ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಆರ್‌ಸಿಬಿಗೆ ಪಂದ್ಯ ಗೆದ್ದುಕೊಡಬಲ್ಲ ಐವರು ಸ್ಟಾರ್‌ ಆಟಗಾರರು!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಕ್ಕೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಇದೆ. ಮಾರ್ಚ್‌ 28 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುವ ಮೊದಲನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಕಾದಾಟ ನಡೆಸುತ್ತಿವೆ. ಅಂದ ಹಾಗೆ ಈ ಬಾರಿ ಆರ್‌ಸಿಬಿಗೆ ಪಂದ್ಯ ಗೆದ್ದು ಕೊಡಬಲ್ಲ ಐವರು ಸ್ಟಾರ್‌ ಆಟಗಾರರನ್ನು ಆರಿಸಿದ್ದಾರೆ.

ಆರ್‌ಸಿಬಿಗೆ ಪಂದ್ಯ ಗೆದ್ದುಕೊಡಬಲ್ಲ ಐವರು ಸ್ಟಾರ್‌ ಆಟಗಾರರು!

ಆರ್‌ಸಿಬಿಯ ಟಾಪ್‌ 5 ಮ್ಯಾಚ್‌ ವಿನ್ನರ್‌ಗಳು. -

Profile
Ramesh Kote Mar 20, 2026 9:38 PM

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2026) ಟೂರ್ನಿಯು ವರ್ಷದಿಂದ ವರ್ಷಕ್ಕೆ ತನ್ನ ಉತ್ಸುಕತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಅದರಂತೆ 2026ರ ಸಾಲಿನ ಟೂರ್ನಿಯು ಕೂಡ ಮತ್ತೊಂದು ರೋಚಕ ಪ್ರಯಾಣವನ್ನು ನೀಡುವ ಭರವಸೆ ಮೂಡಿಸಿದೆ. ಹಾಲಿ ಚಾಂಪಿಯನ್ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ, 2025ರಲ್ಲಿ 17 ವರ್ಷಗಳ ಬಳಿಕ ಚೊಚ್ಚಲ ಕಪ್‌ ಗೆಲ್ಲುವ ಕನಸನ್ನು ನನಸು ಮಾಡಿಕೊಂಡಿತ್ತು. ರೋಚಕ ಫೈನಲ್‌ನಲ್ಲಿ (RCB vs PBKS) ಪಂಜಾಬ್‌ ಕಿಂಗ್ಸ್‌ ವಿರುದ್ಧ ಜಯ ಸಾಧಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.

ಇದೀಗ ಅದೇ ಲಯವನ್ನು 19ನೇ ಆವೃತ್ತಿಯಲ್ಲಿಯೂ ಮುಂದುವರಿಸಲು ಆರ್‌ಸಿಬಿ ಎದುರು ನೋಡುತ್ತಿದೆ ಹಾಗೂ ಅತ್ಯುತ್ತಮ ಆಟಗಾರರನ್ನು ಒಳಗೊಂಡ ತಂಡವನ್ನು ಕಟ್ಟಿಕೊಂಡಿದೆ. ಮಾರ್ಚ್ 28ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿ, ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಮುಖಾಮುಖಿಯಾಗಲಿದೆ.

ಆರ್‌ಸಿಬಿ ತಂಡದ ಟಾಪ್‌ 5 ಮ್ಯಾಚ್‌ ವಿನ್ನರ್‌ಗಳು

1.ವಿರಾಟ್‌ ಕೊಹ್ಲಿ

ಉದ್ಘಾಟನಾ ಆವೃತ್ತಿಯಿಂದಲೂ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಿರುವ ವಿರಾಟ್‌ ಕೊಹ್ಲಿ ದೊಡ್ಡ ಮ್ಯಾಚ್‌ ವಿನ್ನರ್.‌ ಐಪಿಎಲ್‌ ಟೂರ್ನಿಯ ಇತಿಹಾಸದಲ್ಲಿಯೇ 8600ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಟಾಪ್‌ ಸ್ಕೋರರ್‌ ಆಗಿದ್ದಾರೆ. ಆರ್‌ಸಿಬಿ ಚೊಚ್ಚಲ ಕಪ್‌ ಗೆದ್ದ ಕಳೆದ ಸೀಸನ್‌ನಲ್ಲಿ ಕೊಹ್ಲಿ 657 ರನ್‌ಗಳನ್ನು ಕಲೆ ಹಾಕಿದ್ದಾರೆ. ಈ ಸೀಸನ್‌ನಲ್ಲಿ ಅವರು 8 ಅರ್ಧಶತಕಗಳನ್ನು ಬಾರಿಸಿದ್ದರು.

