IND vs SL: ಕೆಎಲ್ ರಾಹುಲ್‌ರ ಉಪ ನಾಯಕತ್ವವನ್ನು ಪ್ರಶ್ನಿಸಿದ ಆಕಾಶ್ ಚೋಪ್ರಾ!
ಭಾರತ ತಂಡದ ಅನುಭವಿ ಬ್ಯಾಟರ್ ಕೆಎಲ್ ರಾಹುಲ್ ಅವರಿಗೆ ನೀಡಲಾಗಿರುವ ಉಪನಾಯಕತ್ವದ ಜವಾಬ್ದಾರಿಯ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಪ್ರಶ್ನೆ ಎತ್ತಿದ್ದಾರೆ. ರಿಷಭ್ ಪಂತ್ ಬದಲಿಗೆ ರಾಹುಲ್ ಅವರನ್ನು ನಾಯಕತ್ವದ ಗುಂಪಿಗೆ ಮತ್ತೆ ಸೇರಿಸಲಾಗಿದ್ದು, ಅವರು ಉಪನಾಯಕನಾಗಿ ನೇಮಕಗೊಂಡಿದ್ದಾರೆ. ಆದರೆ, ರಾಹುಲ್ ನಾಯಕತ್ವದ ರೇಸ್‌ನಲ್ಲಿ ಇಲ್ಲವಾದರೂ ಅವರಿಗೆ ಏಕೆ ಉಪ ನಾಯಕತ್ವ ನೀಡಲಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಕೆಎಲ್ ರಾಹುಲ್‌ರ ಉಪ ನಾಯಕತ್ವವನ್ನು ಪ್ರಶ್ನಿಸಿದ ಆಕಾಶ್ ಚೋಪ್ರಾ. -
ನವದೆಹಲಿ: ಅಫ್ಘಾನಿಸ್ತಾನ ವಿರುದ್ಧ ಜೂನ್‌ನಲ್ಲಿ ನಡೆದಿದ್ದ ಏಕೈಕ ಟೆಸ್ಟ್ ಪಂದ್ಯಕ್ಕೂ ಮುನ್ನ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ರಿಷಭ್ ಪಂತ್ (Rishabh Pant) ಅವರನ್ನು ಬಾರತ ಟೆಸ್ಟ್ ತಂಡದ (Indian Cricket Team) ಉಪನಾಯಕ ಸ್ಥಾನದಿಂದ ತೆಗೆದುಹಾಕುವ ಅಚ್ಚರಿಯ ನಿರ್ಧಾರ ಕೈಗೊಂಡಿತ್ತು. 2025ರ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಪಂತ್ ಅವರನ್ನು ನಾಯಕತ್ವದ ಗುಂಪಿಗೆ ಸೇರಿಸಲಾಗಿತ್ತು. ಆದರೆ ಒಂದು ವರ್ಷದೊಳಗೇ ಅವರನ್ನು ಆ ಜವಾಬ್ದಾರಿಯಿಂದ ಕೈಬಿಡಲಾಯಿತು.
ನಾಯಕತ್ವದ ಜವಾಬ್ದಾರಿಯಿಂದ ದೂರವಾದರೂ ಪಂತ್ ರನ್ ಗಳಿಸುವುದನ್ನು ಮುಂದುವರಿಸಿದ್ದರು. ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗುವಾಹಟಿ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕತ್ವವನ್ನೂ ಅವರು ವಹಿಸಿದ್ದರು. ಇದೀಗ ಆಯ್ಕೆ ಸಮಿತಿ ಕೆಎಲ್ ರಾಹುಲ್ ಅವರನ್ನು ಮತ್ತೆ ನಾಯಕತ್ವದ ಗುಂಪಿಗೆ ಸೇರಿಸಿ ಉಪನಾಯಕನನ್ನಾಗಿ ನೇಮಿಸಿದೆ. ಈ ನಿರ್ಧಾರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಆಕಾಶ್ ಚೋಪ್ರಾ, ನಾಯಕ ಶುಭಮನ್ ಗಿಲ್‌ಗಿಂತ ಕೆಎಲ್ ರಾಹುಲ್ ಎಂಟು ವರ್ಷ ಹಿರಿಯರಾಗಿದ್ದರೂ ಅವರನ್ನು ಉಪನಾಯಕನಾಗಿ ನೇಮಿಸಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಆರ್‌ಸಿಬಿ ವೇಗಿಗೆ ಸ್ಥಾನ; 2027ರ ಏಕದಿನ ವಿಶ್ವಕಪ್‌ಗೆ ಭಾರತ ತಂಡವನ್ನು ಆರಿಸಿದ ರಾಬಿನ್ ಉತ್ತಪ್ಪ!
