FIFA World Cup 2026 Final ನಿಮಿತ್ತ ಕೇರಳದ ಶಾಲಾ-ಕಾಲೇಜಗಳಿಗೆ ರಜೆ ಘೋಷಣೆ!
ಅರ್ಜೆಂಟೀನಾ ಹಾಗೂ ಸ್ಪೇನ್ ತಂಡಗಳ ನಡುವಣ 2026ರ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ನಿಮಿತ್ತ ಕೇರಳ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಫೈನಲ್ ಪಂದ್ಯದ ನಿಮಿತ್ತ ಜುಲೈ 20 ರಂದು ರಾಜ್ಯದಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆಯನ್ನು ಸಿಎಂ ಸತೀಶನ್ ಘೋಷಿಸಿದ್ದಾರೆ.
ಫಿಫಾ ವಿಶ್ಕಪ್ ಫೈನಲ್ ನಿಮಿತ್ತ ಕೇರಳದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ. -
ನವದೆಹಲಿ: ಸ್ಪೇನ್ ಹಾಗೂ ಅರ್ಜೆಂಟೀನಾ (SPA vs ARG) ನಡುವಿನ 2026ರ ಫಿಫಾ ವಿಶ್ವಕಪ್ ಫೈನಲ್ (FIFA World Cup 2026) ಪಂದ್ಯವನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಕೇರಳ ರಾಜ್ಯ ಸರ್ಕಾರ (Kerala Govt) ಸೋಮವಾರ (ಜುಲೈ 20) ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಿದೆ. ಈ ರಜೆ ಸಾಮಾನ್ಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಶಾಲೆಗಳ ಜೊತೆಗೆ, ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಕಾಲೇಜುಗಳು, ವಿಶ್ವವಿದ್ಯಾಲಯಗಳು ಹಾಗೂ ವೃತ್ತಿಪರ ಶಿಕ್ಷಣ ಸಂಸ್ಥೆಗಳಿಗೂ ಅನ್ವಯವಾಗಲಿದೆ.
ಸಾವಿರಾರು ಫುಟ್ಬಾಲ್ ಅಭಿಮಾನಿಗಳು, ವಿಶೇಷವಾಗಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಮೂಲಕ ರಜೆ ಘೋಷಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿ.ಡಿ ಸತೀಶನ್ ಅವರ ನಿರ್ದೇಶನದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಫಿಫಾ ವಿಶ್ವಕಪ್ ಫೈನಲ್ ಪಂದ್ಯವು ಸೋಮವಾರ ಭಾರತೀಯ ಕಾಲಮಾನ ಪ್ರಕಾರ ಮಧ್ಯರಾತ್ರಿ 12:30ಕ್ಕೆ ಆರಂಭವಾಗಲಿದ್ದು, ತಡರಾತ್ರಿವರೆಗೆ ಪಂದ್ಯ ವೀಕ್ಷಿಸುವ ವಿದ್ಯಾರ್ಥಿಗಳಿಗೆ ಮರುದಿನ ತರಗತಿಗಳಿಗೆ ಹಾಜರಾಗುವುದು ಕಷ್ಟವಾಗುವ ಕಾರಣ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಅರ್ಜೆಂಟೀನಾ vs ಸ್ಪೇನ್ ನಡುವಣ ಫೈನಲ್ ಪಂದ್ಯದ ಆರಂಭ ಯಾವಾಗ? ಲೈವ್ ಸ್ಟ್ರೀಮಿಂಗ್ ವಿವರ
"ಅರ್ಜೆಂಟೀನಾ-ಸ್ಪೇನ್ ನಡುವಿನ ಮಹಾ ಫೈನಲ್‌ಗೂ ಮುನ್ನ ಕೇರಳದಲ್ಲಿ ಫುಟ್ಬಾಲ್ ಜ್ವರ ತಾರಕಕ್ಕೇರಿದೆ. ಮಧ್ಯರಾತ್ರಿಯಲ್ಲಿ ನಡೆಯಲಿರುವ ಈ ರೋಚಕ ಪಂದ್ಯವನ್ನು ವಿದ್ಯಾರ್ಥಿಗಳು ಶಾಲೆ ಮತ್ತು ಕಾಲೇಜಿನ ಚಿಂತೆಯಿಲ್ಲದೆ ವೀಕ್ಷಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ, ನಾಳೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಯುವ ಫುಟ್ಬಾಲ್ ಅಭಿಮಾನಿಗಳು ಈ ಐತಿಹಾಸಿಕ ಪಂದ್ಯವನ್ನು ಸಂಪೂರ್ಣವಾಗಿ ಆನಂದಿಸಲಿ. ತಡರಾತ್ರಿವರೆಗೆ ಪಂದ್ಯ ವೀಕ್ಷಿಸಿ, ತಮ್ಮ ನೆಚ್ಚಿನ ತಂಡಕ್ಕೆ ಹೆಚ್ಚಿನ ಬೆಂಬಲ ನೀಡಿ, ಆಟದ ಸಂಭ್ರಮವನ್ನು ಅನುಭವಿಸಲಿ," ಎಂದು ಕೇರಳ ಸಿಎಂ ವಿಡಿ ಸತೀಶನ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
