ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: ಡ್ಯಾರಿಲ್‌ ಮಿಚೆಲ್‌‌ ಬಳಿ ಕ್ಷಮೆ ಕೇಳಲು ನಿರಾಕರಿಸಿದ ಅರ್ಷದೀಪ್‌ ಸಿಂಗ್‌ಗೆ ವಾರ್ನಿಂಗ್‌! ವಿಡಿಯೊ

ಟಿ20 ವಿಶ್ವಕಪ್ ಫೈನಲ್‌ ಪಂದ್ಯದ ನ್ಯೂಜಿಲೆಂಡ್‌ ಇನಿಂಗ್ಸ್‌ನ 11ನೇ ಓವರ್‌ನಲ್ಲಿ ಅರ್ಷದೀಪ್ ಸಿಂಗ್ ಎಸೆದ ಥ್ರೋನಲ್ಲಿ ಚೆಂಡು ಡ್ಯಾರಿಲ್ ಮಿಚೆಲ್‌ಗೆ ತಗುಲಿತು. ಆದರೆ. ಈ ವೇಳೆ ಆಕ್ರೋಶಭರಿತರಾಗಿದ್ದ ಅರ್ಷದೀಪ್‌ ಕ್ರೀಡಾ ಸ್ಪೂರ್ತಿ ಮರೆತು ಕಿವೀಸ್ ಬ್ಯಾಟರ್‌ ಬಳಿ ಕ್ಷಮೆ ಕೇಳದ ಕಾರಣ ಪರಿಸ್ಥಿತಿ ಉದ್ವಿಗ್ನಗೊಂಡಿತು. ಇದರಿಂದ ಅಂಪೈರ್‌ಗಳು ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಸರಿದೂಗಿಸಿದರು.

ಡ್ಯಾರಿಲ್‌ ಮಿಚೆಲ್‌ ಬಳಿ ಕ್ಷಮೆ ಕೇಳಲು ನಿರಾಕರಿಸಿದ ಅರ್ಷದೀಪ್‌ ಸಿಂಗ್!

ಡ್ಯಾರಿಲ್‌ ಮಿಚೆಲ್‌ಗೆ ಚೆಂಡಿನಿಂದ ಥ್ರೋ ಮಾಡಿದ ಅರ್ಷದೀಪ್‌. -

Profile
Ramesh Kote Mar 8, 2026 11:53 PM

ಅಹಮದಾಬಾದ್‌: ಭಾರತ ಹಾಗೂ ನ್ಯೂಜಿಲೆಂಡ್‌ (IND vs NZ) ತಂಡಗಳ ನಡುವಣ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಡ್ಯಾರಿಲ್‌ ಮಿಚೆಲ್‌ಗೆ (Daryl Mitchell) ಥ್ರೋ ಮಾಡಿದ ಬಳಿಕ ಕ್ಷಮೆ ಕೇಳಲು ವೇಗಿ ಅರ್ಷದೀಪ್‌ ಸಿಂಗ್‌ (Arshdeep Singh) ನಿರಾಕರಿಸಿದರು. ಈ ಘಟನೆ ಕಿವೀಸ್‌ ಇನಿಂಗ್ಸ್‌ನ 11ನೇ ಓವರ್‌ನಲ್ಲಿ ನಡೆದಿತ್ತು. ಈ ಓವರ್‌ನ ಎರಡು ಮತ್ತು ಮೂರನೇ ಎಸೆತಗಳಲ್ಲಿ ಡ್ಯಾರಿಲ್‌ ಮಿಚೆಲ್‌ ಬಲವಾದ ಸಿಕ್ಸರ್‌ಗಳನ್ನು ಬಾರಿಸಿದ್ದರು. ನಂತರ 4 ಮತ್ತು 5ನೇ ಎಸೆತಗಳನ್ನು ಅರ್ಷದೀಪ್‌ ಡಾಟ್‌ ಮಾಡಿದರು. ಈ ವೇಳೆ ಕ್ರೀಸ್‌ನಲ್ಲಿ ಒಂದು ಕಾಲು ಮುಂದಿಟ್ಟು ನೋಡುತ್ತಿದ್ದ ಡ್ಯಾರಿಲ್‌ ಮಿಚೆಲ್‌ಗೆ ಅರ್ಷದೀಪ್‌ ಥ್ರೋ ಮಾಡಿದರು ಹಾಗೂ ಚೆಂಡು ಬಲವಾಗಿ ಬ್ಯಾಟ್ಸ್‌ಮನ್‌ಗೆ ಬಡಿಯಿತು.

