ಜಸ್‌ಪ್ರೀತ್ ಬುಮ್ರಾಗಿಂತ ವರುಣ್ ಚಕ್ರವರ್ತಿ ಮೌಲ್ಯಯುತ ಆಟಗಾರ ಎಂದ ಎಸ್ ಬದ್ರಿನಾಥ್!
ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್ ಎಸ್ ಬದ್ರಿನಾಥ್ ಅವರು ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಟೀಮ್ ಇಂಡಿಯಾದಲ್ಲಿ ಜಸ್‌ಪ್ರೀತ್ ಬುಮ್ರಾ ಅವರಿಗಿಂತ ಸ್ಪಿನ್ನರ್ ವರುಣ್ ಚಕ್ರವರ್ತಿ ಅತ್ಯಂತ ಮೌಲ್ಯಯುತ ಆಟಗಾರ ಎಂದು ಮಾಜಿ ಕ್ರಿಕೆಟಿಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವರುಣ್ ಚಕ್ರವರ್ತಿಯನ್ನು ಅತ್ಯಂತ ಮೌಲ್ಯಯುತ ಬೌಲರ್ ಎಂದ ಎಸ್ ಬದ್ರಿನಾಥ್. -
ನವದೆಹಲಿ: ಭಾರತ ತಂಡದ ಹಿರಿಯ ವೇಗಿ ಜಸ್‌ಪ್ರೀತ್ ಬುಮ್ರಾ (Jasprit Bumrah) ಅವರು ವಿಶ್ವದ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅದರಂತೆ ಅವರು ಭಾರತ ತಂಡದ ಮೂರೂ ಸ್ವರೂಪದಲ್ಲಿ ಅತ್ಯಂತ ಮೌಲ್ಯಯುತ ಆಟಗಾರರಾಗಿದ್ದಾರೆ. ಇದನ್ನು ಇಡೀ ಕ್ರಿಕೆಟ್ ಜಗತ್ತು ಒಪ್ಪಿಕೊಂಡಿದೆ. ಆದರೆ, ಭಾರತ ಹಾಗೂ ತಮಿಳುನಾಡು ತಂಡದ ಮಾಜಿ ಬ್ಯಾಟ್ಸ್‌ಮನ್ ಎಸ್ ಬದ್ರಿನಾಥ್ (S Badrinath) ಅವರು ಇದಕ್ಕೆ ವಿರುದ್ಧವಾದ ಹೇಳಿಕೆಯನ್ನು ನೀಡಿದ್ದಾರೆ. ಭಾರತ ತಂಡದಲ್ಲಿ ಬುಮ್ರಾಗಿಂತ ಸ್ಪಿನ್ನರ್ ವರುಣ್ ಚಕ್ರವರ್ತಿ (Varun Chakravarthy) ಅತ್ಯಂತ ಮೌಲ್ಯಯುತ ಬೌಲರ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಅಂತ್ಯವಾಗಿದ್ದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಈ ಇಬ್ಬರೂ ಆಟಗಾರರು ಆಡಿದ್ದರು. ಈ ಸರಣಿಯಲ್ಲಿ ವರುಣ್ ಚಕ್ರವರ್ತಿ ಆಡಿದ ಐದು ಪಂದ್ಯಗಳಿಂದ 5 ವಿಕೆಟ್‌ಗಳನ್ನು ಕಬಳಿಸಿದ್ದರು ಹಾಗೂ ಕೇವಲ 6.83ರ ಎಕಾನಮಿ ರೇಟ್‌ನಲ್ಲಿ ರನ್ ಬಿಟ್ಟುಕೊಟ್ಟಿದ್ದರು. ಇನ್ನು ಬುಮ್ರಾ ಐದು ಪಂದ್ಯಗಳಿಂದ ಕೇವಲ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಭಾರತೀಯ ಸ್ಪಿನ್ನರ್ ಸದ್ಯ ಐಸಿಸಿ ಟಿ20 ಬೌಲರ್‌ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಇವರು ಇಲ್ಲಿಯತನಕ ಆಡಿದ 16 ಪಂದ್ಯಗಳಿಂದ 26 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಎಸ್ ಬದ್ರಿನಾಥ್, ವರುಣ್ ಚಕ್ರವರ್ತಿ ಅವರು ಪವರ್‌ಪ್ಲೇ ಅಥವಾ ಮಧ್ಯಮ ಓವರ್‌ಗಳಲ್ಲಿ ಅಥವಾ ಡೆತ್ ಓವರ್‌ಗಳಲ್ಲಿಯೂ ರನ್‌ಗಳಿಗೆ ಕಡಿವಾಣವನ್ನು ಹಾಕಿದ್ದಾರೆ ಎಂದು ಹೇಳಿದ್ದಾರೆ. ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಬಳಿಕ ಭಾರತೀಯ ವಿಭಿನ್ನ ದರ್ಜೆಯಲ್ಲಿ ಬೌಲ್ ಮಾಡುತ್ತಿದಾರೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬುಮ್ರಾಗಿಂತ ವರುಣ್ ಅತ್ಯಂತ ಮೌಲ್ಯಯುತ ಆಟಗಾರ
"ವರುಣ್ ಚಕ್ರವರ್ತಿ ವಿಶ್ವದ ನಂ. 1 ಟಿ20 ಬೌಲರ್ ಎಂದು ಸಂಖ್ಯೆಗಳು ನಮಗೆ ಹೇಳುತ್ತವೆ. ಅವರು ಬುಮ್ರಾಗಿಂತಲೂ ಹೆಚ್ಚು ಮೌಲ್ಯಯುತ ಆಟಗಾರ. ಪವರ್‌ಪ್ಲೇ ಅಥವಾ ಮಿಡಲ್ ಓವರ್‌ಗಳಲ್ಲಿ ಅಥವಾ 18ನೇ ಓವರ್‌ನಲ್ಲಿ ರನ್‌ಗಳು ಹರಿಯುವಾಗಲೆಲ್ಲಾ, ವರುಣ್ ಮುಂದೆ ಬಂದು ಬೌಲ್ ಮಾಡುವ ಆಟಗಾರ. ಅವರು ತಮ್ಮ ಆಟದಿಂದ ಬೇರೆಯದೇ ಹಂತಕ್ಕೆ ಹೋಗಿದ್ದಾರೆ. ಆರಂಭದಲ್ಲಿ ಅವಕಾಶ ನೀಡಿ ಫಿಟ್‌ನೆಸ್ ಕಾರಣ ಕೈಬಿಡಲ್ಪಟ್ಟ ನಂತರ ಅವರು ಅತ್ಯುತ್ತಮ ಪುನರಾಗಮನ ಮಾಡಿದ್ದಾರೆ. ಆದರೆ ಅವರ ಪುನರಾಗಮನದ ನಂತರದ ಈ ಎರಡನೇ ಹಂತದಲ್ಲಿ, ಅವರು ತಮ್ಮ ಆಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದಾರೆ," ಎಂದು ಬದ್ರಿನಾಥ್ ಹೇಳಿದರು.
IND vs SA: ದಕ್ಷಿಣ ಆಫ್ರಿಕಾ ಒಡಿಐ ಸರಣಿಗೆ ಅಭ್ಯಾಸ ಶುರು ಮಾಡಿದ ರೋಹಿತ್ ಶರ್ಮಾ!
ಭಾರತ ತಂಡಕ್ಕೆ ದೊಡ್ಡ ಆಸ್ತಿ: ಬದ್ರಿನಾಥ್
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ನಿಮಿತ್ತ ಭಾರತ ತಂಡಕ್ಕೆ ಎಸ್ ಬದ್ರಿನಾಥ್ ಅವರು, ಅತ್ಯಂತ ದೊಡ್ಡ ಆಸ್ತಿ ಎಂದು ಎಸ್ ಬದ್ರಿನಾಥ್ ಅಭಿಪ್ರಾಯ ಪಟ್ಟಿದ್ದಾರೆ.
"ಅವರು ಭಾರತ ತಂಡಕ್ಕೆ ಒಂದು ದೊಡ್ಡ ಆಸ್ತಿ, ವಾಸ್ತವವಾಗಿ, ಒಂದು ಆಯುಧವೂ ಹೌದು. ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನೊಂದಿಗೆ, ಅವರು ಅತ್ಯಂತ ನಿರ್ಣಾಯಕ ಅಂಶವಾಗಲಿದ್ದಾರೆ. ವರುಣ್‌ಗೆ ಒಳ್ಳೆಯ ದಿನ ಬಂದರೆ, ಭಾರತ ತಂಡಕ್ಕೆ ಒಳ್ಳೆಯ ದಿನ ಬರುವ ಸಾಧ್ಯತೆ ಹೆಚ್ಚು," ಎಂದು ಮಾಜಿ ಆಟಗಾರ ಹೇಳಿದ್ದಾರೆ.