'ಪಾಕ್ ಕ್ರೀಡೆಗಳಿಗೆ ಸುರಕ್ಷಿತವಲ್ಲ'; ತಕ್ಷಣವೇ ಪಿಎಸ್‌ಎಲ್ ತೊರೆಯುವಂತೆ ವಿದೇಶಿ ಆಟಗಾರರಿಗೆ ಸಶಸ್ತ್ರ ಗುಂಪು ಎಚ್ಚರಿಕೆ
Pakistan Super League: ಪಂದ್ಯಾವಳಿ ಮಾರ್ಚ್ 26 ರಿಂದ ಪ್ರಾರಂಭವಾಗಲಿದ್ದು, 44 ಪಂದ್ಯಗಳು ಲಾಹೋರ್ ಮತ್ತು ಕರಾಚಿಯಲ್ಲಿ ನಡೆಯಲಿವೆ. ಉದ್ಘಾಟನಾ ಸಮಾರಂಭವನ್ನೂ ರದ್ದುಪಡಿಸಲಾಗಿದೆ. ಭದ್ರತಾ ಕಾರಣದಿಂದ ಪಂದ್ಯಗಳು ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ಪಾಕ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
David Warner and Steve Smith -
ಕರಾಚಿ, ಮಾ.23: ಮಾರ್ಚ್ 26 ರಂದು ಆರಂಭವಾಗಲಿರುವ 11 ನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ (Pakistan Super League) ಟೂರ್ನಿಗೆ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಎಚ್ಚರಿಕೆ ನೀಡಿದ್ದು, ವಿದೇಶಿ ಆಟಗಾರರು ಪಂದ್ಯಾವಳಿಯಿಂದ ತಕ್ಷಣವೇ ಹಿಂದೆ ಸರಿಯುವಂತೆ ಸೂಚಿಸಿದೆ.
"ಸಂಬಂಧಿತ ಕ್ರಿಕೆಟ್ ಮಂಡಳಿಗಳು ತಮ್ಮ ಆಟಗಾರರನ್ನು ಪಾಕಿಸ್ತಾನಕ್ಕೆ ಕಳುಹಿಸದಂತೆ ನಾವು ಸಲಹೆ ನೀಡಲು ಬಯಸುತ್ತೇವೆ. ಅವರಿಗೆ ಏನಾದರೂ ಸಂಭವಿಸಿದರೆ, ಅದು ನಮ್ಮ ಜವಾಬ್ದಾರಿಯಲ್ಲ. ನಾವು ಈಗಾಗಲೇ ಅವರಿಗೆ ಎಚ್ಚರಿಕೆ ನೀಡಿದ್ದೇವೆ" ಎಂದು ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಬಣದ ಜಮಾತ್-ಉಲ್-ಅಹ್ರಾರ್‌ನ ಹಿರಿಯ ಕಮಾಂಡರ್ ಹೇಳಿರುವುದಾಗಿ ದಿ ಸಂಡೇ ಗಾರ್ಡಿಯನ್ ವರದಿ ಮಾಡಿದೆ.
ವಿದೇಶಿ ಕ್ರೀಡಾಪಟುಗಳನ್ನು ನೇರವಾಗಿ ಉದ್ದೇಶಿಸಿ ಮಾತನಾಡಿದ ಮನ್ಸೂರ್, "ಪಿಎಸ್ಎಲ್ ನ ಎಲ್ಲಾ ಭಾಗವಹಿಸುವವರಿಗೆ, ವಿಶೇಷವಾಗಿ ವಿದೇಶಿ ಆಟಗಾರರಿಗೆ ನಾವು ಸ್ಪಷ್ಟ ಮತ್ತು ತುರ್ತು ಸಂದೇಶವನ್ನು ನೀಡಲು ಬಯಸುತ್ತೇವೆ. ದೇಶದ ಪ್ರಸ್ತುತ ಆಂತರಿಕ ಭದ್ರತೆ ಮತ್ತು ರಾಜಕೀಯ ಭೂದೃಶ್ಯವು ಅಸ್ಥಿರ ಮತ್ತು ಅನಿಶ್ಚಿತವಾಗಿದೆ".
