2027ರ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗೆ ಇಶಾನ್ ಕಿಶನ್ ನಾಯಕ!
IPL 2027: ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಅವರು 2027ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡುವುದಿಲ್ಲ ಎಂಬ ಸುಳಿವು ನೀಡಿದ ಬೆನ್ನಲ್ಲೆ ಸನ್‌ರೈಸರ್ಸ್ ಹೈದರಾಬಾದ್ ತಂಡ, ವಿಕೆಟ್ ಕೀಪರ್ ಇಶಾನ್ ಕಿಶನ್‌ಗೆ ಪೂರ್ಣ ಪ್ರಮಾಣದ ನಾಯಕತ್ವ ನೀಡುವ ಸಾಧ್ಯತೆ ಇದೆ.
ಇಶಾನ್ ಕಿಶನ್‌ಗೆ ಸನ್‌ರೈಸರ್ಸ್ ಹೈದರಾಬಾದ್ ನಾಯಕತ್ವ. -
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ (IPL 2026) ಟೂರ್ನಿಯಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಸೋಲು ಅನುಭವಿಸುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ. ಇದರ ಬೆನ್ನಲ್ಲೆ ಎಸ್‌ಆರ್‌ಎಚ್ ತಂಡದ ನಾಯಕತ್ವದ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಏಕೆಂದರೆ ಪ್ಯಾಟ್ ಕಮಿನ್ಸ್ (Pat Cummins) ಅವರು ಮುಂದಿನ ಆವೃತ್ತಿಗೆ ಅಲಭ್ಯರಾಗುವ ಬಗ್ಗೆ ಸುಳಿವು ನೀಡಿದ್ದಾರೆ. ಹಾಗಾಗಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರಿಗೆ ಮುಂದಿನ ಆವೃತ್ತಿಯಲ್ಲಿ ಎಸ್‌ಆರ್‌ಎಚ್‌ಗೆ ಪೂರ್ಣ ಪ್ರಮಾಣದ ನಾಯಕತ್ವ ನೀಡುವ ಸಾಧ್ಯತೆ ಇದೆ.
ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರು ರಾಷ್ಟ್ರೀಯ ತಂಡದ ಮುಂಬರುವ ಬಿಡುವಿಲ್ಲದ ವೇಳಾಪಟ್ಟಿಯತ್ತ ಗಮನ ನೀಡಲಿದ್ದಾರೆ. ಈ ವೇಳಾಪಟ್ಟಿಯಲ್ಲಿ ಭಾರತದ ವಿರುದ್ಧ ವಿದೇಶದಲ್ಲಿ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿ ಸೇರಿದಂತೆ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಪ್ರಮುಖ ಪಂದ್ಯಗಳು ಸೇರಿವೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯು 20ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಜನವರಿ 21ರಿಂದ ಮಾರ್ಚ್ 3ರವರೆಗೆ ನಡೆಯಲಿದೆ. ಇದಾದ ಬಳಿಕ, ಜೂನ್‌ನಲ್ಲಿ ಐಪಿಎಲ್ ಮುಕ್ತಾಯವಾದ ತಕ್ಷಣವೇ ಸಾಂಪ್ರದಾಯಿಕ ದಿ ಆಷಸ್ ಸರಣಿಯೂ ಆಯೋಜನೆಯಾಗಿದೆ.
ಭುವನೇಶ್ವರ್‌ಗೆ ಎರಡನೇ ಸ್ಥಾನ: 2026ರ ಐಪಿಎಲ್ ಟೂರ್ನಿಯಲ್ಲಿ ಟಾಪ್ 5 ವಿಕೆಟ್ ಟೇಕರ್ಸ್!
ಇಂಗ್ಲೆಂಡ್ ವಿರುದ್ಧದ ಕಠಿಣ ಸರಣಿಗೆ ಮುನ್ನ ಪ್ಯಾಟ್ ಕಮಿನ್ಸ್ ಪಡೆ ಅರ್ಹತೆ ಪಡೆದರೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯವನ್ನೂ ಆಡಬೇಕಾಗಬಹುದು. ಇದರ ನಂತರ, 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಆಫ್ರಿಕಾದಲ್ಲಿ ನಡೆಯಲು ನಿಗದಿಯಾಗಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡಕ್ಕೆ ಮುಂದಿನ ಕೆಲವು ವರ್ಷಗಳಲ್ಲಿ ಅತ್ಯಂತ ಸವಾಲಿನ ಮತ್ತು ನಿರಂತರ ಕ್ರಿಕೆಟ್ ವೇಳಾಪಟ್ಟಿ ಎದುರಾಗಲಿದೆ.
