SA vs NZ: ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್‌ಗೆ ಮ್ಯಾಟ್ ಹೆನ್ರಿ ಅನುಮಾನ!
T20 World Cup 2026: ದಕ್ಷಿಣ ಆಫ್ರಿಕಾ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡದ ವೇಗದ ಬೌಲರ್ ಮ್ಯಾಟ್ ಹೆನ್ರಿ ಆಡುವುದು ಅನುಮಾನವಾಗಿದೆ. ಈ ಬಗ್ಗೆ ಪಂದ್ಯ ಪೂರ್ವ ಸುದ್ದಿಗೋಷ್ಠಿಯಲ್ಲಿ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ ಸುಳಿವು ನೀಡಿದ್ದಾರೆ.
ದಕ್ಷಿಣ ಆಫ್ರಿಕಾ ಸೆಮಿಫೈನಲ್‌ಗೆ ಮ್ಯಾಟ್ ಹೆನ್ರಿ ಡೌಟ್. -
ನವದೆಹಲಿ: ನ್ಯೂಜಿಲೆಂಡ್ ತಂಡದ ಪ್ರಮುಖ ವೇಗದ ಬೌಲರ್ ಮ್ಯಾಟ್ ಹೆನ್ರಿ (Matt Henry) ಅವರು ದಕ್ಷಿಣ ಆಫ್ರಿಕಾ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಸೆಮಿಫೈನಲ್ ಪಂದ್ಯದಲ್ಲಿ (NZ vs SA) ಆಡುವುದು ಅನುಮಾನ ಎಂದು ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ (Mitchell Santner) ಹೇಳಿದ್ದಾರೆ. ಹರಿಣ ಪಡೆಯ ವಿರುದ್ಧ ನಡೆಯಲಿರುವ ನಾಕೌಟ್ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ಯಾಂಟ್ನರ್, ಹೆನ್ರಿ ತಮ್ಮ ಮಗುವಿನ ಜನನಕ್ಕಾಗಿ ನ್ಯೂಜಿಲೆಂಡ್‌ಗೆ ತೆರಳಿದ್ದರು ಎಂದು ತಿಳಿಸಿದರು. ಅವರು ಮಾರ್ಚ್ 3 ರಂದು ಭಾರತಕ್ಕೆ ಮರಳುತ್ತಿದ್ದಾರೆ ಎಂದು ಹೇಳಿದರು.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮ್ಯಾಟ್ ಹೆನ್ರಿ ಬೌಲಿಂಗ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಸೂಪರ್ 8 ಹಂತದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ ಮೂರು ರನ್ ನೀಡಿ ಎರಡು ವಿಕೆಟ್‌ಗಳನ್ನು ಪಡೆದು ಕಿವೀಸ್‌ಗೆ ಭರ್ಜರಿ ಜಯ ತಂದುಕೊಟ್ಟಿದ್ದರು. ಮ್ಯಾಟ್ ಹೆನ್ರಿ ಕೇವಲ ಎರಡು ಓವರ್‌ಗಳನ್ನು ಬೌಲ್ ಮಾಡಿ, 10 ಡಾಟ್ ಬಾಲ್‌ಗಳನ್ನು ಎಸೆದು ಲಂಕಾ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದರು. ಇದಾದ ಬಳಿಕ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೂ ಅವರು 2.3 ಓವರ್‌ಗಳಲ್ಲಿ 19 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು.
ʻನೀವು ಒಂಟಿಯಲ್ಲ, ನಿಮ್ಮ ಜೊತೆ ನಾವಿದ್ದೇವೆʼ-ರಿಂಕು ಸಿಂಗ್‌ಗೆ ಧೈರ್ಯ ತುಂಬಿದ ಕೋಚ್ ಗಂಭೀರ್!
ಮಂಗಳವಾರ ಮಾತನಾಡಿದ ಮಿಚೆಲ್ ಸ್ಯಾಂಟ್ನರ್, ಸೆಮಿಫೈನಲ್‌ನಲ್ಲಿ ಮ್ಯಾಟ್ ಹೆನ್ರಿ ಅವರ ಭಾಗವಹಿಸುವಿಕೆಯು ನ್ಯೂಜಿಲೆಂಡ್‌ನಿಂದ ಭಾರತಕ್ಕೆ ಆಗಮಿಸುವ ವಿಮಾನ ಪ್ರಯಾಣದ ಬಳಿಕ ಅವರ ದೈಹಿಕ ಸ್ಥಿತಿ ಹೇಗಿರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದ್ದಾರೆ.
“ಮ್ಯಾಟ್ (ಹೆನ್ರಿ) ಈಗ ವಿಮಾನದಲ್ಲಿದ್ದಾರೆ, ಇಂದು (ಮಂಗಳವಾರ) ರಾತ್ರಿ ಇಳಿಯಲಿದ್ದಾರೆ. ಇಲ್ಲಿಗೆ ನ್ಯೂಜಿಲೆಂಡ್ ಬಹಳ ದೂರವಾಗಿರುವುದರಿಂದ, ಅವರು ಹೇಗಿದ್ದಾರೆ ಎಂಬುದನ್ನು ನೋಡಬೇಕು. ನಾಳೆ (ಬುಧವಾರ) ಬೆಳಿಗ್ಗೆ ಸ್ವಲ್ಪ ಓಡಾಟ ಮಾಡಿ, ಪಂದ್ಯಕ್ಕೆ ಸಿದ್ಧರಾಗಿರುವಾರೆಯೇ ಎಂಬುದನ್ನು ಪರಿಶೀಲಿಸುತ್ತೇವೆ. ಹೀಗಾಗಿ, ಅವರು ಆಡಲು ಸಿದ್ಧರಾಗಿರುತ್ತಾರೆ ಎಂದು ನಿರೀಕ್ಷಿಸುತ್ತೇವೆ,” ಎಂದು ಮಿಚೆಲ್ ಸ್ಯಾಂಟ್ನರ್ ಹೇಳಿದ್ದಾರೆ.
T20 World Cup 2026: ʻಭಾರತ ತಂಡ ಫೈನಲ್‌ಗೆ ತಲುಪಲ್ಲʼ-ಪಾಕ್ ಮಾಜಿ ವೇಗಿಯ ಭವಿಷ್ಯ ನಿಜವಾಗುತ್ತಾ?
ನ್ಯೂಜಿಲೆಂಡ್ ತಂಡ ಈ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಒಮ್ಮೆ ಎದುರಾಗಿತ್ತು. ಅಹಮದಾಬಾದ್‌ನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಮಾರ್ಕೊ ಯೆನ್ಸನ್, ಕಿವೀಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್ ವಿಭಾಗವನ್ನು ಕಟ್ಟಿ ಹಾಕಿದ್ದರು. ಮಾರ್ಕೊ ಯೆನ್ಸನ್ ಅವರ ಅದ್ಭುತ ಬೌಲಿಂಗ್ ಬಳಿಕ, ಹರಿಣ ಪಡೆಯ ನಾಯಕ ಏಡೆನ್ ಮಾರ್ಕ್ರಮ್ ಅಜೇಯ 86 ರನ್‌ಗಳ ಭರ್ಜರಿ ಇನಿಂಗ್ಸ್ ಆಡಿ, ದಕ್ಷಿಣ ಆಫ್ರಿಕಾಕ್ಕೆ ಜಯ ತಂದುಕೊಟ್ಟಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ತಂಡ ಮಾರ್ಚ್ 4 ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಸೆಮಿಫೈನಲ್ ಪಂದ್ಯ ನಡೆಯಲಿದೆ. ಮಾರ್ಚ್ 5ರಂದು ಭಾರತ ಹಾಗೂ ಇಂಗ್ಲೆಂಡ್ ನಡುವೆ ಎರಡನೇ ಸೆಮಿಫೈನಲ್ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.