IND vs ZIM: ಜಿಂಬಾಬ್ವೆಗೆ ಆಗಮಿಸಿದ ವೈಭವ್ ಸೂರ್ಯವಂಶಿ ಬಗ್ಗೆ ಸಿಕಂದರ್ ರಾಝಾ ದೊಡ್ಡ ಹೇಳಿಕೆ!
ZIM vs IND: ಭಾರತ ತಂಡ 15ರ ವಯಸ್ಸಿನ ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿಯನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕೆಂದು ಜಿಂಬಾಬ್ವೆ ನಾಯಕ ಸಿಕಂದರ್ ರಾಝಾ ತಿಳಿಸಿದ್ದಾರೆ. ಭಾರತ ಹಾಗೂ ಜಿಂಬಾಬ್ವೆ ನಡುವಣ ಮೂರು ಪಂದ್ಯಗಳ ಟಿ20ಐ ಸರಣಿ ಜುಲೈ 23 ರಂದು ಆರಂಭವಾಗಲಿದೆ.
ವೈಭವ್ ಸೂರ್ಯವಂಶಿಯನ್ನು ಶ್ಲಾಘಿಸಿದ ಸಿಕಂದರ್ ರಾಝಾ. -
ನವದೆಹಲಿ: ಇಂಗ್ಲೆಂಡ್ ವಿರುದ್ಧ ಟಿ20ಐ ಹಾಗೂ ಏಕದಿನ ಸರಣಿಗಳನ್ನು ಸೋತಿರುವ ಭಾರತ ತಂಡ,ಇದೀಗ ಜಿಂಬಾಬ್ವೆ ಪ್ರವಾಸವನ್ನು ಹಮ್ಮಿಕೊಂಡಿದೆ. ಇಲ್ಲಿನ ಶ್ರೇಯಸ್ ಅಯ್ಯರ್ ನಾಯಕತ್ವದ ಟೀಮ್ ಇಂಡಿಯಾ 3 ಪಂದ್ಯಗಳ ಟಿ20ಐ ಸರಣಿಯನ್ನು (IND vs ZIM) ಆಡಲಿದ್ದು, ಜುಲೈ 23 ರಂದು ಮೊದಲನೇ ಪಂದ್ಯ ನಡೆಯಲಿದೆ. ಈ ಸರಣಿಯಲ್ಲಿ 2026ರ ಆರೆಂಜ್ ಕ್ಯಾಪ್ ವಿಜೇಯ ವೈಭವ್ ಸೂರ್ಯವಂಶಿ (Vaibhav Sooryavanshi) ಪ್ರಮುಖ ಆಕರ್ಷಣೆಯಾಗಿದ್ದು, ಈ ಬಗ್ಗೆ ಜಿಂಬಾಬ್ವೆ ನಾಯಕ ಸಿಕಂದರ್ ರಾಜಾ (Sikandar Raza) ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
ಜಿಯೊಸ್ಟಾರ್ ಜೊತೆ ಮಾತನಾಡಿದ ಸಿಕಂದರ್ ರಾಝಾ, "ವೈಭವ್ ಸೂರ್ಯವಂಶಿ ಅವರು ಅತ್ಯಂತ ಪ್ರತಿಭಾವಂತ ಕ್ರಿಕೆಟಿಗ. 15ರ ವಯಸ್ಸಿನ ಕ್ರಿಕೆಟಿಗ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವಾಗ, ಕೇವಲ ಎರಡು ಅಥವಾ ಮೂರನೇ ಪಂದ್ಯಗಳಿಗೆ ಅವರನ್ನು ಟೀಕಿಸುವುದು ನ್ಯಾಯಸಮ್ಮತವಲ್ಲ. ವೈಭವ್ ಅವರ ಸುತ್ತು ಹಿರಿಯ ಹಾಗೂ ಅತ್ಯಂತ ಅನುಭವಿ ಆಟಗಾರರು ಇದ್ದಾರೆಂದು ನಾನು ಭಾವಿಸುತ್ತೇನೆ. ಅವರನ್ನು ಅತ್ಯುತ್ತಮವಾಗಿ ನಿರ್ವಹಿಸಿದರೆ, ಅವರು ತಲೆಮಾರಿನ ಪ್ರತಿಭಾವಂತ ಆಟಗಾರರಾಗಲಿದ್ದಾರೆ," ಎಂದು ತಿಳಿಸಿದ್ದಾರೆ.
ವೈಭವ್ ಸೂರ್ಯವಂಶಿ ಕಳೆದ ಒಂದು ವರ್ಷದಲ್ಲಿ ಸಾಧಿಸಿರುವ ಅದ್ಭುತ ಬೆಳವಣಿಗೆಯನ್ನು ಜಿಂಬಾಬ್ವೆ ಹಿರಿಯ ಆಟಗಾರ ಮೆಚ್ಚುಗೆ ವ್ಯಕ್ತಪಡಿಸಿದರು. ವಯೋಮಿತಿ ಕ್ರಿಕೆಟ್‌ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ವರೆಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಅವರು ತಲುಪಿರುವುದು ವಿಶೇಷ ಸಾಧನೆ ಎಂದು ಬಣ್ಣಿಸಿದ್ದಾರೆ.
