ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

SRH vs RR: 97 ರನ್ ಚಚ್ಚಿದ ವೈಭವ್‌ ಸೂರ್ಯವಂಶಿಗೆ ಸಚಿನ್‌ ತೆಂಡೂಲ್ಕರ್‌ ವಿಶೇಷ ಸಂದೇಶ!

ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿ 29 ಎಸೆತಗಳಲ್ಲಿ 97 ರನ್‌ ಸಿಡಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ವೈಭವ್‌ ಸೂರ್ಯವಂಶಿಯನ್ನು ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಗುಣಗಾನ ಮಾಡಿದ್ದಾರೆ.

ವೈಭವ್‌ ಸೂರ್ಯವಂಶಿ ಬ್ಯಾಟಿಂಗ್‌ಗೆ ಮನಸೋತ ಕ್ರಿಕೆಟ್‌ ದೇವರು!

ವೈಭವ್‌ ಸೂರ್ಯವಂಶಿಗೆ ಸಚಿನ್‌ ತೆಂಡೂಲ್ಕರ್‌ ಮೆಚ್ಚುಗೆ. -

Profile
Ramesh Kote May 27, 2026 10:34 PM

ಚಂಡೀಗಢ: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ವೈಭವ್‌ ಸೂರ್ಯವಂಶಿಯನ್ನು (Vaibhav Sooryavanshi) ಕ್ರಿಕೆಟ್‌ ದೇವರು ಹಾಗೂ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ (Sachin Tendulkar) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. 15ರ ವಯಸ್ಸಿನ ವೈಭವ್‌ ಅವರ ಬ್ಯಾಟ್‌ ಸ್ವಿಂಗ್‌ ಅಸಾಧಾರಣವಾಗಿದೆ ಎಂದು ಹೇಳಿದ್ದಾರೆ. ಈ ಪಂದ್ಯದಲ್ಲಿ ಆರ್‌ಆರ್‌ ಆರಂಭಿಕ 334.48ರ ಸ್ಟ್ರೈಕ್‌ನಲ್ಲಿ ಬ್ಯಾಟ್‌ ಬೀಸಿದ್ದು ವಿಶೇಷವಾಗಿತ್ತು.

ಬುಧವಾರ ಇಲ್ಲಿನ ಮಹಾರಾಜ ಯದವೀಂದ್ರ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ರಾಜಸ್ಥಾನ್‌ ರಾಯಲ್ಸ್‌ ಪರ ಇನಿಂಗ್ಸ್‌ ಆರಂಭಿಸಿದ ವೈಭವ್‌ ಸೂರ್ಯವಂಶಿ ಅವರು ಲೀಲಾ-ಜಾಲವಾಗಿ ಬ್ಯಾಟ್‌ ಬೀಸಿದರು. ಅವರು ಕೇವಲ 16 ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸಿದ್ದರು. ಆ ಮೂಲಕ ಐಪಿಎಲ್‌ ಪ್ಲೇಆಫ್ಸ್‌ ಅಥವಾ ನಾಕ್‌ಔಟ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿ ಸಿಎಸ್‌ಕೆ ದಿಗ್ಗಜ ಸುರೇಶ್‌ ರೈನಾ ದಾಖಲೆಯನ್ನು ಸರಿಗಟ್ಟಿದ್ದರು.

SRH vs RR: ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಸುರೇಶ್‌ ರೈನಾ ದಾಖಲೆ ಸರಿಗಟ್ಟಿದ ವೈಭವ್‌ ಸೂರ್ಯವಂಶಿ!

ಪವರ್‌ಪ್ಲೇ ರೀತಿಯಲ್ಲಿಯೇ ಮಧ್ಯಮ ಓವರ್‌ಗಳಲ್ಲಿಯೂ ಸ್ಪೋಟಕ ಬ್ಯಾಟಿಂಗ್‌ ಮುಂದುವರಿಸಿದ ವೈಭವ್‌ ಸೂರ್ಯವಂಶಿ 28 ಎಸೆತಗಳಲ್ಲಿ 97 ರನ್‌ಗಳನ್ನು ದಾಖಲಿಸಿದ್ದರು. ಆ ಮೂಲಕ ಕ್ರಿಸ್‌ ಗೇಲ್‌ ಅವರ ವೇಗದ ಶತಕದ ದಾಖಲೆ ಮುರಿಯಲು 3 ರನ್‌ ಅಗತ್ಯವಿತ್ತು. ಆದರೆ, 29ನೇ ಎಸೆತದಲ್ಲಿ ಪ್ರಫುಲ್‌ ಹಿಂಗೆ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚ್‌ ಕೊಟ್ಟರು. ಆ ಮೂಲಕ ಕೂದಲೆಳೆಯ ಅಂತರದಲ್ಲಿ ವಿಶ್ವ ದಾಖಲೆಯನ್ನು ಮುರಿಯುವ ಅವಕಾಶವನ್ನು ಕಳೆದುಕೊಂಡಿತು. ಅಂತಿಮವಾಗಿ ಅವರು 334.48ರ ಸ್ಟ್ರೈಕ್‌ ರೇಟ್‌ನಲ್ಲಿ 12 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 97 ರನ್‌ಗಳನ್ನು ಗಳಿಸಿದರು.



