IND vs SA: ಗುವಾಹಟಿಯಲ್ಲಿ ಏನಾಯ್ತು ಹೇಳಿ? ಗೌತಮ್ ಗಂಭೀರ್‌ಗೆ ರವಿ ಶಾಸ್ತ್ರಿ ಪ್ರಶ್ನೆ!
Ravi Shastri on India's Test series loss against SA: ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ಸೋಲಿನ ಬಗ್ಗೆ ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಪ್ರಶ್ನೆ ಮಾಡಿದ್ದಾರೆ. ಗುವಾಹಟಿ ಟೆಸ್ಟ್‌ನಲ್ಲಿ ಭಾರತ ತಂಡಕ್ಕೆ ಏನಾಯಿತು ಎಂದು ಅವರು ಹೆಡ್ ಕೋಚ್ ಗೌತಮ್ ಗಂಭೀರ್‌ಗೆ ಪ್ರಶ್ನೆ ಮಾಡಿದ್ದಾರೆ.
ಭಾರತ ಟೆಸ್ಟ್ ತಂಡವನ್ನು ಟೀಕಿಸಿದ ರವಿ ಶಾಸ್ತ್ರಿ. -
ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯ (IND vs SA) ಸೋಲಿನ ಬಗ್ಗೆ ಟೀಮ್ ಇಂಡಿಯಾ ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ (Ravi Shastri) ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಸರಣಿ ಸೋಲಿಗೆ ಕೇವಲ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ಮಾತ್ರವಲ್ಲ, ಇದಕ್ಕೆ ಆಟಗಾರರು ಕೂಡ ಕಾರಣ ಎಂದು ಹೇಳಿದ್ದಾರೆ. ಕಳೆದ ತಿಂಗಳು ಅಂತ್ಯವಾದ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಸಂಪೂರ್ಣವಾಗಿ ವಿಫಲರಾಗಿದ್ದರು. ಈ ಕಾರಣದಿಂದ ಭಾರತ ಎರಡೂ ಪಂದ್ಯಗಳನ್ನು ಸೋಲುವ ಮೂಲಕ 0-2 ಅಂತರದಲ್ಲಿ ಕ್ಲೀನ್ ಸ್ವೀಪ್ ಆಘಾತ ಅನುಭವಿಸಿತು. ಈ ಹಿನ್ನೆಲೆಯಲ್ಲಿ ಭಾರತ ತಂಡದ ವಿರುದ್ದ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ.
ಗುವಾಹಟಿಯಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 408 ರನ್‌ಗಳಿಂದ ಸೋಲು ಅನುಭವಿಸಿತ್ತು. ಇಲ್ಲಿನ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿತ್ತು. ಆದರೂ ಟೀಮ್ ಇಂಡಿಯಾ ಮೂರೂ ವಿಭಾಗಗಳಲ್ಲಿ ವೈಫಲ್ಯ ಅನುಭವಿಸಿತ್ತು. ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 140 ರನ್‌ಗಳಿಗೆ ಆಲ್‌ಔಟ್ ಆಯಿತು. ನಂತರ ದ್ವಿತೀಯ ಇನಿಂಗ್ಸ್‌ನಲ್ಲಿ 201 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಇದಕ್ಕೂ ಮುನ್ನ ಕೋಲ್ಕತಾ ಟೆಸ್ಟ್‌ನಲ್ಲಿ ಹರಿಣ ಪಡೆ ನೀಡಿದ್ದ 124 ರನ್‌ಗಳ ಗುರಿಯನ್ನು ತಲುಪಲು ಟೀಮ್ ಇಂಡಿಯಾಗೆ ಸಾಧ್ಯವಾಗಿರಲಿಲ್ಲ. ಅದರಲ್ಲಿಯೂ ವಿಶೇಷವಾಗಿ ಸೈಮನ್ ಹಾರ್ಮರ್ ಅವರ ಸ್ಪಿನ್ ಮೋಡಿಯನ್ನು ಮೆಟ್ಟಿ ನಿಲ್ಲುವಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ವಿಫಲರಾಗಿದ್ದರು.
ಕೋಲ್ಕತಾ ಟೆಸ್ಟ್ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಹೆಡ್ ಕೋಚ್ ಗೌತಮ್ ಗಂಭೀರ್, ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿನ ಪಿಚ್ ಅನ್ನು ಸಮರ್ಥಿಸಿಕೊಂಡಿದ್ದರು. ನಾವು ಬಯಸಿದ್ದ ಪಿಚ್ ನಮಗೆ ಸಿಕ್ಕಿತ್ತು. ಆದರೆ, ನಮ್ಮ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದಾರೆ. ಒಮ್ಮೆ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತುಕೊಂಡರೆ, ದೊಡ್ಡ ಮೊತ್ತವನ್ನು ಕಲೆ ಹಾಕಬಹುದಿತ್ತು ಎಂದು ಅವರು ತಮ್ಮ ತಂಡದ ಬ್ಯಾಟ್ಸ್‌ಮನ್‌ಗಳನ್ನು ಟೀಕಿಸಿದ್ದರು.