2.ಫಿಲ್‌ ಸಾಲ್ಟ್‌

ವಿರಾಟ್‌ ಕೊಹ್ಲಿ ಜತೆ ಇನಿಂಗ್ಸ್‌ ಆರಂಭಿಸುವ ಫಿಲ್‌ ಸಾಲ್ಟ್‌ ಕೂಡ ತಮ್ಮ ಅಪಾಯಕಾರಿ ಬ್ಯಾಟಿಂಗ್‌ ಮೂಲಕ ಆರ್‌ಸಿಬಿಗೆ ಮ್ಯಾಚ್‌ ವಿನ್ನರ್‌ ಆಗಿದ್ದಾರೆ. 2024ರಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟ ಬಳಿಕ 2025ರ ಸಾಲಿನಲ್ಲಿ ಆರ್‌ಸಿಬಿ ತಂಡಕ್ಕೆ ಬಂದು ತಕ್ಷಣ ತಮ್ಮ ಬ್ಯಾಟಿಂಗ್‌ ಮೂಲಕ ಪ್ರಭಾವವನ್ನು ಬೀರಿದ್ದರು. ಕಳೆದ ಆವೃತ್ತಿಯಲ್ಲಿ ಅವರು 176ಕ್ಕೂ ಅಧಿಕ ಸ್ಟ್ರೈಕ್‌ ರೇಟ್‌ನಲ್ಲಿ 400ಕ್ಕೂ ಅಧಿಕ ರನ್‌ ಬಾರಿಸಿದ್ದರು. ಪವರ್‌ಪ್ಲೇನಲ್ಲಿ ಭಯಮುಕ್ತವಾಗಿ ಬ್ಯಾಟ್‌ ಬೀಸುವ ಅವರು ಪಂದ್ಯದ ದಿಕ್ಕನ್ನು ಬದಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ.

3.ರಜತ್‌ ಪಾಟಿದಾರ್‌

ಆರ್‌ಸಿಬಿ ಚೊಚ್ಚಲ ಕಪ್‌ ಗೆಲುವಿನ ಕೇಂದ್ರ ಬಿಂದು ನಾಯಕ ರಜತ್‌ ಪಾಟಿದಾರ್‌. ನಾಯಕತ್ವದ ಜೊತೆಗೆ ಅವರ ಬ್ಯಾಟಿಂಗ್‌ ಸಾಮರ್ಥ್ಯ ಆರ್‌ಸಿಬಿಗೆ ನಿರ್ಣಾಯಕವಾಗಿದೆ. ನಾಯಕತ್ವದ ತಂತ್ರ, ಫೀಲ್ಡ್‌ ಸೆಟ್‌, ಬೌಲಿಂಗ್‌ ಬದಲಾವಣೆ ಸೇರಿದಂತೆ ರಜತ್‌ ಅದ್ಭುತ ನಾಯಕ. ಒತ್ತಡದ ಸನ್ನಿವೇಶಗಳಲ್ಲಿಯೂ ಅವರು ಉತ್ತಮ ನಿರ್ಣಯ ತೆಗೆದುಕೊಳ್ಳುತ್ತಾರೆ. ಇದೀಗ ಅವರು ಮತ್ತೊಂದು ಸೀಸನ್‌ನಲ್ಲಿಯೂ ತಮ್ಮ ಪ್ರಭಾವ ಬೀರಲು ಎದುರು ನೋಡುತ್ತಿದ್ದಾರೆ.

4.ಕೃಣಾಲ್‌ ಪಾಂಡ್ಯ

2025ರಲ್ಲಿ ಆರ್‌ಸಿಬಿ ಚೊಚ್ಚಲ ಪ್ರಶಸ್ತಿ ಗೆಲುವಿನಲ್ಲಿ ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ ಕೂಡ ಗಮನಾರ್ಹ ಪ್ರದರ್ಶನವನ್ನು ತೋರಿದ್ದರು. ಅವರು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಗಮನವನ್ನು ಸೆಳೆದಿದ್ದರು. ಅಲ್ಲದೆ ಫೈನಲ್‌ ಪಂದ್ಯದಲ್ಲಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಗೆದ್ದಿದ್ದರು. ಅವರು ಆಡಿದ್ದ 15 ಪಂದ್ಯಗಳಿಂದ 17 ವಿಕೆಟ್‌ಗಳನ್ನು ಕಬಳಿಸಿದ್ದರು ಹಾಗೂ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ಉಪಯುಕ್ತ ಕಾಣಿಕೆಯನ್ನು ನೀಡಿದ್ದರು.

5.ಭುವನೇಶ್ವರ್‌ ಕುಮಾರ್‌

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವುದನ್ನು ನಿಲ್ಲಿಸಿದರೂ ಹಿರಿಯ ವೇಗಿ ಭುವನೇಶ್ವರ್‌ ಕುಮಾರ್‌ ಐಪಿಎಲ್‌ ಟೂರ್ನಿಯಲ್ಲಿ ತಮ್ಮ ಪ್ರಭಾವವನ್ನು ಇನ್ನೂ ಮುಂದುವರಿಸಿದ್ದಾರೆ. ಇದಕ್ಕೆ ಸಾಕ್ಷಿ 2025ರ ಐಪಿಎಲ್‌ ಟೂರ್ನಿಯಲ್ಲಿನ ಪ್ರದರ್ಶನ. ಅವರು ಕಳೆದ ಸೀಸನ್‌ನಲ್ಲಿ 14 ಪಂದ್ಯಗಳಿಂದ 17 ವಿಕೆಟ್‌ಗಳನ್ನು ಕಬಳಿಸಿದ್ದರು. ಹೊಸ ಚೆಂಡಿನಲ್ಲಿ ಎರಡೂ ಬದಿಯಲ್ಲಿ ಸ್ವಿಂಗ್‌ ಹಾಗೂ ಡೆತ್‌ ಓವರ್‌ಗಳಲ್ಲಿ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿ ಹಾಕಬಲ್ಲ ಚಾಣಾಕ್ಷತನವನ್ನು ಭುವಿ ಹೊಂದಿದ್ದಾರೆ. ಅವರು ಐಪಿಎಲ್‌ ಟೂರ್ನಿಯಲ್ಲಿ ಹೆಚ್ಚೂ ಕಮ್ಮಿ 200 ವಿಕೆಟ್‌ಗಳನ್ನು ಕಬಳಿಸಿದ್ದಾರೆ.