ವೈಭವ್‌ ಸೂರ್ಯವಂಶಿಗೆ ಸಚಿನ್‌ ಮೆಚ್ಚುಗೆ

ಭಯಮುಕ್ತ ಬ್ಯಾಟಿಂಗ್‌ ನಡೆಸಿದ ವೈಭವ್‌ ಸೂರ್ಯವಂಶಿಗೆ ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್‌ ಸಚಿನ್‌ ತೆಂಡೂಲ್ಕರ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. 15ರ ಬಾಲಕನ ಬ್ಯಾಟಿಂಗ್‌ ಸ್ವಿಂಗ್‌ ಅದ್ಭುತವಾಗಿದೆ ಎಂದು ಹೇಳಿದ್ದಾರೆ.

“ವೈಭವ್‌ ಸೂರ್ಯವಂಶಿ ಅವರ ಬ್ಯಾಟ್ ಸ್ವಿಂಗ್ ಅತ್ಯಂತ ಅದ್ಭುತವಾಗಿದೆ. ಅದರಲ್ಲೂ ಕಾಲಿನ ಭಾಗಕ್ಕೆ ಬರುವ ಎಸೆತಗಳಿಗೆ ಜಾಗ ಸೃಷ್ಟಿಸಿಕೊಳ್ಳಲು ಅವರು ಮುಂಭಾಗದ ಕಾಲನ್ನು ಸುಂದರವಾಗಿ ಸರಿಸುವ ರೀತಿ ಇನ್ನಷ್ಟು ವಿಶೇಷವಾಗಿದೆ. ಇದೇ ಸ್ವಾತಂತ್ರ್ಯ ಅವರಿಗೆ ತಮ್ಮದೇ ಶೈಲಿಯಲ್ಲಿ ಬ್ಯಾಟಿಂಗ್ ನಡೆಸಲು ಸಹಕಾರಿಯಾಗಿದೆ. ಈ ಇನಿಂಗ್ಸ್ ನಿಜಕ್ಕೂ ಅದ್ಭುತಕ್ಕಿಂತ ಕಡಿಮೆಯಿರಲಿಲ್ಲ!” ಎಂದು ಸಚಿನ್‌ ತೆಂಡೂಲ್ಕರ್‌ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.



ಈ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದೊಂದಿಗೆ ವೈಭವ್‌ ಸೂರ್ಯವಂಶಿ ಆರೆಂಜ್ ಕ್ಯಾಪ್ ಪಟ್ಟಿಯ ಅಗ್ರಸ್ಥಾನಕ್ಕೇರಿದರು. ಅವರು 15 ಪಂದ್ಯಗಳಲ್ಲಿ 242.85ರ ಸ್ಟ್ರೈಕ್ ರೇಟ್‌ನೊಂದಿಗೆ ಒಟ್ಟು 680 ರನ್‌ಗಳನ್ನು ಕಲೆಹಾಕಿದ್ದಾರೆ.

ಅವರ 97 ರನ್‌ಗಳ ಸ್ಫೋಟಕ ಇನಿಂಗ್ಸ್ ರಾಜಸ್ಥಾನ್‌ ರಾಯಲ್ಸ್ ಪರ ಐಪಿಎಲ್ ನಾಕೌಟ್/ಪ್ಲೇಆಫ್ ಪಂದ್ಯಗಳಲ್ಲಿ ದಾಖಲಾಗಿರುವ ಎರಡನೇ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಜೋಸ್‌ ಬಟ್ಲರ್‌ ಇದ್ದಾರೆ. ಅವರು ಅಜೇಯ 106 ರನ್‌ಗಳ ಇನಿಂಗ್ಸ್‌ ಆಡಿದ್ದಾರೆ. ಅವರು 2022ರ ಐಪಿಎಲ್ ಕ್ವಾಲಿಫೈಯರ್ -2ರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಈ ಸಾಧನೆ ಮಾಡಿದ್ದರು.