IND vs SA 2nd ODI: ರಾಯ್ಪುರದಲ್ಲೇ ಭಾರತಕ್ಕೆ ಸರಣಿ ಗೆಲುವಿನ ಚಿತ್ತ
ಭಾರತ ತಂಡವನ್ನು ಟೀಕಿಸಿದ ರವಿ ಶಾಸ್ತ್ರಿ
"ಗುವಾಹಟಿಯಲ್ಲಿ ಏನಾಯಿತು? ನೀವು ನನಗೆ ಉತ್ತರ ಕೊಡಿ. ಭಾರತ ತಂಡ 100ಕ್ಕೆ1, ನಂತರ ಹಠಾತ್ 130ಕ್ಕೆ 7 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ರೀತಿಯ ಕಳಪೆ ಪ್ರದರ್ಶನ ತೋರುವ ತಂಡ ಇದೇನಲ್ಲಾ. ಭಾರತ ಅಷ್ಟೊಂದು ಕೆಟ್ಟ ತಂಡವಲ್ಲ; ಇಲ್ಲಿ ಅತ್ಯುತ್ತಮ ಪ್ರತಿಭೆಗಳಿದ್ದಾರೆ. ಈ ಸರಣಿ ಸೋಲಿನ ಹೊಣೆಯನ್ನು ಆಟಗಾರರು ಕೂಡ ಹೊರಬೇಕು. ಏಕೆಂದರೆ ನೀವು ಚಿಕ್ಕ ವಯಸ್ಸಿನಿಂದಲೂ ಸ್ಪಿನ್‌ಗೆ ಆಡುತ್ತಿದ್ದೀರಿ," ಎಂದು ರವಿ ಶಾಸ್ತ್ರಿ ದೂರಿದ್ದಾರೆ.
ಹೆಡ್ ಕೋಚ್ ಗೌತಮ್ ಗಂಭೀರ್ ಅವರನ್ನು ಬೆಂಬಲಿಸುತ್ತಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರವಿ ಶಾಸ್ತ್ರಿ, "ನಾನು ಅವರನ್ನು ಬೆಂಬಲಿಸುತ್ತಿಲ್ಲ. ಶೇಕಡಾ 100ರಷ್ಟು. ನಾನು ಹೆಡ್ ಕೋಚ್ ಆಗಿದ್ದ ಅವಧಿಯಲ್ಲಿ ಇದು ಸಂಭವಿಸಿದ್ದರೆ, ಇದರ ಹೊಣೆಯನ್ನು ನಾನು ಮೊದಲು ಹೊರುತ್ತಿದ್ದೆ. ಕೋಚ್ ಆಗಿ ನಾನು ಇದನ್ನು ತೆಗೆದುಕೊಳ್ಳುತ್ತಿದ್ದೆ. ಆದರೆ ಟೀಮ್ ಮೀಟಿಂಗ್‌ನಲ್ಲಿ ಆಟಗಾರರನ್ನು ನಾನು ಬಿಡುತ್ತಿರಲಿಲ್ಲ," ಎಂದು ಹೇಳಿದ್ದಾರೆ.
IND vs SA: ಭಾರತ-ದಕ್ಷಿಣ ಆಫ್ರಿಕಾ ದ್ವಿತೀಯ ಏಕದಿನ ಪಂದ್ಯ ಯಾವಾಗ?
ಗಂಭೀರ್ ಅಡಿಯಲ್ಲಿ ಎರಡು ಬಾರಿ ಕ್ಲೀನ್ ಸ್ವೀಪ್ ಆಘಾತ
ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಎರಡು ಬಾರಿ ತವರಿನಲ್ಲಿ ಟೆಸ್ಟ್ ಸರಣಿಯಲ್ಲಿ ವೈಟ್‌ವಾಷ್ ಆಘಾತ ಅನುಭವಿಸಿದೆ. ಇದಕ್ಕೂ ಮುನ್ನ 2024ರಲ್ಲಿ ನ್ಯೂಜಿಲೆಂಡ್ ಎದುರು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿಯೂ 0-3 ಅಂತರದಲ್ಲಿಯೂ ಕ್ಲೀನ್ ಸ್ವೀಪ್ ಆಘಾತ ಅನುಭವಿಸಿತ್ತು. ಇದೀಗ ದಕ್ಷಿಣ ಆಫ್ರಿಕಾ ಎದುರು ಕೂಡ ಕ್ಲೀನ್ ಸ್ವೀಪ್ ಸೋಲು ಒಪ್ಪಿಕೊಂಡಿದೆ. ಈ ಟೆಸ್ಟ್ ಸರಣಿಯ ಸೋಲಿನ ಬಳಿಕ ಭಾರತ ತಂಡ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪಾಯಿಂಟ್ಸ್ ಟೇಬಲ್‌ನಲ್ಲಿ ಐದನೇ ಸ್ಥಾನಕ್ಕೆ ಕುಸಿದಿದೆ.
ಭಾರತ ಟೆಸ್ಟ್ ತಂಡದಲ್ಲಿ ಹೆಚ್ಚಿನ ಆಲ್‌ರೌಂಡರ್‌ಗಳಿಗೆ ಮನ್ನಣೆ ನೀಡಿದ್ದರ ಕಾರಣ ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಮೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಟೀಕೆಗಳಿಗೆ ಗುರಿಯಾಗಿದ್ದಾರೆ. ಮತ್ತೊಂದು ಕಡೆ ಗಂಭೀರ್ ಅಡಿಯಲ್ಲಿ ಭಾರತ ಟೆಸ್ಟ್ ತಂಡದಲ್ಲಿ ಆಟಗಾರರಿಗೆ ಅಸುರಕ್ಷಿತ ಭಾವನೆ ಮೂಡಿಸಿದ್ದಾರೆ. ಗಂಭೀರ್ ಅವರನ್ನು ಟೀಕಿಸಲು ಇದು ಕೂಡ ಒಂದು ಕಾರಣವಾಗಿದೆ.