ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಕೇವಲ ಒಬ್ಬ ಬ್ಯಾಟ್ಸ್‌ಮನ್‌ ಅನ್ನು ಔಟ್‌ ಮಾಡಲು ನಿಮ್ಮಿಂದ ಸಾಧ್ಯವಾಗಲಿಲ್ಲʼ: ಭಾರತ ತಂಡವನ್ನು ಟೀಕಿಸಿದ ಮೊಹಮ್ಮದ್‌ ಕೈಫ್‌!

ಶ್ರೀಲಂಕಾ ತಂಡದ ಸೋನಲ್‌ ದಿನುಷಾ ಎದುರು ಭಾರತ ತಂಡದ ನಾಯಕ ಶುಭಮನ್‌ ಗಿಲ್‌ ರೂಪಿಸಿದ ತಂತ್ರವನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ ಪ್ರಶ್ನೆ ಮಾಡಿದ್ದಾರೆ. ವಿಡಿಯೊ ಅನಾಲಿಸ್ಟ್‌ಗಳು, ಹೆಡ್‌ ಕೋಚ್‌ ಸೇರಿದಂತೆ ಹೆಚ್ಚಿನ ಸಹಾಯಕ ಸಿಬ್ಬಂದಿ ಇದ್ದರೂ ಒಬ್ಬ ಬ್ಯಾಟ್ಸ್‌ಮನ್‌ ಅನ್ನು ಔಟ್‌ ಮಾಡಲು ಪೂರಕವಾದ ತಂತ್ರವನ್ನು ರೂಪಿಸಲು ಸಾಧ್ಯವಾಗಲಿಲ್ಲ ಎಂದು ಕೈಫ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಶುಭಮನ್‌ ಗಿಲ್‌ ನಾಯಕತ್ವವನ್ನು ಟೀಕಿಸಿದ ಮೊಹಮ್ಮದ್‌ ಕೈಫ್‌!

ಭಾರತ ತಂಡವನ್ನು ಟೀಕಿಸಿದ ಮೊಹಮ್ಮದ್‌ ಕೈಫ್‌. -

Profile
Ramesh Kote Aug 28, 2026 3:43 PM

ನವದೆಹಲಿ: ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದ (IND vs SL) ಐದನೇ ದಿನದಲ್ಲಿ ಸೋನಲ್‌ ದಿನುಷಾ (Sonal Dinusha)ಅವರನ್ನು ಬಹುಬೇಗ ಔಟ್‌ ಮಾಡುವಲ್ಲಿ ವಿಫಲವಾದ ಭಾರತ ತಂಡವನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ (Mohammad Kaif) ಟೀಕಿಸಿದ್ದಾರೆ. ವಿಶೇಷವಾಗಿ ಸೋನಲ್‌ ಎದುರು ನಾಯಕ ಶುಭಮನ್‌ ಗಿಲ್‌ ಅವರು ರೂಪಿಸಿದ ರಣತಂತ್ರವನ್ನು ಅವರು ಪ್ರಶ್ನೆ ಮಾಡಿದ್ದಾರೆ. ವಿಡಿಯೊ ಅನಾಲಿಸ್ಟ್‌ಗಳು, ಹೆಡ್‌ ಕೋಚ್‌ ಸೇರಿದಂತೆ ಅಷ್ಟೊಂದು ಸಹಾಯಕ ಸಿಬ್ಬಂದಿಯನ್ನು ಹೊಂದಿದ್ದರೂ ಒಬ್ಬ ಬ್ಯಾಟ್ಸ್‌ಮನ್‌ ಅನ್ನು ಬಹುಬೇಗ ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ ಎಂದು ಕೈಫ್‌ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಕೊಲಂಬೊದ ಸಿಂಹಳೀಸ್‌ ಸ್ಪೋರ್ಟ್ಸ್‌ ಕ್ಲಬ್‌ ಮೈದಾನದಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ ತಂಡ, 229 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಲೆ ಲಂಕಾ ಕೇವಲ 16 ರನ್‌ ಮುನ್ನಡೆಯನ್ನು ಗಳಿಸಿತ್ತು ಅಷ್ಟೆ. ಈ ವೇಳೆ ಐದನೇ ದಿನ ಮೊದಲನೇ ಸೆಷನ್‌ನಲ್ಲಿ ಭಾರತ ತಂಡ ಇನ್ನುಳಿದ 4 ವಿಕೆಟ್‌ಗಳನ್ನು ಕಬಳಿಸಬಹುದೆಂದು ಅಂದಾಜಿಸಲಾಗಿತ್ತು.

