RCB vs RR: ʼಡಿಯರ್ ವೈಭವ್ʼ; ಸೂರ್ಯವಂಶಿಯನ್ನು ಕೊಂಡಾಡಿದ ವಿರಾಟ್ ಕೊಹ್ಲಿ
Virat Kohli: ಈ ಬಾರಿ ಐಪಿಎಲ್‌ನಲ್ಲಿ ವೈಭವ್ ಆಡಿದ 4 ಪಂದ್ಯಗಳ ಪೈಕಿ 2ರಲ್ಲಿ ತಲಾ 15 ಎಸೆತಕ್ಕೆ ಅರ್ಧಶತಕ ಬಾರಿಸಿದ್ದಾರೆ. ಇತ್ತೀಚೆಗೆ ಚೆನ್ನೈ ವಿರುದ್ಧ 15 ಎಸೆತಕ್ಕೆ 50 ರನ್ ಪೂರೈಸಿದ್ದರು. ಒಟ್ಟಾರೆ ಐಪಿಎಲ್‌ನಲ್ಲಿ ವೈಭವ್ 3 ಬಾರಿ 17 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ.
Vaibhav Sooryavanshi -
ಗುವಾಹಟಿ, ಎ.11: ಆರ್‌ಸಿಬಿ(RCB vs RR) ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬೌಂಡರಿ, ಸಿಕ್ಸರ್‌ಗಳ ಮೂಲಕ ಸ್ಫೋಟಕ ಬ್ಯಾಟಿಂಗ್ ನಡೆಸಿದ 15 ವರ್ಷದ ವೈಭವ್ ಸೂರ್ಯವಂಶಿಯ ಆಟಕ್ಕೆ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಮನಸೋತಿದ್ದಾರೆ. ಪಂದ್ಯದ ನಂತರ ವೈಭವ್ ಅವರನ್ನು ಭೇಟಿಯಾದ ಕೊಹ್ಲಿ, ಅವರ ಕ್ಯಾಪ್ ಮೇಲೆ 'ಡಿಯರ್ ವೈಭವ್, ವೆಲ್ ಡನ್' ಎಂದು ಬರೆದು ಆಟೋಗ್ರಾಫ್ ನೀಡುವ ಮೂಲಕ ವಿಶೇಷವಾಗಿ ಅಭಿನಂದಿಸಿದ್ದಾರೆ. ಕೊಹ್ಲಿಯ ಈ ನಡೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಭುವನೇಶ್ವರ್ ಕುಮಾರ್ ಓವರ್‌ನಲ್ಲಿ ತಾನೆದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದ ವೈಭವ್, ಆ ಬಳಿಕ ಹಿಂದಿರುಗಿ ನೋಡಲೇ ಇಲ್ಲ. ಹೇಜಲ್‌ವುಡ್‌ರ ಮೊದಲ ಎಸೆತವನ್ನೇ ಬೌಂಡರಿಗಟ್ಟಿ ಆ ಓವರ್‌ನಲ್ಲಿ ಸಿಕ್ಸರ್ ಸಹಿತ 18 ರನ್ ದೋಚಿದರು. 15 ಎಸೆತಕ್ಕೆ ಅರ್ಧಶತಕ ಪೂರ್ತಿಗೊಳಿಸಿದರು. 6 ಓವರ್‌ನಲ್ಲಿ ತಂಡದ ಸ್ಕೋರ್ 1 ವಿಕೆಟ್‌ಗೆ 97. ಬೌಂಡರಿ, ಸಿಕ್ಸರ್ ಮೂಲಕವೇ ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದ ವೈಭವ್, 26 ಎಸೆತಕ್ಕೆ 78 ರನ್ ಸಿಡಿಸಿದರು.
A job well done with a long road ahead! 💗 pic.twitter.com/tymVTrdeqK
— Rajasthan Royals (@rajasthanroyals) April 11, 2026
ಈ ಬಾರಿ ಐಪಿಎಲ್‌ನಲ್ಲಿ ವೈಭವ್ ಆಡಿದ 4 ಪಂದ್ಯಗಳ ಪೈಕಿ 2ರಲ್ಲಿ ತಲಾ 15 ಎಸೆತಕ್ಕೆ ಅರ್ಧಶತಕ ಬಾರಿಸಿದ್ದಾರೆ. ಇತ್ತೀಚೆಗೆ ಚೆನ್ನೈ ವಿರುದ್ಧ 15 ಎಸೆತಕ್ಕೆ 50 ರನ್ ಪೂರೈಸಿದ್ದರು. ಒಟ್ಟಾರೆ ಐಪಿಎಲ್‌ನಲ್ಲಿ ವೈಭವ್ 3 ಬಾರಿ 17 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ.
15 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಎರಡು ಐಪಿಎಲ್ ಅರ್ಧಶತಕಗಳನ್ನು ಗಳಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎನಿಸಿದರು. 2024 ರ ಐಪಿಎಲ್ ಆವೃತ್ತಿಯಲ್ಲಿ, ಆಸ್ಟ್ರೇಲಿಯಾದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಡೆಲ್ಲಿ ಕ್ಯಾಪಿಟಲ್ಸ್ ಪರ 15 ಎಸೆತಗಳಲ್ಲಿ ಎರಡು ಅರ್ಧಶತಕಗಳನ್ನು ಗಳಿಸಿದ್ದು ಸಾಧನೆ.
ಅಪಾಯಕಾರಿ ಬೌಲರ್‌ಗಳ ಎದುರು ಬ್ಯಾಟ್ ಬೀಸುವಾಗ ಭಯವಾಗಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ವೈಭವ್, "ಯಾರು ಬೌಲಿಂಗ್ ಮಾಡುತ್ತಿದ್ದಾರೆ ಎಂಬುದು ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಓಡುತ್ತಿರುತ್ತದೆ. ಆದರೆ ಬ್ಯಾಟಿಂಗ್ ಮಾಡುವಾಗ ನನ್ನ ಸಂಪೂರ್ಣ ಗಮನ ಚೆಂಡಿನ ಮೇಲಿತ್ತೇ ಹೊರತು ಬೌಲರ್ ಮೇಲಲ್ಲ. ಚೆಂಡಿನ ವೇಗ ಮತ್ತು ಲೈನ್ ನೋಡಿ, ನಾನು ಅಭ್ಯಾಸ ಮಾಡಿದ್ದನ್ನೇ ಮೈದಾನದಲ್ಲಿ ಅಳವಡಿಸಿಕೊಂಡೆ. ನನ್ನ ಸಹಜ ಆಟಕ್ಕೆ ನಾನು ಒತ್ತು ನೀಡಿದೆ" ಎಂದು ಹೇಳಿದರು.
ತಮ್ಮ ಯಶಸ್ಸಿನ ಹಾದಿಯ ಬಗ್ಗೆ ಮಾತನಾಡಿದ ಸೂರ್ಯವಂಶಿ, "ನನ್ನ ಮೊದಲ ಕೋಚ್ ತಂದೆ, ಮತ್ತು ನನ್ನ ಮಾರ್ಗದರ್ಶಿ ರೋಹಿತ್ ಸರ್ ಯಾವಾಗಲೂ ನನ್ನನ್ನು ಪ್ರೋತ್ಸಾಹಿಸುತ್ತಾರೆ. ಇದು ಸುದೀರ್ಘ ಪ್ರಯಾಣ, ಇದು ಕೇವಲ ಆರಂಭವಷ್ಟೇ" ಎಂದು ತಿಳಿಸಿದರು.