ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಧನಂಜಯ್‌ ಡಿ ಸಿಲ್ವಾ ಹೊರ ನಡೆದ ಬೆನ್ನಲ್ಲೆ ಶ್ರೀಲಂಕಾ ಟೆಸ್ಟ್‌ ತಂಡಕ್ಕೆ ಕುಸಾಲ್‌ ಮೆಂಡಿಸ್‌ ನಾಯಕ!

ಧನಂಜಯ ಡಿ ಸಿಲ್ವಾ ಶ್ರೀಲಂಕಾ ಟೆಸ್ಟ್‌ ತಂಡದ ನಾಯಕತ್ವದಿಂದ ಕೆಳೆಗ ಇಳಿದ ಬೆನ್ನಲ್ಲೆ ನೂತನ ನಾಯಕನನ್ನು ಆಯ್ಕೆ ಮಾಡಲಾಗಿದೆ. ಹಿರಿಯ ಬ್ಯಾಟ್ಸ್‌ಮನ್‌ ಕುಸಾಲ್‌ ಮೆಂಡಿಸ್‌ಗೆ ಶ್ರೀಲಂಕಾ ಟೆಸ್ಟ್‌ ತಂಡದ ನಾಯಕತ್ವವನ್ನು ನೀಡಲಾಗಿದೆ. ಮೆಂಡಿಸ್‌ ಈಗಾಗಲೇ ಟಿ20 ಹಾಗೂ ಒಡಿಐ ತಂಡಗಳ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶ್ರೀಲಂಕಾ ಟೆಸ್ಟ್‌ ತಂಡಕ್ಕೆ ಕುಸಾಲ್‌ ಮೆಂಡಿಸ್‌ ನೂತನ ನಾಯಕ!

ಶ್ರೀಲಂಕಾ ಟೆಸ್ಟ್‌ ತಂಡಕ್ಕೆ ಕುಸಾಲ್‌ ಮೆಂಡಿಸ್‌ ನೂತನ ನಾಯಕ. -

Profile
Ramesh Kote Oct 8, 2026 7:19 PM

ನವದೆಹಲಿ: ಶ್ರೀಲಂಕಾ ಟೆಸ್ಟ್ ತಂಡಕ್ಕೆ ಹೊಸ ನಾಯಕನನ್ನು ನೇಮಕ ಮಾಡಲಾಗಿದೆ. ಧನಂಜಯ ಡಿ ಸಿಲ್ವಾ (Dhananjay De Silva) ಅವರು ತಕ್ಷಣದಿಂದ ಜಾರಿಗೆ ಬರುವಂತೆ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಬಳಿಕ, ಶ್ರೀಲಂಕಾ ಕ್ರಿಕೆಟ್ ಆಯ್ಕೆ ಸಮಿತಿ ಕುಸಾಲ್ ಮೆಂಡಿಸ್ (Kusal Mendis) ಅವರನ್ನು ನೂತನ ಟೆಸ್ಟ್ ನಾಯಕನಾಗಿ ನೇಮಕ ಮಾಡಿದೆ. ಗುರುವಾರ ಶ್ರೀಲಂಕಾ ಕ್ರಿಕೆಟ್ (SLC) ಪ್ರಧಾನ ಕಚೇರಿಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಾಕಿಸ್ತಾನ ವಿರುದ್ಧದ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಗೆ ಮುನ್ನ ನಾಯಕತ್ವದಲ್ಲಿ ಈ ಬದಲಾವಣೆ ನಡೆದಿದೆ.

31ರ ವಯಸ್ಸಿನ ಕುಸಾಲ್ ಮೆಂಡಿಸ್ ಶ್ರೀಲಂಕಾ ತಂಡದ ಪ್ರಮುಖ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಈಗಾಗಲೇ ತಂಡವನ್ನು ಮುನ್ನಡೆಸಿರುವ ಅವರು, 22 ಏಕದಿನ ಹಾಗೂ ಮೂರು ಟಿ20 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿ ಶ್ರೀಲಂಕಾ ತಂಡದ ನಾಯಕನಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. 2026ರಲ್ಲಿ ಶ್ರೀಲಂಕಾ ಕ್ರಿಕೆಟ್, ಮೆಂಡಿಸ್ ಅವರನ್ನು ಮತ್ತೆ ವೈಟ್-ಬಾಲ್ ತಂಡದ ನಾಯಕನನ್ನಾಗಿ ನೇಮಕ ಮಾಡಿತ್ತು. ಇದೀಗ ಟೆಸ್ಟ್ ತಂಡದ ನಾಯಕತ್ವವೂ ಅವರ ಸಿಕ್ಕಿದೆ.

ಮೆಂಡಿಸ್ ಇದುವರೆಗೆ 75 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 36.36ರ ಸರಾಸರಿಯಲ್ಲಿ 4,836 ರನ್ ಗಳಿಸಿದ್ದಾರೆ. ಅವರ ಖಾತೆಯಲ್ಲಿ 10 ಶತಕ ಹಾಗೂ 23 ಅರ್ಧಶತಕಗಳಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿನ ಅವರ ಅನುಭವವನ್ನು ಇದೀಗ ನಾಯಕತ್ವದಲ್ಲೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಾದ ಜವಾಬ್ದಾರಿ ಎದುರಾಗಿದೆ.

