ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ vs ನ್ಯೂಜಿಲೆಂಡ್ ಮೊದಲ ಟೆಸ್ಟ್: ಪಂದ್ಯ ಆರಂಭ, ನೇರಪ್ರಸಾರದ ಮಾಹಿತಿ

India Vs New Zealand 1st Test: ಮೂಳೆ ಮುರಿತದ ಕಾರಣದಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ಮಿಚೆಲ್ ಸ್ಯಾಂಟ್ನರ್ ಅವರ ಸೇವೆಯನ್ನು ಕಿವೀಸ್ ತಂಡವು ಸರಣಿಯ ಮೊದಲ ಪಂದ್ಯದಲ್ಲಿ ಕಳೆದುಕೊಳ್ಳಲಿದೆ. ಆದರೆ, ರಚಿನ್ ರವೀಂದ್ರ ಮತ್ತು ಡೆವೊನ್ ಕಾನ್ವೇ ಅವರ ಮರಳುವಿಕೆಯು ತಂಡಕ್ಕೆ ಬಲ ತುಂಬಲಿದೆ.

ಭಾರತ vs ಕಿವೀಸ್‌ ಮೊದಲ ಟೆಸ್ಟ್: ಎಷ್ಟು ಗಂಟೆಗೆ ಪಂದ್ಯ ಆರಂಭ?

Ravindra Jadeja -

Abhilash BC
Abhilash BC Nov 18, 2026 12:25 PM

ವೆಲ್ಲಿಂಗ್ಟನ್‌, ನ.18: ಗುರುವಾರದಿಂದ ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್‌ನಲ್ಲಿ ನಡೆಯಲಿರುವ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. 2027ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಜೀವಂತವಾಗಿರಿಸಿಕೊಳ್ಳಲು, ನ್ಯೂಜಿಲೆಂಡ್ ವಿರುದ್ಧದ ಈ ಎರಡು ಟೆಸ್ಟ್ ಪಂದ್ಯಗಳನ್ನು ಗೆಲ್ಲುವುದು ಭಾರತಕ್ಕೆ ಅನಿವಾರ್ಯವಾಗಿದೆ. ಹೀಗಾಗಿ, ಸರಣಿಯ ಮೊದಲ ಪಂದ್ಯವನ್ನೇ ಗೆಲ್ಲುವ ಮೂಲಕ ಶುಭಾರಂಭ ಮಾಡಲು ಭಾರತ ತಂಡವು ಎದುರು ನೋಡುತ್ತಿದೆ.

ಭಾರತ ಟಿ20 ಮತ್ತು ಏಕದಿನ ಸರಣಿಯನ್ನು ಗೆದ್ದಿದ್ದರೂ, ಟೆಸ್ಟ್‌ ಸರಣಿ ಗೆಲುವುದು ಅಷ್ಟು ಸುಲಭದ ಕೆಲಸಲ್ಲ. ಏಕೆಂದರೆ ತಮ್ಮ ತವರು ನೆಲದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ ತಂಡ ಅತ್ಯುತ್ತಮ ದಾಖಲೆಯನ್ನು ಹೊಂದಿವೆ. ಮಾರ್ಚ್ 2009 ರಿಂದೀಚೆಗೆ, ತಮ್ಮ ತವರು ನೆಲದಲ್ಲಿ ಭಾರತದ ವಿರುದ್ಧ ಅವರು ಯಾವುದೇ ಟೆಸ್ಟ್ ಪಂದ್ಯವನ್ನು ಸೋತಿಲ್ಲ. 'ಬೇಸಿನ್ ರಿಸರ್ವ್' ಮೈದಾನದಲ್ಲಿ ಭಾರತದ ವಿರುದ್ಧ ಅವರು ಕೊನೆಯದಾಗಿ ಟೆಸ್ಟ್ ಪಂದ್ಯವೊಂದರಲ್ಲಿ ಸೋತಿದ್ದು 1968 ರಲ್ಲಿ!



ಮೂಳೆ ಮುರಿತದ ಕಾರಣದಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ಮಿಚೆಲ್ ಸ್ಯಾಂಟ್ನರ್ ಅವರ ಸೇವೆಯನ್ನು ಕಿವೀಸ್ ತಂಡವು ಸರಣಿಯ ಮೊದಲ ಪಂದ್ಯದಲ್ಲಿ ಕಳೆದುಕೊಳ್ಳಲಿದೆ. ಆದರೆ, ರಚಿನ್ ರವೀಂದ್ರ ಮತ್ತು ಡೆವೊನ್ ಕಾನ್ವೇ ಅವರ ಮರಳುವಿಕೆಯು ತಂಡಕ್ಕೆ ಬಲ ತುಂಬಲಿದೆ.