ಕೇರಳದಲ್ಲಿ ದೊಡ್ಡ ಫುಟ್ಬಾಲ್ ಅಭಿಮಾನಿ ಬಳಗ
ಕೇರಳದಲ್ಲಿ ಫುಟ್ಬಾಲ್‌ಗೆ ಅಪಾರ ಅಭಿಮಾನಿ ಬಳಗವಿದೆ. ದೇಶದ ಇತರೆ ಭಾಗಗಳಲ್ಲಿ ಕ್ರಿಕೆಟ್‌ಗೆ ಇರುವಷ್ಟು ಜನಪ್ರಿಯತೆ, ಕೇರಳದಲ್ಲಿ ಫುಟ್ಬಾಲ್‌ಗೆ ಇದೆ ಎಂದು ಹೇಳಬಹುದು. ಫೈನಲ್ ಪಂದ್ಯಕ್ಕೂ ಮುನ್ನ ರಾಜ್ಯದ ನಗರಗಳು ಮತ್ತು ಗ್ರಾಮಗಳು ಫುಟ್ಬಾಲ್ ಹಬ್ಬದ ವಾತಾವರಣಕ್ಕೆ ಸಾಕ್ಷಿಯಾಗಿವೆ. ಅಂತಾರಾಷ್ಟ್ರೀಯ ಫುಟ್ಬಾಲ್ ತಾರೆಯರ ಬೃಹತ್ ಕಟೌಟ್‌ಗಳು ರಸ್ತೆ ಬದಿಗಳು, ಪ್ರಮುಖ ವೃತ್ತಗಳು ಹಾಗೂ ಆಟದ ಮೈದಾನಗಳಲ್ಲಿ ರಾರಾಜಿಸುತ್ತಿವೆ.
As Keralam catches the ultimate football fever ahead of the grand Argentina-Spain finale. To ensure our young fans can enjoy the midnight thriller without worrying about school, College the next morning, the Government has declared a holiday for all educational institutions… pic.twitter.com/IjHyIrLe8h
— V D Satheesan (@vdsatheesan) July 19, 2026
ಸ್ಪೇನ್ ಮತ್ತು ಅರ್ಜೆಂಟೀನಾ ತಂಡಗಳ ಅಭಿಮಾನಿಗಳು ಬೃಹತ್ ಬ್ಯಾನರ್‌ಗಳು, ಧ್ವಜಗಳು ಹಾಗೂ ಅಲಂಕಾರಿಕ ಸ್ವಾಗತ ಕಮಾನುಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ, ಸ್ಥಳೀಯ ಅಭಿಮಾನಿ ಸಂಘಗಳು ಸಾರ್ವಜನಿಕವಾಗಿ ಪಂದ್ಯ ವೀಕ್ಷಣೆಯ ವ್ಯವಸ್ಥೆ, ರ್ಯಾಲಿ ಹಾಗೂ ಸಂಭ್ರಮಾಚರಣೆಗಳನ್ನು ಆಯೋಜಿಸಿದ್ದು, ಕೇರಳದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಫುಟ್ಬಾಲ್ ಅಭಿಮಾನಿಗಳಿಂದ ವ್ಯಕ್ತವಾದ ಭಾರೀ ಬೆಂಬಲದಿಂದ ಕೇರಳ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ವಿದ್ಯಾರ್ಥಿಗಳು ಮತ್ತು ಪೋಷಕರ ಮನವಿಯ ಮೇರೆಗೆ ಎರ್ನಾಕುಳಂ ಜಿಲ್ಲೆಯ ಹಲವು ಶಾಲೆಗಳು ಈಗಾಗಲೇ ಸ್ವಯಂಪ್ರೇರಿತವಾಗಿ ಸೋಮವಾರ ರಜೆ ಘೋಷಿಸಿದ್ದವು. ನಂತರ ರಾಜ್ಯ ಸರ್ಕಾರ ಅಧಿಕೃತವಾಗಿ ರಜೆ ಘೋಷಿಸಿತು. ಇದರೊಂದಿಗೆ ಕೇರಳದ ಎಲ್ಲಾ ವಿದ್ಯಾರ್ಥಿಗಳು ಯಾವುದೇ ಗೊಂದಲವಿಲ್ಲದೆ ಫಿಫಾ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸುವ ಅವಕಾಶ ಪಡೆದಿದ್ದಾರೆ.
ಫಿಫಾ ವಿಶ್ವಕಪ್ ಫೈನಲ್ ವಿವರ
ಅರ್ಜೆಂಟೀನಾ vs ಸ್ಪೇನ್
ದಿನಾಂಕ: ಜುಲೈ 20, 2026
ಸಮಯ: ಮಧ್ಯ ರಾತ್ರಿ 12:30ಕ್ಕೆ ಆರಂಭ (ಭಾರತೀಯ ಕಾಲಮಾನ)
ಸ್ಥಳ: ಮೆಡ್‌ಲೈಫ್ ಸ್ಟೇಡಿಯಂ, ನ್ಯೂ ಜೆರ್ಸಿ
ನೇರ ಪ್ರಸಾರ: ಯುನೈಟ್18, ಡಿಡಿ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ZEE5 ಆಪ್, ವೆಬ್‌ಸೈಟ್