ಮಕ್ಕಳಲ್ಲಿ ಮುಂಜಾನೆ ಕಾಡುವ ಶೀತ, ತಲೆನೋವು: ನಿರ್ಲಕ್ಷ್ಯ ಬೇಡ
ಬೆಳಗ್ಗೆ ಎದ್ದಾಗ ಕೆಲವರಿಗೆ ಶೀತ, ತಲೆ ನೋವು ಕಾಡುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾಗಿ ನಮ್ಮ ದಿನಚರಿಯೇ ಕಾರಣವಾಗಿರುತ್ತದೆ. ದಿನಚರಿಯೊಂದಿಗೆ ಕೆಲವೊಂದು ಆರೋಗ್ಯಕರ ಅಭ್ಯಾಸ ಮಾಡುವುದರಿಂದ ಬೆಳಗ್ಗೆ ಎದ್ದಾಗ ಕಾಡುವ ಶೀತ, ತಲೆನೋವನ್ನು ದೂರ ಮಾಡಬಹುದು ಮತ್ತು ಆರೋಗ್ಯವಾಗಿರಬಹುದು. ಈ ಅಭ್ಯಾಸಗಳು ಯಾವುದು ಎನ್ನುವ ಕುರಿತು ಆರೋಗ್ಯ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.
ಬೆಂಗಳೂರು: ಮಕ್ಕಳು, ಯುವಜನರಲ್ಲಿ ಹೆಚ್ಚಾಗಿ ಬೆಳಗ್ಗೆ ಎದ್ದಾಗ ಶೀತ (Cold), ತಲೆ ನೋವು (headache) ಕಾಣಿಸಿಕೊಳ್ಳುತ್ತದೆ. ಇದನ್ನು ನಿರ್ಲಕ್ಷ್ಯ ಮಾಡಬಾರದು. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಇದು ಮುಂದೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರಾದ ಡಾ. ಸಂದೀಪ್ ಬೆಣಕಲ್ (Ayurvedic expert Dr. Sandeep Benakal). ʼವಿಶ್ವವಾಣಿ ಹೆಲ್ತ್ʼ (Vishwavani Health) ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, ಬೆಳಗ್ಗೆ ಎದ್ದಾಗ ಹೆಚ್ಚಾಗಿ ಕಾಡುವ ಈ ಆರೋಗ್ಯ ಸಮಸ್ಯೆಗೆ ಮುಖ್ಯ ಕಾರಣ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವುದು. ಸಾಮಾನ್ಯವಾಗಿ ಬೆಳಗ್ಗೆ ತಂಪಿನ ವಾತಾವರಣ ಇರುವುದರಿಂದ ಈ ಸಂದರ್ಭದಲ್ಲಿ ಇಂತಹ ತೊಂದರೆಗಳು ತೀವ್ರವಾಗಿ ಕಾಡುತ್ತದೆ ಎಂದು ಅವರು ಹೇಳಿದರು. ರಾತ್ರಿ ಸರಿಯಾಗಿ ನಿದ್ದೆ ಮಾಡದವರು, ಬೆಳಗ್ಗೆ ತಡವಾಗಿ ಏಳುವವರಲ್ಲಿ ಈ ಸಮಸ್ಯೆ ಹೆಚ್ಚಾಗಿರುತ್ತದೆ. ದಿನಚರಿಯಲ್ಲಿ ಬದಲಾವಣೆ ಮಾಡಿಕೊಂಡರೆ ಇದನ್ನು ನಿಯಂತ್ರಿಸಬಹುದು. ಸೂರ್ಯೋದಯಕ್ಕಿಂತ ಮೊದಲು ಎದ್ದು ಪ್ರಾಣಾಯಾಮ ಮಾಡಬೇಕು. ಪ್ರತಿನಿತ್ಯ ಶುಂಠಿ, ತುಳಸಿ, ಬೆಲ್ಲ ಕಷಾಯ ಕುಡಿದರೆ ಇದನ್ನು ನಿವಾರಿಸಲು ಸಾಧ್ಯ ಎಂದು ಅವರು ತಿಳಿಸಿದರು.