ʻಅವರನ್ನು ಹೊಂದಿರುವುದು ಅದೃಷ್ಟʼ:ರವೀಂದ್ರ ಜಡೇಜಾ ಬಗ್ಗೆ ಶುಭಮನ್ ಗಿಲ್ ದೊಡ್ಡ ಹೇಳಿಕೆ!
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಎರಡನೇ ಟೆಸ್ಟ್ ಪಂದ್ಯ ಅಕ್ಟೋಬರ್ 10ರಂದು ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಭಾರತದ ನಾಯಕ ಶುಭಮನ್ ಗಿಲ್, ತಮ್ಮ ಸಹ ಆಟಗಾರ ರವೀಂದ್ರ ಜಡೇಜಾ ಅವರನ್ನು ಗುಣಗಾನ ಮಾಡಿದ್ದಾರೆ. ಅವರು ತಂಡದಲ್ಲಿರುವುದೇ ಅದೃಷ್ಟಎಂದು ಶ್ಲಾಘಿಸಿದ್ದಾರೆ.

ರವೀಂದ್ರ ಜಡೇಜಾಗೆ ನಾಯಕ ಶುಭಮನ್ ಗಿಲ್ ಮೆಚ್ಚುಗೆ. -

ದುಬೈ: ಪ್ರಸ್ತುತ ಭಾರತ ತಂಡ, ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು (IND vs WI) ಆಡುತ್ತಿದೆ. ಮೊದಲನೇ ಟೆಸ್ಟ್ ಗೆಲ್ಲುವ ಮೂಲಕ ಭಾರತ ತಂಡ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಅಕ್ಟೋಬರ್ 10 ರಂದು ದಿಲ್ಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ಮೊದಲನೇ ಟೆಸ್ಟ್ ಪಂದ್ಯದ ಗೆಲುವಿನಲ್ಲಿ ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ನಿರ್ಣಾಯಕ ಪಾತ್ರ ವಹಿಸಿದ್ದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಎರಡನೇ ಟೆಸ್ಟ್ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ಶುಭಮನ್ ಗಿಲ್, ರವೀಂದ್ರ ಜಡೇಜಾ ಅವರನ್ನು ಗುಣಗಾನ ಮಾಡಿದ್ದಾರೆ. ಜಡೇಜಾ ಅವರನ್ನು ತಂಡದಲ್ಲಿ ಹೊಂದಿರುವುದು ನಮ್ಮ ಅದೃಷ್ಟ ಹಾಗೂ ಅವರು ಅಹಮದಾಬಾದ್ ಟೆಸ್ಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಅವರು ತಮ್ಮ ಆರನೇ ಶತಕವನ್ನು ಗಳಿಸಿದ್ದರು ಮತ್ತು ಎರಡನೇ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದರು. ಭಾರತ ತಂಡ ಇನಿಂಗ್ಸ್ ಮತ್ತು 140 ರನ್‌ಗಳಿಂದ ಪಂದ್ಯವನ್ನು ಗೆಲ್ಲವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು ಎಂದು ಗಿಲ್ ತಿಳಿಸಿದ್ದಾರೆ.
IND vs WI 2nd Test: 2ನೇ ಟೆಸ್ಟ್‌ಗೆ ಬುಮ್ರಾ, ಸಿರಾಜ್ಗೆ ರೆಸ್ಟ್
"ರವೀಂದ್ರ ಜಡೇಜಾ ಅವರಂಥ ಆಟಗಾರರು ಟೆಸ್ಟ್ ಪಂದ್ಯಗಳಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಲ್ಲರು. ಸ್ಪಿನ್ ಟ್ರ್ಯಾಕ್‌ಗಳಲ್ಲಿ ಅವರ ಬ್ಯಾಟಿಂಗ್ ಗುಣಮಟ್ಟ ಎಷ್ಟು ಉತ್ತಮವಾಗಿದೆ ಎಂಬುದನ್ನು ನಾವು ನೋಡಿದ್ದೇವೆ. ಈ ಸಮಯದಲ್ಲಿ ಅವರು ವಿಶ್ವದ ನಂಬರ್ 1 ಆಲ್‌ರೌಂಡರ್ ಆಗಲು ಇದೇ ಕಾರಣ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನಮ್ಮ ತಂಡದಲ್ಲಿ ಅವರನ್ನು ಹೊಂದಿರುವುದು ನಮ್ಮ ಅದೃಷ್ಟ ಎಂದು ನಾನು ಭಾವಿಸುತ್ತೇನೆ. ಅವರ ಫೀಲ್ಡಿಂಗ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರ ಥ್ರೋಗಳು, ಕ್ಯಾಚ್‌ಗಳು, ಫೀಲ್ಡಿಂಗ್ ಸಮಯದಲ್ಲಿ ಅವರ ತೀವ್ರತೆ. ಅವರ ಕೈಯಲ್ಲಿ ಬಾಲ್ ಇದೆ ಅಂದರೆ, ಬ್ಯಾಟ್ಸ್‌ಮನ್‌ಗಳು ಆ ಎರಡನೇ ರನ್‌ಗಾಗಿ ಹೋಗುವುದಿಲ್ಲ ಎಂದು ನಾವು ಹಲವು ಬಾರಿ ನೋಡಿದ್ದೇವೆ," ಎಂದು ಗಿಲ್ ಶ್ಲಾಘಿಸಿದ್ದಾರೆ.
