RCB vs GT: ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮೊದಲನೇ ಕ್ವಾಲಿಫೈಯರ್ ದಾಖಲೆಗಳು!
RCB's Qualifier 1 Records: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮೇ 27ರಂದು ನಡೆಯುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೂ ಮುನ್ನ ಆರ್‌ಸಿಬಿ ತಂಡದ ಮೊದಲನೇ ಕ್ವಾಲಿಫೈಯರ್ ದಾಖಲೆಗಳನ್ನು ಇಲ್ಲಿ ವಿವರಿಸಲಾಗಿದೆ.
ಆರ್‌ಸಿಬಿಯ ಮೊದಲನೇ ಕ್ವಾಲಿಫೈಯರ್ ದಾಖಲೆಗಳು. -
ನವದೆಹಲಿ: ಪ್ರಸ್ತುತ ಸಾಗುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯು ನಿರ್ಣಾಯಕ ಹಂತಕ್ಕೆ ತಲುಪಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ (RCB vs GT) ಗುಜರಾತ್ ಟೈಟನ್ಸ್ ಎದುರು ಆಡಲು ಸಜ್ಜಾಗುತ್ತಿದೆ. ಈ ಹೈವೋಲ್ಟೇಜ್ ಪಂದ್ಯ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಮೇ 26 ರಂದು ಮಂಗಳವಾರ ಸಂಜೆ 07:30ಕ್ಕೆ ಆರಂಭವಾಗಲಿದೆ. ಆರ್‌ಸಿಬಿ ಹಾಗೂ ಜಿಟಿ ಎರಡೂ ತಂಡಗಳು ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಅಲಂಕರಿಸಿವೆ, ಹಾಗಾಗಿ ಫೈನಲ್‌ಗೆ ಪ್ರವೇಶಿಸಲು ಎರಡು ಅವಕಾಶಗಳನ್ನು ಪಡೆಯಲಿವೆ.
ಕಳೆದ 2025ರ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಆರ್‌ಸಿಬಿ ತಂಡ, ಸತತ ಎರಡನೇ ಬಾರಿಯೂ ಮೊದಲನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿದೆ. ಇದೀಗ ಜಿಟಿ ಎದುರು ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ, ಲೀಗ್ ಹಂತದಲ್ಲಿ ಎರಡನೇ ಬಾರಿ ಮುಖಾಮುಖಿಯಲ್ಲಿ ಗುಜರಾತ್ ಟೈಟನ್ಸ್ ಎದುರು ಆರ್‌ಸಿಬಿ ಸೋಲು ಅನುಭವಿಸಿತ್ತು. ಹಾಗಾಗಿ ಮೊದಲನೇ ಕ್ವಾಲಿಫೈಯರ್‌ನಲ್ಲಿ ಬೆಂಗಳೂರು ತಂಡ ಬಹಳ ಎಚ್ಚರಿಕೆಯಿಂದ ಆಡಬೇಕಾಗುತ್ತದೆ. ಅಂದ ಹಾಗೆ ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ತಂಡದ ಮೊದಲನೇ ಕ್ವಾಲಿಫೈಯರ್‌ದಾಖಲೆಯನ್ನು ಇಲ್ಲಿ ವಿವರಿಸಲಾಗಿದೆ.
ಮೊದಲನೇ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿಯ ದಾಖಲೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಲ್ಕನೇ ಬಾರಿ ಮೊದಲನೇ ಕ್ವಾಲಿಫೈಯರ್‌ನಲ್ಲಿ ಆಡಲು ಸಜ್ಜಾಗಿದೆ. 2011ರಲ್ಲಿ ಐಪಿಎಲ್ ಟೂರ್ನಿಯಲ್ಲಿ ಮೊಇದಲ ಬಾರಿ ಪ್ಲೇಆಫ್ ಸ್ವರೂಪವನ್ನು ಪರಿಚಯಿಸಲಾಯಿತು. ಅದೇ ವರ್ಷ ಆರ್‌ಸಿಬಿ, ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆಡಿತ್ತು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ವಿಕೆಟ್‌ಗಳ ಸೋಲನ್ನು ಅನುಭವಿಸಿತ್ತು. 2016ರಲ್ಲಿ ಆರ್‌ಸಿಬಿ 16 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿತ್ತು. ಆ ವೇಳೆ ಬೆಂಗಳೂರು ತಂಡ ಮೊದಲನೇ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಲಯನ್ಸ್ ಅನ್ನು ಮಣಿಸಿತ್ತು. ಆ ಪಂದ್ಯದಲ್ಲಿ ಪವರ್‌ಪ್ಲೇ ಸಮಯದಲ್ಲಿಯೇ ಆರ್‌ಸಿಬಿ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಅಂತಿಮವಾಗಿ ಎಬಿ ವಿಲಿಯರ್ಸ್ ಅರ್ಧಶತಕದ ಬಲದಿಂದ ಆರ್‌ಸಿಬಿ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿತ್ತು.