ಯೂಟ್ಯೂಬ್‌ನಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚೋಪ್ರಾ, “ಈ ವಿಷಯದಲ್ಲಿ ನಾನು ನಿಮ್ಮೊಂದಿಗೆ ಒಪ್ಪುತ್ತೇನೆ. ಈ ದೃಷ್ಟಿಕೋನದಿಂದ ನಾನು ಎಂದಿಗೂ ಯೋಚಿಸಿರಲಿಲ್ಲ. ಉಪನಾಯಕನನ್ನು ಯಾವ ದೃಷ್ಟಿಕೋನದಿಂದ ಆಯ್ಕೆ ಮಾಡುತ್ತೀರಿ? ಅವರು ಮುಂದಿನ ನಾಯಕನಾಗುವ ಸಾಲಿನಲ್ಲಿರಬೇಕು ಎಂಬುದೇ? ನಾಯಕ ಸ್ಥಾನದಿಂದ ಹಿಂದೆ ಸರಿದರೆ, ಎರಡನೇ ವ್ಯಕ್ತಿ ನಾಯಕನಾಗಬೇಕು. ಆದರೆ ಆ ಎರಡನೇ ವ್ಯಕ್ತಿ ನಾಯಕನಷ್ಟೇ ವಯಸ್ಸಿನವರಾಗಿರಬೇಕು ಅಥವಾ ಅವರಿಗಿಂತ ಕಿರಿಯರಾಗಿರಬೇಕು,” ಎಂದು ಹೇಳಿದ್ದಾರೆ.
“ನೀವು ನಾಯಕನಿಗಿಂತ ಎಂಟು ವರ್ಷ ಹಿರಿಯರಾಗಿರುವ ಆಟಗಾರನನ್ನು ಉಪನಾಯಕನನ್ನಾಗಿ ನೇಮಿಸುತ್ತಿದ್ದರೆ, ಕೆಎಲ್ ರಾಹುಲ್ ಉತ್ತಮ ಆಟಗಾರ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ನಾಯಕತ್ವಕ್ಕೆ ಉತ್ತಮ ಅಭ್ಯರ್ಥಿ, ಉತ್ತಮ ಕ್ರಿಕೆಟ್ ಜ್ಞಾನ ಹೊಂದಿದ್ದಾರೆ. ಆದರೆ ಅವರ ವಯಸ್ಸು ಕಡಿಮೆಯಾಗುತ್ತಿಲ್ಲ. 26ರ ವಯಸ್ಸಿನ ನಾಯಕನಿಗೆ ಅವರು ಉಪನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಅವರು ಮುಂದಿನ ನಾಯಕನಾಗುವ ಸಾಲಿನಲ್ಲಿ ಇರುವ ಆಟಗಾರರಲ್ಲ,” ಎಂದು ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಲ್ದೀಪ್ ಯಾದವ್ ಬಗ್ಗೆ ಗೌತಮ್ ಗಂಭೀರ್, ಶುಭಮನ್ ಗಿಲ್‌ಗೆ ಪ್ರಬಲ ಸಂದೇಶ ರವಾನಿಸಿದ ಅಜಿಂಕ್ಯ ರಹಾನೆ!
ರೋಹಿತ್ ಶರ್ಮಾ ನಾಯಕತ್ವದ ಅವಧಿಯಲ್ಲಿ ಕೆಎಲ್ ರಾಹುಲ್ ಭಾರತ ತಂಡದ ನಾಯಕತ್ವದ ಗುಂಪಿಗೆ ಸೇರಿದ್ದರು. ಮೂರು ಮಾದರಿಗಳಲ್ಲೂ ಅವರು ಉಪನಾಯಕನ ಜವಾಬ್ದಾರಿ ವಹಿಸಿದ್ದರು. ಆದರೆ 2022ರ ಟಿ20 ವಿಶ್ವಕಪ್ ಬಳಿಕ ರಾಹುಲ್ ಟಿ20 ತಂಡದಲ್ಲಿ ತಮ್ಮ ಸ್ಥಾನ ಕಳೆದುಕೊಂಡರು. ಕಳಪೆ ಪ್ರದರ್ಶನದ ಪರಿಣಾಮ 2023ರಲ್ಲಿ ಟೆಸ್ಟ್ ಹಾಗೂ ಏಕದಿನ ತಂಡಗಳ ಉಪನಾಯಕ ಸ್ಥಾನವನ್ನೂ ಕಳೆದುಕೊಂಡಿದ್ದರು. ಇದೇ ವರ್ಷ ಟೆಸ್ಟ್ ತಂಡದ ಆಡುವ ಹನ್ನೊಂದರ ಬಳಗದಿಂದಲೂ ಅವರನ್ನು ಕೈಬಿಡಲಾಗಿತ್ತು.
ಬಳಿಕ ರಾಹುಲ್ ಎರಡೂ ಮಾದರಿಗಳ ತಂಡಕ್ಕೆ ಮರಳಿದರು. 2023ರ ಏಕದಿನ ವಿಶ್ವಕಪ್‌ನಲ್ಲೂ ಅವರು ಭಾರತ ತಂಡದ ಭಾಗವಾಗಿದ್ದರು. ಟೆಸ್ಟ್ ತಂಡದಲ್ಲೂ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ರಾಹುಲ್, ಇದೀಗ ತಂಡದ ಉಪನಾಯಕರಾಗಿದ್ದಾರೆ.ಆದರೆ ಟಿ20 ಮಾದರಿಯ ಭಾರತ ತಂಡದ ಯೋಜನೆಯಲ್ಲಿ ಬಲಗೈ ಬ್ಯಾಟರ್ ರಾಹುಲ್ ಸದ್ಯ ಸ್ಥಾನ ಪಡೆದಿಲ್ಲ. ಹೀಗಾಗಿ ಅವರು ಈಗಾಗಲೇ ಆಡಿರುವ 72 ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡು ಶತಕಗಳನ್ನು ಹೊಂದಿರುವ ರಾಹುಲ್, 2022ರಲ್ಲಿ ತಂಡದಿಂದ ಕೈಬಿಡುವ ಮುನ್ನ 2,265 ರನ್ ಗಳಿಸಿದ್ದರು.