IND vs ZIM: ಮೊದಲನೇ ಟಿ20ಐ ಗೆದ್ದರೂ ಭಾರತ ತಂಡವನ್ನು ಪ್ರಶ್ನಿಸಿದ ಆಕಾಶ್ ಚೋಪ್ರಾ!
IND vs ZIM: ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ತಂಡ ಗೆಲುವು ಸಾಧಿಸಿದರೂ, ಮಾಜಿ ಭಾರತದ ಟೆಸ್ಟ್ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ತಂಡದ ಟೀಮ್ ಮ್ಯಾನೇಜ್‌ಮೆಂಟ್‌ನ ಪ್ಲೇಯಿಂಗ್ XI ನಿರ್ಧಾರದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ.
ಭಾರತ ತಂಡವನ್ನು ಟೀಕಿಸಿದ ಆಕಾಶ್ ಚೋಪ್ರಾ. -
ನವದೆಹಲಿ: ಸುಮಾರು ಐದು ತಿಂಗಳ ಬಳಿಕ ಭಾರತ ತಂಡ ಮತ್ತೆ ಗೆಲುವಿನ ಹಾದಿಗೆ ಮರಳಿದ್ದು, ಗುರುವಾರ (ಜುಲೈ 23) ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದಿದ್ದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ (IND vs ZIM) ಜಿಂಬಾಬ್ವೆ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿತ್ತು. 2026ರ ಟಿ20 ವಿಶ್ವಕಪ್ (T20 World Cup 2026) ಗೆದ್ದ ಬಳಿಕ ಭಾರತ ತಂಡ ಸತತ ಆರು ಪಂದ್ಯಗಳಲ್ಲಿ ಸೋಲಿನ ಸರಣಿಯನ್ನು ಅನುಭವಿಸಿತ್ತು. ಎರಡನೇ ದರ್ಜೆಯ ಐರ್ಲೆಂಡ್ ತಂಡ ಭಾರತವನ್ನು 2-0 ಅಂತರದಲ್ಲಿ ವೈಟ್‌ವಾಶ್ ಸೋಲಿನ ಆಘಾತ ನೀಡಿತ್ತು. ಬಳಿಕ ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯಲ್ಲಿ ಭಾರತವನ್ನು 4-0 ಅಂತರದಿಂದ ಸೋಲಿಸಿ ತಂಡದ ಸಂಕಷ್ಟವನ್ನು ಹೆಚ್ಚಿಸಿತ್ತು.
ಕೊನೆಗೂ ಜಿಂಬಾಬ್ವೆ ವಿರುದ್ಧ ಸರಣಿಯ ಮೊದಲ ಪಂದ್ಯದಲ್ಲಿ ಏಳು ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಭಾರತ ಸೋಲಿನ ಸರಣಿಗೆ ಅಂತ್ಯ ಹಾಡಿತು. ಆದರೆ ಈ ಗೆಲುವಿನ ನಡುವೆಯೂ ಭಾರತದ ಮಾಜಿ ಟೆಸ್ಟ್ ಆರಂಭಿಕ ಆಟಗಾರ ಆಕಾಶ್ ಚೋಪ್ರಾ, ವಿವಿಎಸ್ ಲಕ್ಷ್ಮಣ್ ನೇತೃತ್ವದ ಟೀಮ್ ಮ್ಯಾನೇಜ್‌ಮೆಂಟ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರ ನಿರ್ಧಾರಗಳನ್ನು ಪ್ರಶ್ನಿಸಿದ್ದಾರೆ.
ರೋಹಿತ್ ಶರ್ಮಾ ನಿವೃತ್ತಿ ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ!
