IPL 2026: ಟೂರ್ನಿಯ ಎರಡನೇ ಅವಧಿಯಲ್ಲಿ ಪಂಜಾಬ್ ಕಿಂಗ್ಸ್ ವೈಫಲ್ಯಕ್ಕೆ ಕಾರಣ ತಿಳಿಸಿದ ಸಚಿನ್ ತೆಂಡೂಲ್ಕರ್!
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎರಡನೇ ಅವಧಿಯಲ್ಲಿ ಪಂಜಾಬ್ ಕಿಂಗ್ಸ್ ಸತತ ವೈಫಲ್ಯಕ್ಕೆ ಕಾರಣವೇನೆಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿವರಿಸಿದ್ದಾರೆ. ಮೊದಲ ಅವಧಿಯಲ್ಲಿ ಒಂದೂ ಪಂದ್ಯದಲ್ಲಿ ಸೋಲದ, ಪಂಜಾಬ್ ಎರಡನೇ ಅವಧಿಯಲ್ಲಿ ಸತತ ಆರು ಪಂದ್ಯಗಳನ್ನು ಸೋತು ಟೂರ್ನಿಯಿಂದ ಹೊರಬಿದ್ದಿತ್ತು.
ಪಂಜಾಬ್ ಕಿಂಗ್ಸ್ ವೈಫಲ್ಯಕ್ಕೆ ಕಾರಣ ತಿಳಿಸಿದ ಸಚಿನ್. -
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ (IPL 2026) ಟೂರ್ನಿಗೂ ಮುನ್ನ ಪಂಜಾಬ್ ಕಿಂಗ್ಸ್ ತಂಡ (PBKS) ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಅದರಂತೆ ಮೊದಲ ಅವಧಿಯಲ್ಲಿ ಆಡಿದ್ದ 7 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಹಾಗೂ ಒಂದರಲ್ಲಿ ಫಲಿತಾಂಶ ಮೂಡಿಬಂದಿರಲಿಲ್ಲ. ಒಟ್ಟು 13 ಅಂಕಗಳ ಮೂಲಕ ಅಗ್ರ ಎರಡರಲ್ಲಿ ಉಳಿದಿತ್ತು. ಆದರೆ, ಎರಡನೇ ಅವಧಿಯಲ್ಲಿ ಸತತ ಆರು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಪರಿಣಾಮ ಟೂರ್ನಿಯ ಪ್ಲೇಆಫ್ಸ್ ರೇಸ್‌ನಿಂದ ಅಧಿಕೃತವಾಗಿ ಹೊರ ನಡೆಯಿತು. ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್(Sachin Tendulkar) , ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡದ ವೈಫಲ್ಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಅಂದಹಾಗೆ ಟೂರ್ನಿಯ ಕೊನೆಯ ಲೀಗ್ ಪಂದ್ಯದವರೆಗೂ ಪಂಜಾಬ್ ಕಿಂಗ್ಸ್ ತಂಡ ನಾಕ್‌ಔಟ್ ರೇಸ್‌ನಲ್ಲಿತ್ತು. ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ಎದುರು ಭರ್ಜರಿಯಾಗಿ ಗೆದ್ದಿದ್ದು ಪಂಜಾಬ್ ತಂಡ ಒಟ್ಟು 15 ಅಂಕಗಳನ್ನು ಕಲೆ ಹಾಕಿತ್ತು. ಆದರೆ, 14 ಅಂಕಗಳನ್ನು ಹೊಂದಿದ್ದ ರಾಜಸ್ಥಾನ್ ರಾಯಲ್ಸ್ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸೋಲು ಅನುಭವಿಸಬೇಕಾಗಿತ್ತು. ಆದರೆ, ವೈಭವ್ ಸೂರ್ಯವಂಶಿ ಅವರ ಭರ್ಜರಿ ಬ್ಯಾಟಿಂಗ್‌ನಿಂದ ಗೆದ್ದು 16 ಅಂಕಗಳ ಮೂಲಕ ಪಂಜಾಬ್ ಕಿಂಗ್ಸ್ ತಂಡವನ್ನು ಹಿಂದಿಕ್ಕಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿತ್ತು.
ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಟ್ರೋಫಿ ಗೆದ್ದ ವಿದೇಶಿ ಆಟಗಾರರು!
ರೆಡಿಟ್‌ನಲ್ಲಿ ಬರೆದಿರುವ ಸಚಿನ್ ತೆಂಡೂಲ್ಕರ್, ಪಂಜಾಬ್ ಕಿಂಗ್ಸ್ ತಂಡದ ವೈಫಲ್ಯಕ್ಕೆ ಬಲವಾದ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. "ಪಂಜಾಬ್ ಕಿಂಗ್ಸ್ ತಂಡ ಟೂರ್ನಿಯಲ್ಲಿ ಭರ್ಜರಿ ಎನರ್ಜಿಯನ್ನು ತಂದಿತ್ತು. ಅವರ ಕ್ರಿಕೆಟ್ ಸಕಾರಾತ್ಮಕ, ಧೈರ್ಯ ಹಾಗೂ ಗೇಮ್ ಚೇಜಿಂಗ್ ರೀತಿ ಇತ್ತು. ಆವೇಗ ದೀರ್ಘಾವಧಿ ಟೂರ್ನಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇಂಥಾ ದೊಡ್ಡ ಟೂರ್ನಿಯಲ್ಲಿ ಫಲಿತಾಂಶಗಳಿಗೆ ಅಂಟಿಕೊಳ್ಳದೆ, ಪ್ರಕ್ರಿಯೆಯ ಮೇಲೆ ಹೆಚ್ಚು ಅವಲಂಬಿಸಬೇಕಾಗುತ್ತದೆ. ಪಂಜಾಬ್ ಮೊದಲ ಲೆಗ್‌ನಲ್ಲಿ ಪ್ರಕ್ರಿಯೆಯ ಮೇಲೆ ಜಾಸ್ತಿ ಅಂಟಿಕೊಂಡಿತ್ತು ಹಾಗೂ ಎರಡನೇ ಅವಧಿಯಲ್ಲಿ ಫಲಿತಾಂಶದ ಮೇಲೆ ಅವಲಂಬಿಸಿತ್ತು," ಎಂದು ಹೇಳಿದ್ದಾರೆ.
ವೈಭವ್ ಸೂರ್ಯವಂಶಿಗೆ ಈಗಲೇ ಭಾರತ ತಂಡದಲ್ಲಿ ಚಾನ್ಸ್ ನೀಡಬೇಡಿ: ಸಂಜಯ್ ಮಾಂಜ್ರೇಕರ್!
2025ರಲ್ಲಿ ರನ್ನರ್ ಅಪ್ ಆಗಿದ್ದ ಪಂಜಾಬ್
ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ 2025ರಲ್ಲಿ ಕನಸಿನಂತೆಯೇ ಪ್ರದರ್ಶನ ನೀಡಿ, 2014ರ ಬಳಿಕ ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಸೋಲು ಕಂಡು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.
ಐಪಿಎಲ್ 2026ರಲ್ಲೂ ಆರ್‌ಸಿಬಿ ತನ್ನ ಯಶಸ್ಸಿನ ಪಯಣವನ್ನು ಮುಂದುವರಿಸಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಬಳಿಕ ಐಪಿಎಲ್ ಟ್ರೋಫಿಯನ್ನು ಸತತವಾಗಿ ಉಳಿಸಿಕೊಂಡ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಆರ್‌ಸಿಬಿ ಪಾತ್ರವಾಯಿತು. ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿದ ಆರ್‌ಸಿಬಿ, ತನ್ನ ಎರಡನೇ ಐಪಿಎಲ್ ಚಾಂಪಿಯನ್‌ಶಿಪ್ ಗೆದ್ದು ಇತಿಹಾಸ ನಿರ್ಮಿಸಿತು.