ರಿಕರ್ವ್ ಆರ್ಚರಿ ವಿಶ್ವಕಪ್: ಚಿನ್ನದ ಪದಕ ಗೆದ್ದು ಇತಿಹಾಸ ಬರೆದ ಭಾರತದ ದೀರಜ್ ಬೊಮ್ಮದೇವರ!
ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಧೀರಜ್ ಬೊಮ್ಮದೇವರ ಅವರು ಚಿನ್ನದ ಪದಕವನ್ನು ಗೆದ್ದಿದ್ದಾರೆ. ಆ ಮೂಲಕ ರಿಕರ್ವ್ ಅರ್ಚರಿ ವಿಶ್ವಕಪ್ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಪುರುಷರ ರಿಕರ್ವ್ ಅಚ್ಚರಿ ಪಟು ಎಂಬ ಖ್ಯಾತಿಗೆ ಧೀರಜ್ ಭಾಜನರಾಗಿದ್ದಾರೆ. ಇವರು ಜಪಾನ್‌ನ ನಕನಿಶಿ ಅವರ ಎದುರು ಪ್ರಾಬಲ್ಯ ಸಾಧಿಸುವ ಮೂಲಕ ಚಾಂಪಿಯನ್ ಆಗಿದ್ದಾರೆ.
ರಿಕರ್ವ್ ಆರ್ಚರಿ ವಿಶ್ವಕಪ್ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದ ಧೀರಜ್ ಬೊಮ್ಮದೇವರ. -
ನವದೆಹಲಿ: ಭಾರತದ ಧೀರಜ್ ಬೊಮ್ಮದೇವರ (Dhiraj Bommadevara) ಅವರು ಭಾನುವಾರ ರಿಕರ್ವ್ ಆರ್ಚರಿ ವಿಶ್ವಕಪ್ ಫೈನಲ್‌ನಲ್ಲಿ (Archer World Cup 2026) ಐತಿಹಾಸಿಕ ಸಾಧನೆ ಮಾಡಿದ್ದಾರೆ. ಜಪಾನ್‌ನ ನಕನಿಶಿ ಜುನ್ಯಾ ವಿರುದ್ಧ ನಡೆದ ರೋಚಕ ಶೂಟ್‌ಆಫ್‌ನಲ್ಲಿ ಅದ್ಭುತ ಸಂಯಮ ಪ್ರದರ್ಶಿಸಿದ ಧೀರಜ್, ವಿಶ್ವಕಪ್ ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಪುರುಷ ರಿಕರ್ವ್ ಅರ್ಚರಿ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
25ರ ವಯ್ಸಸಿನ ಆರ್ಮಿ ಆರ್ಚರಿ ಪಟು ಹಾಗೂ ವಿಶ್ವದ 10ನೇ ಶ್ರೇಯಾಂಕಿತ ಆಟಗಾರ ಧೀರಜ್, 20ನೇ ಶ್ರೇಯಾಂಕದ ಜಪಾನ್ ಆಟಗಾರ ನಕನಿಶಿ ಜುನ್ಯಾ ಅವರನ್ನು ಐದು ಸೆಟ್‌ಗಳ ಕಠಿಣ ಹೋರಾಟದಲ್ಲಿ 6-5 ಅಂತರದಲ್ಲಿ ಮಣಿಸಿದರು. ಬಳಿಕ ನಡೆದಿದ್ದ ನಿರ್ಣಾಯಕ ಶೂಟ್‌ಆಫ್‌ನಲ್ಲಿ ಧೀರಜ್ 10-9 ಅಂತರದಲ್ಲಿ ಗೆದ್ದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಗೆಲುವಿನೊಂದಿಗೆ ಪ್ರತಿಷ್ಠಿತ ಋತುವಿನ ಅಂತ್ಯದ ವಿಶ್ವಕಪ್ ಫೈನಲ್‌ನಲ್ಲಿ ಭಾರತೀಯ ಪುರುಷ ರಿಕರ್ವ್ ಆರ್ಚರಿ ಪದಕ ಗೆಲ್ಲಲು ಕಾಯುತ್ತಿದ್ದ 16 ವರ್ಷಗಳ ನಿರೀಕ್ಷೆಗೂ ತೆರೆ ಬಿದ್ದಿದೆ.
ಧೀರಜ್ ಅವರು 2023 ಮತ್ತು 2024ರ ವಿಶ್ವಕಪ್ ಫೈನಲ್ ಆವೃತ್ತಿಗಳಲ್ಲಿ ಪದಕವಿಲ್ಲದೆ ಹಿಂತಿರುಗಿದ್ದರು. ಆದರೆ ಈ ಬಾರಿ ಅತ್ಯುತ್ತಮ ಫಾರ್ಮ್‌ನೊಂದಿಗೆ ಕಣಕ್ಕಿಳಿದ ಅವರು, ಅದೇ ಲಯವನ್ನು ಅಂತಿಮ ಪಂದ್ಯವರೆಗೂ ಮುಂದುವರಿಸಿ ಐತಿಹಾಸಿಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
US Open 2026: ಬೆನ್ ಶೆಲ್ಟನ್ ವಿರುದ್ಧ ಗೆದ್ದು ಯುಎಸ್ ಓಪನ್ ಮುಡಿಗೇರಿಸಿಕೊಂಡ ಅಲೆಕ್ಸಾಂಡರ್ ಜ್ವೆರೆವ್!