2025ರ ಐಪಿಎಲ್ ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಿತು. ಆ ಪಂದ್ಯವನ್ನು ಬೆಂಗಳೂರು ತಂಡ 60 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್‌ಗಳಿಂದ ಗೆದ್ದಿತು. ಅಂದಹಾಗೆ ಆರ್‌ಸಿಬಿ ಐಪಿಎಲ್ ಇತಿಹಾಸದಲ್ಲಿ ಮೂರು ಬಾರಿ ಮೊದಲ ಕ್ವಾಲಿಫೈಯರ್ ಆಡಿದೆ ಹಾಗೂ ಅವುಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಿದೆ. ಆರ್‌ಸಿಬಿ ಮೊದಲನೇ ಕ್ವಾಲಿಫೈಯರ್ ಆಡಿದಾಗಲೆಲ್ಲಾ ಫೈನಲ್ ತಲುಪಿದೆ.
ಐಪಿಎಲ್ ಮೊದಲನೇ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿಯ ದಾಖಲೆ
2011ರ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ಎದುರು ಆರ್‌ಸಿಬಿಗೆ 6 ವಿಕೆಟ್‌ಗಳ ಸೋಲು
2016ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಲಯನ್ಸ್ ಎದುರು ಆರ್‌ಸಿಬಿಗೆ 4 ವಿಕೆಟ್‌ಗಳ ಗೆಲುವು
2024ರ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಎದುರು ಆರ್‌ಸಿಬಿಗೆ 8 ವಿಕೆಟ್‌ಗಳ ಗೆಲುವು
ಆರ್‌ಸಿಬಿಯ ಪ್ಲೇಆಫ್ ದಾಖಲೆ
008ರಿಂದ ಇಲ್ಲಿಯವರೆಗೂ ಆರ್‌ಸಿಬಿ ಒಟ್ಟು 17 ಬಾರಿ ಪ್ಲೇಫ್ಸ್ ಪಂದ್ಯಗಳನ್ನು ಆಡಿದೆ. ಈ ಪಂದ್ಯಗಳಲ್ಲಿ ತಂಡವು 7 ಗೆಲುವುಗಳು ಮತ್ತು 10 ಸೋಲುಗಳನ್ನು ದಾಖಲಿಸಿದೆ. 2009 ರಲ್ಲಿ ಆರ್‌ಸಿಬಿ ಫೈನಲ್‌ನಲ್ಲಿ ಸೋತ ನಂತರ ಹೊರಬಿತ್ತು, ಆದರೆ 2010 ರಲ್ಲಿ ಬೆಂಗಳೂರು ತಂಡ ಸೆಮಿಫೈನಲ್‌ನಲ್ಲಿ ಸೋತಿತ್ತು. 2011 ರಲ್ಲಿ ಆರ್‌ಸಿಬಿ ರನ್ನರ್-ಅಪ್ ಆಗಿತ್ತು. 2015ರಲ್ಲಿ ತಂಡದ ಅಭಿಯಾನವು ಎರಡನೇ ಕ್ವಾಲಿಫೈಯರ್‌ನಲ್ಲಿ ಕೊನೆಗೊಂಡಿತು, ಆದರೆ 2016ರಲ್ಲಿ ಫೈನಲ್ ತಲುಪಿತ್ತಾದರೂ ಸೋಲನ್ನು ಅನುಭವಿಸಿತ್ತು. 2020 ಮತ್ತು 2021 ಎರಡರಲ್ಲೂ ಆರ್‌ಸಿಬಿ ಎಲಿಮಿನೇಟರ್ ಪಂದ್ಯವನ್ನು ಸೋತ ನಂತರ ಹೊರಬಿತ್ತು. 2022 ರಲ್ಲಿ ಎಲಿಮಿನೇಟರ್ ಅನ್ನು ಗೆದ್ದಿತು ಆದರೆ ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ ವಿರುದ್ಧ ಸೋತಿತು. 2024 ರಲ್ಲಿ ತಂಡವು ಎಲಿಮಿನೇಟರ್‌ನಲ್ಲಿ ಸೋಲು ಅನುಭವಿಸಿತ್ತು.