ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ‌ಮುಂಬೈ ಎದುರು ಪಂಜಾಬ್‌ ಕಿಂಗ್ಸ್‌ ಸೋಲಿಗೆ ಈ ಆಟಗಾರನೇ ಕಾರಣ ಎಂದ ಶ್ರೇಯಸ್‌ ಅಯ್ಯರ್‌!

ಮುಂಬೈ ಇಂಡಿಯನ್ಸ್‌ ಎದುರು ಸೋಲುವ ಮೂಲಕ ಪಂಜಾಬ್‌ ಕಿಂಗ್ಸ್‌ ತಂಡದ ಸೋಲಿನ ಸರಣಿ ಮುಂದುವರಿದಿದೆ. ಸತತ ಐದು ಪಂದ್ಯಗಳನ್ನು ಸೋತಿರುವ ಪಂಜಾಬ್‌ ಕಿಂಗ್ಸ್‌ ತಂಡದ ಪ್ಲೇಆಫ್ಸ್‌ ಹಾದಿ ಕಠಿಣವಾಗಿದೆ. ಅಂದ ಹಾಗೆ ಪಂದ್ಯದ ಬಳಿಕ ಮಾತನಾಡಿದ ನಾಯಕ ಶ್ರೇಯಸ್‌ ಅಯ್ಯರ್‌ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಮುಂಬೈ ಎದುರು ಪಂಜಾಬ್ ಸೋಲಿಗೆ ಕಾರಣ ತಿಳಿಸಿದ ಶ್ರೇಯಸ್‌ ಅಯ್ಯರ್‌!

ಪಂಜಾಬ್‌ ಸೋಲಿಗೆ ಕಾರಣ ತಿಳಿಸಿದ ಶ್ರೇಯಸ್‌ ಅಯ್ಯರ್‌. -

Profile
Ramesh Kote May 15, 2026 10:51 AM

ಧರ್ಮಶಾಲಾ: ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ (MI vs PBKS Match Highlights) 6 ವಿಕೆಟ್‌ಗಳ ಸೋಲು ಅನುಭವಿಸಿದ ಬಳಿಕ ಪಂಜಾಬ್‌ ಕಿಂಗ್ಸ್‌ ತಂಡ ಸತತವಾಗಿ ಐದನೇ ಪಂದ್ಯದಲ್ಲಿ ಸೋಲುವಂತವಾಗಿದೆ. ಆ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ (IPL 2026) ಪಿಬಿಕೆಎಸ್‌ ತಂಡದ ಪ್ಲೇಆಫ್ಸ್‌ ಹಾದಿ ಕಠಿಣವಾಗಿದೆ. ಪಂದ್ಯದ ಸೋಲಿನ ಬಳಿಕ ಪಂಜಾಬ್‌ ಕಿಂಗ್ಸ್‌ ನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer) ಬೇಸರ ವ್ಯಕ್ತಪಡಿಸಿದ್ದಾರೆ. ತಿಲಕ್‌ ವರ್ಮಾ ಎದುರು ನಾವು ಸಂಪೂರ್ಣವಾಗಿ ಹಿನ್ನಡೆ ಅನುಭವಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ, ಅಲ್ಲದೆ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಲು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಗುರುವಾರ ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಪಂಜಾಬ್‌ ಕಿಂಗ್ಸ್‌, ಪ್ರಭ್‌ಸಿಮ್ರನ್‌ ಸಿಂಗ್‌ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 200 ರನ್‌ಗಳನ್ನು ಕಲೆ ಹಾಕಿತ್ತು, ಬಳಿಕ ಗುರಿಯನ್ನು ಹಿಂಬಾಲಿಸಿದ್ದ ಮುಂಬೈ ಇಂಡಿಯನ್ಸ್‌ ತಿಲಕ್‌ ವರ್ಮಾ (75* ರನ್‌) ಸ್ಪೋಟಕ ಅರ್ಧಶತಕದ ಮೂಲಕ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸಿತು.

ಪಂದ್ಯದ ಬಲಿಕ ಸ್ಟಾರ್‌ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಶ್ರೇಯಸ್‌ ಅಯ್ಯರ್‌, “ಖಂಡಿತವಾಗಿಯೂ ಇದು ಒಪ್ಪಿಕೊಳ್ಳಲು ತುಂಬಾ ಕಠಿಣವಾದ ಸೋಲು. ಆದರೆ ಇಲ್ಲಿ ಯಾವುದೇ ಒಂದು ಪರಿಸ್ಥಿತಿಯನ್ನು ಮಾತ್ರ ನಾನು ಹೊಣೆ ಮಾಡಲಿಚ್ಛಿಸುವುದಿಲ್ಲ. ಇದು ಅತ್ಯುತ್ತಮ ಕ್ರಿಕೆಟ್ ಪಂದ್ಯವಾಗಿತ್ತು. ಎರಡೂ ತಂಡಗಳು ಭರ್ಜರಿಯಾಗಿ ಹೋರಾಡಿದವು,” ಎಂದು ಹೇಳಿದ್ದಾರೆ.

MI vs PBKS: ಪಂಜಾಬ್‌ಗೆ ಸತತ 5ನೇ ಸೋಲು, ತಿಲಕ್‌ ಬ್ಯಾಟಿಂಗ್‌ನಿಂದ ಗೆದ್ದ ಮುಂಬೈ ಇಂಡಿಯನ್ಸ್‌!

