Mohammed Shami: ರಂಜಾನ್ ಉಪವಾಸದ ವೇಳೆ ಜ್ಯೂಸ್ ಕುಡಿದದ್ದನ್ನು ಸಮರ್ಥಿಸಿಕೊಂಡ ಶಮಿ
ಕುರಾನ್‌ನಲ್ಲಿಯೂ ಸಹ ಅನಿವಾರ್ಯ ಸಂದರ್ಭಗಳಲ್ಲಿ ಉಪವಾಸ ಮಾಡದಿರಲು ಅವಕಾಶವಿದೆ ಎಂದು ಹೇಳುವ ಮೂಲಕ ರಂಜಾನ್ ಮಾಸದಲ್ಲಿ ರೋಜಾ (ಉಪವಾಸ) ಪಾಲಿಸದೆ ಪಾನೀಯ ಸೇವಿಸಿ ಪಾಪ ಕೃತ್ಯವೆಸಗಿದ್ದಾರೆ ಎಂದು ಟೀಕಿಸಿದ್ದವರಿಗೆ ಮೊಹಮ್ಮದ್ ಶಮಿ ತಿರುಗೇಟು ನೀಡಿದ್ದಾರೆ.


ನವದೆಹಲಿ: ಕಳೆದ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ (ಮಾರ್ಚ್ 4ರಂದು) ಪಂದ್ಯದ ವೇಳೆ ಭಾರತ ಕ್ರಿಕೆಟ್ ತಂಡದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ(Mohammed Shami), ರಂಜಾನ್ ಮಾಸದಲ್ಲಿ ರೋಜಾ (ಉಪವಾಸ) ಪಾಲಿಸದೆ ಪಾನೀಯ ಸೇವಿಸಿದ್ದು ಭಾರೀ ಸುದ್ದಿಯಾಗಿತ್ತು. ಶಮಿ ವಿರುದ್ಧ ಆಲ್ ಇಂಡಿಯಾ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಝ್ವಿ ಬರೆಲ್ವಿ ಸೇರಿ ಅನೇಕರು ಶಮಿ ವಿರುದ್ಧ ಕಿಡಿಕಾರಿದ್ದರು. ಅಂದು ನಡೆದ ಈ ಘಟನೆಗೆ ಶಮಿ ಇದೀಗ ಪ್ರತಿಕ್ರಿಯಿಸಿದ್ದಾರೆ. ಕುರಾನ್‌ನಲ್ಲಿಯೂ ಸಹ ಅನಿವಾರ್ಯ ಸಂದರ್ಭಗಳಲ್ಲಿ ಉಪವಾಸ ಮಾಡದಿರಲು ಅವಕಾಶವಿದೆ ಎಂದು ಹೇಳಿದ್ದಾರೆ.
ನ್ಯೂಸ್ 24 ಸಂದರ್ಶನದಲ್ಲಿ ಮಾತನಾಡಿದ ಶಮಿ, ದೇಶಕ್ಕಾಗಿ ಎಷ್ಟೇ ಚೆನ್ನಾಗಿ ಆಡಿದರೂ, ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಅಪಹಾಸ್ಯ ಮತ್ತು ದ್ವೇಷ ಎದುರಾಗುತ್ತದೆ. ಅನಿವಾರ್ಯ ಸಂದರ್ಭಗಳಲ್ಲಿ ಉಪವಾಸ ಮುರಿಯಲು ಪವಿತ್ರ ಗ್ರಂಥ ಕುರಾನ್‌ನಲ್ಲಿಯೂ ಅವಕಾಶವಿದೆ. 42-45 ಡಿಗ್ರಿ ಉಷ್ಣಾಂಶದಲ್ಲಿ ನಾವು ಆಟ ಆಡುತ್ತೇವೆ. ಟೀಕಿಸುವವರು ಇದನ್ನೂ ಅರ್ಥ ಮಾಡಿಕೊಳ್ಳಬೇಕು. ಅನಿವಾರ್ಯ ಸಂದರ್ಭಗಳಲ್ಲಿ ಉಪವಾಸ ಮುರಿಯಬಹುದು, ನಂತರ ಪ್ರಾಯಶ್ಚಿತ್ತ ಮಾಡಿಕೊಳ್ಳಬಹುದು ಎಂದು ಕುರಾನ್‌ನಲ್ಲಿ ಹೇಳಲಾಗಿದೆ. ನಾನು ಅದನ್ನು ಮಾಡುತ್ತೇನೆ. ಕೆಲವರು ಪ್ರಸಿದ್ಧಿಗಾಗಿ ಟೀಕಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಟ್ರೋಲ್‌ಗಳು ಮತ್ತು ಕಾಮೆಂಟ್‌ಗಳನ್ನು ನಾನು ಈಗ ಗಮನಿಸುವುದಿಲ್ಲ" ಎಂದು ಹೇಳುವ ಮೂಲಕ ಶಮಿ, ಅಂದು ಟೀಕಿಸಿದವರಿಗೆ ತಕ್ಕ ತಿರುಗೇಟು ನೀಡಿದರು.
ಇದನ್ನೂ ಓದಿ Mohammed Shami: 'ಗೆಳತಿಗಾಗಿ...'; ಶಮಿ ವಿರುದ್ಧ ಮಾಜಿ ಪತ್ನಿ ಹಸೀನ್ ಗಂಭೀರ ಆರೋಪ!
ಏಷ್ಯಾಕಪ್‌ನಿಂದ ಕೈಬಿಟ್ಟ ವಿಚಾರದಲ್ಲೂ ಶಮಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ನಾನು ಆಯ್ಕೆ ಮಾಡದಿದ್ದಕ್ಕಾಗಿ ಯಾರನ್ನೂ ದೂಷಿಸುವುದಿಲ್ಲ ಅಥವಾ ಅದರ ಬಗ್ಗೆ ದೂರು ನೀಡುವುದಿಲ್ಲ. ನಾನು ತಂಡಕ್ಕೆ ಸರಿಯಾಗಿದ್ದರೆ, ನನ್ನನ್ನು ಆಯ್ಕೆ ಮಾಡಿ; ನಾನು ಸರಿಯಾಗಿಲ್ಲದಿದ್ದರೆ, ನನಗೆ ಅದರಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಟೀಮ್ ಇಂಡಿಯಾಕ್ಕೆ ಉತ್ತಮವಾದದ್ದನ್ನು ಮಾಡುವ ಜವಾಬ್ದಾರಿ ಆಯ್ಕೆದಾರರ ಮೇಲಿದೆ. ನನಗೆ ಅವಕಾಶ ಸಿಕ್ಕಾಗ, ನನ್ನ ಅತ್ಯುತ್ತಮ ಪ್ರದರ್ಶನ ನೀಡುವ ನಂಬಿಕೆ ನನ್ನಲ್ಲಿದೆ. ನಾನು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ. ನಾನು ದುಲೀಪ್ ಟ್ರೋಫಿ ಆಡಲು ಸಾಧ್ಯವಾದರೆ, ನಾನು ಟಿ 20 ಕ್ರಿಕೆಟ್ ಆಡಲು ಏಕೆ ಸಾಧ್ಯವಾಗುವುದಿಲ್ಲ?" ಎಂದು ಶಮಿ ಹೇಳಿದರು.