ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vastu Tips: ಹಣದ ವಿಚಾರದಲ್ಲಿ ಈ ವಾಸ್ತು ನಿಯಮಗಳನ್ನು ನಿರ್ಲಕ್ಷಿಸಬೇಡಿ; ಈ ಸ್ಥಳಗಳಲ್ಲಿ ದುಡ್ಡು ಇಡುವುದು ಅಶುಭ!

ವಾಸ್ತು ಶಾಸ್ತ್ರದ ಪ್ರಕಾರ ಹಣವನ್ನು ಲಕ್ಷ್ಮೀ ದೇವಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಹಣವನ್ನು ಸ್ವಚ್ಛವಾಗಿ ಮತ್ತು ಗೌರವದಿಂದ ಇಡಬೇಕು ಎಂಬ ನಂಬಿಕೆಯಿದೆ. ಸ್ನಾನದ ಕೋಣೆ, ಶೌಚಾಲಯ, ಮೊಬೈಲ್ ಕವರ್ ಹಾಗೂ ದೇಹಕ್ಕೆ ನೇರವಾಗಿ ತಾಗುವ ಸ್ಥಳಗಳಲ್ಲಿ ಹಣ ಇಡುವುದನ್ನು ತಪ್ಪಿಸಬೇಕು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಇಂತಹ ಅಭ್ಯಾಸಗಳು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ನಂಬಿಕೆಯಿದ್ದು, ಕೆಲವು ಪರಿಹಾರ ಕ್ರಮಗಳನ್ನೂ ಸೂಚಿಸಲಾಗಿದೆ.

ವಾಸ್ತು ಪ್ರಕಾರ ಈ ಸ್ಥಳಗಳಲ್ಲಿ ಹಣ ಇಡಬೇಡಿ..!

ವಾಸ್ತು ಶಾಸ್ತ್ರ -

Profile
Sushmitha Jain Sep 22, 2026 8:47 AM

ಬೆಂಗಳೂರು: ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು, ಹಣದ ಕೊರತೆ ಎದುರಾಗಬಾರದು ಎಂಬುದು ಪ್ರತಿಯೊಬ್ಬರ ಆಶಯ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿನ ವಸ್ತುಗಳನ್ನು ಯಾವ ಸ್ಥಳದಲ್ಲಿ, ಯಾವ ರೀತಿಯಲ್ಲಿ ಇಡುತ್ತೇವೆ ಎಂಬುದಕ್ಕೂ ವಿಶೇಷ ಮಹತ್ವವಿದೆ. ಅದರಲ್ಲೂ ಹಣವನ್ನು ಲಕ್ಷ್ಮೀ ದೇವಿಯ ಸ್ವರೂಪವೆಂದು ಪರಿಗಣಿಸುವುದರಿಂದ ಅದನ್ನು ಗೌರವದಿಂದ ಹಾಗೂ ಸ್ವಚ್ಛವಾದ ಸ್ಥಳದಲ್ಲಿ ಇಡಬೇಕು ಎಂದು ವಾಸ್ತು ಶಾಸ್ತ್ರದಲ್ಲಿ (Vastu Shastra) ಹೇಳಲಾಗುತ್ತದೆ.

ತಿಳಿದೋ ತಿಳಿಯದೆಯೋ ಕೆಲವರು ಹಣವನ್ನು ಎಲ್ಲೆಂದರಲ್ಲಿ ಇಟ್ಟುಬಿಡುತ್ತಾರೆ. ಇಂತಹ ಅಭ್ಯಾಸಗಳು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬ ನಂಬಿಕೆಯೂ ಇದೆ. ಹಾಗಾದರೆ ವಾಸ್ತು ಪ್ರಕಾರ(Vastu Tips) ಹಣವನ್ನು ಯಾವ ಸ್ಥಳಗಳಲ್ಲಿ ಇಡಬಾರದು? ಅಂತಹ ಸ್ಥಳಗಳಲ್ಲಿ ಹಣ ಇಡುವುದರಿಂದ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು? ಇದಕ್ಕೆ ಸೂಚಿಸಲಾಗಿರುವ ಪರಿಹಾರಗಳೇನು? ಇಲ್ಲಿದೆ ಮಾಹಿತಿ.

ಸ್ನಾನದ ಕೋಣೆಯಲ್ಲಿ ಹಣ ಇಡಬೇಡಿ

ಕೆಲವರು ಸ್ನಾನಕ್ಕೆ ತೆರಳುವಾಗ ಜೇಬಿನಲ್ಲಿರುವ ಹಣವನ್ನು ತೆಗೆದು ಸ್ನಾನದ ಕೋಣೆಯಲ್ಲೇ ಇಡುವ ಅಭ್ಯಾಸ ಹೊಂದಿರುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಇದು ಸರಿಯಾದ ಕ್ರಮವಲ್ಲ ಎನ್ನಲಾಗುತ್ತದೆ. ವಿಶೇಷವಾಗಿ ಸ್ನಾನದ ಕೋಣೆ ನೈಋತ್ಯ ದಿಕ್ಕಿನಲ್ಲಿದ್ದರೆ ಅಲ್ಲಿ ಹಣವನ್ನು ಇಡುವುದರಿಂದ ಆರ್ಥಿಕ ಸಮಸ್ಯೆಗಳು ಎದುರಾಗಬಹುದು ಎಂಬ ನಂಬಿಕೆ ಇದೆ. ಆದಾಯ ಗಳಿಸಲು ಹೆಚ್ಚು ಶ್ರಮಪಡಬೇಕಾಗುವುದು, ದುಡಿಮೆಗೆ ತಕ್ಕ ಪ್ರತಿಫಲ ಸಿಗದಿರುವುದು ಅಥವಾ ಅನಿರೀಕ್ಷಿತ ಖರ್ಚುಗಳಿಂದ ಹಣಕಾಸಿನ ಸಂಕಷ್ಟ ಎದುರಾಗುವುದು ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಸ್ನಾನದ ಕೋಣೆ ಸಾಮಾನ್ಯವಾಗಿ ತೇವ ಮತ್ತು ಕೊಳಕು ಉಂಟಾಗುವ ಸ್ಥಳವಾಗಿರುವುದರಿಂದ ಹಣವನ್ನು ಅಲ್ಲಿ ಇಡುವುದನ್ನು ತಪ್ಪಿಸುವುದು ಉತ್ತಮ. ಜೇಬಿನಲ್ಲಿರುವ ಹಣವನ್ನು ಸ್ನಾನಕ್ಕೆ ಹೋಗುವ ಮುನ್ನ ಸುರಕ್ಷಿತ ಹಾಗೂ ಸ್ವಚ್ಛವಾದ ಸ್ಥಳದಲ್ಲಿ ಇಡುವುದು ಒಳ್ಳೆಯದು.

ವಾಸ್ತು ನಂಬಿಕೆಯಂತೆ, ಈ ತಪ್ಪನ್ನು ಮಾಡುತ್ತಿದ್ದವರು ಶುಕ್ರವಾರದಂದು ಲಕ್ಷ್ಮೀ ದೇವಿಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಕ್ಷಮೆಯಾಚಿಸಬಹುದು ಎಂದು ಹೇಳಲಾಗುತ್ತದೆ.

ಮೊಬೈಲ್ ಕವರ್‌ನಲ್ಲಿ ಹಣ ಇಡುವ ಅಭ್ಯಾಸವಿದೆಯೇ?

ಇಂದಿನ ದಿನಗಳಲ್ಲಿ ಕೆಲವರು ತುರ್ತು ಸಂದರ್ಭಕ್ಕೆ ಬೇಕಾಗಬಹುದು ಎಂದು ಮೊಬೈಲ್ ಫೋನ್‌ನ ಹಿಂಬದಿಯ ಕವರ್‌ನಲ್ಲಿ ನೋಟುಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಹಣವನ್ನು ಈ ರೀತಿಯಲ್ಲಿ ಇಡುವುದು ಸೂಕ್ತವಲ್ಲ ಎನ್ನಲಾಗುತ್ತದೆ. ಮೊಬೈಲ್ ಎಲೆಕ್ಟ್ರಾನಿಕ್ ಸಾಧನವಾಗಿದ್ದು, ಇದನ್ನು ಅಗ್ನಿ ತತ್ವಕ್ಕೆ ಸಂಬಂಧಿಸಿದ ವಸ್ತುವಾಗಿ ಪರಿಗಣಿಸಲಾಗುತ್ತದೆ. ಹಣವನ್ನು ಇಂತಹ ಸಾಧನದೊಂದಿಗೆ ಇಡುವುದು ಶುಭಕರವಲ್ಲ ಎಂಬ ನಂಬಿಕೆ ಇದೆ. ಅಲ್ಲದೆ ಮೊಬೈಲ್ ಅನ್ನು ನಾವು ವಿವಿಧ ಸ್ಥಳಗಳಲ್ಲಿ ಬಳಸುವುದರಿಂದ ಅದರೊಂದಿಗೆ ಹಣವೂ ಅಶುದ್ಧ ಸ್ಥಳಗಳಿಗೆ ಹೋಗುವ ಸಾಧ್ಯತೆ ಇರುತ್ತದೆ.

