Rohit Sharma: ಏಕದಿನ ಕ್ರಿಕೆಟ್ ನಿವೃತ್ತಿಯ ವದಂತಿಗೆ ತೆರೆ ಎಳೆದ ರೋಹಿತ್ ಶರ್ಮಾ!
ರೋಹಿತ್ ಶರ್ಮಾ ಅವರು ಟೆಸ್ಟ್ ಮತ್ತು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ನಂತರ ಅತೀ ಶೀಘ್ರದಲ್ಲೇ ಏಕದಿನ ಕ್ರಿಕೆಟ್‌ಗೂ ವಿದಾಯ ಹೇಳಲಿದ್ದಾರೆ ಎನ್ನುವ ವದಂತಿಗಳು ಜೋರಾಗಿ ಹರಿದಾಡುತ್ತಿದ್ದವು. ಆದರೆ ಇದೀಗ ಹಿಟ್‌ಮ್ಯಾನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಭ್ಯಾಸಕ್ಕೆ ಸಜ್ಜಾಗುತ್ತಿರುವ ಫೋಟೋ ಹಂಚಿಕೊಂಡು ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಒಡಿಐ ಕ್ರಿಕೆಟ್ ನಿವೃತ್ತಿ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ ರೋಹಿತ್ ಶರ್ಮಾ. -

ನವದೆಹಲಿ: ಮುಂಬರುವ ಅಕ್ಟೋಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರಂಭವಾಗುವ ಏಕದಿನ ಸರಣಿಗೆ (IND vs AUS) ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಸಜ್ಜಾಗುತ್ತಿದ್ದಾರೆ. ಇದರ ನಡುವೆ ಆಧುನಿಕ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಟೆಸ್ಟ್ ಮತ್ತು ಟಿ20ಐ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಬಳಿಕ ಹಿಟ್‌ಮ್ಯಾನ್ ಶೀಘ್ರದಲ್ಲೇ ಏಕದಿನ ಕ್ರಿಕೆಟ್‌ಗೆ ನಿವೃತ್ತಿಯ ಬಗ್ಗೆ ವದಂತಿಗಳು ಹಬ್ಬಿದ್ದವು. ರೋಹಿತ್ ಕೊನೆಯದಾಗಿ 2025ರ ಚಾಂಪಿಯನ್ ಟ್ರೋಫಿಯಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಬಳಿಕ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ. ಇದೀಗ ಅವರು ಏಕದಿನ ಕ್ರಿಕೆಟ್‌ಗೆ ನಿವೃತ್ತಿ ವದಂತಿಗಳ ಸ್ಪಷ್ಟನೆ ನೀಡಿದ್ದಾರೆ. 38ನೇ ವಯಸ್ಸಿನ ರೋಹಿತ್ ಒಡಿಐ ಕ್ರಿಕೆಟ್‌ನಲ್ಲಿ ಮುಂದುವರಿಯುವ ಬಗ್ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ರೋಹಿತ್ ಶರ್ಮಾ ದೀರ್ಘಕಾಲದ ಅವಧಿಯಿಂದ ಕ್ರಿಕೆಟ್‌ನಿಂದ ದೂರ ಉಳಿದಿರುವುದರಿಂದ ಈ ಅನುಮಾನ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ರೋಹಿತ್ ಶರ್ಮಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಪ್ಯಾಡ್ ಧರಿಸಿ ಅಭ್ಯಾಸ ಮಾಡುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಯಾವುದೇ ಶೀರ್ಷಿಕೆಯನ್ನು ಹಾಕದೇ ಹಂಚಿಕೊಂಡಿರುವ ಈ ಫೋಟೋಗಳು ವೈರಲ್ ಆಗುತ್ತಿದೆ. ಇನ್ನೊಂದು ವಿಡಿಯೊ ಕ್ಲಿಪ್‌ನಲ್ಲಿ ನೆಟ್ ಅಭ್ಯಾಸ ಮುಗಿಸಿದ ನಂತರ ಹೊರ ನಡೆಯುತ್ತಿರುವುದು ಕಂಡು ಬಂದಿದೆ.
ಏಕದಿನ ವಿಶ್ವಕಪ್ ನಿಮಿತ್ತ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಎಚ್ಚರಿಕೆ ನೀಡಿದ ದೀಪ್ ದಾಸ್‌ಗುಪ್ತಾ!
ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಸೀಮಿತ ಓವರಗಳ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಸಮರ್ಥ ನಾಯಕತ್ವದಿಂದ ಎಲ್ಲರ ಗಮನ ಸೆಳೆದಿದ್ದಾರೆ. 2023 ಮತ್ತು 2025ರ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಬಹುಮುಖ್ಯ ಪಾತ್ರ ವಹಿಸಿದರು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ತಂಡವನ್ನು ಮುನ್ನಡೆಸಿದ ಯಶಸ್ವಿ ನಾಯಕ ಎಂದೆನಿಸಿಕೊಂಡಿದ್ದಾರೆ. 2027ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿ ಆತಿಥ್ಯದಲ್ಲಿ ಜಂಟಿ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಅಮೋಘ ಫಾರ್ಮ್ ಮುಂದುವರಿಸುವ ನಿರೀಕ್ಷೆ ಇದೆ. ಹಾಗಾಗಿ ಅವರ ಈ ಪೋಸ್ಟ್ ನಿವೃತ್ತಿ ವದಂತಿಗಳಿಗೆ ತೆರೆ ಎಳೆದು, ಮುಂದಿನ ತಿಂಗಳು ಮತ್ತೆ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವ ಸುಳಿವು ನೀಡಿದ್ದಾರೆ ಎನ್ನಲಾಗಿದೆ.
ರೋಹಿತ್ ಶರ್ಮಾ ಅವರ ಏಕದಿನ ಕ್ರಿಕೆಟ್ ಸಾಧನೆ
ರೋಹಿತ್ ಶರ್ಮಾ 2007ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆರಂಭದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಕಳಿದರೂ, ಅವರ ಫಾರ್ಮ್ ಮತ್ತು ಸ್ಥಿರತೆ ಅವರ ಅಗ್ರ ಕ್ರಮಾಂಕವನ್ನು ಭದ್ರಪಡಿಸಿತು. 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಅಂದಿನಿಂದ ಟೀಮ್ ಇಂಡಿಯಾ ಓಪನರ್ ಆಗಿ ತೋರಿದ ಪ್ರದರ್ಶನ ಶ್ಲಾಘನೀಯ. ಭಾರತೀಯ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ಬಾರಿಸಿದ ಏಕೈಕ ಆಟಗಾರರಾಗಿದ್ದಾರೆ. ಅದರಲ್ಲೂ 2014ರಲ್ಲಿ ಶ್ರೀಲಂಕಾ ವಿರುದ್ಧ ಬಾರಿಸಿದ ಅಚ್ಚರಿಯ 264 ರನ್‌ಗಳ ಇನಿಂಗ್ಸ್ ಇಂದಿಗೂ ವಿಶ್ವದ ಅತ್ಯಂತ ದೊಡ್ಡ ವೈಯಕ್ತಿಕ ಸ್ಕೋರ್ ಆಗಿದೆ. ಬಳಿಕ 2019ರ ವಿಶ್ವಕಪ್ ಅವರಿಗೆ ಅತ್ಯುತ್ತಮ ಟೂರ್ನಿ ಎಂದು ಹೇಳಬಹುದು. ಆ ಸರಣಿಯಲ್ಲಿ ರೋಹಿತ್ ಐದು ಶತಕಗಳನ್ನು ಬಾರಿಸಿದ್ದರು.
ಅಂಕಿ ಅಂಶಗಳನ್ನು ಗಮನಿಸದರೆ, 49ರ ಸರಾಸರಿಯಲ್ಲಿ 11,000ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ. ಇದರಲ್ಲಿ 32 ಶತಕಗಳು ಒಳಗೊಂಡಿವೆ. 330ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿದ್ದಾರೆ. ಪ್ರಸ್ತುತ ಭಾರತ ತಂಡದ ಏಕದಿನ ಕ್ರಿಕೆಟ್‌ನ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರು ಟೆಸ್ಟ್ ಮತ್ತು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳದಿದ್ದರೂ, ಒಡಿಐಗಳಲ್ಲಿ ತಂಡದ ಪರ ಮಿಂಚುವುದು ಬಹುತೇಕ ಖಚಿತವಾಗಿದೆ.