಂಡು, ದೂರನ್ನು ದಾಖಲಿಸಿ ತನಿಖೆ ನಡೆಸಬೇಕು. ಈ ಬೆದರಿಕೆ ಪತ್ರಗಳನ್ನು ಕಳುಹಿಸುತ್ತಿರುವ ವ್ಯಕ್ತಿಯನ್ನು ಪತ್ತೆಹಚ್ಚಿ, ಸೌರವ್ ಗಂಗೂಲಿ, ಡೋನಾ ಗಂಗೂಲಿ ಹಾಗೂ ಅವರೊಂದಿಗೆ ಕೆಲಸ ಮಾಡುವ ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು,” ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಪೊಲೀಸ್ ಅಧಿಕಾರಿ ಹೇಳಿದ್ದೇನು?
ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು, ಗಂಗೂಲಿ ಹಾಗೂ ಅವರ ಕುಟುಂಬದ ಸುರಕ್ಷತೆಗಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
“ನಾವು ತನಿಖೆ ಆರಂಭಿಸಿದ್ದೇವೆ. ಸೌರವ್ ಗಂಗೂಲಿ ಮತ್ತು ಅವರ ಕುಟುಂಬದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ,” ಎಂದು ಪೊಲೀಸ್ ಅಧಿಕಾರಿಗಳು ಗಂಗೂಲಿ ಅವರ ವೈಯಕ್ತಿಕ ಸಹಾಯಕರಿಗೆ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯದ ಬಳಿಕ ಸಚಿನ್ ಕಳುಹಿಸಿದ್ದ ಸಂದೇಶವನ್ನು ರಿವೀಲ್ ಮಾಡಿದ ಅಜಿಂಕ್ಯ ರಹಾನೆ!
ಗಂಗೂಲಿ ಅವರ ಸಾರ್ವಜನಿಕ ಜೀವನ ಹಾಗೂ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ಭದ್ರತಾ ಇಲಾಖೆಯು ಬೆದರಿಕೆಯ ಸ್ವರೂಪವನ್ನು ಪರಿಶೀಲಿಸುತ್ತಿದೆ. ಅಗತ್ಯವಿದ್ದರೆ ಗಂಗೂಲಿ ಹಾಗೂ ಅವರ ಕುಟುಂಬಕ್ಕೆ ಹೆಚ್ಚುವರಿ ಭದ್ರತೆ ಒದಗಿಸುವ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.