ಶ್ರೀಲಂಕಾ ತಂಡದ ಇನ್ನುಳಿದ ಬ್ಯಾಟ್ಸ್‌ಮನ್‌ಗಳ ಪೈಕಿ ಸೋನಲ್‌ ದಿನುಷಾ ಒಬ್ಬರೇ ಕೀ ಆಟಗಾರರಾಗಿದ್ದರು. ಹಾಗಾಗಿ ಐದನೇ ದಿನ ಬೇಗ ಸೋನಲ್‌ ಅವರನ್ನು ಔಟ್‌ ಮಾಡಿದ್ದರೆ, ಭಾರತ ತಂಡ ಬಹುಬೇಗ ಗೆಲುವು ಪಡೆದಿತ್ತು. ಆದರೆ, ಸೋನಲ್‌ ದಿನುಷಾ ಅವರು ತಾಳ್ಮೆಯ ಬ್ಯಾಟಿಂಗ್‌ ನಡೆಸಿ 264 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 133 ರನ್‌ಗಳನ್ನು ಕಲೆ ಹಾಕಿದರು. ಭಾರತೀಯ ಬೌಲರ್‌ಗಳು ದಿನುಷಾಗೆ ಸೂಕ್ತ ರಣತಂತ್ರ ರೂಪಿಸಿ ವಿಕೆಟ್‌ ಪಡೆಯುವಲ್ಲಿ ವಿಫಲರಾದರು.

'ಟೆಸ್ಟ್ ಕ್ರಿಕೆಟ್ ಗೆದ್ದಿದೆ': ಕೊಲಂಬೊ ಟೆಸ್ಟ್‌ ಡ್ರಾ ಬಳಿಕ ಶುಭಮನ್ ಗಿಲ್ ಹೇಳಿಕೆ

ಅಂತಿಮವಾಗಿ ಶ್ರೀಲಂಕಾ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 154 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 429 ರನ್‌ಗಳನ್ನು ಕಲೆ ಹಾಕಿ ಡಿಕ್ಲೆರ್‌ ಮಾಡಿಕೊಂಡಿತು. ಅಂತಿಮವಾಗಿ ಪಂದ್ಯ ಡ್ರಾನಲ್ಲಿ ಅಂತ್ಯವಾದರೂ ಮೊದಲನೇ ಪಂದ್ಯದ ಗೆಲುವಿನ ಆಧಾರದ ಮೇಲೆ ಶುಭಮನ್‌ ಗಿಲ್‌ ನಾಯಕತ್ವದ ಟೀಮ್‌ ಇಂಡಿಯಾ ಸರಣಿಯನ್ನು 1-0 ಅಂತರದಲ್ಲಿ ಗೆದ್ದುಕೊಂಡಿತು.

ಸೋನಿ ಸ್ಪೋರ್ಟ್ಸ್‌ ಚರ್ಚೆಯಲ್ಲಿ ಮಾತನಾಡಿದ ಮೊಹಮ್ಮದ್‌ ಕೈಫ್‌, "ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ಗೂ ದುರ್ಬಲತೆ ಇದ್ದೇ ಇರುತ್ತದೆ ಹಾಗೂ ಅದು ಎಲ್ಲಿದೆ ಎಂಬುದನ್ನು ಕಂಡುಕೊಳ್ಳಬೇಕಾಗುತ್ತದೆ. ನಾನು ಗಿಲ್‌ ಬಗ್ಗೆ ಮಾತನಾಡುತ್ತಿಲ್ಲ. ನಾನು ಸಂಪೂರ್ಣ ಬೌಲಿಂಗ್‌ ವಿಭಾಗ ಹಾಗೂ ಕೋಚಿಂಗ್‌ ಸಿಬ್ಬಂದಿ ಬಗ್ಗೆ ಮಾತನಾಡುತ್ತಿದ್ದೇನೆ. ಪ್ರತಿಯೊಬ್ಬರೂ ಒಂದು ಕಡೆ ಕುಳಿತುಕೊಂಡು ಗಾಲೆ ಶತಕದ ಬಗ್ಗೆ ಹಾಗೂ ಅವರು ಬ್ಯಾಟಿಂಗ್‌ಗೆ ಬಂದಾಗ ಅವರನ್ನು ಹೇಗೆ ಬಲೆಗೆ ಬೀಳಿಸಬೇಕೆಂದು ಚರ್ಚೆ ನೆಡಸಿದ್ದಾರೆ," ಎಂದು ಹೇಳಿದ್ದಾರೆ.

