ಆಫ್ಘಾನ್ ಏಕದಿನ ಸರಣಿಯಿಂದ ಹೊರಗುಳಿದ ವಿರಾಟ್ ಕೊಹ್ಲಿ ಬದಲಿಗೆ ಯಶಸ್ವಿ ಜೈಸ್ವಾಲ್ ತಂಡ ಸೇರ್ಪಡೆ
IND vs AFG ODI: ಫೆಬ್ರವರಿ 2025 ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಜೈಸ್ವಾಲ್, ಇದುವರೆಗೆ ಈ ಸ್ವರೂಪದಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದಾರೆ. ಡಿಸೆಂಬರ್ 2025 ರಲ್ಲಿ ವಿಶಾಖಪಟ್ಟಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ ಅವರು ಅಜೇಯ 116 ರನ್ ಗಳಿಸಿದ್ದರು. ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ನಡುವಿನ ತೀವ್ರ ಸ್ಪರ್ಧೆಯಿಂದಾಗಿ ಅವರ ಏಕದಿನ ಅವಕಾಶಗಳು ಸೀಮಿತವಾಗಿವೆ.
Yashasvi Jaiswal -
ನವದೆಹಲಿ, ಜೂ.6: ಮಂಡಿರಜ್ಜು ಗಾಯದಿಂದಾಗಿ ಅಫ್ಘಾನಿಸ್ತಾನ(IND vs AFG ODI) ವಿರುದ್ಧದ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿದ ವಿರಾಟ್ ಕೊಹ್ಲಿ(Virat Kohli) ಬದಲಿಗೆ ಎಡಗೈ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಕೊಹ್ಲಿ ಸರಣಿಯಿಂದ ಹೊರಗುಳಿದಿರುವುದನ್ನು ಭಾರತದ ಆಯ್ಕೆದಾರರ ಅಧ್ಯಕ್ಷ ಅಜಿತ್ ಅಗರ್ಕರ್(Ajit Agarkar) ಶನಿವಾರ ಮುಂಬೈನಲ್ಲಿ ದೃಢಪಡಿಸಿದರು. ಜುಲೈ 14 ರಿಂದ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಆಡಲಿರುವ ಭಾರತದ ಮುಂದಿನ ಏಕದಿನ ಪಂದ್ಯಕ್ಕೆ ಕೊಹ್ಲಿ ಫಿಟ್ ಆಗಬಹುದು ಎಂದು ಅಗರ್ಕರ್ ಹೇಳಿದರು. ಆದರೆ ಅವರ ವಾಪಸಾತಿಯ ಬಗ್ಗೆ ಫಿಸಿಯೋಗಳಿಂದ ಅನುಮತಿ ಬೇಕಿದೆ ಎಂದರು.
"ಕೊಹ್ಲಿ ಐಪಿಎಲ್ ಫೈನಲ್‌ನಲ್ಲಿ ಗಾಯಗೊಂಡು ಒಂದು ವಾರಕ್ಕಿಂತ ಕಡಿಮೆ ಸಮಯವಾಗಿದೆ. ನಮಗೆ ಇನ್ನೂ ಸಮಯದ ವೇಳಾಪಟ್ಟಿ ತಿಳಿದಿಲ್ಲ. ಆದರೆ ಅವರು ಇಂಗ್ಲೆಂಡ್ ಏಕದಿನ ಸರಣಿಗೆ ಫಿಟ್ ಆಗಬಹುದು ಎಂದು ತೋರುತ್ತಿದೆ. ಇದು ನಿರ್ಣಾಯಕ ಉತ್ತರವಲ್ಲ. ಫಿಸಿಯೋ ಅವರ ಮಾಹಿತಿ ಸಿಕ್ಕ ಬಳಿಕವಷ್ಟೇ ಅವರ ಲಭ್ಯತೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು" " ಎಂದು ಅಗರ್ಕರ್ ಹೇಳಿದರು.
ಫೆಬ್ರವರಿ 2025 ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಜೈಸ್ವಾಲ್, ಇದುವರೆಗೆ ಈ ಸ್ವರೂಪದಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದಾರೆ. ಡಿಸೆಂಬರ್ 2025 ರಲ್ಲಿ ವಿಶಾಖಪಟ್ಟಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ ಅವರು ಅಜೇಯ 116 ರನ್ ಗಳಿಸಿದ್ದರು. ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ನಡುವಿನ ತೀವ್ರ ಸ್ಪರ್ಧೆಯಿಂದಾಗಿ ಅವರ ಏಕದಿನ ಅವಕಾಶಗಳು ಸೀಮಿತವಾಗಿವೆ.
ಅಫ್ಘಾನಿಸ್ತಾನ ವಿರುದ್ಧದ ಭಾರತದ ಏಕದಿನ ಸರಣಿಯು ಜೂನ್ 13 ರಂದು ಧರ್ಮಶಾಲಾದಲ್ಲಿ ನಡೆಯುವ ಮೊದಲ ಪಂದ್ಯದೊಂದಿಗೆ ಪ್ರಾರಂಭವಾಗುತ್ತದೆ, ನಂತರ ಲಕ್ನೋ (ಜೂನ್ 17) ಮತ್ತು ಚೆನ್ನೈ (ಜೂನ್ 20) ನಲ್ಲಿ ಪಂದ್ಯಗಳು ನಡೆಯಲಿವೆ. ಅಫ್ಘಾನಿಸ್ತಾನ ವಿರುದ್ಧದ ಸರಣಿಯ ನಂತರ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಏಕದಿನ ಪಂದ್ಯಗಳಿಗೆ ತಂಡವನ್ನು ಆಯ್ಕೆ ಮಾಡಲಾಗುತ್ತದೆ.
ಆಫ್ಘಾನ್ ಸರಣಿಗೆ ಭಾರತ ಏಕದಿನ ತಂಡ
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಗುರ್ನೂರ್ ಬ್ರಾರ್, ಹರ್ಷ್ ದುಬೆ.