ತಿಲಕ್‌ ವರ್ಮಾಗೆ ಶ್ರೇಯಸ್‌ ಅಯ್ಯರ್‌ ಮೆಚ್ಚುಗೆ

33 ಎಸೆತಗಳಲ್ಲಿ ಅಜೇಯ 75 ರನ್‌ ಗಳಿಸಿದ ತಿಲಕ್‌ ವರ್ಮಾ ಮುಂಬೈ ಇಂಡಿಯನ್ಸ್‌ ತಂಡವನ್ನು ಗೆಲ್ಲಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಹಾಗಾಗಿ ತಿಲಕ್‌ ವರ್ಮಾ ಅವರನ್ನು ಶ್ರೇಯಸ್‌ ಅಯ್ಯರ್‌ ಮುಕ್ತಕಂಠದಿಂದ ಗುಣಗಾನ ಮಾಡಿದರು.

"ಅವರು ಅದ್ಭುತವಾಗಿ ಆಡಿದರು. ತಮ್ಮ ಶಾಟ್‌ಗಳನ್ನು ಅತ್ಯಂತ ಚತುರವಾಗಿ ಆಯ್ಕೆ ಮಾಡಿಕೊಂಡರು ಮತ್ತು ಫೀಲ್ಡ್ ಅನ್ನು ಚೆನ್ನಾಗಿ ಬಳಸಿಕೊಂಡರು. ಆದ್ದರಿಂದ ಅವರಿಗೆ ಸಂಪೂರ್ಣ ಕ್ರೆಡಿಟ್ ಸಲ್ಲಬೇಕು,” ಎಂದು ಪಂಜಾಬ್‌ ಕಿಂಗ್ಸ್‌ ನಾಯಕ ಹೇಳಿದ್ದಾರೆ.

ಇದೇ ವೇಳೆ, ನಿಧಾನಗತಿಯ ಆರಂಭದ ಬಳಿಕ ಪಂಜಾಬ್‌ ಕಿಂಗ್ಸ್‌ ಇನಿಂಗ್ಸ್‌ಗೆ ಹೊಸ ಚೈತನ್ಯ ತುಂಬಿದ ಅಝಮತ್‌ವುಲ್ಲಾ ಒಮರ್ಜಾರ್‌ (17 ಚೆಂಡುಗಳಲ್ಲಿ 38 ರನ್) ಅವರನ್ನೂ ಅಯ್ಯರ್‌ ಶ್ಲಾಘಿಸಿದರು.

IPL 2026: ಮುಂಬೈ ಇಂಡಿಯನ್ಸ್‌ ಎದುರು ಸೋತ ಪಂಜಾಬ್‌ ಕಿಂಗ್ಸ್‌ ತಂಡದ ಪ್ಲೇಆಫ್ಸ್‌ ಲೆಕ್ಕಾಚಾರ!

“ಒಂದು ಹಂತದಲ್ಲಿ ನಾವು ಸುಮಾರು 170 ರಿಂದ 180 ರನ್‌ಗಳ ಗುರಿಯತ್ತ ಸಾಗುತ್ತಿದ್ದೇವೆ ಎಂದು ಅನಿಸಿತ್ತು. ಆದರೆ ಅಲ್ಲಿಂದ ಅವರು ಪಂದ್ಯದ ದಿಕ್ಕನ್ನು ಸಂಪೂರ್ಣವಾಗಿ ನಮ್ಮತ್ತ ತಿರುಗಿಸಿದರು. ಅವರು ಬಾರಿಸಿದ ಸ್ಕೂಪ್ ಸಿಕ್ಸರ್‌ಗಳು ಮಹತ್ವದ್ದಾಗಿದ್ದವು. 16ನೇ ಅಥವಾ 17ನೇ ಓವರ್‌ನಿಂದ ನಮ್ಮ ಪಂದ್ಯದ ನಮ್ಮ ಪರ ಬದಲಾಯಿತು ಮತ್ತು ತಂಡವನ್ನು 200 ರನ್‌ಗಳವರೆಗೆ ಕೊಂಡೊಯ್ಯುವುದು ಅವರಿಂದಾದ ಶ್ಲಾಘನೀಯ ಪ್ರದರ್ಶನವಾಗಿತ್ತು,” ಎಂದು ಶ್ರೇಯಸ್‌ ಅಯ್ಯರ್‌ ತಿಳಿಸಿದ್ದಾರೆ.

ಪಂಜಾಬ್‌ ಕಿಂಗ್ಸ್‌ ಪ್ಲೇಆಫ್ಸ್‌ ಲೆಕ್ಕಾಚಾರ

ಪಂಜಾಬ್‌ ಕಿಂಗ್ಸ್‌ ತಂಡ ಇಲ್ಲಿಯವರೆಗೂ ಆಡಿದ 12 ಪಂದ್ಯಗಳಲ್ಲಿ 6 ರಲ್ಲಿ ಗೆಲುವು ಪಡೆಯುವ ಮೂಲಕ ಒಟ್ಟು 13 ಅಂಕಗಳನ್ನು ಕಲೆ ಹಾಕಿದೆ. ಪಂಜಾಬ್‌ ತಂಡ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬೇಕೆಂದರೆ, ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆಯಬೇಕಾಗಿದೆ. ಒಂದು ವೇಳೆ ಎರಡರಲ್ಲಿ ಒಂದರಲ್ಲಿ ಗೆದ್ದರೂ ಪಿಬಿಕೆಎಸ್‌ ತಂಡದ ಪ್ಲೇಆಫ್ಸ್‌ ಭವಿಷ್ಯ ಇನ್ನುಳಿದ ತಂಡಗಳ ಫಲಿತಾಂಶದ ಮೇಲೆ ಅವಲಂಬಿಸಿದೆ.