IND vs ENG: ಲಾರ್ಡ್ಸ್‌ನಲ್ಲಿ ಮೊದಲ ಒಡಿಐ ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ರೋಹಿತ್ ಶರ್ಮಾ!
"ಕಳೆದ ಒಂದು ವರ್ಷದಲ್ಲಿ ವೈಭವ್ ಸೂರ್ಯವಂಶಿ ಸಾಧಿಸಿರುವುದು ನಿಜಕ್ಕೂ ಗಮನಾರ್ಹ. ಭಾರತ ಅಂಡರ್-19 ತಂಡದ ಪರ ಅವರು ತೋರಿದ ಪ್ರದರ್ಶನ ಮತ್ತು ಇದೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವುದು ಸಾಮಾನ್ಯ ಸಾಧನೆಯಲ್ಲ. ಇಂತಹ ಕಥೆಗಳು ಈಗಿನ ದಿನಗಳಲ್ಲಿ ಅಪರೂಪ. ವೈಭವ್ ವಿಶೇಷ ಪ್ರತಿಭೆಯ ಆಟಗಾರ. ಮುಂದಿನ ದಿನಗಳಲ್ಲಿ ಅವರನ್ನು ಹೇಗೆ ನಿರ್ವಹಿಸಲಾಗುತ್ತದೆ ಮತ್ತು ಅವರ ಬೆಳವಣಿಗೆಯನ್ನು ಹೇಗೆ ರೂಪಿಸಲಾಗುತ್ತದೆ ಎಂಬುದು ಅತ್ಯಂತ ಮುಖ್ಯ," ಎಂದು ಅವರು ಹೇಳಿದ್ದಾರೆ.
ವೈಭವ್ ಸೂರ್ಯವಂಶಿ ಅದ್ಭುತ ಪಯಣ
ವೈಭವ್ ಸೂರ್ಯವಂಶಿಯ ಕ್ರಿಕೆಟ್ ಪಯಣ ಅತ್ಯಂತ ಅದ್ಭುತವಾಗಿದೆ. ಈ ತಿಂಗಳ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20ಐ ಪಂದ್ಯದಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಕೀರ್ತಿಗೆ ವೈಭವ್ ಸೂರ್ಯವಂಶಿ ಭಾಜನರಾಗಿದ್ದರು. ಆ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.
ವೈಭವ್ ಸೂರ್ಯವಂಶಿ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಸ್ಮರಣೀಯ ಪ್ರದರ್ಶನ ನೀಡಿದ್ದರು. 16 ಪಂದ್ಯಗಳಲ್ಲಿ 776 ರನ್‌ಗಳನ್ನು ಕಲೆಹಾಕಿದ ಅವರು, ಟೂರ್ನಿಯ ಅತ್ಯಂತ ಮೌಲ್ಯಯುತ ಆಟಗಾರ (Most Valuable Player) ಹಾಗೂ ಅತ್ಯುತ್ತಮ ಉದಯೋನ್ಮುಖ ಆಟಗಾರ (Best Emerging Player) ಪ್ರಶಸ್ತಿಗಳನ್ನು ಗೆದ್ದರು. ಇದರ ಜೊತೆಗೆ ಅವರು ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು. ಇದರ ಜೊತೆಗೆ, ಒಂದು ಐಪಿಎಲ್ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸರ್‌ಗಳನ್ನು ಸಿಡಿಸಿದ ಆಟಗಾರ ಎಂಬ ಕ್ರಿಸ್ ಗೇಲ್ ಅವರ ದಾಖಲೆಯನ್ನೂ ವೈಭವ್ ಮುರಿದು ಹೊಸ ಇತಿಹಾಸ ಬರೆದಿದ್ದರು.
ಭಾರತ vs ಜಿಂಬಾಬ್ವೆ ಟಿ20ಐ ಸರಣಿಯ ವೇಳಾಪಟ್ಟಿ
ಜುಲೈ 23 ರಂದು ಮೊದಲನೇ ಪಂದ್ಯ, ಜುಲೈ 25 ರಂದು ಎರಡನೇ ಹಾಗೂ ಜುಲೈ 26 ರಂದು ಮೂರನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯ ನಡೆಯಲಿದೆ. ಈ ಎಲ್ಲಾ ಪಂದ್ಯಗಳು ಹರಾರೆಯಲ್ಲಿ ನಡೆಯಲಿವೆ. ನಾಯಕನಾಗಿ ಇಂಗ್ಲೆಂಡ್‌ನಲ್ಲಿ ಮೊದಲ ಟಿ20ಐ ಸರಣಿಯನ್ನು ಸೋತಿರುವ ಶ್ರೇಯಸ್ ಅಯ್ಯರ್ ಅವರು, ಇದೀಗ ಜಿಂಬಾಬ್ವೆಯಲ್ಲಿ ಮೊದಲ ಸರಣಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.