IND vs WI: ಬೆಂಗಳೂರಿನಲ್ಲಿ ಮಳೆ ಬಂದರೂ ಐದನೇ ಟಿ20ಐ ಪಂದ್ಯವನ್ನು ನಡೆಸಬಹುದು! ಹೇಗೆ ಗೊತ್ತೆ?
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಐದನೇ ಟಿ20ಐ ಪಂದ್ಯಕ್ಕೆ ಮಳೆ ಭೀತಿ ಉಂಟಾಗಿದೆ. ಅಕ್ಟೋಬರ್ 16 ರಂದು ಶುಕ್ರವಾರ ಬೆಂಗಳೂರಿನಲ್ಲಿ ಮಳೆಯಾಗಿದ್ದು, ಮೋಡ ಕವಿದ ವಾತಾವರಣವಿದೆ. ಪಂದ್ಯದ ದಿನ ಶನಿವಾರವೂ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಆದರೆ, ಮಳೆ ಬಂದರೂ ಎಂ ಚಿನ್ನಸ್ವಾಮಿ ಕ್ರೀಡಾಂಗನದಲ್ಲಿ ಪಂದ್ಯವನ್ನು ನಡೆಸಬಹುದು. ಇದರ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದನೇ ಟಿ20ಐ ಪಂದ್ಯ. -
ಬೆಂಗಳೂರು: ಎರಡು ವರ್ಷಗಳ ಬಳಿಕ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯಲಿದೆ, ಅಕ್ಟೋಬರ್ 17 ರಂದು ಶನಿವಾರ ಭಾರತ ಹಾಗೂ ವೆಸ್ಟ್ ಇಂಡೀಸ್ (IND vs WI) ತಂಡಗಳ ನಡುವಣ ಐದನೇ ಹಾಗೂ ಟಿ20ಐ ನಿರ್ಣಾಯಕ ಪಂದ್ಯ ನಡೆಯಲಿದೆ. ಆದರೆ, ಈ ಪಂದ್ಯಕ್ಕೆ ಮಳೆಯ ಭೀತಿ ಉಂಟಾಗಿದೆ. ಶುಕ್ರವಾರ ರಾಜಧಾನಿಯಲ್ಲಿ ಮಳೆಯಾಗಿದ್ದು, ಪಂದ್ಯದ ದಿನವೂ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಹಾಗಾಗಿ ಭಾರತ ತಂಡದ ಪಂದ್ಯವನ್ನು ವೀಕ್ಷಿಸಲು ಟಿಕೆಟ್ ಪಡೆದ ಕಾಯುತ್ತಿರುವ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ನಿರಾಶೆಯಾಗಿದೆ.
ಉಭಯ ತಂಡಗಳು ಸದ್ಯ ನಾಲ್ಕು ಪಂದ್ಯಗಳ ಅಂತ್ಯಕ್ಕೆ ಟಿ20ಐ ಸರಣಿಯಲ್ಲಿ 2-2 ಅಂತರದಲ್ಲಿ ಸಮಬಲ ಕಾಯ್ದುಕೊಂಡಿವೆ. ಇದೀಗ ಟಿ20ಐ ಸರಣಿಯನ್ನು ಗೆಲ್ಲಬೇಕೆಂದರೆ, ಐದನೇ ಪಂದ್ಯವನ್ನು ಗೆಲ್ಲಬೇಕಾಗುತ್ತದೆ. ಆದರೆ, ಮಳೆ ಭೀತಿ ಐದನೇ ಪಂದ್ಯಕ್ಕೆ ತಟ್ಟಿದೆ. ಒಂದು ಆಶಾದಾಯಕ ಸಂಗತಿ ಏನೆಂದರೆ, ಬೆಂಗಳೂರಿನಲ್ಲಿ ಎಷ್ಟೇ ಪ್ರಮಾಣದಲ್ಲಿ ಮಳೆ ಬಂದರೂ ಪಂದ್ಯವನ್ನು ನಡೆಸಬಹುದು. ಆದರೆ, ಮಳೆ ನಿಲ್ಲಬೇಕಷ್ಟೆ. ಪಂದ್ಯ ಸಂಜೆ 7:00 ಕ್ಕೆ ಆರಂಭವಾಗಲಿದೆ. ಪಂದ್ಯಕ್ಕೂ ಮುನ್ನ ಮಳೆ ಬಂದರೂ ಸಮಸ್ಯೆ ಇಲ್ಲ, ಆದರೆ ಪಂದ್ಯದ ವೇಳೆ ಬರಬಾರದಷ್ಟೆ. ಏಕೆಂದರೆ ಎಷ್ಟೇ ಜೋರಾಗಿ ಮಳೆ ಬಂದರೂ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್ ಏರ್ ಸಿಸ್ಟಮ್ ಇದೆ. ಮಳೆ ನಿಂತ ಬಳಿಕ 15 ರಿಂದ 30 ನಿಮಿಷಗಳಲ್ಲಿ ಮೈದಾನ ಒಣಗುತ್ತದೆ. ಬಳಿಕ ಪಂದ್ಯವನ್ನು ಮುಂದುವರಿಸಬಹುದು.