ಡ್ಯಾರಿಲ್‌ ಮಿಚೆಲ್‌ ಕ್ರೀಸ್‌ನಲ್ಲಿ ಉಳಿದಿದ್ದರೂ ಅರ್ಷದೀಪ್‌ ಅನಗತ್ಯವಾಗಿ ಅವರ ಮೇಲೆ ಚೆಂಡಿನ ದಾಳಿ ನಡೆಸಿದರು. ಚೆಂಡು ಮಿಚೆಲ್‌ಗೆ ಬಲವಾಗಿ ತಾಗಿತ್ತು. ಇದರಿಂದ ಕಿವೀಸ್‌ ಬ್ಯಾಟರ್‌ ತಕ್ಷಣ ಅರ್ಷದೀಪ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದು ಸಂಪೂರ್ಣವಾಗಿ ಅರ್ಷದೀಪ್‌ ಅವರ ಎಡವಟ್ಟು. ಆದರೂ ಅವರು ತಕ್ಷಣ ಬ್ಯಾಟ್ಸ್‌ಮನ್‌ ಬಳಿ ಕ್ಷಮೆ ಕೇಳಲಿಲ್ಲ. ಈ ವೇಳೆ ನಾಯಕ ಸೂರ್ಯಕುಮಾರ್‌ ಯಾದವ್, ಮಿಚೆಲ್‌ ಬಳಿ ತೆರಳಿ ಅವರನ್ನು ಸಮಾಧಾನ ಪಡಿಸಿದರು. ನಂತರ ಫೀಲ್ಡ್‌ ಅಂಪೈರ್‌ ಕೂಡ ಅರ್ಷದೀಪ್‌ ಸಿಂಗ್‌ ಅವರಿಗೆ ಎಚ್ಚರಿಕೆ ನೀಡಿದರು. ನಂತರ ಅರ್ಷದೀಪ್‌ ಬಲವಂತವಾಗಿ ಡ್ಯಾರಿಲ್‌ ಮಿಚೆಲ್‌ ಬಳಿ ತೆರಳಿ ಕ್ಷಮೆ ಕೇಳಿದರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

IND vs NZ: ಸಂಜು ಸ್ಯಾಮ್ಸನ್‌ ಅಬ್ಬರ, ನ್ಯೂಜಿಲೆಂಡ್‌ಗೆ ಆಘಾತ ನೀಡಿ ಮೂರನೇ ಟಿ20 ವಿಶ್ವಕಪ್‌ ಗೆದ್ದ ಭಾರತ!

ನ್ಯೂಜಿಲೆಂಡ್‌ 159 ರನ್‌ಗಳಿಗೆ ಆಲ್‌ಔಟ್‌

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾರತ ತಂಡ ನೀಡಿದ್ದ 256 ರನ್‌ಗಳ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್‌ ತಂಡ, ಜಸ್‌ಪ್ರೀತ್‌ ಬುಮ್ರಾ ಹಾಗೂ ಅಕ್ಷರ್‌ ಪಟೇಲ್‌ ಅವರ ಪರಿಣಾಮಕಾರಿ ಬೌಲಿಂಗ್‌ಗೆ ನಲುಗಿತು. ಆ ಮೂಲಕ 19 ಓವರ್‌ಗಳಿಗೆ 159 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಚೊಚ್ಚಲ ಟಿ20 ವಿಶ್ವಕಪ್‌ ಗೆಲ್ಲುವ ಕನಸು ಭಗ್ನವಾಯಿತು. ಕಿವೀಸ್‌ ಪರ ಟಿಮ್‌ ಸೈಫರ್ಟ್‌ 52 ರನ್‌ ಹಾಗೂ ಮಿಚೆಲ್‌ ಸ್ಯಾಂಟ್ನರ್‌ 43 ರನ್‌ ಗಳಿಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಟರ್‌ಗಳು ವಿಫಲರಾದರು. ಈ ಪಂದ್ಯದಲ್ಲಿ ಅರ್ಷದೀಪ್‌ ಸಿಂಗ್‌ ನಾಲ್ಕು ಓವರ್‌ಗಳಿಗೆ 32 ರನ್‌ಗಳನ್ನು ನೀಡಿದರೂ ಒಂದೇ ಒಂದು ವಿಕೆಟ್‌ ಪಡೆಯುವಲ್ಲಿ ವಿಫಲರಾದರು.



ಮೂರನೇ ಟಿ20 ವಿಶ್ವಕಪ್‌ ಗೆದ್ದ ಭಾರತ

ಸಂಜು ಸ್ಯಾಮ್ಸನ್‌ ಸ್ಪೋಟಕ ಬ್ಯಾಟಿಂಗ್‌ ಹಾಗೂ ಜಸ್‌ಪ್ರೀತ್‌ ಬುಮ್ರಾ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಭಾರತ ತಂಡ, 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರು 96 ರನ್‌ಗಳ ಗೆಲುವು ಪಡೆಯಿತು ಹಾಗೂ ಮೂರನೇ ಬಾರಿ ಟೀಮ್‌ ಇಂಡಿಯಾ ಚುಟುಕು ವಿಶ್ವಕಪ್‌ ಮುಡಿಗೇರಿಸಿಕೊಂಡಿತು. 4 ವಿಕೆಟ್‌ ಕಿತ್ತ ಜಸ್‌ಪ್ರೀತ್‌ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಹ್ಯಾಟ್ರಿಕ್‌ ಅರ್ಧಶತಕ ಬಾರಿಸಿದ ಸಂಜು ಸ್ಯಾಮ್ಸನ್‌ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.