ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕನೋಲಿ ಶತಕ ವ್ಯರ್ಥ, ಪಂಜಾಬ್‌ ವಿರುದ್ಧ ಗೆದ್ದು ಅಗ್ರ ಸ್ಥಾನಕ್ಕೇರಿದ ಸನ್‌ರೈಸರ್ಸ್‌ ಹೈದರಾಬಾದ್‌!

PBKS vs SRH Match Highlights: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, ಎದುರಾಳಿ ಪಂಜಾಬ್‌ ಕಿಂಗ್ಸ್‌ ಎದುರು 33 ರನ್‌ಗಳ ಗೆಲುವು ಪಡೆಯಿತು. ಆ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೆ ಲಗ್ಗೆ ಇಟ್ಟಿತು.

ಪಂಜಾಬ್‌ ಕಿಂಗ್ಸ್‌ ಎದುರು ಗೆದ್ದು ಅಗ್ರ ಸ್ಥಾನಕ್ಕೇರಿದ ಸನ್‌ರೈಸರ್ಸ್‌!

ಪಂಜಾಬ್‌ ಕಿಂಗ್ಸ್‌ ಎದುರು ಗೆದ್ದು ಅಗ್ರ ಸ್ಥಾನಕ್ಕೇರಿದ ಸನ್‌ರೈಸರ್ಸ್‌. -

Profile
Ramesh Kote May 6, 2026 11:13 PM

ಹೈದರಾಬಾದ್‌: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಸನ್‌ರೈಸರ್ಸ್‌ ಹೈದರಾಬಾದ್‌ (SRH) ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ 49ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ (PBKS) ಎದುರು 33 ರನ್‌ಗಳ ಗೆಲುವು ಪಡೆಯಿತು. ಟೂರ್ನಿಯಲ್ಲಿ ಏಳನೇ ಜಯ ದಾಖಲಿಸಿದ ಎಸ್‌ಆರ್‌ಎಚ್‌ ಪಾಯಿಂಟ್ಸ್‌ ಟೇಬಲ್‌ನಲ್ಲಿ ಸೋತ ಪಿಬಿಕೆಎಸ್‌ ತಂಡವನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಇನ್ನು ಕೂಪರ್‌ ಕನೋಲಿ ಏಕಾಂಗಿ ಹೋರಾಟದ ಶತಕದ ಹೊರತಾಗಿಯೂ ಇತರೆ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಹಾಗೂ ದುರ್ಬಲ ಫೀಲ್ಡಿಂಗ್‌ನಿಂದಾಗಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ತಂಡ ಎರಡನೇ ಸ್ಥಾನಕ್ಕೆ ಕುಸಿಯಿತು.

ಬುಧವಾರ ಇಲ್ಲಿನ ರಾಜೀವ್‌ ಗಾಂಧಿ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆತಿಥೇಯ ಸನ್‌ರೈಸರ್ಸ್‌ ನೀಡಿದ್ದ 236 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ ಕೇವಲ ನಾಲ್ಕು ರನ್‌ ಇರುವಾಗ ಓಪನರ್ಸ್‌ ಪ್ರಿಯಾಂಶ್‌ ಆರ್ಯ ಹಾಗೂ ಪ್ರಭ್‌ಸಿಮ್ರನ್‌ ಸಿಂಗ್‌ ಅವರನ್ನು ಕ್ರಮವಾಗಿ ಪ್ಯಾಟ್‌ ಕಮಿನ್ಸ್‌ ಮತ್ತು ನಿತೀಶ್‌ ರೆಡ್ಡಿ ಔಟ್‌ ಮಾಡಿದರು. ನಂತರ ನಾಲ್ಕನೇ ಓವರ್‌ನಲ್ಲಿ ಇಶಾನ್‌ ಮಾಲಿಂಗ ಅವರು ನಾಯಕ ಶ್ರೇಯಸ್‌ ಅಯ್ಯರ್‌ ಅವರನ್ನು ಔಟ್‌ ಮಾಡಿದರು. ಆ ಮೂಲಕ ಪಂಜಾಬ್‌ ಕೇವಲ 23 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು.

RCB vs LSG ಪಂದ್ಯಕ್ಕೆ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌, ಹೆಡ್‌ ಟು ಹೆಡ್‌ ದಾಖಲೆ!

ಕೂಪರ್‌ ಕನೋಲಿ ಏಕಾಂಗಿ ಹೋರಾಟ ವ್ಯರ್ಥ

ಮಾರ್ಕಸ್‌ ಸ್ಟೋಯ್ನಿಸ್‌ (28) ಹಾಗೂ ಶುಭಾಂಗ್‌ ಶೆಡ್ಗೆ (25) ಅವರು ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು. ಶಶಾಂಕ್‌ ಸಿಂಗ್‌ ಕೂಡ ನಿರಾಶೆ ಮೂಡಿಸಿದರು. ಆದರೆ, ಒಂದು ತುದಿಯಲ್ಲಿ ನಿಂತು ಕೊನೆಯವರೆಗೂ ಏಕಾಂಗಿ ಹೋರಾಟ ನಡೆಸಿದ ಕೂಪರ್‌ ಕನೋಲಿ, ಎಸ್‌ಆರ್‌ಎಚ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ 59 ಎಸೆತಗಳಲ್ಲಿ 8 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ ಅಜೇಯ 107 ರನ್‌ ಗಳಿಸಿದರೂ ಇತರೆ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ತಮ್ಮ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂಜಾಬ್‌ ಕಿಂಗ್ಸ್‌ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 202 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಸೋಲು ಒಪ್ಪಿಕೊಂಡಿತು. ಶ್ರೇಯಸ್‌ ಅಯ್ಯರ್‌ ಪಡೆಗೆ ಇದು ಸತತ ಮೂರನೇ ಸೋಲಾಯಿತು. ಎಸ್‌ಆರ್‌ಎಚ್‌ ಪರ ನಾಯಕ ಪ್ಯಾಟ್‌ ಕಮಿನ್ಸ್‌ ಎರಡು ವಿಕೆಟ್‌ ಕಿತ್ತರು.