ಚಿನ್ನದ ಪದಕಕ್ಕಾಗಿ ನಡೆದ ಫೈನಲ್ ಪಂದ್ಯ ನಿರೀಕ್ಷೆಯಂತೆ ಸುಲಭವಾಗಿರಲಿಲ್ಲ. ಸೆಮಿಫೈನಲ್‌ನಲ್ಲಿ ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ಮೆಟೆ ಗಝೋಸ್ ಅವರನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ್ದ ಜಪಾನ್‌ನ ನಕನಿಶಿ ಜುನ್ಯಾ, ಆರಂಭದಲ್ಲೇ ಧೀರಜ್ ಬೊಮ್ಮದೇವರ ಮೇಲೆ ಒತ್ತಡ ಹೇರಿದರು.
ಮೊದಲ ಆರು ಬಾಣಗಳಲ್ಲಿ ಕೇವಲ ಮೂರು ಅಂಕಗಳನ್ನು ಮಾತ್ರ ಕಳೆದುಕೊಂಡ ನಕನಿಶಿ, 3-1ರ ಮುನ್ನಡೆ ಸಾಧಿಸಿದರು. ಆದರೆ ಧೀರಜ್ ಮೂರನೇ ಸೆಟ್‌ನಲ್ಲಿ ಶಾಂತಯುತ ಪ್ರದರ್ಶನ ನೀಡಿ 29 ಅಂಕ ಗಳಿಸುವ ಮೂಲಕ ಪಂದ್ಯವನ್ನು 3-3ರಿಂದ ಸಮಬಲಗೊಳಿಸಿದರು. ನಂತರ ನಾಲ್ಕನೇ ಸೆಟ್‌ನಲ್ಲಿ ನಕನಿಶಿ ಮೂರು ಬಾಣಗಳಲ್ಲೂ ಪರಿಪೂರ್ಣ ಪ್ರದರ್ಶನ ನೀಡಿ 5-3ರ ಮುನ್ನಡೆ ಪಡೆದರು. ಚಾಂಪಿಯನ್ ಆಗಲು ಅವರಿಗೆ ಐದನೇ ಸೆಟ್‌ನಲ್ಲಿ ಪಂದ್ಯವನ್ನು ಸಮಬಲಗೊಳಿಸುವುದಷ್ಟೇ ಸಾಕಾಗಿತ್ತು.
India made history in Saltillo, Mexico! 🎯 🇮🇳
— Ministry of Information and Broadcasting (@MIB_India) September 14, 2026
Dhiraj Bommadevara becomes the first Indian male recurve archer to win Gold at the Archery World Cup 2026.#ArcheryWorldCup2026 pic.twitter.com/U5hYXAAFqY
ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ ಧೀರಜ್
ಅತ್ಯಂತ ಒತ್ತಡದ ಪರಿಸ್ಥಿತಿಯಲ್ಲೂ ವಿಜಯವಾಡ ಮೂಲದ ಆರ್ಚರಿ ಪಟು ಧೀರಜ್ ಬೊಮ್ಮದೇವರ ತಮ್ಮ ಸ್ಥೈರ್ಯ ಕಳೆದುಕೊಳ್ಳಲಿಲ್ಲ. ನಿರ್ಣಾಯಕ ಐದನೇ ಸೆಟ್‌ನಲ್ಲಿ ಕೇವಲ ಎರಡು ಅಂಕಗಳನ್ನು ಮಾತ್ರ ಕಳೆದುಕೊಂಡ ಧೀರಜ್ ಅದ್ಭುತ ಪ್ರದರ್ಶನ ನೀಡಿದರು. ಇತ್ತ ನಕನಿಶಿ 27 ಅಂಕಗಳಿಗೆ ಸೀಮಿತಗೊಂಡಿದ್ದರಿಂದ ಪಂದ್ಯ 5-5ರ ಸಮಬಲಕ್ಕೆ ತಲುಪಿ ಶೂಟ್‌ಆಫ್‌ಗೆ ಸಾಗಿತು.
ಶೂಟ್‌ಆಫ್‌ನಲ್ಲೂ ಧೀರಜ್ ತಮ್ಮ ಸಾಮರ್ಥ್ಯ ತೋರಿಸಿದರು. ನಿರ್ಣಾಯಕ ಕ್ಷಣದಲ್ಲಿ ಪರಿಪೂರ್ಣ 10 ಅಂಕ ಗಳಿಸಿದ ಅವರು ಮೇಲುಗೈ ಸಾಧಿಸಿದರು. ನಕನಿಶಿ 9 ಅಂಕಗಳಿಗೆ ಮಾತ್ರ ತೃಪ್ತಿಪಡಬೇಕಾಯಿತು. ಇದರೊಂದಿಗೆ ಧೀರಜ್ ಬೊಮ್ಮದೇವರ ಆರ್ಚರಿ ವಿಶ್ವಕಪ್ ಫೈನಲ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದು, ಭಾರತೀಯ ಪುರುಷ ರಿಕರ್ವ್ ಆರ್ಚರಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದರು.