ಕಾಮನ್ವೆಲ್ತ್ ಕ್ರೀಡಾಕೂಟ: ಹೈಜಂಪ್‌ನಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಕೃಷಿಕನ ಮಗ ಸರ್ವೇಶ್ ಕುಶಾರೆ
2026 Commonwealth Games: 2.20 ಮೀಟರ್ ಎತ್ತರ ಜಿಗಿದ ಇಂಗ್ಲೆಂಡ್‌ನ ಜ್ಯಾಕ್ ಕಿಮಾನಿ ಕಂಚಿನ ಪದಕ ಪಡೆದುಕೊಂಡರು. ಭಾರತೀಯ ಆದರ್ಶ್ ರಾಮ್ 2.15 ಮೀಟರ್ ಎತ್ತರ ಜಿಗಿದು ಐದನೇ ಸ್ಥಾನ ಪಡೆದರು. ಆದರೆ ಇದೇ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ತೇಜಸ್ವಿನ್ ಶಂಕರ್ ಗಾಯಗೊಂಡು ಕೊನೆಯ ಕ್ಷಣದಿಂದ ಹೊರಬಿದ್ದರು.
Sarvesh Kushare -
ಗ್ಲಾಸ್ಗೋ, ಜು. 28: ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ ಹೈಜಂಪ್ ಸ್ಪರ್ಧೆಯಲ್ಲಿ 2.25 ಮೀಟರ್ ಜಿಗಿಯುವ ಮೂಲಕ ಸರ್ವೇಶ್ ಕುಶಾರೆ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ರಾಷ್ಟ್ರೀಯ ದಾಖಲೆ ಹೊಂದಿರುವ ಕುಶಾರೆ, ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ ಹೈಜಂಪ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಜಮೈಕಾದ ರೊಮೈನ್ ಬೆಕ್‌ಫೋರ್ಡ್ ಚಿನ್ನ ಗೆದ್ದರು. ರೊಮೈನ್ ಮತ್ತು ಕುಶಾರೆ ಇಬ್ಬರೂ 2.25 ಮೀಟರ್ ಜಂಪ್ ಯಶಸ್ವಿಯಾಗಿ ಪೂರ್ಣಗೊಳಿಸಿದರು. ಚಿನ್ನದ ಪದಕಕ್ಕಾಗಿ ನಡೆದ ಪೈಪೋಟಿಯಲ್ಲಿ ಉಭಯ ಆಟಗಾರರು 2.28 ಮೀಟರ್ ಜಿಗಿಯುವಲ್ಲಿ ವಿಫಲರಾದರು. ಅಂತಿಮವಾಗಿ ಕೌಂಟ್‌ಬ್ಯಾಕ್ ಮೂಲಕ ಜಮೈಕಾದ ಆಟಗಾರ ಚಿನ್ನದ ಪದಕ ಗೆದ್ದುಕೊಂಡರೆ, ಕುಶಾರೆ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಒಂದೊಮ್ಮೆ ಅವರು ಮೊದಲ ಪ್ರಯತ್ನದಲ್ಲೇ 2.25 ಮೀಟರ್ ದೂರ ಜಿಗಿದಿದ್ದರೆ ಚಿನ್ನದ ಪದಕ ಗೆಲ್ಲಬಹುದಿತ್ತು. ಕುಶಾರೆ ತನ್ನ ಮೂರನೇ ಪ್ರಯತ್ನದಲ್ಲಿ ಯಶಸ್ವಿಯಾದರು. ಬೆಕ್‌ಫೋರ್ಡ್ ತನ್ನ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದರು.
2.20 ಮೀಟರ್ ಎತ್ತರ ಜಿಗಿದ ಇಂಗ್ಲೆಂಡ್‌ನ ಜ್ಯಾಕ್ ಕಿಮಾನಿ ಕಂಚಿನ ಪದಕ ಪಡೆದುಕೊಂಡರು. ಭಾರತೀಯ ಆದರ್ಶ್ ರಾಮ್ 2.15 ಮೀಟರ್ ಎತ್ತರ ಜಿಗಿದು ಐದನೇ ಸ್ಥಾನ ಪಡೆದರು. ಆದರೆ ಇದೇ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ತೇಜಸ್ವಿನ್ ಶಂಕರ್ ಗಾಯಗೊಂಡು ಕೊನೆಯ ಕ್ಷಣದಿಂದ ಹೊರಬಿದ್ದರು.