ವಿಶೇಷವಾಗಿ ಮೊಬೈಲ್ ಅನ್ನು ತಪ್ಪಾದ ದಿಕ್ಕಿನಲ್ಲಿ ಇಡುವುದರಿಂದ ಆರ್ಥಿಕ ಸಮಸ್ಯೆಗಳು ಹೆಚ್ಚಾಗಬಹುದು ಎಂಬ ವಾಸ್ತು ನಂಬಿಕೆಯಿದೆ. ಈ ಅಭ್ಯಾಸವಿದ್ದವರು ಅದನ್ನು ಬಿಟ್ಟು, ಹಣವನ್ನು ಪ್ರತ್ಯೇಕವಾಗಿ ಸುರಕ್ಷಿತ ಸ್ಥಳದಲ್ಲಿ ಇಡುವುದು ಉತ್ತಮ. ಆರ್ಥಿಕ ಸಮೃದ್ಧಿಗಾಗಿ ಶುಕ್ರವಾರ ಕುಬೇರನ ಪೂಜೆ ಮಾಡುವುದನ್ನೂ ಪರಿಹಾರವಾಗಿ ಸೂಚಿಸಲಾಗುತ್ತದೆ.


ಕುಪ್ಪಸದಲ್ಲಿ ಹಣ ಇಟ್ಟುಕೊಳ್ಳುವುದು ಸರಿಯೇ..?

ಕೆಲ ಮಹಿಳೆಯರು ತುರ್ತು ಸಂದರ್ಭಕ್ಕಾಗಿ ಕುಪ್ಪಸದಲ್ಲಿ ಹಣವನ್ನು ಇಟ್ಟುಕೊಳ್ಳುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಹಣವನ್ನು ದೇಹಕ್ಕೆ ನೇರವಾಗಿ ತಾಗುವಂತೆ ಇಟ್ಟುಕೊಳ್ಳುವುದು ಶುಭಕರವಲ್ಲ ಎನ್ನಲಾಗುತ್ತದೆ. ದೇಹದ ಬೆವರು ಹಣಕ್ಕೆ ತಾಗುವುದರಿಂದ ಹಣದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ನಂಬಿಕೆಯಿದೆ. ಇದರಿಂದ ಹಣವನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ಅನಗತ್ಯ ಖರ್ಚುಗಳು ಹೆಚ್ಚಾಗಬಹುದು ಎಂಬ ವಾಸ್ತು ನಂಬಿಕೆಯೂ ಇದೆ.

ಹಣವನ್ನು ಲಕ್ಷ್ಮೀ ದೇವಿಯ ಸ್ವರೂಪವೆಂದು ಪರಿಗಣಿಸುವುದರಿಂದ ಅದನ್ನು ಸ್ವಚ್ಛವಾಗಿ, ಗೌರವಯುತವಾಗಿ ಮತ್ತು ಸುರಕ್ಷಿತವಾದ ಸ್ಥಳದಲ್ಲಿ ಇಡುವುದು ಉತ್ತಮ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಒಟ್ಟಿನಲ್ಲಿ, ಹಣವನ್ನು ಎಲ್ಲೆಂದರಲ್ಲಿ ಇಡುವ ಅಭ್ಯಾಸವನ್ನು ತಪ್ಪಿಸಿ, ಸ್ವಚ್ಛವಾದ ಹಾಗೂ ಸುರಕ್ಷಿತ ಸ್ಥಳದಲ್ಲಿ ಇಟ್ಟು ಗೌರವದಿಂದ ಬಳಸುವುದು ಉತ್ತಮ. ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಈ ನಂಬಿಕೆಗಳಿಗೆ ವೈಜ್ಞಾನಿಕ ದೃಢೀಕರಣವಿಲ್ಲ; ಇವು ಧಾರ್ಮಿಕ ಮತ್ತು ಸಾಂಪ್ರದಾಯಿಕ ನಂಬಿಕೆಗಳ ಆಧಾರಿತ ಸಲಹೆಗಳಾಗಿವೆ.