IND vs WI: ಭವನೇಶ್ವರ್ ಕುಮಾರ್ ಇನ್? ಐದನೇ ಟಿ20ಐಗೆ ಭಾರತ ತಂಡದಲ್ಲಿ 3 ಬದಲಾವಣೆ ಸಾಧ್ಯತೆ!
ಏನಿದು ಸಬ್ ಏರ್ ಸಿಸ್ಟಮ್?
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ 2017ರಲ್ಲಿ ಸಬ್ ಏರ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿತು. ಇದು ಭಾರತದ ಕ್ರಿಕೆಟ್ ಮೈದಾನಗಳಲ್ಲಿ ಮಳೆನೀರನ್ನು ತ್ವರಿತವಾಗಿ ಹೊರಹಾಕಲು ಬಳಸುವ ಪ್ರಮುಖ ಆಧುನಿಕ ವ್ಯವಸ್ಥೆಗಳಲ್ಲಿ ಒಂದಾಗಿದೆ. ಸಬ್ ಏರ್ ಸಿಸ್ಟಮ್ (SubAir System) ಎಂಬ ಆಧುನಿಕ ತಂತ್ರಜ್ಞಾನ, ಮೈದಾನದಲ್ಲಿನ ಹೆಚ್ಚುವರಿ ನೀರನ್ನು ವೇಗವಾಗಿ ಹೊರಹಾಕಲು ಹಾಗೂ ಮಳೆ ನಿಂತ ಬಳಿಕ ಮೈದಾನವನ್ನು ಬೇಗನೆ ಆಟಕ್ಕೆ ಸಿದ್ಧಗೊಳಿಸಲು ಸಹಾಯ ಮಾಡುತ್ತದೆ.
ಸಬ್ ಏರ್ ಸಿಸ್ಟಮ್ ಹೇಗೆ ಕೆಲಸ ಮಾಡುತ್ತದೆ?
1.ಭೂಮಿಯ ಕೆಳಗೆ ಪೈಪ್ಗಳ ವ್ಯವಸ್ಥೆ
ಮೈದಾನದ ಹುಲ್ಲಿನ ಕೆಳಗೆ ವಿಶೇಷ ರಂಧ್ರಗಳಿರುವ ಪೈಪ್ಗಳನ್ನು ಅಳವಡಿಸಲಾಗಿರುತ್ತದೆ. ಮಳೆ ನೀರು ಮಣ್ಣಿನ ಮೂಲಕ ಕೆಳಕ್ಕೆ ಹರಿದು ಈ ಪೈಪ್ಗಳನ್ನು ಸೇರುತ್ತದೆ.
2.ವ್ಯಾಕ್ಯೂಮ್ ಪಂಪ್ ಮೂಲಕ ನೀರು ಹೊರತೆಗೆಯುವುದು
ಶಕ್ತಿಶಾಲಿ ಪಂಪ್ಗಳು ನೀರನ್ನು ವೇಗವಾಗಿ ಹೀರಿಕೊಂಡು ಮೈದಾನದ ಹೊರಗಿನ ಸಂಗ್ರಹ ವ್ಯವಸ್ಥೆಗೆ ಕಳುಹಿಸುತ್ತವೆ. ಇದರಿಂದ ಔಟ್ಫೀಲ್ಡ್ನಲ್ಲಿ ನೀರು ನಿಲ್ಲುವ ಸಮಸ್ಯೆ ಕಡಿಮೆಯಾಗುತ್ತದೆ.
3.ಗಾಳಿಯ ಸಂಚಾರದಿಂದ ಮೈದಾನ ಒಣಗಿಸುವುದು
ಈ ವ್ಯವಸ್ಥೆ ಮಣ್ಣಿನ ಕೆಳಭಾಗದಲ್ಲಿ ಗಾಳಿಯ ಸಂಚಾರಕ್ಕೂ ಸಹಾಯ ಮಾಡುತ್ತದೆ. ಇದರಿಂದ ಹುಲ್ಲಿನ ಆರೋಗ್ಯ ಕಾಪಾಡುವುದರ ಜೊತೆಗೆ ಮೈದಾನವು ಬೇಗನೆ ಆಟಕ್ಕೆ ಸಿದ್ಧವಾಗಲು ನೆರವಾಗುತ್ತದೆ.
IND vs WI: ಆರ್ಸಿಬಿ ಫ್ಯಾನ್ಸ್ಗೆ ಸಿಹಿ ಸುದ್ದಿ, ಬೆಂಗಳೂರಿನಲ್ಲಿ ಕಣಕ್ಕೆ ಇಳಿಯಲಿರುವ ಭುವನೇಶ್ವರ್ ಕುಮಾರ್!
ಪಂದ್ಯದ ವಿವರ
ಐದನೇ ಟಿ20ಐ ಪಂದ್ಯ
ಭಾರತ vs ವೆಸ್ಟ್ ಇಂಡೀಸ್
ದಿನಾಂಕ: ಅಕ್ಟೋಬರ್ 17, 2026
ಸಮಯ: ಸಂಜೆ 07:00
ಸ್ಥಳ: ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಜಿಯೊಹಾಟ್ಸ್ಟಾರ್