"ಮಿಲಿಟರಿ ಕಾರ್ಯಾಚರಣೆಗಳು ಮತ್ತು ನಾಗರಿಕ ಅಶಾಂತಿಯು ಪ್ರದೇಶದ ಗಮನಾರ್ಹ ಭಾಗಗಳಲ್ಲಿ ಪ್ರಾಬಲ್ಯ ಹೊಂದಿರುವ ವಾತಾವರಣದಲ್ಲಿ, ಅಂತರರಾಷ್ಟ್ರೀಯ ಕ್ರೀಡಾಪಟುಗಳ ಸುರಕ್ಷತೆಯನ್ನು ಖಾತರಿಪಡಿಸಲಾಗುವುದಿಲ್ಲ. ಈ ಭೀಕರ ಸಂದರ್ಭಗಳನ್ನು ಗಮನಿಸಿದರೆ, ನಿಮ್ಮ ವೈಯಕ್ತಿಕ ಭದ್ರತೆಗೆ ಆದ್ಯತೆ ನೀಡಿ ಮತ್ತು ತಕ್ಷಣವೇ ಪಂದ್ಯಾವಳಿಯಿಂದ ಹಿಂದೆ ಸರಿಯುವಂತೆ ನಾವು ಬಲವಾಗಿ ಸಲಹೆ ನೀಡುತ್ತೇವೆ. ಪ್ರಸ್ತುತ ಯಾವುದೇ ಶಾಂತಿಯುತ ಕ್ರೀಡಾ ಚಟುವಟಿಕೆಗೆ ಪಾಕ್ ಯೋಗ್ಯವಾಗಿಲ್ಲ" ಎಂದರು.
ಸರ್ಫರಾಜ್ ಖಾನ್ ಮಗುವಿನ ಜತೆ ಆಟವಾಡಿದ ಧೋನಿ; ಮುದ್ದಾದ ವಿಡಿಯೊ ಇಲ್ಲಿದೆ
ಆಸ್ಟ್ರೇಲಿಯಾದ ಆಟಗಾರರಾದ ಡೇವಿಡ್ ವಾರ್ನರ್ ಪಿಎಸ್ಎಲ್ ಫ್ರಾಂಚೈಸಿ ಕರಾಚಿ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಮಿತ್ ಮುಲ್ತಾನ್ ಸುಲ್ತಾನ್ಸ್ ತಂಡವನ್ನು ಪ್ರತಿನಿಧಿಸುವ ಮೂಲಕ ಟೂರ್ನಮೆಂಟ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಮಾತ್ರವಲ್ಲದೆ ಮಾರ್ನಸ್ ಲ್ಯಾಬುಶೇನ್, ಮೊಯೀನ್ ಅಲಿ, ಡೆವೊನ್ ಕಾನ್ವೇ, ಆಡಮ್ ಜಂಪಾ ಸೇರಿದಂತೆ ಹಲವಾರು ಉನ್ನತ ಮಟ್ಟದ ವಿದೇಶಿ ತಾರೆಗಳು ಪಿಎಸ್ಎಲ್ 2026 ರ ಭಾಗವಾಗಿದ್ದಾರೆ. ಸ್ಮಿತ್ ಈಗಾಗಲೇ ಪಾಕಿಸ್ತಾನ ತಲುಪಿದ್ದಾರೆ.
ಪಂದ್ಯಾವಳಿ ಮಾರ್ಚ್ 26 ರಿಂದ ಪ್ರಾರಂಭವಾಗಲಿದ್ದು, 44 ಪಂದ್ಯಗಳು ಲಾಹೋರ್ ಮತ್ತು ಕರಾಚಿಯಲ್ಲಿ ನಡೆಯಲಿವೆ. ಉದ್ಘಾಟನಾ ಸಮಾರಂಭವನ್ನೂ ರದ್ದುಪಡಿಸಲಾಗಿದೆ. ಭದ್ರತಾ ಕಾರಣದಿಂದ ಪಂದ್ಯಗಳು ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ಪಾಕ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ. ಆಟಗಾರರ ಅಸುರಕ್ಷಿತ ವಾತಾವರಣದಿಂದ ಬಾಂಗ್ಲಾದೇಶ ಪಾಕಿಸ್ತಾನದ ಮಿತ್ರ ದೇಶವಾಗಿದ್ದರೂ ಕೂಡ ತಮ್ಮ ಆಟಗಾರರನ್ನು ಪಾಕ್‌ಗೆ ಕಳುಹಿಸಲು ಹಿಂದೇಟು ಹಾಕಿದೆ ಎಂದು ವರದಿಯಾಗಿದೆ.