ಸನ್‌ರೈಸರ್ಸ್‌ಗೆ ಉತ್ತಮ ಆರಂಭ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಓಪನರ್ಸ್‌ ಅಭಿಷೇಕ್‌ ಶರ್ಮಾ ಹಾಗೂ ಟ್ರಾವಿಸ್‌ ಹೆಡ್‌ 54 ರನ್‌ ಜೊತೆಯಾಟವನ್ನು ಆಡುವ ಮೂಲಕ ಭರ್ಜರಿ ಆರಂಭವನ್ನು ತಂದುಕೊಟ್ಟರು. ಆರಂಭದಲ್ಲಿ ಅಬ್ಬರಿಸಿದ ಅಭಿಷೇಕ್‌ ಶರ್ಮಾ ಕೇವಲ 13 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ ಎರಡು ಬೌಂಡರಿಗಳೊಂದಿಗೆ 35 ರನ್‌ ಗಳಿಸಿ ಉತ್ತಮ ಆರಂಭ ಪಡೆದರೂ ಅವರನ್ನು ಔಟ್‌ ಮಾಡುವಲ್ಲಿ ಲಾಕಿ ಫರ್ಗ್ಯೂಸನ್‌ ಯಶಸ್ವಿಯಾದರು. ಅಭಿಷೇಕ್‌ ವಿಕೆಟ್‌ ಒಪ್ಪಿಸಿದ ಬಳಿಕ ಮತ್ತೊಬ್ಬ ಆರಂಭಿಕ ಟ್ರಾವಿಸ್‌ ಹೆಡ್‌ 19 ಎಸೆತಗಳಲ್ಲಿ 38 ರನ್‌ ಗಳಿಸಿದ ಬಳಿಕ ಯುಜ್ವೇಂದ್ರ ಚಹಲ್‌ ಸ್ಪಿನ್‌ ಮೋಡಿಗೆ ಔಟ್‌ ಆದರು.



ಪಂಜಾಬ್‌ಗೆ ದುಬಾರಿಯಾದ ಮೂರು ಕ್ಯಾಚ್‌ ಡ್ರಾಪ್

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಇಶಾನ್‌ ಕಿಶನ್‌ ಅವರು 8ನೇ ಓವರ್‌ನಲ್ಲಿ ಲಾಕಿ ಫರ್ಗ್ಯೂಸನ್‌ ಅವರ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚ್‌ ಕೊಟ್ಟಿದ್ದರು. ಆದರೆ, ಕ್ಯಾಚ್‌ ಅನ್ನು ಕೂಪರ್‌ ಕನೋಲಿ ಕೈಚೆಲ್ಲಿದರು. ನಂತರ 9ನೇ ಓವರ್‌ ಹಾಗೂ 11ನೇ ಓವರ್‌ಗಳಲ್ಲಿ ಯುಜ್ವೇಂದ್ರ ಚಹಲ್‌ ಬೌಲಿಂಗ್‌ನಲ್ಲಿ ಹೆನ್ರಿಕ್‌ ಕ್ಲಾಸೆನ್‌ ಅವರು ಎರಡು ಜೀವದಾನ ಪಡೆದಿದ್ದರು. ಈ ಎರಡೂ ಕ್ಯಾಚ್‌ಗಳನ್ನು ಕ್ರಮವಾಗಿ ಶಶಾಂಕ್‌ ಸಿಂಗ್‌ ಹಾಗೂ ಲಾಕಿ ಫರ್ಗ್ಯೂಸನ್‌ ಬಿಟ್ಟಿದ್ದರು. ಇದು ಪಂದ್ಯದ ದಿಕ್ಕನ್ನೇ ಬದಲಿಸಿತು.



ಕಿಶನ್‌, ಕ್ಲಾಸೆನ್‌ ಅರ್ಧಶತಕ

ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ತಮಗೆ ಸಿಕ್ಕ ಜೀವದಾನವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡರು. ಇಶಾನ್‌ ಕಿಶನ್‌ 32 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 2 ಬೌಂಡರಿಗಳೊಂದಿಗೆ 55 ರನ್‌ ಚಚ್ಚಿದರೆ, ಎರಡು ಜೀವದಾನವನ್ನು ಸದುಪಯೋಪಡಿಸಿಕೊಂಡ ಹೆನ್ರಿಕ್‌ ಕ್ಲಾಸೆನ್‌, 43 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಮೂಲಕ 69 ರನ್‌ ಸಿಡಿಸಿದರು. ಕಿಶನ್‌ ಹಾಗೂ ಕ್ಲಾಸೆನ್‌ ಮುರಿಯದ ಮೂರನೇ ವಿಕೆಟ್‌ಗೆ 88 ರನ್‌ಗಳನ್ನು ಗಳಿಸಿದರು. ಇನ್ನು ಕೊನೆಯಲ್ಲಿ ನಿತೀಶ್‌ಕುಮಾರ್‌ ರೆಡ್ಡಿ 13 ಎಸೆತಗಳಲ್ಲಿ ಅಜೇಯ 29 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಸನ್‌ರೈಸರ್ಸ್‌ ಹೈದರಾಬಾದ್‌ ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 235 ರನ್‌ಗಳನ್ನು ಕಲೆ ಹಾಕಿತು.