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಚೋಪ್ರಾ, ಆಡುವ ಹನ್ನೊಂದರ ಬಳಗದಲ್ಲಿ ಕೇವಲ ನಾಲ್ವರು ಬೌಲರ್‌ಗಳನ್ನು ಮಾತ್ರ ಆಯ್ಕೆ ಮಾಡಿದ್ದೇಕೆ ಎಂದು ಪ್ರಶ್ನಿಸಿದರು. "ಭಾರತ ತಂಡವನ್ನು ಆಯ್ಕೆ ಮಾಡಿದಾಗ, ಕೇವಲ ನಾಲ್ವರು ಬೌಲರ್‌ಗಳಿದ್ದರು — ಪ್ರಿನ್ಸ್ ಯಾದವ್, ಮಯಾಂಕ್ ಯಾದವ್, ಅಶೋಕ್ ಶರ್ಮಾ ಮತ್ತು ರವಿ ಬಿಷ್ಣೋಯಿ. ಐದನೇ ಬೌಲರ್ ಯಾರು? ಶಿವಂ ದುಬೆ. ಆರನೇ ಬೌಲರ್ ಯಾರು? ಯಾರೂ ಇಲ್ಲ. ಆರನೇ ಬೌಲರ್ ಇಲ್ಲದೇ ಆಡಲು ಭಾರತ ತಂಡ ಮೊದಲೇ ನಿರ್ಧರಿಸಿತ್ತು," ಎಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
"ಶಿವಂ ದುಬೇ ನಾಲ್ಕು ಓವರ್‌ಗಳಲ್ಲಿ ಕೇವಲ 32 ರನ್‌ಗಳನ್ನು ಮಾತ್ರ ನೀಡಿದರು. ಇತ್ತೀಚಿನ ದಿನಗಳಲ್ಲಿ ಅವರು ಮೊದಲ ಓವರ್‌ನಲ್ಲೇ ವಿಕೆಟ್ ಪಡೆಯುತ್ತಿದ್ದಾರೆ. ಡೀಪ್‌ನಲ್ಲಿ ಕ್ಯಾಚ್ ಪಡಯುವ ಮೂಲಕ ಅವರು ಯಶಸ್ಸು ಸಾಧಿಸಿದರು. ಅವರಿಗೆ ನಾಲ್ಕು ಓವರ್‌ಗಳನ್ನು ಬೌಲ್ ಮಾಡಲು ಅವಕಾಶ ನೀಡಿರುವುದು ಮತ್ತು ಕೇವಲ ನಾಲ್ವರು ಬೌಲರ್‌ಗಳೊಂದಿಗೆ ಕಣಕ್ಕಿಳಿದಿರುವುದು ಭಾರತ ತಂಡ, ಶಿವಂ ದುಬೆ ಅವರ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿದೆ ಎಂಬುದನ್ನು ತೋರಿಸುತ್ತದೆ. ಇದು ಬಹಳ ದೊಡ್ಡ ವಿಷಯ ಎಂದು ನಾನು ಭಾವಿಸುತ್ತೇನೆ," ಎಂದು ಅವರು ತಿಳಿಸಿದ್ದಾರೆ.
IND vs ZIM: ಮೊದಲನೇ ಟಿ20ಐ ಗೆದ್ದರೂ ಭಾರತ ತಂಡವನ್ನು ಪ್ರಶ್ನಿಸಿದ ಆಕಾಶ್ ಚೋಪ್ರಾ!
ಭಾರತದ ಐದನೇ ಬೌಲರ್ ಆಗಿದ್ದ ಶಿವಂ ದುಬೇ, ತಮ್ಮ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ 32 ರನ್‌ಗಳನ್ನು ಬಿಟ್ಟುಕೊಟ್ಟರು. ಜಿಂಬಾಬ್ವೆ ನಾಯಕ ಸಿಕಂದರ್ ರಾಝಾ ಅವರ ಪ್ರಮುಖ ವಿಕೆಟ್ ಪಡೆಯುವಲ್ಲಿ ಅವರು ಯಶಸ್ವಿಯಾದರು.
ವಿವಿಎಸ್ ಲಕ್ಷ್ಮಣ್ ಭಾರತ ತಂಡದ ಕೋಚ್ ಆಗಿರುವುದು ಏಕೆ?
ಮೊದಲ ಟಿ20ಐ ಪಂದ್ಯದ ವೇಳೆ ಭಾರತೀಯ ತಂಡದ ಡಗ್‌ಔಟ್‌ನಲ್ಲಿ ವಿವಿಎಸ್ ಲಕ್ಷ್ಮಣ್ ಅವರನ್ನು ನೋಡಿ ಅಭಿಮಾನಿಗಳು ಅಚ್ಚರಿಗೊಂಡರು. ಬಿಸಿಸಿಐ ಲಕ್ಷ್ಮಣ್ ಹಾಗೂ ಅವರ ಕೋಚಿಂಗ್ ಸಿಬ್ಬಂದಿಯನ್ನು ಆಫ್ರಿಕಾ ರಾಷ್ಟ್ರಕ್ಕೆ ಕಳುಹಿಸಿದೆ. ಬಿಸಿಸಿಐ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ವಿಶ್ರಾಂತಿ ನೀಡಿದೆ.
2026ರ ಏಷ್ಯನ್ ಗೇಮ್ಸ್‌ನಲ್ಲಿಯೂ ಲಕ್ಷ್ಮಣ್ ಅವರು ಭಾರತ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಆಗಸ್ಟ್‌ನಲ್ಲಿ ನಡೆಯಲಿರುವ ಶ್ರೀಲಂಕಾ ಪ್ರವಾಸದ ಟೆಸ್ಟ್ ಸರಣಿಯ ವೇಳೆ ಗೌತಮ್ ಗಂಭೀರ್ ಮತ್ತೆ ತಂಡದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.