Asia Cup squads: ಆ. 19 ಅಥವಾ 20ಕ್ಕೆ ಭಾರತ ಏಷ್ಯಾಕಪ್ ತಂಡ ಪ್ರಕಟ
ಪ್ರಧಾನ ವೇಗಿ ಜಸ್‌ಪ್ರೀತ್ ಬುಮ್ರಾ ಏಷ್ಯಾಕಪ್‌ನಲ್ಲಿ ಆಡುವ ಸಾಧ್ಯತೆ ಹೆಚ್ಚಿದು, ಅರ್ಷದೀಪ್ ಸಿಂಗ್ ಜತೆ 3ನೇ ವೇಗದ ಬೌಲರ್ ಸ್ಥಾನಕ್ಕೆ ಪ್ರಸಿದ್ಧ್ ಕೃಷ್ಣ ಮತ್ತು ಹರ್ಷಿತ್ ರಾಣಾ ನಡುವೆ ಪೈಪೋಟಿ ಇದೆ. ಮೊಹಮ್ಮದ್ ಸಿರಾಜ್ ಮತ್ತು ಶಮಿಗೆ ಅವಕಾಶ ಸಿಗುವುದು ಅನುಮಾನ.


ಮುಂಬಯಿ: ಮುಂದಿನ ತಿಂಗಳು ನಡೆಯಲಿರುವ ಏಷ್ಯಾಕಪ್ ಟಿ20 ಟೂರ್ನಿಗೆ(Asia Cup 2025) ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಆಗಸ್ಟ್ 19 ಅಥವಾ 20ರಂದು ಮುಂಬೈನಲ್ಲಿ ಸಭೆ ಸೇರಿ ಭಾರತ ತಂಡವನ್ನು(Asia Cup squads) ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸದ್ಯ ಬೆಂಗಳೂರಿನ ಎನ್‌ಸಿಎಯಲ್ಲಿರುವ ನಾಯಕ ಸೂರ್ಯಕುಮಾರ್ ಯಾದವ್(Suryakumar Yadav) ಸೇರಿ ಕೆಲ ಆಟಗಾರರ ಫಿಟ್ನೆಸ್ ವರದಿ ಸಿಕ್ಕ ತಕ್ಷಣ ಆಯ್ಕೆ ಸಮಿತಿ ಸಭೆ ನಡೆಸಲಿದೆ. ರಿಷಭ್ ಪಂತ್ ಗಾಯಗೊಂಡಿರುವ ಕಾರಣ ಸಂಜು ಸ್ಯಾಮ್ಸನ್ ಜತೆಗೆ 2ನೇ ವಿಕೆಟ್ ಕೀಪರ್ ಸ್ಥಾನಕ್ಕೆ ಜಿತೀಶ್ ಶರ್ಮ ಮತ್ತು ಧ್ರುವ್ ಜುರೆಲ್ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ ಎನ್ನಲಾಗಿದೆ.
ಪ್ರಧಾನ ವೇಗಿ ಜಸ್‌ಪ್ರೀತ್ ಬುಮ್ರಾ ಏಷ್ಯಾಕಪ್‌ನಲ್ಲಿ ಆಡುವ ಸಾಧ್ಯತೆ ಹೆಚ್ಚಿದು, ಅರ್ಷದೀಪ್ ಸಿಂಗ್ ಜತೆ 3ನೇ ವೇಗದ ಬೌಲರ್ ಸ್ಥಾನಕ್ಕೆ ಪ್ರಸಿದ್ಧ್ ಕೃಷ್ಣ ಮತ್ತು ಹರ್ಷಿತ್ ರಾಣಾ ನಡುವೆ ಪೈಪೋಟಿ ಇದೆ. ಮೊಹಮ್ಮದ್ ಸಿರಾಜ್ ಮತ್ತು ಶಮಿಗೆ ಅವಕಾಶ ಸಿಗುವುದು ಅನುಮಾನ.
ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಗಾಯಗೊಂಡ ನಿತೀಶ್ ಕುಮಾರ್ ಫಿಟ್ ಆಗುವ ಸಾಧ್ಯತೆ ಇಲ್ಲ. ಹೀಗಾಗಿ ಹಾರ್ದಿಕ್ ಪಾಂಡ್ಯ ಜತೆ ಮತೋರ್ವ ಆಲ್‌ರೌಂಡರ್ ಆಗಿ ಶಿವಂ ದುಬೆ ಅವಕಾಶ ಪಡೆಯಬಹುದು. ಕಳೆದ ವರ್ಷ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ದುಬೆ ಆಡಿದ್ದರು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ಗೆ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಕಾರಣದಿಂದ ಬಿಸಿಸಿಐ ವಿಶ್ರಾಂತಿ ನೀಡಲು ನಿರ್ಧರಿಸಿದೆ ಎನ್ನಲಾಗಿದೆ.
ಇದನ್ನೂ ಓದಿ Suryakumar Yadav: ಶಸ್ತ್ರಚಿಕಿತ್ಸೆ ಬಳಿಕ ಮೊದಲ ಬಾರಿಗೆ ಅಭ್ಯಾಸ ನಡೆಸಿದ ಸೂರ್ಯಕುಮಾರ್
ಭಾರತದ ಸಂಭಾವ್ಯ ಏಷ್ಯಾ ಕಪ್ ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿ.ಕೀ.), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್, ಹರ್ಷಿತ್ ರಾಣಾ/ಪ್ರಸಿದ್ ಕೃಷ್ಣ, ಜಿತೇಶ್ ಶರ್ಮಾ/ಧ್ರುವ್ ಜುರೆಲ್.