ಪ್ಯಾಟ್ ಕಮಿನ್ಸ್ ಅವರು ಮುಂದಿನ ವರ್ಷ ತಮ್ಮ ವೇಳಾಪಟ್ಟಿಯಲ್ಲಿ ಕೆಲವು ತ್ಯಾಗಗಳನ್ನು ಮಾಡಬೇಕಾಗಬಹುದು ಎಂದು ಒಪ್ಪಿಕೊಂಡಿದ್ದಾರೆ. ಆದರೆ, ತಮ್ಮ ಆದ್ಯತೆಗಳಲ್ಲಿ ಟೆಸ್ಟ್ ಕ್ರಿಕೆಟ್ ಮತ್ತು ಏಕದಿನ ವಿಶ್ವಕಪ್ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
IPL 2026: ವೈಭವ್ ಸೂರ್ಯವಂಶಿಗೆ ವಿರಾಟ್ ಕೊಹ್ಲಿ ನೀಡಿದ್ದ ಸಂದೇಶವನ್ನು ರಿವೀಲ್ ಮಾಡಿದ ಆರ್‌ಸಿಬಿ!
"ಮುಂದಿನ ವರ್ಷ ಯಾವುದಾದರೂ ಒಂದು ಹಂತದಲ್ಲಿ ಕೆಲವು ಪಂದ್ಯಗಳು ಅಥವಾ ಟೂರ್ನಿಗಳನ್ನು ಕೈಬಿಡಬೇಕಾಗಬಹುದು. ಆದರೆ ಅದು ಟೆಸ್ಟ್ ಪಂದ್ಯಗಳಾಗಲಿ ಅಥವಾ ಏಕದಿನ ವಿಶ್ವಕಪ್ ಆಗಲಿ ಖಂಡಿತವಾಗಿಯೂ ಇರುವುದಿಲ್ಲ. ಸಮಯ ಹತ್ತಿರ ಬಂದಾಗ ನಾನು ನಿರ್ಧಾರ ಕೈಗೊಳ್ಳುತ್ತೇನೆ ಮತ್ತು ಫ್ರಾಂಚೈಸಿಯೊಂದಿಗೆ ಚರ್ಚಿಸಿ ಯಾವುದು ಸೂಕ್ತ ಎಂಬುದನ್ನು ಪರಿಶೀಲಿಸುತ್ತೇನೆ. ಪರಿಸ್ಥಿತಿಗಳು ಬದಲಾಗಬಹುದು. ಇತ್ತೀಚೆಗೆ ನನಗೆ ಕೆಲವು ಗಾಯದ ಸಮಸ್ಯೆಗಳು ಎದುರಾಗಿವೆ. ಆದ್ದರಿಂದ ಈಗಲೇ ಯಾವುದೇ ವಿಷಯವನ್ನು ಖಚಿತಪಡಿಸಿಕೊಳ್ಳಲು ನಾನು ಬಯಸುವುದಿಲ್ಲ. ನನಗೆ ಯಾವಾಗಲೂ ಟೆಸ್ಟ್ ಪಂದ್ಯಗಳು ಮತ್ತು ಏಕದಿನ ವಿಶ್ವಕಪ್‌ವೇ ಮೊದಲ ಆದ್ಯತೆ. ಭಾರತದ ವಿರುದ್ಧದ ಸಂಪೂರ್ಣ ಸರಣಿಯಲ್ಲಿ ಆಡಿದರೆ, ನಂತರ ಅತ್ಯಂತ ಕಠಿಣವಾಗಿರುವ ಆಷಸ್ ಸರಣಿಗೆ ಮುನ್ನ ನನಗೆ ಸ್ವಲ್ಪ ವಿಶ್ರಾಂತಿ ಅಗತ್ಯವಾಗಬಹುದು," ಎಂದು ಕಮಿನ್ಸ್ ಹೇಳಿದ್ದಾರೆ ಎಂದು ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.
2027ರಲ್ಲಿ ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಮಹತ್ವದ ವಿದೇಶಿ ಟೆಸ್ಟ್ ಸರಣಿಗಳಿಗೆ ಮುನ್ನ, ಆಸ್ಟ್ರೇಲಿಯಾ ತಂಡ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಹಿನ್ನೆಲೆಯಲ್ಲಿ ಅನುಭವಿ ವೇಗದ ಬೌಲಿಂಗ್ ಪಡೆಯ ಮೇಲಿನ ಕೆಲಸದ ಒತ್ತಡವನ್ನು ನಿರ್ವಹಿಸುವ ಉದ್ದೇಶದಿಂದ ತಾವು ಸೇರಿದಂತೆ ಮಿಚೆಲ್ ಸ್ಟಾರ್ಕ್ ಮತ್ತು ಜಾಶ್ ಹೇಝಲ್‌ವುಡ್ ಅವರಿಗೆ ಕೆಲವು ಪಂದ್ಯಗಳಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎಂದು ಕಮಿನ್ಸ್ ಹೇಳಿದ್ದಾರೆ.