2025ರಲ್ಲಿ ರವೀಂದ್ರ ಜಡೇಜಾ ಭಾರತ ಪರ, ಟೆಸ್ಟ್ ಪಂದ್ಯಗಳ ಬ್ಯಾಟಿಂಗ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇಲ್ಲಿಯವರೆಗೆ 6 ಪಂದ್ಯಗಳಲ್ಲಿ ಅವರು 103.33ರ ಸರಾಸರಿಯಲ್ಲಿ 620 ರನ್ ಗಳಿಸಿದ್ದು, ಇದರಲ್ಲಿ ಎರಡು ಶತಕಗಳು ಮತ್ತು ಐದು ಅರ್ಧಶತಕಗಳು ಒಳಗೊಂಡಿವೆ. ಇದರ ಜೊತೆಗೆ, ಜಡೇಜಾ 11 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.
IND vs WI 2nd Test: ದಿಲ್ಲಿಯಲ್ಲಿ ಬ್ಯಾಟಿಂಗ್ ಪಿಚ್ ನಿರೀಕ್ಷೆ
ಜಡೇಜಾ ಅವರು ತಮ್ಮ ಮಾನಸಿಕ ಸ್ಥಿತಿಯ ಮೇಲೆ, ವಿಶೇಷವಾಗಿ ಬ್ಯಾಟಿಂಗ್ ವಿಷಯದಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು ನನ್ನ ವಿಧಾನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿರುವುದಾಗಿ ಹೇಳಿದರು.
"ತಂಡಕ್ಕೆ ಕೊಡುಗೆ ನೀಡುತ್ತಿರುವುದು ಒಳ್ಳೆಯದು ಎಂದು ಅನಿಸುತ್ತಿದೆ ಮತ್ತು ನನ್ನ ಬ್ಯಾಟಿಂಗ್‌ಗೆ ಸಂಬಂಧಿಸಿದಂತೆ ನಾನು ಮಾನಸಿಕವಾಗಿ ಮತ್ತು ಕೌಶಲದ ದೃಷ್ಟಿಯಿಂದಲೂ ಕೆಲಸ ಮಾಡಿದ್ದೇನೆ. ನಾನು ನನ್ನ ಮನಸ್ಥಿತಿಯನ್ನು ಸ್ವಲ್ಪ ಬದಲಾಯಿಸಿದ್ದೇನೆ. ಹಿಂದೆ ನಾನು ವಿಭಿನ್ನ ಮನಸ್ಥಿತಿಯೊಂದಿಗೆ ಆಡುತ್ತಿದ್ದೆ ಆದರೆ ನಾನು ಕೆಲ ಬದಲಾವಣೆಗಳನ್ನು ಮಾಡಿದ್ದೇನೆ," ಎಂದು ರವೀಂದ್ರ ಜಡೇಜಾ ವಿವರಿಸಿದ್ದಾರೆ.
ಅಕ್ಟೋಬರ್ 10 ರಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿರುವ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೆಣಸಲಿವೆ. ಈ ಪಂದ್ಯದಲ್ಲಿ ಭಾರತ ಗೆದ್ದು ತವರಿನಲ್ಲಿ ಸರಣಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ.