ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

2034ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಮತ್ತೊಮ್ಮೆ ಯುಎಸ್‌ಎ, ವೆಸ್ಟ್‌ ಇಂಡೀಸ್‌ಗೆ ಜಂಟಿ ಆತಿಥ್ಯ?

2034ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಮತ್ತೊಮ್ಮೆ ಜಂಟಿ ಆತಿಥ್ಯ ವಹಿಸುವ ಸಾಧ್ಯತೆಯಿದೆ. 2024ರ ಜುಲೈ 6ರಿಂದ ಆಗಸ್ಟ್ 6ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಅಮೆರಿಕಕ್ಕೆ ಹೆಚ್ಚಿನ ಪಂದ್ಯಗಳನ್ನು ನೀಡುವ ನಿರೀಕ್ಷೆಯಿದ್ದು, ಐಸಿಸಿ ಹೊಸ ಕ್ರಿಕೆಟ್ ಮಾರುಕಟ್ಟೆಗಳ ವಿಸ್ತರಣೆಗೆ ಆದ್ಯತೆ ನೀಡುತ್ತಿದೆ ಎಂದು ವರದಿಯಾಗಿದೆ.

2034ರ ಟಿ20 ವಿಶ್ವಕಪ್‌ಗೆ ಯುಎಸ್‌ಎ, ವಿಂಡೀಸ್‌ಗೆ ಜಂಟಿ ಆತಿಥ್ಯ?

2034ರ ಟಿ20 ವಿಶ್ವಕಪ್‌ ಟೂರ್ನಿಗೆ ಯುಎಸ್‌ಎ-ವೆಸ್ಟ್‌ ಇಂಡೀಸ್‌ ಜಂಟಿ ಆತಿಥ್ಯ. -

Profile
Ramesh Kote Nov 26, 2026 8:10 PM

ನವದೆಹಲಿ: ಭವಿಷ್ಯದ 2034ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2034) ಟೂರ್ನಿಗೆ ಅಮೆರಿಕ (USA) ಮತ್ತು ವೆಸ್ಟ್ ಇಂಡೀಸ್ ಮತ್ತೊಮ್ಮೆ ಜಂಟಿ ಆತಿಥ್ಯ ವಹಿಸುವ ಸಾಧ್ಯತೆಯಿದೆ. 2024ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ಈ ಎರಡು ರಾಷ್ಟ್ರಗಳು, ಇದೀಗ ಒಂದು ದಶಕದ ಬಳಿಕ ಮತ್ತೊಮ್ಮೆ ವಿಶ್ವಕಪ್ ಆಯೋಜಿಸುವ ಆಸಕ್ತಿ ತೋರಿಸಿವೆ. ಈ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಕೂಡ ಒಲವು ಹೊಂದಿದೆ ಎಂದು ವರದಿಯಾಗಿದೆ.

ಕಳೆದ ತಿಂಗಳು ಐಸಿಸಿ 2035ರವರೆಗಿನ ತನ್ನ ಎಲ್ಲಾ ಪ್ರಮುಖ ಟೂರ್ನಿಗಳ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಅದರಂತೆ 2034ರ ಟಿ20 ವಿಶ್ವಕಪ್ ಟೂರ್ನಿ ಜುಲೈ 6ರಿಂದ ಆಗಸ್ಟ್ 6ರವರೆಗೆ ನಡೆಯಲಿದೆ. ಆದರೆ 2032ರಿಂದ 2035ರವರೆಗಿನ ಟೂರ್ನಿಗಳ ಆತಿಥೇಯ ರಾಷ್ಟ್ರಗಳನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.

ಈ ಅವಧಿಯ ಹವಾಮಾನ ಪರಿಸ್ಥಿತಿಯನ್ನು ಗಮನಿಸಿದರೆ ಟೂರ್ನಿಯನ್ನು ಯುರೋಪ್ ಅಥವಾ ಉತ್ತರ ಅಮೆರಿಕದಲ್ಲಿ ಆಯೋಜಿಸುವ ಸಾಧ್ಯತೆ ಹೆಚ್ಚಿದೆ. 2030ರ ಟಿ20 ವಿಶ್ವಕಪ್‌ಗೆ ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಆತಿಥ್ಯ ವಹಿಸಲಿರುವುದರಿಂದ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) 2034ರ ಟೂರ್ನಿಗೆ ಬಿಡ್ ಸಲ್ಲಿಸುವ ಆಸಕ್ತಿ ಹೊಂದಿಲ್ಲ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

‘ನಾನು ಇದು ಟಿ20 ಪಂದ್ಯ ಅಂದುಕೊಂಡಿದ್ದೆ’: ವೈಭವ್‌ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್‌ ಬಗ್ಗೆ ಕ್ರಿಸ್‌ ಗೇಲ್‌ ಹೇಳಿದ್ದಿದು!

ಇದೇ ವೇಳೆ ಕ್ರಿಕೆಟ್ ಅನ್ನು ಹೊಸ ಮಾರುಕಟ್ಟೆಗಳಿಗೆ ವಿಸ್ತರಿಸುವ ಉದ್ದೇಶ ಹೊಂದಿರುವ ಐಸಿಸಿ, ಅಮೆರಿಕವನ್ನು ಪ್ರಮುಖ ಸ್ಥಳವನ್ನಾಗಿ ಪರಿಗಣಿಸಿದೆ. ಹೀಗಾಗಿ ಯುಎಸ್ಎ ಕ್ರಿಕೆಟ್ ಮತ್ತು ಕ್ರಿಕೆಟ್ ವೆಸ್ಟ್ ಇಂಡೀಸ್ ಮತ್ತೊಮ್ಮೆ ಜಂಟಿಯಾಗಿ ಟೂರ್ನಿ ಆಯೋಜಿಸಲು ಸಿದ್ಧವಾಗಿವೆ ಎಂದು ವರದಿಯಾಗಿದೆ.

ಅಮೆರಿಕದಲ್ಲಿ ಹೆಚ್ಚುವರಿ ಪಂದ್ಯಗಳ ಆಯೋಜನೆ ಸಾಧ್ಯತೆ

2024ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಮೆರಿಕ 16 ಪಂದ್ಯಗಳಿಗೆ ಆತಿಥ್ಯ ವಹಿಸಿದ್ದರೆ, ವೆಸ್ಟ್ ಇಂಡೀಸ್‌ನಲ್ಲಿ 39 ಪಂದ್ಯಗಳು ನಡೆದಿದ್ದವು. ಆದರೆ 2034ರ ಆವೃತ್ತಿಯಲ್ಲಿ ಅಮೆರಿಕಕ್ಕೆ ಹೆಚ್ಚಿನ ಪಂದ್ಯಗಳನ್ನು ನೀಡುವ ಸಾಧ್ಯತೆಯಿದೆ. ಮೇಜರ್ ಲೀಗ್ ಕ್ರಿಕೆಟ್ (MLC) ಆರಂಭವಾದ ಬಳಿಕ ಅಮೆರಿಕದಲ್ಲಿ ಹಲವು ಹೊಸ ಕ್ರಿಕೆಟ್ ಮೈದಾನಗಳು ಅಭಿವೃದ್ಧಿಯಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ 128 ವರ್ಷಗಳ ಬಳಿಕ ಕ್ರಿಕೆಟ್ ಮತ್ತೆ ಸೇರ್ಪಡೆಯಾಗುತ್ತಿರುವುದು ಕೂಡ ಅಮೆರಿಕದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಲಿದೆ. ಲಾಸ್ ಏಂಜಲೀಸ್‌ನ ನೈಟ್ರೈಡರ್ಸ್ ಸ್ಟೇಡಿಯಂ ಒಲಿಂಪಿಕ್ಸ್ ಕ್ರಿಕೆಟ್ ಪಂದ್ಯಗಳ ಆತಿಥ್ಯ ವಹಿಸಲಿದೆ. ಈ ಮೈದಾನದಲ್ಲಿ 2034ರ ಟಿ20 ವಿಶ್ವಕಪ್ ಪಂದ್ಯಗಳನ್ನೂ ಆಯೋಜಿಸುವ ಸಾಧ್ಯತೆಯಿದೆ.

IND vs NZ 2nd Test: ಕ್ರೈಸ್ಟ್‌ಚರ್ಚ್‌ ಟೆಸ್ಟ್‌ ಗೆಲುವಿನ ಮೇಲೆ ಭಾರತ ಚಿತ್ತ, ಮೊಹಮ್ಮದ್‌ ಸಿರಾಜ್‌ಗೆ ಸ್ಥಾನ?

ಈ ಕ್ರೀಡಾಂಗಣವನ್ನು ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ಸಮೂಹ ನಿರ್ಮಿಸಿದೆ. ಈ ಸಮೂಹವು ಕೋಲ್ಕತಾ ನೈಟ್ ರೈಡರ್ಸ್, ಟ್ರಿನ್‌ಬಾಗೊ ನೈಟ್ ರೈಡರ್ಸ್ ಮತ್ತು ಅಬುಧಾಬಿ ನೈಟ್ ರೈಡರ್ಸ್ ತಂಡಗಳ ಮಾಲೀಕತ್ವವನ್ನೂ ಹೊಂದಿದೆ.

ಭಾರತದ ಸರಣಿಗೂ ಅಮೆರಿಕ ಆತಿಥ್ಯ?

ಇದೇ ವೇಳೆ ಮುಂದಿನ ವರ್ಷ ನಡೆಯಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿಯ ಎರಡು ಟಿ20 ಪಂದ್ಯಗಳನ್ನು ಅಮೆರಿಕದಲ್ಲಿ ಆಯೋಜಿಸುವ ನಿರೀಕ್ಷೆಯಿದೆ. ವಾಷಿಂಗ್ಟನ್ ಅಥವಾ ಫ್ಲೋರಿಡಾದಲ್ಲಿ ಈ ಪಂದ್ಯಗಳು ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

2024ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಮೆರಿಕದ ಮೂರು ಮೈದಾನಗಳಲ್ಲಿ ಪಂದ್ಯಗಳು ನಡೆದಿದ್ದವು. ನ್ಯೂಯಾರ್ಕ್‌ನ ತಾತ್ಕಾಲಿಕ ಕ್ರೀಡಾಂಗಣ (ಸದ್ಯ ಕೆಡವಲಾಗಿದೆ), ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೀ ಕ್ರಿಕೆಟ್ ಸ್ಟೇಡಿಯಂ ಮತ್ತು ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ಪಾರ್ಕ್ ಮೈದಾನಗಳು ಪಂದ್ಯಗಳಿಗೆ ಆತಿಥ್ಯ ವಹಿಸಿದ್ದವು.

ಮೊಹಮ್ಮದ್ ಅಝರುದ್ದೀನ್ ಸ್ಫೋಟಕ ಶತಕ: ಹಿಮಾಚಲ ಪ್ರದೇಶ ವಿರುದ್ಧ ಕೇರಳಕ್ಕೆ ಭರ್ಜರಿ ಜಯ!

ಒಂದು ವೇಳೆ 2034ರ ಟಿ20 ವಿಶ್ವಕಪ್ ಆತಿಥ್ಯ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ಗೆ ಲಭಿಸಿದರೆ, ಅಮೆರಿಕ ಎರಡನೇ ಬಾರಿ ಹಾಗೂ ವೆಸ್ಟ್ ಇಂಡೀಸ್ ಮೂರನೇ ಬಾರಿ ಈ ಟೂರ್ನಿಯನ್ನು ಆಯೋಜಿಸಿದಂತಾಗಲಿದೆ. ಇದಕ್ಕೂ ಮೊದಲು 2010ರಲ್ಲಿ ವೆಸ್ಟ್ ಇಂಡೀಸ್ ಏಕಾಂಗಿಯಾಗಿ ಟಿ20 ವಿಶ್ವಕಪ್‌ ಟೂರ್ನಿಗೆ ಆತಿಥ್ಯ ವಹಿಸಿತ್ತು.