“ತಂತ್ರದ ದೃಷ್ಟಿಯಿಂದ ಹೇಳುವುದಾದರೆ, ಅವರು ಕಡಿಮೆ ದಾಳಿ ನಡೆಸಿದ್ದು ನಿಜ. ನಿನ್ನೆ ಫೀಲ್ಡ್‌ ಅನ್ನು ಹೆಚ್ಚು ಹರಡಲಾಗಿತ್ತು ಮತ್ತು ಡ್ರೈವ್ ಹೊಡೆಯಲು ಅನುಕೂಲವಾಗುವಂತಹ ಎಸೆತಗಳನ್ನು ಬೌಲ್‌ ಮಾಡಲಿಲ್ಲ. ಶತಕದ ಬಳಿಕ ಸಾರಾಂಶ್ ಜೈನ್ ಕೂಡ ಇದೇ ರೀತಿಯ ಎಸೆತದಲ್ಲಿ ಅವರನ್ನು ಔಟ್ ಮಾಡಿದ್ದರು. ಮೊಹಮ್ಮದ್ ಸಿರಾಜ್ ಫುಲ್ ಬಾಲ್ ಎಸೆದಾಗಲೂ ಅವರು ಅದನ್ನು ಬಿಟ್ಟುಬಿಟ್ಟರು. ಏಕೆಂದರೆ ಡ್ರೈವ್ ಶಾಟ್ ಆಡುವುದು ಅವರಿಗೆ ಇಷ್ಟವಿಲ್ಲ. ಆ ಭಾಗದಲ್ಲಿ ಶಾಟ್‌ಗಳನ್ನು ಆಡಲು ಅವರು ಹೆಚ್ಚು ಇಷ್ಟಪಡುವುದಿಲ್ಲ,” ಎಂದು ಅವರು ತಿಳಿಸಿದ್ದಾರೆ.

ಕೊಲಂಬೊ ಟೆಸ್ಟ್‌ನಲ್ಲಿ ಎರಡು ಶತಕ ಬಾರಿಸಿ ದಾಖಲೆ ಬರೆದ ಸೋನಲ್ ದಿನುಶಾ

"ನೀವು ಭಾರತ ತಂಡದ ಬಗ್ಗೆ ಮಾತನಾಡುತ್ತಿದ್ದೀರಿ. ಅವರನ್ನು ತಡವಾಗಿ ಔಟ್‌ ಮಾಡಲು, ಇದು ಕ್ಲಬ್‌ ಪಂದ್ಯವಲ್ಲ. ವಿಡಿಯೊ ಅನಲಿಸ್ಟ್‌ ಕುಳಿತುಕೊಂಡಿದ್ದಾರೆ, ಅಂಕಿ ಅಂಶಗಳ ವ್ಯಕ್ತ ಕೂಡ ಕುಳಿತಿರುತ್ತಾರೆ ಹಾಗೂ ಆರು ಅಥವಾ ಏಳಖು ಕೋಚ್‌ಗಳು ಒಂದು ಕಡೆ ಕುಳಿತುಕೊಂಡಿದ್ದಾರೆ," ಎಂದು ಮೊಹಮ್ಮದ್‌ ಕೈಫ್‌ ದೂರಿದ್ದಾರೆ.

ದಿನುಷಾ ಎದುರು ಭಾರತದ ತಂತ್ರವನ್ನು ಪ್ರಶ್ನಿಸಿದ ಕೈಫ್‌

"ನಮ್ಮ ಆಧುನಿಕ ಯುವ ಬೌಲರ್‌ಗಳು ಇಂಥಾ ಪಿಚ್‌ನಲ್ಲಿ ಆಡುವುದು ತೀರಾ ಅಪರೂಪ. ಅವರು ಐದನೇ ದಿನದಲ್ಲಿ ಆಡುವುದಿಲ್ಲ. ಟೆಸ್ಟ್‌ ಪಂದ್ಯಗಳು ಕೂಡ ಐದನೇ ದಿನದವರೆಗೂ ಹೋಗುವುದಿಲ್ಲ. ಹಾಗಾಗಿ ಐದನೇ ದಿನ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವುದು ಬರುವುದಿಲ್ಲ. ಈ ಬ್ಯಾಟ್ಸ್‌ಮನ್‌ (ಸೋನಲ್‌ ದಿನುಷಾ) ಅನ್ನು ನಾವು ಕೂಡ ಹಿಂದೆ ನೋಡಿರಲಿಲ್ಲ," ಎಂದರು.

"ಅವರು ಸೋನಲ್‌ ಅವರನ್ನು ಎಂದಿಗೂ ನೋಡಿರಲಿಲ್ಲ. ಹಾಗಾಗಿ ಇದು ಸ್ವಲ್ಪ ಅಪರೂಪದ ಪ್ಯಾಕೇಜ್‌. ಎರಡನೇ ಟೆಸ್ಟ್‌ ಪಂದ್ಯದಲ್ಲಿ ಪ್ರಮಾದ ನಡೆದಿತ್ತು. ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ನೀವು ಅವರನ್ನು ನೋಡಿರಲಿಲ್ಲ ಸರಿ, ಆದರೆ, ಎರಡನೇ ಪಂದ್ಯದಲ್ಲಿ ಏಕೆ ನೋಡಿಲ್ಲ," ಎಂದು ಮೊಹಮ್ಮದ್‌ ಕೈಫ್‌ ಪ್ರಶ್ನೆ ಮಾಡಿದ್ದಾರೆ.