Vishwavani health: ಗರ್ಭಿಣಿಯರು ಫೋಲಿಕ್ ಆ್ಯಸಿಡ್, ಐರನ್, ಕ್ಯಾಲ್ಸಿಯಂ ಮಾತ್ರೆಗಳನ್ನೇಕೆ ತೆಗೆದುಕೊಳ್ಳಬೇಕು?
ಗರ್ಭಿಣಿಯರು ವೈದ್ಯರು ಸೂಚಿಸುವ ಮಾತ್ರೆಗಳನ್ನು ತೆಗೆದುಕೊಳ್ಳುವುದು ಎಷ್ಟು ಮುಖ್ಯವೋ ವೈದ್ಯರು ಸೂಚಿಸದ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಷ್ಟೇ ಅಪಾಯಕಾರಿಯಾಗಿದೆ. ಇದು ತಾಯಿ, ಮಗುವಿನ ಆರೋಗ್ಯ ವಿಚಾರವಾಗಿರುವುದರಿಂದ ಈ ನಿಟ್ಟಿನಲ್ಲಿ ತಾಯಿ ಹೆಚ್ಚಿನ ಕಾಳಜಿ ವಹಿಸುವುದು ಬಹಳ ಮುಖ್ಯ ಎನ್ನುತ್ತಾರೆ ಸ್ತ್ರೀ ರೋಗ ತಜ್ಞರಾದ ಡಾ. ರಶ್ಮಿ ಟಿ.ಎನ್.
ಬೆಂಗಳೂರು: ಮಗು ಹೊಂದುವ ಯೋಜನೆ ಇರುವ ಮಹಿಳೆ ಮೂರು ತಿಂಗಳ ಮುಂಚಿತವಾಗಿ ಫೋಲಿಕ್ ಆಸಿಡ್ ಮಾತ್ರೆಗಳನ್ನು (pregnancy supplements) ತೆಗೆದುಕೊಳ್ಳಬೇಕು. ಯಾಕೆಂದರೆ ಇದು ಆಕೆಯ ದೇಹವನ್ನು ಗರ್ಭವಾಸ್ಥೆಗೆ ಸಿದ್ಧತೆಗೊಳಿಸಲು ಸಹಾಯ ಮಾಡುತ್ತದೆ ಎಂದು ಸ್ತ್ರೀ ರೋಗ ತಜ್ಞರಾದ ಡಾ. ರಶ್ಮಿ ಟಿ.ಎನ್. ತಿಳಿಸಿದರು. ವಿಶ್ವವಾಣಿ ಹೆಲ್ತ್ (Vishwavani Health) ಯುಟ್ಯೂಬ್ ಚಾನಲ್‌ನಲ್ಲಿ ನಿಸರ್ಗ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು,ಮಗುವಿನ ಬೆನ್ನು ಮೂಳೆ, ಮೆದುಳಿನ ಬೆಳವಣಿಗೆಗೆ ಫೋಲಿಕ್ ಆಸಿಡ್ ಮಾತ್ರೆಗಳು ಬಹಳ ಮುಖ್ಯವಾಗಿರುತ್ತದೆ. ಅಲ್ಲದೇ ಇದು ಡಿಎನ್ಎ, ಆರ್ ಎನ್ಎ ಬೆಳವಣಿಗೆಗೆ ಕೂಡ ಸಹಾಯಕವಾಗಿದೆ ಎಂದು ತಿಳಿಸಿದರು. ಪ್ರೆಗ್ನೆಸಿ ಯೋಜನೆ ಮಾಡುವ ಮೂರು ತಿಂಗಳು ಮೊದಲೇ ಇದನ್ನು ಪ್ರಾರಂಭಿಸುವುದು ಒಳ್ಳೆಯದು. ಇದು ಆರೋಗ್ಯವಂತ ಮಗುವಿನ ಜನನಕ್ಕೆ ಸಹಾಯ ಮಾಡುತ್ತದೆ. ಗರ್ಭವಾಸ್ಥೆಯ ಎರಡನೇ ತ್ರೈಮಾಸಿಕ ಆರಂಭವಾದ ಮೇಲೆ ಗರ್ಭಿಣಿಯರಲ್ಲಿ ರಕ್ತದ ಪ್ರಮಾಣ ಶೇಕಡಾ 30 ರಿಂದ 50ರಷ್ಟು ಹೆಚ್ಚಾಗುತ್ತದೆ. ಇದಕ್ಕೆ ಕ್ಯಾಲ್ಸಿಯಂ, ಐರನ್ ಮಾತ್ರೆಗಳು ಕೂಡ ಫೋಲಿಕ್ ಆಸಿಡ್ ಮಾತ್ರೆಯೊಂದಿಗೆ ಮುಖ್ಯವಾಗುತ್ತದೆ ಎಂದು ಅವರು ತಿಳಿಸಿದರು.