Great show by Sarvesh Kushare. By winning the Silver Medal🥈in the Men's High Jump at the Glasgow Commonwealth Games you have brought immense pride to Bharat. #CWG2026 pic.twitter.com/ta1qvBWX4d
— Amit Shah (@AmitShah) July 28, 2026
ಕುಶಾರೆ, ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದೇವರಗಾಂವ್ ಗ್ರಾಮದ ರೈತಾಪಿ ಕುಟುಂಬದಿಂದ ಬಂದವರಾಗಿದ್ದಾರೆ. ಬಾಲ್ಯದಲ್ಲಿ ತನ್ನ ತಂದೆ ಮತ್ತು ಬಾಲ್ಯದ ತರಬೇತುದಾರರು ಸಿದ್ಧಪಡಿಸುತ್ತಿದ್ದ ಜೋಳದ ಹೊಟ್ಟು, ಹತ್ತಿ ಮತ್ತು ಕೃಷಿ ತ್ಯಾಜ್ಯದಿಂದ ನಿರ್ಮಿಸಿದ ತಾತ್ಕಾಲಿಕ ಲ್ಯಾಂಡಿಂಗ್ ಹೊಂಡಗಳನ್ನು ಬಳಸಿಕೊಂಡು ಎತ್ತರ ಜಿಗಿತವನ್ನು ಅಭ್ಯಾಸ ಮಾಡುತ್ತಿದ್ದರು.
ದುರಂತವನ್ನೇ ಸೋಲಿಸಿ ಚೊಚ್ಚಲ ಪ್ರಯತ್ನದಲ್ಲೇ ಕಾಮನ್‌ವೆಲ್ತ್ ಪದಕ ಗೆದ್ದ ಕನ್ನಡತಿ ಶಿಲ್ಪಾ
ಒಂದು ತಿಂಗಳ ಹಿಂದೆ ನಡೆದ ರಾಷ್ಟ್ರೀಯ ಅಂತರರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಕುಶಾರೆ 2.31 ಮೀಟರ್ ಎತ್ತರಕ್ಕೆ ಜಿಗಿದು ಹೊಸ ಭಾರತೀಯ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದ್ದರು.
ಪದಕ ಗೆದ್ದ ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಕುಶಾರೆ, ‘ಇದು ಪ್ರಮುಖ ಕ್ರೀಡಾಕೂಟದಲ್ಲಿ ನನಗೆ ದೊರೆತ ಮೊದಲ ಪದಕ. ಏಷ್ಯನ್ ಕ್ರೀಡಾಕೂಟ ಮತ್ತು ಕಾಮನ್ ವೆಲ್ತ್ ಕ್ರೀಡಾಕೂಟಗಳು ಒಲಿಂಪಿಕ್ಸ್‌ಗೆ ಪ್ರೇರಣೆ. ಇನ್ನೂ ಕಠಿಣ ಪರಿಶ್ರಮದೊಂದಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಬಯಸುತ್ತೇನೆ; ಎಂದು ಹೇಳಿದರು.
ಸರ್ವೇಶ್ ಕುಶಾರೆ ಅವರನ್ನು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅಭಿನಂದಿಸಿ, ಕುಶಾರೆ ಅವರ ಸಾಧನೆಯನ್ನು ಭಾರತೀಯ ಅಥ್ಲೆಟಿಕ್ಸ್‌ಗೆ ಮತ್ತೊಂದು ಮೈಲಿಗಲ್ಲು ಎಂದು ಬಣ್ಣಿಸಿದರು ಮತ್ತು ಇದು ದೇಶಕ್ಕೆ ಹೆಮ್ಮೆ ತಂದಿದೆ ಎಂದು ಹೇಳಿದರು.
"ಕಾಮನ್‌ವೆಲ್ತ್ ಕ್ರೀಡಾಕೂಟದ ಪುರುಷರ ಹೈಜಂಪ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ ಸರ್ವೇಶ್ ಅನಿಲ್ ಕುಶಾರೆ ಅವರಿಗೆ ಅಭಿನಂದನೆಗಳು. ನಿಮ್ಮ ಸ್ಪೂರ್ತಿದಾಯಕ ಪ್ರದರ್ಶನವು ರಾಷ್ಟ್ರಕ್ಕೆ ಅಪಾರ ಹೆಮ್ಮೆಯನ್ನು ತಂದಿದೆ. ಮುಂದೆ ನಿಮಗೆ ಇನ್ನೂ ಅನೇಕ ಯಶಸ್ಸುಗಳು ಸಿಗಲಿ ಎಂದು ಹಾರೈಸುತ್ತೇನೆ" ಎಂದು ರಿಜಿಜು ಟ್ವಿಟರ್ ಎಕ್ಸ್‌ನಲ್ಲಿ ಬರೆದಿದ್ದಾರೆ.