ಶ್ರೀಲಂಕಾ ಟೆಸ್ಟ್‌ ತಂಡದ ನಾಯಕತ್ವದಿಂದ ಕೆಳಗೆ ಇಳಿದು ಶಾಕ್‌ ನೀಡಿದ ಧನಂಜಯ ಡಿ ಸಿಲ್ವಾ!

ಪಾಕಿಸ್ತಾನ ವಿರುದ್ಧ ಮೊದಲ ನಾಯಕತ್ವದ ಪರೀಕ್ಷೆ

ಕುಸಾಲ್‌ ಮೆಂಡಿಸ್ ಅವರ ಮೊದಲ ಟೆಸ್ಟ್ ನಾಯಕತ್ವದ ಪರೀಕ್ಷೆ ಪಾಕಿಸ್ತಾನ ವಿರುದ್ಧ ನಡೆಯಲಿದೆ. 2025-27 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗವಾಗಿರುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಶ್ರೀಲಂಕಾ ತಂಡ ಕಣಕ್ಕೆ ಇಳಿಯಲಿದೆ.

ಮೊದಲ ಟೆಸ್ಟ್ ನವೆಂಬರ್ 9ರಿಂದ 13ರವರೆಗೆ ರಾವಲ್ಪಿಂಡಿಯಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ನವೆಂಬರ್ 17ರಿಂದ 21ರವರೆಗೆ ಲಾಹೋರ್‌ನಲ್ಲಿ ನಡೆಯಲಿದೆ. ಸದ್ಯ ಶ್ರೀಲಂಕಾ ತಂಡ ಬಹು-ಮಾದರಿ ಪ್ರವಾಸಕ್ಕಾಗಿ ಪಾಕಿಸ್ತಾನದಲ್ಲಿದ್ದು, ಮೆಂಡಿಸ್ ಟಿ20 ತಂಡವನ್ನೂ ಮುನ್ನಡೆಸುತ್ತಿದ್ದಾರೆ.



ಧನಂಜಯ ಡಿ ಸಿಲ್ವಾ ನಾಯಕತ್ವಕ್ಕೆ ತೆರೆ

ಇದರೊಂದಿಗೆ ಧನಂಜಯ ಡಿ ಸಿಲ್ವಾ ಅವರ ಟೆಸ್ಟ್ ನಾಯಕತ್ವದ ಅವಧಿ ಅಂತ್ಯಗೊಂಡಿದೆ. ಅವರು ಫೆಬ್ರವರಿ 2024ರಲ್ಲಿ ಟೆಸ್ಟ್ ನಾಯಕತ್ವ ವಹಿಸಿಕೊಂಡಿದ್ದರು. ಅಕ್ಟೋಬರ್ 2026ರಲ್ಲಿ ಸ್ಥಾನದಿಂದ ಕೆಳಗಿಳಿಯುವ ಮೊದಲು ಒಟ್ಟು 18 ಟೆಸ್ಟ್ ಪಂದ್ಯಗಳಲ್ಲಿ ಶ್ರೀಲಂಕಾವನ್ನು ಮುನ್ನಡೆಸಿದ್ದರು. ಅವರ ನಾಯಕತ್ವದಲ್ಲಿ ಶ್ರೀಲಂಕಾ ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಎಂಟು ಪಂದ್ಯಗಳಲ್ಲಿ ಸೋಲು ಕಂಡಿದೆ. ಮೂರು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.

2026ರಲ್ಲಿ ಶ್ರೀಲಂಕಾ ಟೆಸ್ಟ್ ಕ್ರಿಕೆಟ್‌ನಲ್ಲಿ ಕಠಿಣ ಅವಧಿಯನ್ನು ಎದುರಿಸಿತ್ತು. ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಸರಣಿಯನ್ನು 1-0 ಹಾಗೂ ಭಾರತ ವಿರುದ್ಧ ತವರಿನಲ್ಲಿ ನಡೆದ ಸರಣಿಯನ್ನು 1-0 ಅಂತರದಲ್ಲಿ ಕಳೆದುಕೊಂಡಿತ್ತು. ಆದರೂ ಧನಂಜಯ ಡಿ ಸಿಲ್ವಾ ಆಟಗಾರನಾಗಿ ಮುಂದುವರಿಯಲಿದ್ದಾರೆ. ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ವಿವರಿಸಿದ ಅವರು, “ಮುಂದಿನ ಪೀಳಿಗೆಗೆ ನಾಯಕತ್ವದ ಜವಾಬ್ದಾರಿ ಹಸ್ತಾಂತರವಾಗಬೇಕು ಎಂಬುದು ನನ್ನ ಪ್ರಾಮಾಣಿಕ ಅಭಿಪ್ರಾಯ,” ಎಂದು ಹೇಳಿದ್ದಾರೆ.