ಮತ್ತೊಂದೆಡೆ, ಭಾರತ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಮರಳಲಿದ್ದಾರೆ. 32 ವರ್ಷದ ಬುಮ್ರಾಗೆ ವೈಟ್‌ ಬಾಲ್‌ ಪ್ರವಾಸದ ಸರಣಿಗಳಲ್ಲಿ ವಿಶ್ರಾಂತಿ ನೀಡಲಾಗಿತ್ತು. ಅಲ್ಲದೆ, ಅವರು ನವೆಂಬರ್ 2025 ರಿಂದ ಭಾರತಕ್ಕಾಗಿ ಯಾವುದೇ ಟೆಸ್ಟ್ ಪಂದ್ಯವನ್ನು ಆಡಿಲ್ಲ. ಸುಮಾರು ಒಂದು ವರ್ಷದ ನಂತರ ಭಾರತದ ಪರ ಆಡುತ್ತಿರುವ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ, ಬುಮ್ರಾ ವೇಗದ ಬೌಲಿಂಗ್ ವಿಭಾಗದ ನೇತೃತ್ವ ವಹಿಸಲಿದ್ದು, ಅವರಿಗೆ ಬೆಂಬಲವಾಗಿ ಕನಿಷ್ಠ ಮೂವರು ವಿಶೇಷ ವೇಗದ ಬೌಲರ್‌ಗಳು ಇರಲಿದ್ದಾರೆ.

ಭಾರತ ತಂಡ ಮೊದಲ ಪಂದ್ಯದಲ್ಲಿ 7 ಬ್ಯಾಟರ್‌ಗಳು ಮತ್ತು ನಾಲ್ಕು ವೇಗಿಗಳ ಸಂಯೋಜನೆಯಲ್ಲಿ ಕಣಕ್ಕಿಳಿಯಲಿದೆ ಎಂದು ಈಗಾಗಲೇ ನಾಯಕ ಶುಭಮನ್‌ ಗಿಲ್‌ ಹೇಳಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ ಮತ್ತು ದೇವದತ್ತ ಪಡಿಕ್ಕಲ್ ಅವರು ಈ ಪ್ರವಾಸದಲ್ಲಿ ಮೊದಲ ಬಾರಿಗೆ ಕಿವೀಸ್ (ನ್ಯೂಜಿಲೆಂಡ್) ತಂಡವನ್ನು ಎದುರಿಸಲಿದ್ದಾರೆ. ಏಕೆಂದರೆ ಇವರನ್ನು ಕೇವಲ ಟೆಸ್ಟ್ ಸರಣಿಗಾಗಿ ಮಾತ್ರ ಆಯ್ಕೆ ಮಾಡಲಾಗಿತ್ತು.

ಪಂದ್ಯ ಆರಂಭ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 03:30 ಗಂಟೆಗೆ ಪ್ರಾರಂಭವಾಗಲಿದೆ.

ಪ್ರಸಾರ

ಪಂದ್ಯವು, ಭಾರತದಲ್ಲಿ ಸೋನಿ ಟೆನ್ 1 (Sony Ten 1) ಮತ್ತು ಸೋನಿ ಟೆನ್ 3 (Sony Ten 3) ಟಿವಿ ವಾಹಿನಿಗಳಲ್ಲಿ ಭಾರತೀಯ ಕಾಲಮಾನ (IST) ಪ್ರಕಾರ ಬೆಳಿಗ್ಗೆ 03:30 ರಿಂದ ನೇರ ಪ್ರಸಾರವಾಗಲಿದೆ. ಈ ಪಂದ್ಯವು ಭಾರತೀಯ ಕಾಲಮಾನ (IST) ಪ್ರಕಾರ ಬೆಳಿಗ್ಗೆ 11:00 ರವರೆಗೆ ನಡೆಯಲಿದೆ. ಸೋನಿ ಲಿವ್ (Sony LIV) ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಉಭಯ ತಂಡಗಳು

ಭಾರತ: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಕೆಎಲ್ ರಾಹುಲ್, ಧ್ರುವ್ ಜುರೆಲ್ (ವಿ.ಕೀ.), ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ರಿಷಬ್ ಪಂತ್ (ವಿ.ಕೀ.), ವಾಷಿಂಗ್ಟನ್ ಸುಂದರ್, ಅನ್ಶುಲ್ ಕಾಂಬೋಜ್, ಆಕಾಶ್ ದೀಪ್, ಗುರ್ನೂರ್ ಬ್ರಾರ್.

ನ್ಯೂಜಿಲೆಂಡ್‌: ಟಾಮ್ ಲ್ಯಾಥಮ್ (ನಾಯಕ), ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ನೇಥನ್ ಸ್ಮಿತ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಜಾಕೋಬ್ ಡಫಿ, ಬ್ಲೇರ್ ಟಿಕ್ನರ್, ಡೀನ್ ಫಾಕ್ಸ್‌ಕ್ರಾಫ್ಟ್, ವಿಲ್ ಯಂಗ್.