ವೈಭವ್ ಅಬ್ಬರದ ಬ್ಯಾಟಿಂಗ್, ಶ್ರೀಲಂಕಾವನ್ನು ಮಣಿಸಿದ ಭಾರತ ಎ ತಂಡಕ್ಕೆ ತ್ರಿಕೋನ ಸರಣಿ!
ವೈಭವ್ ಸೂರ್ಯವಂಶಿ ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ಭಾರತ ಎ ತಂಡ, ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಎ ತಂಡವನ್ನು 66 ರನ್‌ಗಳಿಂದ ಮಣಿಸಿತು. ಆ ಮೂಲಕ ಮೂರು ರಾಷ್ಟಗಳ ತ್ರಿಕೋನ ಏಕದಿನ ಸರಣಿಯನ್ನು ಮುಡಿಗೇರಿಸಿಕೊಂಡಿತು. ಕೇವಲ 29 ಎಸೆತಗಳಲ್ಲಿ 94 ರನ್‌ಗಳನ್ನು ಸಿಡಿಸಿದ ವೈಭವ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ತ್ರಿಕೋನ ಎ ಸರಣಿ ಗೆದ್ದ ಭಾರತ ಎ ತಂಡ. -
ದಾಂಬೂಲ: ವೈಭವ್ ಸೂರ್ಯವಂಶಿ (Vaibhav Sooryavanshi) ಅಬ್ಬರದ ಬ್ಯಾಟಿಂಗ್ ಬಲದಿಂದ ಭಾರತ ಎ ತಂಡ, ಫೈನಲ್ ಪಂದ್ಯದಲ್ಲಿ (IND-A vs SL-A) ಆತಿಥೇಯ ಶ್ರೀಲಂಕಾ ಎ ವಿರುದ್ಧ 66 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಮೂರು ರಾಷ್ಟ್ರಗಳ ಎ ತ್ರಿಕೋನ ಸರಣಿಯನ್ನು ಮುಡಿಗೇರಿಸಿಕೊಂಡಿತು. ಈ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ 15ರ ವಯಸ್ಸಿನ ವೈಭವ್ ಸೂರ್ಯವಂಶಿ, ಕೇವಲ 29 ಎಸೆತಗಳಲ್ಲಿ 94 ರನ್ ಗಳಿಸಿ ಭಾರತ ಎ ತಂಡದ ಗೆಲುವಿಗೆ ನೆರವು ನೀಡಿದ ಜೊತೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಶ್ರೀಲಂಕಾ ಎ ವಿರುದ್ಧದ ಕೊನೆಯ ಪಂದ್ಯದಲ್ಲಿ ಪಂದ್ಯದಲ್ಲಿ ಭಾರತ ಎ ತಂಡ ಸೂಪರ್ ಓವರ್‌ನಲ್ಲಿ ಸೋಲು ಅನುಭವಿಸಿತ್ತು. ಅದರಲ್ಲಿಯೂ ವಿಶೇಷವಾಗಿ ವೈಭವ್ ಸೂರ್ಯವಂಶಿ ಅವರನ್ನು ಲಂಕಾ ಆಟಗಾರರು ಕೆರಳಿಸಿದ್ದರು. ಹಾಗಾಗಿ ಪಂದ್ಯದ ಬಳಿಕ ಹೈಡ್ರಾಮಾ ನಡೆದಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರಿಂದ ಆಕ್ರೋಶಕ್ಕೆ ಒಳಗಾಗಿದ್ದ ವೈಭವ್ ಸೂರ್ಯವಂಶಿ, ಫೈನಲ್ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಲಂಕಾ ತಂಡಕ್ಕೆ ತಿರುಗೇಟು ನೀಡಿದ್ದರು.
ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯ ಅರ್ಧಶತಕ ಸಿಡಿಸಿದ ಸೂರ್ಯವಂಶಿ
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ಎ ತಂಡದ ಪರ ಇನಿಂಗ್ಸ್ ಆರಂಭಿಸಿದ್ದ ವೈಭವ್ ಸೂರ್ಯವಂಶಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಹಾಗೂ ಅಂತಿಮವಾಗಿ 29 ಎಸೆತಗಳಲ್ಲಿ94 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯ ಸನಿಹದಲ್ಲಿ ವಿಕೆಟ್ ಒಪ್ಪಿಸಿದರು. ಇವರ ಸ್ಪೋಟಕ ಇನಿಂಗ್ಸ್‌ನಲ್ಲಿ 8 ಸಿಕ್ಸರ್ ಹಾಗೂ 10 ಬೌಂಡರಿಗಳನ್ನು ಸಿಡಿಸಿದ್ದರು. ಇವರ ಜೊತೆಗೆ ನಾಯಕ ತಿಲಕ್ ವರ್ಮಾ (67) ಅರ್ಧಶತಕ ಗಳಿಸಿದರೆ, ಪ್ರಿಯಾಂಶ್ ಆರ್ಯ (39 ರನ್) ಹಾಗೂ ಋತುರಾಜ್ ಗಾಯಕ್ವಾಡ್ (40 ರನ್) ಅವರು ತಂಡಕ್ಕೆ ನಿರ್ಣಾಯಕ ಕೊಡುಗೆ ನೀಡಿದರು.
India A beat Sri Lanka A by 66 runs to clinch the #TriNationSeries 2026 title 🏆
— BCCI (@BCCI) June 21, 2026
A brilliant campaign comes to a perfect end 👏💙
Scorecard ▶️ https://t.co/CnmyVyoyjy#SLAvINDA pic.twitter.com/hz1m4voody
ಅಂತಿಮವಾಗಿ ಭಾರತ ಎ ತಂಡ, ತನ್ನ ಪಾಲಿನ 50 ಓವರ್‌ಗಳಗೆ 9 ವಿಕೆಟ್‌ಗಳ ನಷ್ಟಕ್ಕೆ 377 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಶ್ರೀಲಂಕಾ ಎ ತಂಡಕ್ಕೆ 378 ರನ್‌ಗಳ ದೊಡ್ಡ ಗುರಿಯನ್ನು ನೀಡಿತು. ಆತಿಥೇಯರ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ವಹನ್ ಸಹನ್ ಅವರು 8 ಓವರ್‌ಗಳಿಗೆ ಕೇವಲ 36 ರನ್ ನೀಡಿ ಎರಡು ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿಕೊಂಡರು.
311ಕ್ಕೆ ಶ್ರೀಲಂಕಾ ಎ ತಂಡ ಆಲ್‌ಔಟ್
ಬಳಿಕ ಗುರಿಯನ್ನು ಹಿಂಬಾಲಿಸಿದ ಶ್ರೀಲಂಕಾ ಎ ತಂಡ, ಕೂಡ ಸದೀರ ಸಮರವಿಕ್ರಮ ಮತ್ತು ವನುಜಾ ಸಹನ್ ಅವರ ಅರ್ಧಶತಕಗಳ ಹೊರತಾಗಿಯೂ ಕೊನೆಯವರೆಗೂ ಕಠಿಣ ಹೋರಾಟವನ್ನು ನಡೆಸಿತ್ತು. ಆದರೆ, ಅಂತಿಮವಾಗಿ ಶ್ರೀಲಂಕಾ ಎ ತಂಡ 47.1 ಓವರ್‌ಗಳಿಗೆ 311 ರನ್‌ಗಳಿಗೆ ಆಲ್‌ಔಟ್ ಆಯಿತು. ಭಾರತ ಎ ಪರ ಯಶ್ ಠಾಕೂರ್ ಹಾಗೂ ವಿಪ್ರಜ್ ನಿಗಮನ್ ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು.
IND vs ENG: ವಿರಾಟ್ ಕೊಹ್ಲಿ ಇನ್; ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ!
ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 33 ರನ್ ಇರುವಾಗಲೇ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಸದೀರ ಸಮರವಿಕ್ರಮ 44 ಎಸೆತಗಳಲ್ಲಿ 52 ರನ್ ಗಳಿಸಿ ತಂಡಕ್ಕೆ ಗೆಲುವಿನ ಭರವಸೆ ನೀಡಿದ್ದರು, ಆದರೆ, ಅವರನ್ನು ಅಶೋಕ್ ಶರ್ಮಾ ಔಟ್ ಮಾಡಿದರು. ನಾಯಕ ಸಹನ್ ಅರಚಿಗೆ (38) ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ವನುಜ್ ಸಹನ್ ಅವರು 69 ಎಸೆತಗಳಲ್ಲಿ 62 ರನ್‌ಗಳನ್ನು ಗಳಿಸಿದರು. ವಿಜಯಕಾಂತ್ 39 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೂ ತಮ್ಮ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.